ನವ ದೆಹಲಿ: ಶಾಂಘೈ ಸಹಕಾರ ಸಂಘಟನೆಯ ಶೃಂಗ(SCO Summit)ದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಉಜ್ಬೇಕಿಸ್ತಾನ್‌ಕ್ಕೆ ತೆರಳಲಿದ್ದಾರೆ. ಈ ಶೃಂಗದಲ್ಲಿ ರಷ್ಯಾ, ಚೀನಾ ಮತ್ತು ಪಾಕಿಸ್ತಾನದ ಜತೆಗೆ ಭಾರತವೂ ಪಾಲ್ಗೊಳ್ಳುತ್ತಿದೆ.
ಈ ಸಂದರ್ಭದಲ್ಲಿ ರಷ್ಯಾ ಮತ್ತು ಭಾರತ ದ್ವಿಪಕ್ಷೀಯ ಮಾತುಕತೆ ನಡೆಸಲಿವೆ. ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಪುಟಿನ್ ಚರ್ಚೆ ಮಾಡಲಿದ್ದಾರೆ. ಹಾಗಂತ ಪಾಕಿಸ್ತಾನ ಮತ್ತು ಚೀನಾದ ಜತೆಗೂ ರಷ್ಯಾ ಮಾತುಕತೆ ನಡೆಸಲು ಮುಂದಾಗುತ್ತಿಲ್ಲ ಎಂಬ ಬಗ್ಗೆ ಯಾವುದೇ ಮುನ್ಸೂಚನೆಗಳಿಲ್ಲ.
ಪ್ರಧಾನಿ ಮೋದಿ ಅವರು ಗುರುವಾರ ಸಾಯಂಕಾಲದ ಹೊತ್ತಿಗೆ ಉಜ್ಬೇಕಿಸ್ತಾನಕ್ಕೆ ಕಾಲಿಡಲಿದ್ದಾರೆ. ಕೋವಿಡ್ ಬಳಿಕ ಇದೇ ಮೊದಲ ಬಾರಿಗೆ ವಿವಿಧ ದೇಶಗಳ ನಾಯಕರು ಪರಸ್ಪರ ಮಾತುಕತೆ ನಡೆಸುತ್ತಿದ್ದಾರೆ. ಚೀನಾ ಅಧ್ಯಕ್ಷ ಜಿನ್‌ಪಿಂಗ್ ಅವರು ಈಗಾಗಲೇ ಉಜ್ಬೇಕಿಸ್ತಾನಕ್ಕೆ ತೆರಳಿದ್ದಾರೆ. ಅವರನ್ನು ಅಧ್ಯಕ್ಷ ಶವ್ಕತ್ ಮಿರ್ಜಿಯೋವ್ ಅವರು ಸ್ವಾಗತಿಸಿದರು.
ಮೋದಿ ಮತ್ತು ಜಿನ್‌ಪಿಂಗ್ ಮಾತುಕತೆ ನಡೆಸುವ ಬಗ್ಗೆ ಯಾವುದೇ ಮಾಹಿತಿಗಳಿಲ್ಲ. ಉಭಯ ನಾಯಕರ ಭೇಟಿಯ ಬಗ್ಗೆ ಸರ್ಕಾರಗಳು ಸಸ್ಪೆನ್ಸ್ ಕಾಯ್ದುಕೊಂಡಿವೆ. ಹೀಗಿದ್ದಾಗ್ಯೂ, ಉಭಯ ರಾಷ್ಟ್ರಗಳ ನಾಯಕರ ಮಧ್ಯೆ ಕಿರು ಮಾತುಕತೆ ನಡೆಯುವುದನ್ನು ಅಲ್ಲಗಳೆಯುವಂತಿಲ್ಲ.
ಏನಿದು ಎಸ್‍ಸಿಒ?
ಶಾಂಘೈ ಸಹಕಾರ ಸಂಘಟನೆಯ ಸಮ್ಮಿಟ್ ಪ್ರಾದೇಶಿಕ ಸಹಕಾರ ವೃದ್ಧಿಗೆ ಸ್ಥಾಪಿತವಾಗಿರುವ ಸಂಘಟನೆ. ಇದರ ಕೇಂದ್ರ ಕಚೇರಿ ಚೀನಾದ ಬೀಜಿಂಗ್‌ನಲ್ಲಿದೆ. ಚೀನಾ, ರಷ್ಯಾ, ಇಂಡಿಯಾ ಮತ್ತು ಪಾಕಿಸ್ತಾನ ಸೇರಿದಂತೆ ಕೇಂದ್ರ ಏಷ್ಯಾ ರಾಷ್ಟ್ರಗಳಾದ ಕಝಕಸ್ತಾನ್, ಕಿರ್ಗೀಸ್ತಾನ್, ಉಜ್ಬೇಕಿಸ್ತಾನ್ ಮತ್ತು ತಜಿಕಿಸ್ತಾನ್ ದೇಶಗಳು ಇದರಲ್ಲಿ ಸೇರಿವೆ.
ಇದು ಜಗತ್ತಿನ ಅತಿದೊಡ್ಡ ಪ್ರಾದೇಶಿಕ ಸಂಘಟನೆಯಾಗಿದೆ. ಯುರೋಷಿಯಾದ ಒಟ್ಟು ಭೂ ಪ್ರದೇಶ ಪೈಕಿ ಶೇ.60 ಮತ್ತು ಜಗತ್ತಿನ ಜನಸಂಖ್ಯೆಯ ಪೈಕಿ ಶೇ.40 ಜನಸಂಖ್ಯೆಯ ವ್ಯಾಪ್ತಿಯನ್ನು ಇದು ಕವರ್ ಮಾಡುತ್ತದೆ. ಜತೆಗೆ, ಜಗತ್ತಿನ ಒಟ್ಟು ಜಿಡಿಪಿಯ ಪೈಕಿ ಈ ಪ್ರಾದೇಶಿಕ ಸಂಘಟನೆಯ ಪಾಲು ಶೇ.30ರಷ್ಟಿದೆ.
ಇದನ್ನೂ ಓದಿ | Narendra Modi | ಜಾಗತಿಕ ನಾವೀನ್ಯತೆ ಸೂಚ್ಯಂಕದಲ್ಲಿ ಭಾರತ 81ರಿಂದ 46ನೇ ಸ್ಥಾನಕ್ಕೆ, ಮೋದಿ ಮೆಚ್ಚುಗೆ