Site icon Vistara News

ವಿಸ್ತಾರ Explainer: ಕೆನಡಾದ ಜಸ್ಟಿನ್‌ ಟ್ರುಡೋ ಸರ್ಕಾರ ಖಲಿಸ್ತಾನಿಗಳಿಗೆ ಬೆಂಬಲ ನೀಡುತ್ತಿರುವುದೇಕೆ? ಇಲ್ಲಿದೆ ಇನ್‌ಸೈಡ್‌ ಸ್ಟೋರಿ!

Narendra Modi Justin Turdeau And Narendra Modi

“ಕೆನಡಾದಲ್ಲಿರುವ ಭಾರತ ವಿರೋಧಿ ಚಟುವಟಿಕೆಗಳನ್ನು ನಿಗ್ರಹಿಸಿ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳವವರೆಗೆ ಭಾರತ ಹಾಗೂ ಕೆನಡಾ ಮಧ್ಯೆ ಎಲ್ಲವೂ ಚೆನ್ನಾಗಿತ್ತು. ಖುಷಿಯಿಂದಲೇ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಜಿ20 ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು. ಭಾರತದ ಆತಿಥ್ಯ ಸ್ವೀಕರಿಸಿದ್ದರು. ಆದರೆ, ಯಾವಾಗ ಮೋದಿ ಅವರು ಭಾರತ ವಿರೋಧಿ ಚಟುವಟಿಕೆಗಳು ಎಂದರೋ, ಆಗ ಜಸ್ಟಿನ್‌ ಟ್ರುಡೋ ವಿಚಲಿತರಾದರು. ವಿಮಾನ ಕೆಟ್ಟು ನಿಂತಾಗ ಭಾರತದ ವಿಐಪಿ ಕೋಣೆಗಳಲ್ಲಿ ಇರಿ ಎಂದರೆ ಒಲ್ಲೆ ಎಂದರು. ನಮ್ಮದೇ ದೇಶದ ವಿಮಾನದಲ್ಲಿ (ಏರ್‌ ಇಂಡಿಯಾ ಒನ್)‌ ಕೆನಡಾಗೆ ತೆರಳಿ ಎಂದಾಗಲೂ ಜಸ್ಟಿನ್‌ ಟ್ರುಡೋ ಬೇಡ ಎಂದು ತಲೆ (ವಿಸ್ತಾರ Explainer) ಅಲ್ಲಾಡಿಸಿದರು.

ಭಾರವಾದ ಮನಸ್ಸಿನಿಂದ ಭಾರತದಿಂದ ಹಿಂತಿರುಗಿದ ಕೆಲವೇ ದಿನಗಳಲ್ಲಿ ಭಾರತದ ಜತೆ ನಡೆಯಬೇಕಿದ್ದ ವ್ಯಾಪಾರ ಒಪ್ಪಂದವನ್ನು ಕೆನಡಾ ರದ್ದುಪಡಿಸಿತು. ಕೆನಡಾದಲ್ಲಿರುವ ಭಾರತದ ರಾಯಭಾರಿಯನ್ನು ಉಚ್ಚಾಟಿಸಿತು. ಭಾರತದ ವಿರುದ್ಧ ಹಲವು ಆರೋಪ ಮಾಡಿತು. ಜಮ್ಮು-ಕಾಶ್ಮೀರ, ಮಣಿಪುರದಲ್ಲಿ ಹಿಂಸೆ ನಡೆಯುತ್ತಿದೆ, ಅಲ್ಲಿಗೆ ತೆರಳಬೇಡಿ ಎಂದು ಭಾರತದಲ್ಲಿರುವ ಕೆನಡಾ ನಾಗರಿಕರಿಗೆ ಸೂಚಿಸಿತು. ಹಾಗಾದರೆ, ಭಾರತದ ಮೇಲೆ ಕೆನಡಾ ಇಷ್ಟೊಂದು ಮುರಕೊಂಡು ಬೀಳಲು ಕಾರಣವೇನು? ನರೇಂದ್ರ ಮೋದಿ ಅವರು “ಭಾರತ ವಿರೋಧಿ ಚಟುವಟಿಕೆ” ಎಂದು ಹೇಳಿದ್ದು ಜಸ್ಟಿನ್‌ ಟ್ರುಡೋ ಅವರಿಗೇಕೆ ಅಷ್ಟೊಂದು ಆಳವಾಗಿ ನಾಟಿತು? ಜಸ್ಟಿನ್‌ ಟ್ರುಡೋ ಅವರೇಕೆ ಖಲಿಸ್ತಾನಿಗಳ ಪರ ನಿಲ್ಲುತ್ತಿದ್ದಾರೆ? ಅವರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಪರೋಕ್ಷವಾಗಿ ಸೂಚಿಸಿದರೂ ಏಕೆ ಜಸ್ಟಿನ್‌ ಟ್ರುಡೋ ಕೆರಳಿ ಕೆಂಡವಾಗಿದ್ದಾರೆ? ಇದರ ಹಿಂದೆ ಯಾವ ರಾಜಕೀಯ, ಅಧಿಕಾರದ ದಾಹ ಅಡಗಿದೆ? ಅಷ್ಟಕ್ಕೂ, ಖಲಿಸ್ತಾನಿಗಳ ಬೆಂಬಲ ಇಲ್ಲದಿದ್ದರೆ ಜಸ್ಟಿನ್‌ ಟ್ರುಡೋ ಅಧಿಕಾರವನ್ನೇ ಕಳೆದುಕೊಳ್ಳಲಿದ್ದಾರೆಯೇ? ಇಲ್ಲಿದೆ ಮಾಹಿತಿ.

ಖಲಿಸ್ತಾನಿ ಪಕ್ಷದ ಬೆಂಬಲವೇ ಜಸ್ಟಿನ್‌ ಟ್ರುಡೋ ಬಲ

ಒಂದೇ ಮಾತಿನಲ್ಲಿ ಹೇಳುವುದಾದರೆ, ಜಸ್ಟಿನ್‌ ಟ್ರುಡೋ ಸರ್ಕಾರ ನಿಂತಿರುವುದೇ ಖಲಿಸ್ತಾನಿಗಳ ಪರವಾಗಿರುವ ಪಕ್ಷದ ಬೆಂಬಲದ ಮೇಲೆ. ಹೌದು, 2021ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಜಸ್ಟಿನ್‌ ಟ್ರುಡೋ ಅವರ ಲಿಬರಲ್‌ ಪಕ್ಷವು ಬಹುಮತ ಪಡೆದು ಅಧಿಕಾರ ಪಡೆದಿಲ್ಲ. ಮ್ಯಾಜಿಕ್‌ ನಂಬರ್‌ ಆದ 170 ಸೀಟುಗಳ ಬದಲು ಜಸ್ಟಿನ್‌ ಟ್ರುಡೋ ಅವರ ಪಕ್ಷವು 157 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಆಗ, ಖಲಿಸ್ತಾನಿಗಳ ಪರ ಒಲವಿರುವ, ಜಗಮೀತ್‌ ಸಿಂಗ್‌ ನೇತೃತ್ವದ ನ್ಯೂ ಡೆಮಾಕ್ರಟಿಕ್‌ ಪಕ್ಷವು ಜಸ್ಟಿನ್‌ ಟ್ರುಡೋ ಅವರಿಗೆ ಬೆಂಬಲ ಸೂಚಿಸಿತು. ಜಗಮೀತ್‌ ಸಿಂಗ್‌ ತನ್ನ ಪಕ್ಷದ 25 ಸಂಸದರ ಬೆಂಬಲವನ್ನು ಜಸ್ಟಿನ್‌ ಟ್ರುಡೋ ಅವರಿಗೆ ಘೋಷಿಸಿದ. 182 ಸಂಸದರ ಬಲದೊಂದಿಗೆ ಜಸ್ಟಿನ್‌ ಟ್ರುಡೋ ಕೆನಡಾ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ಈಗ ನರೇಂದ್ರ ಮೋದಿ ಅವರ ಕರೆಗೆ ಓಗೊಟ್ಟು ಕೆನಡಾದಲ್ಲಿರುವ ಖಲಿಸ್ತಾನಗಳ ವಿರುದ್ಧ ಕ್ರಮ ತೆಗೆದುಕೊಂಡರೆ, ಖಲಿಸ್ತಾನ ಚಳವಳಿ ಹಿನ್ನೆಲೆಯ ಜಗಮೀತ್‌ ಸಿಂಗ್‌ ಪಕ್ಷವು ಬೆಂಬಲ ವಾಪಸ್‌ ಪಡೆಯುತ್ತದೆ. ಆಗ, ಜಸ್ಟಿನ್‌ ಟ್ರುಡೋ ಅಧಿಕಾರ ಕಳೆದುಕೊಳ್ಳುತ್ತಾರೆ.

ಯಾರು ಈ ಜಗಮೀತ್‌ ಸಿಂಗ್?‌

ಪಂಜಾಬ್‌ ಮೂಲದ ದಂಪತಿಗೆ ಕೆನಡಾದ ಒಂಟಾರಿಯೋದ ಸ್ಕಾರ್‌ಬೊರಫ್‌ನಲ್ಲಿ 1979ರಲ್ಲಿ ಜನಿಸಿದ ಜಗಮೀತ್‌ ಸಿಂಗ್‌ ಈಗ ಕೆನಡಾದ ಮೂರನೇ ಅತಿದೊಡ್ಡ ಪಕ್ಷದ ನಾಯಕನಾಗಿದ್ದಾನೆ. ವಕೀಲನಾಗಿ ವೃತ್ತಿ ಆರಂಭಿಸಿ, ಕೆನಡಾದಲ್ಲಿರುವ ಸಿಖ್‌ ಸಮುದಾಯದ ನಾಯಕನಾಗಿ, ಶಾಸಕನಾಗಿ, ಸಂಸದನಾಗಿ, ಖಲಿಸ್ತಾನ ಪರ ಹೋರಾಟಕ್ಕೆ ಬೆಂಬಲ ಸೂಚಿಸಿ ಈಗ ಸರ್ಕಾರದ ಭಾಗವೇ ಆಗಿದ್ದಾನೆ. ಅಷ್ಟೇ ಅಲ್ಲ, ಜಸ್ಟಿನ್‌ ಟ್ರುಡೋ ಅವರಿಗೇ ಆಗಾಗ ತನ್ನ ಬೇಡಿಕೆಗಳನ್ನು ಇಡುತ್ತ, ಅವುಗಳನ್ನು ಈಡೇರಿಸಿಕೊಳ್ಳುತ್ತ, ಪರೋಕ್ಷವಾಗಿ ಖಲಿಸ್ತಾನಿಗಳಿಗೆ ಬೆಂಬಲಿಸುತ್ತ ‘ಪವರ್‌ ಕಂಟ್ರೋಲರ್’‌ ಆಗಿ ಹೊರಹೊಮ್ಮಿದ್ದಾನೆ.

ಭಾರತದಲ್ಲಿ ಖಲಿಸ್ತಾನ ವಿಷ ಬೀಜ ಬಿತ್ತಿದ ಭಿಂದ್ರನ್‌ವಾಲೆಯ ಪೋಸ್ಟರ್‌ಗಳುಳ್ಳ ಖಲಿಸ್ತಾನಿ ಹೋರಾಟದಲ್ಲಿ ಜಗಮೀತ್‌ ಸಿಂಗ್‌ ಭಾಗವಹಿಸುತ್ತಾನೆ. ಆ ಮೂಲಕ ಖಲಿಸ್ತಾನಿ ಹೋರಾಟಕ್ಕೆ ಬೆಂಬಲ ಸೂಚಿಸುತ್ತಾನೆ. ಕೃಷಿ ಕಾಯ್ದೆಗಳ ವಿರುದ್ಧ ಭಾರತದಲ್ಲಿ ನಡೆದ ಪ್ರತಿಭಟನೆಯ ಹಿಂದೆ ಖಲಿಸ್ತಾನಿಗಳ ಕೈವಾಡ ಇದೆ ಎಂಬ ಮಾಹಿತಿ ಹರಿದಾಡುತ್ತಲೇ, ಭಾರತದ ರೈತರ ಪರ ಕಾಳಜಿ ತೋರುತ್ತಾನೆ. ಅವಕಾಶ ಸಿಕ್ಕಾಗಲೆಲ್ಲ ಭಾರತ ವಿರೋಧಿ ಮನಸ್ಥಿತಿ ತೋರುತ್ತಾನೆ. ಅಷ್ಟೇ ಏಕೆ, 2013ರಲ್ಲಿ ಈತ ಪಂಜಾಬ್‌ಗೆ ಆಗಮಿಸುತ್ತಾನೆ ಎಂದಾಗ ಆಗಿನ ಯುಪಿಎ ಸರ್ಕಾರವು ಈತನಿಗೆ ವೀಸಾ ನೀಡಿರಲಿಲ್ಲ.

ಜಸ್ಟಿನ್‌ ಟ್ರುಡೋ ಹಾಗೂ ಜಗಮೀತ್‌ ಸಿಂಗ್

ಇದನ್ನೂ ಓದಿ: India Canada Row: ಏಟಿಗೆ ಎದುರೇಟು; ಕೆನಡಾದಲ್ಲಿರುವ ಭಾರತೀಯರಿಗೆ ಕೇಂದ್ರ ಅಡ್ವೈಸರಿ

ಜಸ್ಟಿನ್‌ ಟ್ರುಡೋಗೆ ಅಧಿಕಾರವೇ ಮುಖ್ಯ

ತಂದೆಯ (ಪಿಯರ್‌ ಟ್ರುಡೋ) ಕಾಲದಿಂದಲೂ ಕೆನಡಾ ಅಧಿಕಾರದ ಪಡಸಾಲೆಯಲ್ಲಿ ಓಡಾಡಿಕೊಂಡಿರುವ ಜಸ್ಟಿನ್‌ ಟ್ರುಡೋ ಅವರಿಗೆ ಈಗ ಅಧಿಕಾರವೇ ಮುಖ್ಯ. ಯಾವುದೇ ಪಕ್ಷಕ್ಕೆ ಅಧಿಕಾರವೇ ಮುಖ್ಯವಾದರೂ, ಆ ಪಕ್ಷ ಯಾವ ನೀತಿಗಳ ಆಧಾರದ ಮೇಲೆ ನಿಲ್ಲುತ್ತದೆ ಎಂಬುದು ಮುಖ್ಯವಾಗುತ್ತದೆ. ಆದರೆ, ಖಲಿಸ್ತಾನಿಗಳಿಗೆ ಬೆಂಬಲ ನೀಡುವುದು ಪಿಯರ್‌ ಟ್ರುಡೋ ಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ಈ ಸಂಪ್ರದಾಯವನ್ನು ಮುರಿಯುವುದು, ಮುರಿದು ಅಧಿಕಾರ ಕಳೆದುಕೊಳ್ಳುವುದು ಜಸ್ಟಿನ್‌ ಟ್ರುಡೋ ಅವರಿಗೆ ಸುತಾರಾಂ ಇಷ್ಟವಿಲ್ಲ. ಹಾಗಾಗಿಯೇ, ಜೂನ್‌ನಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಗೀಡಾಗಿದ್ದಕ್ಕೆ ಸೆಪ್ಟೆಂಬರ್‌ನಲ್ಲಿ ಭಾರತದ ವಿರುದ್ಧ ಮಾತನಾಡಿದರು. ಭಾರತ ವಿರೋಧಿ ಚಟುವಟಿಕೆ ನಿಯಂತ್ರಿಸಿ ಎಂದಿದ್ದಕ್ಕೇ ಭಾರತದ ರಾಯಭಾರಿಯನ್ನು ವಜಾಗೊಳಿಸಿದರು. ಈಗ ಭಾರತದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನೆನಪಿರಲಿ, 1982ರಲ್ಲಿ ಕೆನಡಾ ಪ್ರಧಾನಿಯಾಗಿದ್ದ ಪಿಯರ್‌ ಟ್ರುಡೋ, ಉಗ್ರ ತಲವಿಂದರ್‌ ಪಾರ್ಮರ್‌ನನ್ನು ಭಾರತಕ್ಕೆ ಹಸ್ತಾಂತರಿಸಲು ಒಪ್ಪಿರಲಿಲ್ಲ.

ಭಾರತ ವಿರುದ್ಧ ಜಸ್ಟಿನ್‌ ಟ್ರುಡೋ ಆರೋಪ

ಇದನ್ನೂ ಓದಿ: India Canada Row: ಕೆನಡಾಗೆ ಭಾರತ ಮತ್ತೊಂದು ಗುದ್ದು; ವೀಸಾ ಸೇವೆಯೇ ರದ್ದು

ಹೇಗಿದೆ ಭಾರತ-ಕೆನಡಾ ಸಂಬಂಧ?

ಕೆನಡಾದಲ್ಲಿ ಭಾರತೀಯ ಮೂಲದ 14 ಲಕ್ಷ ಜನ ವಾಸಿಸುತ್ತಿದ್ದಾರೆ. ಸುಮಾರು 2.26 ಲಕ್ಷ ವಿದ್ಯಾರ್ಥಿಗಳು ಕೆನಡಾದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಭಾರತ ಹಾಗೂ ಕೆನಡಾ ಮಧ್ಯೆ 8 ಶತಕೋಟಿಗೂ ಅಧಿಕ ಡಾಲರ್‌ ಮೊತ್ತದ ವ್ಯಾಪಾರ ಇದೆ. ಭಾರತವು 4 ಶತಕೋಟಿ ಡಾಲರ್‌ ಮೊತ್ತದ ಉತ್ಪನ್ನಗಳನ್ನು ಕೆನಡಾಗೆ ರಫ್ತು ಮಾಡುತ್ತದೆ. ಕೆನಡಾ ಭಾರತಕ್ಕೆ 4 ಶತಕೋಟಿ ಡಾಲರ್‌ ಮೊತ್ತದ ಉತ್ಪನ್ನಗಳನ್ನು ರಫ್ತು ಮಾಡುತ್ತದೆ. ಇಷ್ಟಿದ್ದರೂ 2010ಕ್ಕಿಂತ ಮೊದಲಿನಿಂದಲೂ ಭಾರತ ಹಾಗೂ ಕೆನಡಾ ವ್ಯಾಪಾರ ಸಂಬಂಧವು ಅಷ್ಟಕ್ಕಷ್ಟೇ ಇದೆ. 2010ರಿಂದಲೂ ಬೃಹತ್‌ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಮಾತುಕತೆ ನಡೆಸಲಾಗುತ್ತಿದೆ. ಆದರೆ, ಇತ್ತೀಚೆಗೆ ಒಪ್ಪಂದ ಮಾಡಿಕೊಳ್ಳಲು ಎರಡೂ ದೇಶ ಒಪ್ಪಿಕೊಂಡಿದ್ದವು. ಈಗ ಜಸ್ಟಿನ್‌ ಟ್ರುಡೋ ಅವರ ಅಧಿಕಾರದ ದಾಹದಿಂದಾಗಿ ಒಪ್ಪಂದವನ್ನು ಮುಂದೂಡಲಾಗಿದೆ. ಭಾರತ ಕೂಡ ಸರಿಯಾಗಿಯೇ ತಿರುಗೇಟು ನೀಡಿರುವುದರಿಂದ ಶೀಘ್ರದಲ್ಲಿ ಒಪ್ಪಂದ ಮಾಡಿಕೊಳ್ಳುವ ಲಕ್ಷಣಗಳೂ ಕಾಣಿಸುತ್ತಿಲ್ಲ.

Exit mobile version