ಪಟನಾ: ರಾಜಕಾರಣದಲ್ಲಿ ಯಾರೂ ಮಿತ್ರರೂ ಅಲ್ಲ, ಶತ್ರುಗಳೂ ಅಲ್ಲ ಎಂಬ ಮಾತೀಗ ಕ್ಲೀಷೆ ಆಗಿದೆ. ರಾಜಕೀಯದಲ್ಲಿ ಎಲ್ಲ ಪಕ್ಷಗಳು, ಎಲ್ಲ ಪಕ್ಷಗಳ ನಾಯಕರ ಜತೆಗಂತೂ ವೈರತ್ವ ಕಟ್ಟಿಕೊಳ್ಳುವುದು, ಎಲ್ಲ ಪಕ್ಷಗಳ ಜತೆ ಮಿತ್ರರಾಗಿ ಇರುವುದು ಕಷ್ಟಸಾಧ್ಯ. ಆದರೆ, ಬಿಹಾರದಲ್ಲಿ (Bihar Politics) ಅವಕಾಶವನ್ನೇ ಸದುಪಯೋಗ ಮಾಡಿಕೊಂಡು, ಅವಶ್ಯಕತೆ, ಅನಿವಾರ್ಯವನ್ನು ಅರಿತುಕೊಂಡು, ಎಲ್ಲ ಪಕ್ಷಗಳ ಜತೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಅಧಿಕಾರ ಅನುಭವಿಸುವುದು ಹೇಗೆ ಎಂಬುದನ್ನು ನಿತೀಶ್ ಕುಮಾರ್ (Nitish Kumar) ಅವರನ್ನು ನೋಡಿ ಕಲಿಯಬೇಕು. ಆರ್‌ಜೆಡಿ ಜತೆಗಿನ ಮೈತ್ರಿ ಮುರಿದುಕೊಂಡು, ಈಗ ಮತ್ತೆ ಬಿಜೆಪಿ ಜತೆಗೂಡಿ ಸರ್ಕಾರ ರಚಿಸಲು ಮುಂದಾಗಿರುವುದೇ ಇದಕ್ಕೆ ಉತ್ತಮ ನಿದರ್ಶನವಾಗಿದೆ.
ಹೌದು, ಬಿಹಾರದಲ್ಲಿ ನಿತೀಶ್ ಕುಮಾರ್ ಅವರೇ 2005ರಿಂದ (ಮಧ್ಯದ ಏಳೆಂಟು ತಿಂಗಳು ಹೊರತುಪಡಿಸಿ) ಮುಖ್ಯಮಂತ್ರಿಯಾಗಿದ್ದಾರೆ. ಇಷ್ಟು ಅವಧಿಯಲ್ಲಿ ಒಮ್ಮೆಯೂ ಜೆಡಿಯುಗೆ ಬಹುಮತ ಲಭಿಸಿಲ್ಲ. ಹೀಗಿದ್ದರೂ, ನಿತೀಶ್ ಕುಮಾರ್ ಅವರೇ ಬಿಹಾರಕ್ಕೆ ಕಿಂಗ್ ಎನಿಸಿದ್ದಾರೆ. ಸದ್ಯ ಬಿಹಾರದಲ್ಲಿ ಜೆಡಿಯು ಮೂರನೇ ಅತಿದೊಡ್ಡ ಪಕ್ಷವಾಗಿದೆ. ಆರ್‌ಜೆಡಿ 79 ಶಾಸಕರನ್ನು ಹೊಂದಿದ್ದರೆ, ಬಿಜೆಪಿ 78 ಹಾಗೂ ಆರ್‌ಜೆಡಿ 43 ಸ್ಥಾನಗಳನ್ನು ಹೊಂದಿದೆ. ಹೀಗಿದ್ದರೂ, ನಿತೀಶ್ ಕುಮಾರ್ ಅವರ ಪಕ್ಷವೇ ನಿರ್ಣಾಯಕವಾಗಿದೆ.
ರಾಜಕೀಯ ಸನ್ನಿವೇಶದ ಸದ್ಬಳಕೆ
ಬಿಹಾರದ ರಾಜಕೀಯ ಸನ್ನಿವೇಶವನ್ನು ಸದ್ಬಳಕೆ ಮಾಡಿಕೊಳ್ಳುವ ನಿತೀಶ್ ಕುಮಾರ್ ಅವರು ಇದುವರೆಗೆ ಆರ್‌ಜೆಡಿ, ಕಾಂಗ್ರೆಸ್ ಹಾಗೂ ಬಿಜೆಪಿ ಜತೆಗೂಡಿ ಎಂಟು ಬಾರಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದಾರೆ. ಬಹುತೇಕ ಸಲ ಅವರು ಬೇರೊಂದು ಪಕ್ಷದ ಜತೆ ಕೈಜೋಡಿಸುವ ಮೂಲಕವೇ ಸಿಎಂ ಗಾದಿ ಏರಿದ್ದಾರೆ. ಬಿಹಾರದಲ್ಲಿ ಮತದಾರ ಪ್ರಭುಗಳು ಒಂದೇ ಪಕ್ಷಕ್ಕೆ ಅಧಿಕಾರ ನೀಡುತ್ತಿಲ್ಲ. ಆರ್‌ಜೆಡಿ ಹಾಗೂ ಬಿಜೆಪಿ ಕೈಜೋಡಿಸುವ ಸಾಧ್ಯತೆಗಳು ಇಲ್ಲ. ಬಿಜೆಪಿ ಕಾಂಗ್ರೆಸ್ ಕೂಡ ಮೈತ್ರಿ ಮಾಡಿಕೊಳ್ಳುವುದು ಸಾಧ್ಯವಿಲ್ಲ. ಇದನ್ನು ಸ್ಪಷ್ಟವಾಗಿ ಅರಿತುಕೊಂಡಿರುವ ನಿತೀಶ್ ಕುಮಾರ್ ಅವರು ಕಡಿಮೆ ಸೀಟುಗಳನ್ನು ಹೊಂದಿದ್ದರೂ ಆರ್‌ಜೆಡಿ ಇಲ್ಲವೇ ಬಿಜೆಪಿ ಜತೆ ಸೇರಿ ಸರ್ಕಾರ ರಚಿಸುವುದು ಸಾಮಾನ್ಯವಾಗಿಬಿಟ್ಟಿದೆ.
ಇದನ್ನೂ ಓದಿ: Nitish Kumar: ನಿತೀಶ್ ವಿದಾಯದಿಂದ ಇಂಡಿಯಾ ಒಕ್ಕೂಟದ ಮೇಲಾಗುವ ಪರಿಣಾಮಗಳೇನು?
ಸಂಖ್ಯಾಬಲದ ಜತೆಗೆ ಜಾತಿ ಬಲವೂ ಇಲ್ಲ
ಭಾರತದ ರಾಜಕೀಯದಲ್ಲಿ ಜಾತಿಯು ಬಹುಮುಖ್ಯ ಪಾತ್ರ ನಿರ್ವಹಿಸುತ್ತದೆ. ದೇಶದ ಬಹುತೇಕ ಕಡೆ ನಾಯಕನ ಆಯ್ಕೆ, ಮತದಾರರ ಒಲವು ಕೂಡ ಜಾತಿ ಆಧಾರಿತವಾಗಿಯೇ ಇರುತ್ತದೆ. ಆದರೆ, ನಿತೀಶ್ ಕುಮಾರ್ ಅವರಿಗೆ ಜಾತಿ ಬಲವೂ ಇಲ್ಲ. ಬಿಹಾರದ ಕುರ್ಮಿ ಸಮುದಾಯಕ್ಕೆ ನಿತೀಶ್ ಕುಮಾರ್ ಅವರು ಸೇರಿದ್ದು, ಇವರ ಸಮುದಾಯದವರು ರಾಜ್ಯದಲ್ಲಿ ಶೇ.2.87ರಷ್ಟಿದ್ದಾರೆ. ಲಾಲು ಪ್ರಸಾದ್ ಯಾದವ್ ಕುಟುಂಬದ ವೋಟ್ ಬ್ಯಾಂಕ್ ಆಗಿರುವ ಯಾದವ ಸಮುದಾಯದವರು ಶೇ.14.26ರಷ್ಟಿದ್ದಾರೆ. ಪರಿಸ್ಥಿತಿ ಹೀಗಿದ್ದರೂ ನಿತೀಶ್ ಕುಮಾರ್ ಅವರು ಜಾತಿಯನ್ನೂ ಮೀರಿ, ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ