ನವದೆಹಲಿ: ಇಸ್ರೇಲ್ ಮೇಲೆ ಇರಾನ್ 200ಕ್ಕೂ ಅಧಿಕ ಡ್ರೋನ್‌ಗಳು ಹಾಗೂ ಕ್ಷಿಪಣಿಗಳ ಮೂಲಕ ದಾಳಿ (Israel Iran War) ನಡೆಸಿದ್ದು, ಮೂರನೇ ಮಹಾಯುದ್ಧದ ಭೀತಿ ಹೆಚ್ಚಾಗಿದೆ. ಹಮಾಸ್ ಉಗ್ರರ ದಾಳಿಗೆ ಸಿಲುಕಿದ್ದ ಇಸ್ರೇಲ್ ಈಗ ಮತ್ತೊಂದು ದಾಳಿ ಎದುರಿಸುತ್ತಿದೆ. ಅಷ್ಟೇ ಅಲ್ಲ, ಪ್ರತಿದಾಳಿಗೂ ಇಸ್ರೇಲ್ ಚಿಂತನೆ ನಡೆಸುತ್ತಿದೆ. ಇದರ ಬೆನ್ನಲ್ಲೇ, ಇಸ್ರೇಲ್ ಹಾಗೂ ಇರಾನ್ ಸಂಘರ್ಷದಿಂದ ಭಾರತದ ಷೇರು ಮಾರುಕಟ್ಟೆ (Indian Share Market) ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
“ಮಧ್ಯ ಏಷ್ಯಾದಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದಾಗಿ ಭಾರತಕ್ಕೆ ಆಮದಾಗುವ ಉತ್ಪನ್ನಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಅದರಲ್ಲೂ, ತೈಲದ ಪೂರೈಕೆ, ತೈಲ ಬೆಲೆ ಏರಿಕೆ ಸಾಧ್ಯತೆ ಇದೆ. ಇದರಿಂದ ಷೇರು ಮಾರುಕಟ್ಟೆಯ ಮೇಲೂ ಪರಿಣಾಮ ಬೀರಲಿದೆ” ಎಂಬುದಾಗಿ ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್ ಮುಖ್ಯಸ್ಥ ವಿನೋದ್ ನಾಯರ್ ಅವರ ಎಎನ್‌ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. “ಭಾರತದ ಷೇರು ಮಾರುಕಟ್ಟೆಗೆ ತೀವ್ರವಾಗಿ ಹೊಡೆತ ಬೀಳುವ ಸಾಧ್ಯತೆ ಇದೆ. ಅಮೆರಿಕದ ಬೆಲೆ ಕಡಿತವು ವಿಳಂಬವಾಗುತ್ತಿದೆ. ಮಧ್ಯ ಏಷ್ಯಾ ಬಿಕ್ಕಟ್ಟುಗಳು ತೈಲ ಬೆಲೆ ಏರಿಕೆಗೆ ಕಾರಣವಾಗಲಿದೆ” ಎಂದಿದ್ದಾರೆ.
Missiles sent from Iran being intercepted by the Iron Dome in Israel 's capital city Tel Aviv . Is this the start of World War 3 ?
— Super Marcus (@noskyea) April 15, 2024
This is going to be tough pic.twitter.com/JMqXfRSwDI
ಕೊಟಕ್ ಸೆಕ್ಯುರಿಟೀಸ್ ಕಾರ್ಯಕಾರಿ ಉಪಾಧ್ಯಕ್ಷ ಶ್ರೀಕಾಂತ್ ಚೌಹಾಣ್ ಕೂಡ ಇದನ್ನೇ ಹೇಳಿದ್ದಾರೆ. “ಈಕ್ವಿಟಿ ಮಾರುಕಟ್ಟೆಗೆ ಇಸ್ರೇಲ್ ಹಾಗೂ ಇರಾನ್ ಸಂಘರ್ಷವು ನಕಾರಾತ್ಮಕವಾಗಲಿದೆ. ಆದರೆ, ಷೇರು ಮಾರುಕಟ್ಟೆಯ ಮೇಲೆ ತೀರಾ ಪರಿಣಾಮ ಬೀರುವುದಿಲ್ಲ” ಎಂದಿರುವುದು ಹೂಡಿಕೆದಾರರಿಗೆ ತುಸು ರಿಲೀಫ್ ಸಿಕ್ಕಂತಾಗಿದೆ. ಉಕ್ರೇನ್ ಹಾಗೂ ರಷ್ಯಾ ಬಿಕ್ಕಟ್ಟಿನಿಂದ ಜಾಗತಿಕವಾಗಿ ತೈಲ ಪೂರೈಕೆಗೆ ಪರಿಣಾಮ ಬೀರಿತ್ತು. ಆದರೆ, ರಾಜತಾಂತ್ರಿಕ ಚಾಣಾಕ್ಷತನ ಮೆರೆದಿದ್ದ ಭಾರತವು ಕಡಿಮೆ ಬೆಲೆಗೆ ಕಚ್ಚಾ ತೈಲ ಆಮದು ಮಾಡಿಕೊಂಡಿತ್ತು.
ತಕ್ಕ ಪ್ರತ್ಯುತ್ತರ ಎಂದಿರುವ ಇಸ್ರೇಲ್
ಇರಾನ್ ದಾಳಿಗೆ ಪ್ರತಿದಾಳಿ ಮಾಡುವುದಾಗಿ ಇಸ್ರೇಲ್ ತಿಳಿಸಿದೆ. ಇದಕ್ಕೆ ಇಸ್ರೇಲ್ ಸಂಪುಟ ಸಭೆಯೂ ಒಪ್ಪಿಗೆ ಸೂಚಿಸಿದೆ. “ಕಳೆದ ಕೆಲವು ದಿನಗಳಿಂದ ಇರಾನ್ ನಮ್ಮ ಮೇಲೆ ದಾಳಿ ಮಾಡುತ್ತದೆ ಎಂಬ ಸುಳಿವು ಸಿಕ್ಕಿತ್ತು. ಅದಕ್ಕಾಗಿ ಇಸ್ರೇಲ್ ಕೂಡ ಪ್ರತಿದಾಳಿಗೆ ಸಿದ್ಧವಾಗಿದೆ. ಇಸ್ರೇಲ್ ಬಲಿಷ್ಠವಾಗಿದೆ. ಇಲ್ಲಿನ ರಕ್ಷಣಾ ವ್ಯವಸ್ಥೆಯು ಸಮರ್ಥವಾಗಿದೆ. ಈಗ ಇರಾನ್ ನಮ್ಮ ಮೇಲೆ ದಾಳಿ ಮಾಡಿದ್ದು, ನಾವೇನೂ ಕೈಕಟ್ಟಿ ಕೂರುವವರಲ್ಲ. ನಮ್ಮ ಜತೆ ಅಮೆರಿಕ ನಿಂತಿದೆ. ಬ್ರಿಟನ್ ಕೂಡ ನಮಗೆ ಬೆಂಬಲ ಸೂಚಿಸಿದೆ. ಹಾಗಾಗಿ, ಇರಾನ್‌ಗೆ ತಕ್ಕ ಪಾಠ ಕಲಿಸದೆ ಬಿಡುವುದಿಲ್ಲ” ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಎರಡೂ ದೇಶಗಳ ಸಂಘರ್ಷ ತೀವ್ರವಾದರೆ ಭಾರತದ ಮೇಲೆ ಪರಿಣಾಮ ಜಾಸ್ತಿಯಾಗುತ್ತದೆ ಎನ್ನಲಾಗಿದೆ.
ಇದನ್ನೂ ಓದಿ: India Iran: ಇಸ್ರೇಲ್ ಮೇಲೆ ದಾಳಿಯ ಮಧ್ಯೆಯೂ ಭಾರತದ ಪರ ನಿಂತ ಇರಾನ್; ಏನಿದು ಕೇಸ್?