Site icon Vistara News

ವಿಸ್ತಾರ Explainer : ಡಾಲರ್‌ ಮಾದರಿಯಲ್ಲಿ ಅಂತಾರಾಷ್ಟ್ರೀಯ ಕರೆನ್ಸಿಯಾಗಲಿದೆಯೇ ರೂಪಾಯಿ?

Rupee

ಅಮೆರಿಕದ ಡಾಲರ್‌, ಯುರೋಪಿನ ಯೂರೋ, ಜಪಾನಿನ ಯೆನ್‌ ಮತ್ತು ಒಂದಷ್ಟು ಪ್ರಮಾಣದಲ್ಲಿ ಚೀನಾದ ಯುವಾನ್‌ ಈಗ ಅಂತಾರಾಷ್ಟ್ರೀಯ ಕರೆನ್ಸಿಗಳಾಗಿ ತಮ್ಮ ಪ್ರಾಬಲ್ಯವನ್ನು ಹೊಂದಿವೆ. ಭಾರತ ತನ್ನ ಕರೆನ್ಸಿಯಾದ ರೂಪಾಯಿಗೆ ( Indian rupee) ಇದೇ ಸ್ಥಾನಮಾನವನ್ನು ಸಾಧಿಸಿಕೊಡಲು (Trade In Rupee) ಗಣನೀಯ ಕಾರ್ಯತಂತ್ರಗಳನ್ನು ಕೈಗೊಂಡಿದೆ. ಈ ಬೆಳವಣಿಗೆ ಕುತೂಹಲ ಮೂಡಿಸಿದೆ. ಹಾಗಾದರೆ ಒಂದು ಕರೆನ್ಸಿ ಅಂತಾರಾಷ್ಟ್ರೀಯವಾಗುವುದು ಎಂದರೆ ಏನು? ಭಾರತ ಯಾಕಾಗಿ ಇಂಥ ಸಾಹಸಕ್ಕೆ ಮುಂದಾಗಿದೆ. ಇದರ ಸಾಧಕ-ಬಾಧಕಗಳೇನು? (ವಿಸ್ತಾರ Explainer) ನೋಡೋಣ.

ಜನ ಮೊದಲೇನು ಮಾಡುತ್ತಿದ್ದರು?

ಕರೆನ್ಸಿ ಅಸ್ತಿತ್ವಕ್ಕೆ ಬರುವುದಕ್ಕೆ ಮುನ್ನ ನಾಗರಿಕತೆಗಳಲ್ಲಿ ಬಾರ್ಟರ್‌ ಪದ್ಧತಿ ಇತ್ತು. ಆಗ ಮಧ್ಯವರ್ತಿ ಹಣ ಆಗಿರಲಿಲ್ಲ. ಉತ್ಪನ್ನ ಅಥವಾ ಸೇವೆಯನ್ನು ವಿನಿಮಯ ಮಾಡಲಾಗುತ್ತಿತ್ತು. ಆದರೆ ಬಾರ್ಟರ್‌ ವ್ಯವಸ್ಥೆಯಲ್ಲಿ ಹಲವು ಅಡಚಣೆಗಳಿತ್ತು. ಪಾವತಿಯನ್ನು ಮುಂದೂಡಲು ಸಾಧ್ಯವಾಗುತ್ತಿರಲಿಲ್ಲ. ನಿರ್ದಿಷ್ಟ ಮಾನದಂಡ ಅಥವಾ ಮಾಪನದಲ್ಲಿ ಅಳೆಯಲು ಆಗುತ್ತಿರಲಿಲ್ಲ. ವಸ್ತುಗಳನ್ನು ದಾಸ್ತಾನಿಡುವುದೂ ಸಮಸ್ಯೆಯಾಗಿರುತ್ತಿತ್ತು.

ಈ ಎಲ್ಲ ಸಮಸ್ಯೆಗಳನ್ನು ಹಣ ಬಗೆಹರಿಸಿದೆ. ಕಾಗದದ ಚೂರು ಕರೆನ್ಸಿಯಾಗಿ ಬಹು ಮೌಲ್ಯ ಗಳಿಸಿದೆ. ಈಗ ಡಿಜಿಟಲ್‌ ಕರೆನ್ಸಿಗಳೂ ಬಂದಿವೆ. ನಂಬಿಕೆ ಇಲ್ಲದೆ ಕರೆನ್ಸಿಗೆ ಬೆಲೆ ಇಲ್ಲ. ಹಲವು ದೇಶಗಳಲ್ಲಿ ವ್ಯಾಪಕವಾಗಿ ಬಳಕೆಯಾಗುವ ಕರೆನ್ಸಿ ಜಾಗತಿಕ ಕರೆನ್ಸಿಯಾಗಿ ಹೊರಹೊಮ್ಮುತ್ತದೆ. ವಸಾಹಾತುಶಾಹಿ ಕಾಲ ಘಟ್ಟದಲ್ಲಿ ಬ್ರಿಟನ್‌ =ನ ಪೌಂಡ್‌ ಜಾಗತಿಕ ಕರೆನ್ಸಿಯಾಗಿತ್ತು. 1944ರಲ್ಲಿ ಅಮೆರಿಕದಲ್ಲಿ ನಡೆದ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಏರ್ಪಟ್ಟ ಬ್ರೆಟ್ಟೋನ್‌ ವುಡ್ಸ್‌ ಒಪ್ಪಂದದ ಬಳಿಕ, ಹಳೆಯ ಗೋಲ್ಡ್‌ ಸ್ಟ್ಯಾಂಡರ್ಡ್‌ ಬದಲಿಗೆ ಅಮೆರಿಕದ ಡಾಲರ್‌ ಜಾಗತಿಕ ಕರೆನ್ಸಿಯಾಯಿತು. 1973ರಲ್ಲಿ ಅಮೆರಿಕ ಮತ್ತು ಒಪೆಕ್‌ ರಾಷ್ಟ್ರಗಳ ಜತೆಗಿನ ಒಪ್ಪಂದದ ಪ್ರಕಾರ ತೈಲವನ್ನು ಡಾಲರ್‌ ಕರೆನ್ಸಿಯ ಮೂಲಕ ಮಾರಾಟ ಮಾಡುವುದಾಗಿ ಹಾಗೂ ಅದಕ್ಕೆ ಪ್ರತಿಯಾಗಿ ಅಮೆರಿಕವು ರಾಜಕೀಯ ಮತ್ತು ಮಿಲಿಟರಿ ಬೆಂಬಲವನ್ನು ನೀಡುವುದಾಗಿಯೂ ನಿಶ್ಚಯವಾಯಿತು. ಈ ಹಿಂದೆ ಕೊಡದಿದ್ದ ಶಸ್ತ್ರಾಸ್ತ್ರಗಳನ್ನೂ ನೀಡಲು ಅಮೆರಿಕ ಒಪ್ಪಿತು. ಹೀಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಡಾಲರ್‌ ಪ್ರಾಬಲ್ಯ ಉಂಟಾಯಿತು.

ಜಾಗತಿಕ ಕರೆನ್ಸಿಯಾಗಿ ರೂಪಾಯಿ

ಭಾರತ ಕೆಲವು ವರ್ಷಗಳಿಂದ ರೂಪಾಯಿಯನ್ನು ಅಂತಾರಾಷ್ಟ್ರೀಯ ಕರೆನ್ಸಿಯಾಗಿಸಲು ಯತ್ನಿಸುತ್ತಿದೆ. 2013ರಲ್ಲಿ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ, ವಿದೇಶಿ ಹೂಡಿಕೆದಾರರಿಗೆ ಮಸಾಲಾ ಬಾಂಡ್‌ಗಳಲ್ಲಿ ಹೂಡಿಕೆ ಮಾಡಲು ಅನುಮತಿ ನೀಡಿತು. ಇದು ರೂಪಾಯಿಯ ಮುಖಬೆಲೆ ಇರುವ ಬಾಂಡ್‌ಗಳಾಗಿದ್ದು, ವಿದೇಶಿ ಹೂಡಿಕೆದಾರರಿಗೆ ಖರೀದಿ ಮತ್ತು ಮಾರಾಟಕ್ಕೆ ಸುಲಭವಾಯಿತು.

2015ರಲ್ಲಿ ಆರ್‌ಬಿಐ ವಿದೇಶಿ ಹೂಡಿಕೆದಾರರಿಗೆ ರೂಪಾಯಿ ಮುಖಬೆಲೆಯ ಡಿರೈವಟಿಸ್‌ಗಳಲ್ಲಿ ವಹಿವಾಟು ನಡೆಸಲು ಅನುಮತಿ ನೀಡಿತು. 2019ರಲ್ಲಿ ವಿದೇಶಿ ವಿನಿಮಯ ದರವನ್ನು ಉದಾರೀಕರಣ ಮಾಡುವ ಪ್ರಕ್ರಿಯೆಗೆ ಸರ್ಕಾರ ಆರಂಭಿಸಿತು. ರಿಸರ್ವ್‌ ಕರೆನ್ಸಿಯಾಗಿ ರೂಪಾಯಿ ಆಕರ್ಷಕವಾಗತೊಡಗಿತು. ರಿಸರ್ವ್‌ ಕರೆನ್ಸಿ ಎಂದರೆ ಸೆಂಟ್ರಲ್‌ ಬ್ಯಾಂಕ್‌ಗಳು ಮತ್ತು ಪ್ರಮುಖ ಹಣಕಾಸು ಸಂಸ್ಥೆಗಳು ಅಂತಾರಾಷ್ಟ್ರೀಯ ವಿನಿಮಯಕ್ಕೆ ಭಾರಿ ಪ್ರಮಾಣದಲ್ಲಿ ಬಳಸುವ ಕರೆನ್ಸಿ. ಈ ರಿಸರ್ವ್‌ ಕರೆನ್ಸಿಯಿಂದ ರಾಷ್ಟ್ರಕ್ಕೆ ವಿದೇಶಿ ವಿನಿಮಯ ದರದ ಅಪಾಯ ಕಡಿಮೆಯಾಗುತ್ತದೆ. ವ್ಯಾಪಾರ ಮಾಡಲು ರಿಸರ್ವ್‌ ಕರೆನ್ಸಿಗೆ ತನ್ನ ಕರೆನ್ಸಿಯನ್ನು ವಿನಿಮಯ ಮಾಡಬೇಕಾದ ಅಗತ್ಯ ಇರುವುದಿಲ್ಲ.

ರೂಪಾಯಿಯ ಅಂತಾರಾಷ್ಟ್ರೀಕರಣಕ್ಕೆ ಸಕಾಲ

ಭಾರತದ ಆರ್ಥಿಕತೆಯ ಬೆಳವಣಿಗೆ ಮತ್ತು ಹೂಡಿಕೆಯಲ್ಲಿನ ಹೆಚ್ಚಳದ ಪರಿಣಾಮ ರೂಪಾಯಿಗೆ ಬೇಡಿಕೆ ಹೆಚ್ಚುತ್ತಿದೆ. ಜಾಗತಿಕ ಮಟ್ಟದ ಕಂಪನಿಗಳು ಭಾರತದಲ್ಲಿನ ಭಾರಿ ಮಾರುಕಟ್ಟೆಯ ಲಾಭವನ್ನು ಪಡೆಯಲು ಇಲ್ಲಿ ತಮ್ಮ ಕಚೇರಿಗಳನ್ನು ತೆರೆಯುತ್ತಿವೆ. ವಿದೇಶಿ ಬಂಡವಾಳ ಹೂಡಿಕೆಗೆ ಭಾರತ ಆಕರ್ಷಕವೆನಿಸುತ್ತಿದೆ. ಆರ್‌ಬಿಐನ ಅಂಕಿ ಅಂಶಗಳ ಪ್ರಕಾರ 2008ರಲ್ಲಿ 12 ಶತಕೋಟಿ ಡಾಲರ್‌(98,400 ಕೋಟಿ ರೂ.) ವಿದೇಶಿ ಸಾಂಸ್ಥಿಕ ಹೂಡಿಕೆಯಾಗಿದ್ದರೆ 2020ರ ವೇಳೆಗೆ 80 ಶತಕೋಟಿ ಡಾಲರ್‌ಗೆ (6.56 ಲಕ್ಷ ಕೋಟಿ ರೂ.) ಏರಿಕೆಯಾಗಿದೆ.

ಭಾರತದಲ್ಲಿ ವ್ಯಾಪಾರ ಮತ್ತು ಹೂಡಿಕೆಯ ಅವಕಾಶಗಳು ಹೆಚ್ಚಿದಂತೆ ಭಾರತದ ಆರ್ಥಿಕತೆ ವಿಶ್ವ ಆರ್ಥಿಕತೆಯ ಜತೆಗೆ ಸಂಯೋಜನೆಯಾಗುತ್ತದೆ. ಆಗ ರೂಪಾಯಿಯ ಅಂತಾರಾಷ್ಟ್ರೀಕರಣವೂ ಆಗುತ್ತದೆ. ಅಂತಾರಾಷ್ಟ್ರೀಯ ಹೂಡಿಕೆದಾರರಿಗೆ, ಸೆಂಟ್ರಲ್‌ ಬ್ಯಾಂಕ್‌ಗಳಿಗೆ ಉತ್ತಮ ಆಯ್ಕೆಯಾಗುತ್ತದೆ. ರೂಪಾಯಿಯ ಬಲ ವರ್ಧನೆ ಮತ್ತು ಸ್ಥಿರತೆಗೆ ಇದು ಸಹಕಾರಿ.

ಅಪಾಯವೇನು?

ಭಾರತದ ಆರ್ಥಿಕತೆ ಮತ್ತು ರಾಜಕೀಯ ಸ್ಥಿರತೆಯು ರೂಪಾಯಿಯ ಮೌಲ್ಯದ ಮೇಲೆ ಪ್ರಭಾವ ಬೀರುತ್ತದೆ. ಚುನಾವಣೆಗಳು, ಆರ್ಥಿಕತೆಯ ಮಂದಗತಿ, ವಿದೇಶಿ ತಲ್ಲಣಗಳು ಪ್ರತಿಕೂಲ ಪರಿಣಾಮ ಬೀರಬಹುದು. ದಿಢೀರ್‌ ಬೇಡಿಕೆ ಉಂಟಾದಾಗ ರೂಪಾಯಿ ಮೌಲ್ಯ ಏರುಪೇರಾಗಬಹುದು. ಒಂದು ವೇಳೆ ರಿಸರ್ವ್‌ ಕರೆನ್ಸಿಯಾಗಿ ರೂಪಾಯಿಗೆ ಬೇಡಿಕೆ ಹೆಚ್ಚಿದರೆ ಗಣನೀಯ ಹೂಡಿಕೆಯ ಒಳ ಹರಿವು ಉಂಟಾಗಬಹುದು. ಆಗ ರಫ್ತುವಿನ ಸ್ಪರ್ಧಾತ್ಮಕತೆ ಕಡಿಮೆಯಾಗಬಹುದು.

ರಿಸ್ಕ್‌ನ ಹೊರತಾಗಿಯೂ ರೂಪಾಯಿಯ ಅಂತಾರಾಷ್ಟ್ರೀಕರಣವಾಗಬೇಕೆ?

ರೂಪಾಯಿ ಜಾಗತಿಕ ಕರೆನ್ಸಿಯಾಗುವುದರಿಂದ ದೀರ್ಘಕಾಲೀನವಾಗಿ ಪ್ರಯೋಜನವಿದೆ. ಆಗ ಅದರ ಅನಾನುಕೂಲಗಳು ನಗಣ್ಯವಾಗಬಹುದು. ರೂಪಾಯಿ ಈಗಾಗಲೇ ಅಂತಾರಾಷ್ಟ್ರೀಯ ಕರೆನ್ಸಿಯಾಗುವತ್ತ ಮುನ್ನಡೆದಿದೆ. 2022ರ ಡಿಸೆಂಬರ್‌ನಲ್ಲಿ ಭಾರತ ಮತ್ತು ರಷ್ಯಾ ರೂಪಾಯಿಯಲ್ಲಿ ಮೊದಲ ವ್ಯಾಪಾರವನ್ನು ಪೂರ್ಣಗೊಳಿಸಿವೆ. ಶ್ರೀಲಂಕಾ, ಬಾಂಗ್ಲಾದೇಶ, ಮಾರಿಷಸ್‌ ಮತ್ತು ಇತರ ರಾಷ್ಟ್ರಗಳು ರೂಪಾಯಿಯಲ್ಲಿ ವ್ಯವಹರಿಸಲು ಒಪ್ಪಿವೆ. ಸೌದಿ ಅರೇಬಿಯಾ ಮತ್ತು ಯುಎಇ ಶೀಘ್ರ ರೂಪಾಯಿಯಲ್ಲಿ ಪೇಮೆಂಟ್‌ ಕಾರ್ಯತಂತ್ರ ವ್ಯವಸ್ಥೆಗೆ ಆರಂಭಿಸಲಿವೆ. ಈ ಬೆಳವಣಿಗೆಯಿಂದ ಭಾರತಕ್ಕೆ ಜಾಗತಿಕ ಎಕಾನಮಿಯಲ್ಲಿ ಹೆಚ್ಚು ಅವಕಾಶಗಳು ಸಿಗಲಿವೆ.

ಕರೆನ್ಸಿ ಬಿಕ್ಕಟ್ಟು, ಡಾಲರ್‌ ಕೊರತೆ ಎದುರಿಸುವ ರಾಷ್ಟ್ರಗಳ ಜತೆ ರೂಪಾಯಿ ವ್ಯವಹಾರಕ್ಕೆ ಆಹ್ವಾನ:

ಭಾರತವು ಕರೆನ್ಸಿ ಬಿಕ್ಕಟ್ಟು ಅಥವಾ ಡಾಲರ್‌ ಕೊರತೆ ಎದುರಿಸುತ್ತಿರುವ ದೇಶಗಳ ಜತೆಗೆ ರೂಪಾಯಿಯಲ್ಲಿ ವ್ಯವಹರಿಸಲು ಸಿದ್ಧವಿರುವುದಾಗಿ ಆಹ್ವಾನಿಸಿದೆ. ವಾಣಿಜ್ಯ ಕಾರ್ಯದರ್ಶಿ ಸುನಿಲ್‌ ಭರತ್‌ವಾಲ್‌ ಅವರು ನೂತನ ವಿದೇಶಾಂಗ ವ್ಯಾಪಾರ ನೀತಿಯ ಅನಾವರಣದ ವೇಳೆ ಈ ವಿಷಯ ತಿಳಿಸಿದ್ದಾರೆ.

ರೂಪಾಯಿಯಲ್ಲಿ ವ್ಯಾಪಾರ ನಡೆಸಲು 18 ರಾಷ್ಟ್ರಗಳ ಸಮ್ಮತಿ:

ಕೇಂದ್ರ ಸರ್ಕಾರದ ಪ್ರಕಾರ ಈಗ 18 ರಾಷ್ಟ್ರಗಳು ರೂಪಾಯಿಯಲ್ಲಿ ವ್ಯಾಪಾರ ವಹಿವಾಟುಗಳ ಹಣ ಪಾವತಿಗೆ ಸಮ್ಮತಿಸಿವೆ. ಅವುಗಳೆಂದರೆ ಬೋಟ್ಸ್‌ವಾನಾ, ಫಿಜಿ, ಜರ್ಮನಿ, ಗಯಾನಾ, ಇಸ್ರೇಲ್‌, ಕೀನ್ಯಾ, ಮಲೇಷ್ಯಾ, ಮಾರಿಷಸ್‌, ಮ್ಯಾನ್ಮಾರ್‌, ನ್ಯೂಜಿಲೆಂಡ್‌, ಒಮಾನ್‌, ರಷ್ಯಾ, ಸಿಯಾಚೆಲ್ಸ್‌, ಸಿಂಗಾಪುರ, ಶ್ರೀಲಂಕಾ, ತಾಂಜಾನಿಯಾ, ಉಗಾಂಡಾ, ಬ್ರಿಟನ್.‌

Exit mobile version