Site icon Vistara News

Heart Attack: ಹೃದಯಾಘಾತಕ್ಕೆ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಬಲಿ, ಏನು ಕಾರಣ?

Heart Attack

Heart Attack

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಹೃದಯಾಘಾತಕ್ಕೆ ಚಿಕ್ಕ ವಯಸ್ಸಿನಿಂದ ಹಿಡಿದು ವೃದ್ದರವರೆಗೂ ಬಲಿಯಾಗುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಹೃದಯಾಘಾತಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. 2019ರಲ್ಲಿ ಜಗತ್ತಿನಾದ್ಯಂತ 17.9 ದಶಲಕ್ಷ ಜನರು ಹೃದಯ ಸಂಬಂಧಿ ಕಾಯಿಲೆಗಳಿಗೆ (Heart Attack) ಬಲಿಯಾಗಿದ್ದಾರೆ. ಈ ಪೈಕಿ ಶೇ.80ಕ್ಕೂ ಹೆಚ್ಚು ಸಾವುಗಳು ಹೃದಯಾಘಾತದಿಂದಲೇ ಸಂಭವಿಸಿವೆ! ಈ ಮಧ್ಯೆ, ಹೃದಯ ಸಂಬಂಧಿ ಕಾಯಿಲೆಗಳ ಬಲಿಯಾಗುವವರ ಪ್ರಮಾಣ ವಿಶ್ಲೇಷಿಸಿದರೆ, ಪುರುಷರಿಗಿಂತಲೂ (Men) ಮಹಿಳೆಯರ (Women) ಸಾವಿನ ಪ್ರಮಾಣ ಎರಡು ಪಟ್ಟು ಹೆಚ್ಚು ಎಂಬ ಮಾಹಿತಿಯು ಸಂಶೋಧನೆಯಿಂದ ತಿಳಿದು ಬಂದಿದೆ.

ಮಹಿಳೆಯರಿಗಿಂತ ಪುರುಷರು ಹೃದಯರಕ್ತನಾಳದ ಕಾಯಿಲೆಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚು. ಆದಾಗ್ಯೂ, ಹೃದಯಾಘಾತದ ನಂತರ ಪುರುಷರಿಗಿಂತ ಮಹಿಳೆಯರು ಆಸ್ಪತ್ರೆಯಲ್ಲಿ ಉಳಿಯುವ ಸಮಯದಲ್ಲಿ ಕೆಟ್ಟ ಫಲಿತಾಂಶಗಳನ್ನು ಪಡೆಯುತ್ತಾರೆ ಎಂದು ಸಂಶೋಧನೆಯೊಂದು ಹೇಳುತ್ತಿದೆ.

ಹೃದಯ ಸಂಬಂಧಿ ಕಾಯಿಲೆಗಳಲ್ಲಿ ವಯಸ್ಸಿನ ಕಾರಣಕ್ಕಾಗಿ ಮಹಿಳೆಯರಲ್ಲಿ ಸ್ಟೆಂಟ್‌ಗಳನ್ನು ಕಡಿಮೆ ಬಳಸಲಾಗುತ್ತಿದ್ದು, ಇದರಿಂದಾಗಿ ಅಂತಿಮವಾಗಿ ಕೆಟ್ಟ ಫಲಿತಾಂಶವನ್ನು ದೊರೆಯುತ್ತಿದೆ. ಸ್ಟೆಂಟ್ ಎಂದರೆ, ಸಣ್ಣ ಕೊಳವೆಯಾಗಿದ್ದು, ದುರ್ಬಲಗೊಂಡ ಅಥವಾ ಕಿರಿದಾದ ಹೃದಯನಾಳಗಳಲ್ಲಿ ಬಳಸಲಾಗುತ್ತದೆ. ಆ ಮೂಲಕ ರಕ್ತ ಹರಿವನ್ನು ಸರಾಗವಾಗಿ ಹೋಗುವಂತೆ ಮಾಡಲಾಗುತ್ತದೆ.

ಹಾರ್ಟ್ ಫೇಲ್ಯೂರ್ 2023 ಸಮ್ಮೇಳನದಲ್ಲಿ ಪ್ರಸ್ತುತಪಡಿಸಲಾದ ಹೊಸ ಸಂಶೋಧನೆಯ ಪ್ರಕಾರ, 11.8 ಪ್ರತಿಶತದಷ್ಟು ಮಹಿಳೆಯರು ಹೃದಯಾಘಾತದಿಂದ 30 ದಿನಗಳಲ್ಲಿ ಸಾಯುತ್ತಾರೆ. ಪುರುಷರಲ್ಲಿ ಈ ಪ್ರಮಾಣ ಕೇವಲ 4.6 ಪ್ರತಿಶತದಷ್ಟಿದೆ.

ಸಂಶೋಧನೆಯ ಪ್ರಕಾರ, 2010 ಮತ್ತು 2015 ರ ನಡುವೆ ಹೃದಯಾಘಾತಕ್ಕಾಗಿ ಆಸ್ಪತ್ರೆಗೆ ದಾಖಲಾದ ಪುರುಷರು ಮತ್ತು ಮಹಿಳೆಯರಲ್ಲಿ ಆರೋಗ್ಯ ಫಲಿತಾಂಶಗಳನ್ನು ಪರಿಶೀಲಿಸಿದಾಗ ಕಂಡು ಬಂದಿದ್ದು ಏನೆಂದರೆ, ರೋಗಲಕ್ಷಣ ಗೋಚರಿಸಿದ 48 ಗಂಟೆಯೊಳಗೆ ರೋಗಿಗಳಿಗೆ ಸ್ಟೆಂಟ್ ಅಳವಡಿಸಿ, ಚಿಕಿತ್ಸೆ ನೀಡಲಾಗಿದೆ. ಆದರೆ, ಪುರುಷರಿಗಿಂತ ಮಹಿಳೆಯರು ಸಾವಿನ ಪ್ರಮಾಣ ಹೆಚ್ಚಾಗಿದೆ. ಅದು ಪುರುಷರಗಿಂತಲೂ ಎರಡ್ಮೂರು ಪಟ್ಟು ಹೆಚ್ಚಾಗಿದೆ ಎಂಬ ಮಾಹಿತಿಯನ್ನು ಕಂಡುಕೊಂಡಿದ್ದಾರೆ.

ಅಧ್ಯಯನಕ್ಕಾಗಿ ಸಂಶೋಧಕರು ಸರಾಸರಿ 62 ವಯಸ್ಸಿನ 884 ರೋಗಿಗಳನ್ನು ಬಳಸಿಕೊಂಡಿದ್ದರು. ಸಂಶೋಧನೆಯಲ್ಲಿ ಪಾಲ್ಗೊಂಡವರ ಪೈಕಿ ಕೇವಲ ಕಾಲು ಭಾಗದಷ್ಟು ಮಹಿಳೆಯರಿದ್ದರು. ಪುರುಷರಿಗಿಂತ ಮಹಿಳೆಯರು ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಸ್ಟ್ರೋಕ್‌ಗೆ ಒಳಗಾಗುವ ಸಾಧ್ಯತೆ ಹೆಚ್ಚು. ಆದಾಗ್ಯೂ, ಪುರುಷರು ಧೂಮಪಾನ ಮಾಡುವ ಸಾಧ್ಯತೆ ಹೆಚ್ಚಿರುವುದರಿಂದ ಹೃದಯನಾಳ ಸಮಸ್ಯೆಯನ್ನು ಹೆಚ್ಚಾಗಿ ಹೊಂದಿವರಾಗಿರುತ್ತಾರೆ.

ಇದನ್ನೂ ಓದಿ: Heart Attack At Wedding | ಮದುವೆ ಸ್ಟೇಜ್‌ ಮೇಲೆಯೇ ಯುವತಿಗೆ ಹಾರ್ಟ್‌ ಅಟ್ಯಾಕ್‌, ವಿಡಿಯೊ ವೈರಲ್‌

55 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರು ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ಸರಾಸರಿ 95 ನಿಮಿಷಗಳ ಕಾಲ ಇದ್ದರೆ, ಅದೇ ವಯಸ್ಸಿನ ಪುರುಷರು 80 ನಿಮಿಷಗಳ ಕಾಲ ಇರುತ್ತಾರೆಂಬ ಸಂಗತಿಯನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಈ ಸಂಶೋಧಕರು ಎಲ್ಲ ಡೇಟಾಗಳನ್ನು ವಿಶ್ಲೇಷಣೆ ಮಾಡಿ, ಹೃದಯ ಕಾಯಿಲೆ ಸಂಬಂಧಿ ಆಸ್ಪತ್ರೆಗೆ ದಾಖಲಾಗುವರ ಪೈಕಿ ಶೇ.11.8ರಷ್ಟು ಮಹಿಳೆಯರು ಚಿಕಿತ್ಸೆಯ ನಂತರ 30 ದಿನಗಳ ಬಳಿಕ ಮೃತಪಟ್ಟಿದ್ದಾರೆ. ಪುರುಷರಲ್ಲಿ ಈ ಪ್ರಮಾಣ ಶೇ. 4.6 ರಷ್ಟಿದೆ ಎಂಬ ಮಾಹಿತಿಯನ್ನು ಸಂಶೋಧನೆಯು ಹೊರ ಹಾಕಿದೆ.

ಆರೋಗ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version