Site icon Vistara News

World Digestive Health Day: ಜೀರ್ಣಾಂಗಗಳ ಆರೋಗ್ಯಕ್ಕೆ ಇಲ್ಲಿವೆ ಸರಳ ಸೂತ್ರಗಳು…

World Digestive Health Day

#image_title

ಮೇ ತಿಂಗಳ 29ನೇ ದಿನವನ್ನು ವಿಶ್ವ ಜೀರ್ಣಾಂಗದ ಆರೋಗ್ಯ ದಿನ (World Digestive Health Day) ಎಂದು ಗುರುತಿಸಲಾಗಿದೆ. ದೇಹದ ಒಟ್ಟಾರೆ ಆರೋಗ್ಯಕ್ಕೆ ಪೂರಕವಾಗವಂಥ ಅಭ್ಯಾಸಗಳು ಮತ್ತು ಆಹಾರಗಳ ಬಗ್ಗೆ ಜಾಗೃತಿ ಮೂಡಿಸಿ ಪಚನಾಂಗಗಳ ಕಾರ್ಯವೈಖರಿಯ ಬಗ್ಗೆ ಅರಿವು ಹೆಚ್ಚಿಸುವುದು ಈ ದಿನದ ಉದ್ದೇಶ.

ನಮ್ಮ ಜೀರ್ಣಾಂಗದಲ್ಲಿ ಸುಮಾರು 29 ಲಕ್ಷ ಕೋಟಿ ಸೂಕ್ಷ್ಮಾಣುಗಳು ವಾಸಿಸುತ್ತವಂತೆ. ಹೀಗೆನ್ನುತ್ತಿದ್ದಂತೆ ದೇಹವೇ ರೋಗದ ಮ್ಯೂಸಿಯಂ ಎಂಬ ತೀರ್ಮಾನಕ್ಕೆ ಬಂದರೇನೂ ದೊಡ್ಡದಲ್ಲ. ಆದರೆ ವಿಷಯ ಅದಲ್ಲ; ಇಷ್ಟೊಂದು ಬ್ರಹ್ಮಾಂಡ ಸಂಖ್ಯೆಯ ಸೂಕ್ಷ್ಮಾಣುಗಳೆಲ್ಲವೂ ರೋಗಾಣುಗಳಲ್ಲ. ಇವುಗಳಲ್ಲಿ ಹೆಚ್ಚಿನವು ದೇಹದ ಚಯಾಪಚಯ ಕ್ರಿಯೆಗೆ, ಪೋಷಕಾಂಶ ಹೀರಿಕೊಳ್ಳುವುದಕ್ಕೆ, ಪ್ರತಿರೋಧಕತೆ ಹೆಚ್ಚಿಸಲು- ಹೀಗೆ ಬಹಳಷ್ಟು ಕ್ರಿಯೆಗಳಿಗೆ ಬೇಕಾದಂಥವು. ಈ ಸೂಕ್ಷ್ಮಾಣುಗಳ ಸಮತೋಲನದಲ್ಲಿ ಕೊಂಚ ಏರುಪೇರಾದರೂ ಜೀರ್ಣಾಂಗದ ಕೆಲಸವೇ ಅಡಿಮೇಲಾಗುತ್ತದೆ. ಏನೇನೊ ರೋಗಗಳು ಗಂಟುಬೀಳುತ್ತವೆ.

ಸರ್ವರೋಗಕ್ಕೂ ಹೊಟ್ಟೆಯೇ ಮೂಲವೆಂಬುದು ಪ್ರಾಚೀನ ತಿಳಿವಳಿಕೆ. ಇದಕ್ಕೆ ಪೂರಕವಾಗಿ, ಮೇ ತಿಂಗಳ 29ನೇ ದಿನವನ್ನು ವಿಶ್ವ ಜೀರ್ಣಾಂಗದ ಆರೋಗ್ಯ ದಿನ (World Digestive Health Day) ಎಂದು ಗುರುತಿಸಲಾಗಿದೆ. ದೇಹದ ಒಟ್ಟಾರೆ ಆರೋಗ್ಯಕ್ಕೆ ಪೂರಕವಾಗವಂಥ ಅಭ್ಯಾಸಗಳು ಮತ್ತು ಆಹಾರಗಳ ಬಗ್ಗೆ ಜಾಗೃತಿ ಮೂಡಿಸಿ ಪಚನಾಂಗಗಳ ಕಾರ್ಯವೈಖರಿಯ ಬಗ್ಗೆ ಅರಿವು ಹೆಚ್ಚಿಸುವುದು ಈ ದಿನದ ಉದ್ದೇಶ. ನಿತ್ಯದ ಆಹಾರಗಳು, ಕುಡಿಯುವ ನೀರು ಸಹ ದೈನಂದಿನ ಬದುಕಿನ ಸ್ವಾಸ್ಥ್ಯ ವೃದ್ಧಿಸುವಲ್ಲಿ ಎಷ್ಠು ಮುಖ್ಯ ಎಂಬುದನ್ನು ಈ ದಿನದಂದು (World Digestive Health Day) ಸಾರಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜೀರ್ಣಾಂಗಗಳ ಆರೋಗ್ಯ ಹೆಚ್ಚಿಸುವಂಥ ಕೆಲವು ಸರಳ ಅಭ್ಯಾಸಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ಚೆನ್ನಾಗಿ ನೀರು ಕುಡಿಯರಿ

ಪಚನಕ್ರಿಯೆ ಸುಧಾರಿಸುವ ನಿಟ್ಟಿನಲ್ಲಿ ಮೊದಲ ಸ್ಥಾನ ನಾವು ಕುಡಿಯುವ ನೀರಿಗೆ. ಪ್ರತಿದಿನ ಸಾಧಾರಾಣವಾಗಿ ಮೂರು ಲೀ.ನಷ್ಟು ನೀರು ದೇಹಕ್ಕೆ ಬೇಕಾಗುತ್ತದೆ. ದೈಹಿಕ ಶ್ರಮ ಹೆಚ್ಚಾಗಿರುವವರಲ್ಲಿ ಇನ್ನೂ ಹೆಚ್ಚಿನ ಪ್ರಮಾಣದ ನೀರು ದೇಹಕ್ಕೆ ಬೇಕಾದೀತು. ಹೊಟ್ಟೆಯುಬ್ಬರ, ಹುಳಿತೇಗು, ಆಸಿಡಿಟಿ ಮುಂತಾದ ಹಲವು ಸಮಸ್ಯೆಗಳ ಸಮಾಧಾನಕ್ಕೆ ನೀರು ಅಗತ್ಯವಾಗಿ ಬೇಕು

ಸಮತೋಲಿತ ಆಹಾರ

ನಾರು, ಶರ್ಕರಪಿಷ್ಟ, ಪ್ರೊಟೀನ್‌, ಖನಿಜಗಳು ಮತ್ತು ಜೀವಸತ್ವಗಳು, ಆರೋಗ್ಯಕರ ಕೊಬ್ಬು, ಪ್ರೊಬಯಾಟಿಕ್‌ ಮುಂತಾದ ಹಲವು ರೀತಿಯ ಪೌಷ್ಟಿಕಸತ್ವಗಳು ನಿತ್ಯದ ಆಹಾರದಲ್ಲಿ ಅಗತ್ಯವಾಗಿ ಬೇಕು. ಇದಕ್ಕಾಗಿ ಹಣ್ಣು, ಸೊಪ್ಪು- ತರಕಾರಿಗಳು, ಡೈರಿ ಉತ್ಪನ್ನಗಳು, ಬೇಳೆ-ಕಾಳುಗಳಿಂದ ಸಮೃದ್ಧವಾದ ಆಹಾರ ಅವಶ್ಯಕ

ಮಸಾಲೆ, ಖಾರದ, ಕರಿದ ತಿಂಡಿ ಬೇಡ

ಅತಿಯಾದ ಮಸಾಲೆಭರಿತ, ಖಾರದ ತಿನಿಸುಗಳು, ಕರಿದ ತಿಂಡಿಗಳು ಜೀರ್ಣಾಂಗಗಳ ಪಾಲಿಗೆ ಸಂಕಷ್ಟ ತರುತ್ತವೆ. ಅಜೀರ್ಣ, ಆಸಿಡಿಟಿ, ಹುಳಿತೇಗಿನಂಥ ಹಲವು ರೀತಿಯ ತೊಂದರೆಗಳನ್ನು ತಂದೊಡ್ಡುತ್ತವೆ. ಬೇಸಿಗೆಯ ದಿನಗಳಲ್ಲಿ ಅನುಕೂಲಕರ ಆಹಾರ ವಿಧಾನಗಳನ್ನು ಅಳವಡಿಸಿಕೊಂಡು, ಒಮ್ಮೆಲೇ ದೊಡ್ಡ ಊಟಗಳನ್ನು ಕಬಳಿಸದೇ, ಸಣ್ಣ ಊಟಗಳನ್ನು ನಿಧಾನವಾಗಿ ತಿನ್ನುವುದು ಜೀರ್ಣಾಂಗದ ಕ್ಷಮತೆಯನ್ನು ಹೆಚ್ಚಿಸುತ್ತದೆ.

ನಿತ್ಯ ವ್ಯಾಯಾಮ ಮಾಡಿ

ದೇಹ ಆರೋಗ್ಯವಾಗಿರುವುದಕ್ಕೆ ಆಹಾರವೆಷ್ಟು ಮುಖ್ಯವೋ ವ್ಯಾಯಾಮವೂ ಅಷ್ಟೇ ಅಗತ್ಯವಾದದ್ದು. ಊಟದ ನಂತರ ಸಣ್ಣದೊಂದು ನಡಿಗೆ ಆರೋಗ್ಯದಲ್ಲಿ ಬಹಳ ಸುಧಾರಣೆಯನ್ನು ತರಬಲ್ಲದು. ಇದಲ್ಲದೆ, ದಿನಕ್ಕೆ 30 ನಿಮಿಷಗಳು ಬೆವರು ಬರುವಂತೆ ವ್ಯಾಯಾಮ ಮಾಡುವುದು ಜೀರ್ಣಾಂಗದ ಆರೋಗ್ಯ ಸುಧಾರಣೆಗೆ ಸೂಕ್ತ ಮಾರ್ಗ

ಒತ್ತಡ ನಿವಾರಣೆ

ಮಾನಸಿಕ ಒತ್ತಡ ಮನಸ್ಸಿನ ಮೇಲಷ್ಟೇ ಅಲ್ಲಮ ದೇಹದ ಮೇಲೆಯೂ ವಿಪರೀತ ಪರಿಣಾಮಗಳನ್ನು ಬೀರುತ್ತದೆ. ದೇಹದೆಲ್ಲೆಡೆ ಉರಿಯೂತ ಹೆಚ್ಚಿಸಿ, ಜಠರದಲ್ಲಿರುವ ಸೂಕ್ಷ್ಮಾಣು ಜೀವಿಗಳ ಸಮತೋಲನವನ್ನೇ ಹಾಳುಗೆಡವುತ್ತದೆ. ಹಾಗಾಗಿ ಯೋಗ, ಧ್ಯಾನ, ಪ್ರಾಣಾಯಾಮ, ಸಂಗೀತ ಕೇಳುವುದು ಮುಂತಾದ ಯಾವುದಾದರೊಂದು ಒತ್ತಡ ನಿವಾರಣೆಯ ಕ್ರಮವೂ ನಿತ್ಯದ ಬದುಕಿಗೆ ಅಗತ್ಯವಾಗಿದೆ.

ಇದನ್ನೂ ಓದಿ: Health Tips: ಮೊಸರು, ಲಸ್ಸಿ, ಮಜ್ಜಿಗೆ; ಬೇಸಿಗೆಯಲ್ಲಿ ಯಾವುದು ಹಿತಕರ?

Exit mobile version