ಇಂದು ವಿಶ್ವ ಹಿಮೋಫಿಲಿಯ (world hemophilia day) ಜಾಗೃತಿ ದಿನ. ಇದನ್ನು ಕನ್ನಡದಲ್ಲಿ ಕುಸುಮರೋಗ ಎಂದು ಕರೆಯಲಾಗುತ್ತದೆ. ಸ್ರವಿಸುವ ರಕ್ತವು ತನ್ನ ಹೆಪ್ಪುಗಟ್ಟುವ ಗುಣವನ್ನು ಕಳೆದುಕೊಂಡಂಥ ಒಂದು ವಿಪರೀತ ಎನ್ನಬಹುದಾದ ಆನುವಂಶಿಕ ಕಾಯಿಲೆಯಿದು. ಅಂದರೆ ರಕ್ತದಲ್ಲಿರುವ ಹೆಪ್ಪುಗಟ್ಟುವ ಪ್ರೊಟೀನ್‌ಗಳ ಸಂಖ್ಯೆ ಇಂಥವರಲ್ಲಿ ಕಡಿಮೆಯಿರುತ್ತದೆ ಅಥವಾ ಅತಿ ಕಡಿಮೆ ಇರುತ್ತದೆ. ಇದರಿಂದ ತೀರಾ ಸಣ್ಣ ಗಾಯಗಳಾದಾಗಲೂ ರಕ್ತ ಸೋರುವುದು ತಂತಾನೆ ನಿಲ್ಲುವುದಿಲ್ಲ.
ವಿಶ್ವ ಹಿಮೋಫೀಲಿಯ ಒಕ್ಕೂಟದ ಸಂಸ್ಥಾಪಕ ಫ್ರಾಂಕ್ ಶುನಬೆಲ್ ಅವರ ಜನ್ಮದಿನವಾದ ಎಪ್ರಿಲ್ 17ವನ್ನು ವಿಶ್ವದೆಲ್ಲೆಡೆ ಕುಸುಮರೋಗ ಜಾಗೃತಿ ದಿನವೆಂದು ಗುರುತಿಸಲಾಗಿದೆ. 1989ರ ನಂತರದಿಂದ, ಈ ದಿನ ವಿಶ್ವದ ಪ್ರಮುಖ ತಾಣಗಳಲ್ಲಿ ಕೆಂಪು ದೀಪ ಬೆಳಗಿಸಿ, ರಕ್ತಸ್ರಾವ ಸಂಬಂಧಿತ ಈ ರೋಗದಿಂದ ನರಳುತ್ತಿರುವವ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಲಾಗುತ್ತದೆ. ಈ ಬಾರಿಯ ಘೋಷ ವಾಕ್ಯ: “ರಕ್ತಸ್ರಾವ ಸ್ಥಗಿತಗೊಳಿಸುವುದೇ ಜಾಗತಿಕ ಕಾಳಜಿಯ ಮಾನದಂಡ”.
ಈ ಸಮಸ್ಯೆ ಹೆಚ್ಚಾಗಿ ಕಾಡುವುದು ಪುರುಷರನ್ನು. 19 ಮತ್ತು 20ನೇ ಶತಮಾನದಲ್ಲಿ ಇಂಗ್ಲೆಂಡ್, ಜರ್ಮನಿ, ರಷ್ಯಾ ಮತ್ತು ಸ್ಪೇನ್‌ನ ರಾಜಮನೆತನಗಳನ್ನು ಸತತವಾಗಿ ಕಾಡಿದ್ದ ಈ ರೋಗವನ್ನು ʻರಾಜರೋಗʼ ಎಂದು ಕರೆದಿದ್ದೂ ಉಂಟು. ಆದರೆ ಈ ಕಾಯಿಲೆ ಯಾರನ್ನೂ ಆನುವಂಶಿಕವಾಗಿ ಕಾಡಬಲ್ಲದು. ಆದರೆ ಕೆಲವು ಅಪರೂಪದ ಪ್ರಕರಣಗಳಲ್ಲಿ ಇದು ಜನ್ಮಜಾತವಾಗದೆ, ಬದುಕಿನ ಯಾವುದೋ ಹಂತದಲ್ಲಿ ರಕ್ತ ತನ್ನ ಹೆಪ್ಪುಗಟ್ಟುವ ಗುಣವನ್ನು ಕಳೆದುಕೊಳ್ಳುತ್ತದೆ. ರಾಣಿ ವಿಕ್ಟೋರಿಯ ತನ್ನ ಒಂಬತ್ತು ಮಕ್ಕಳ ಪೈಕಿ, ಮೂವರಿಗೆ ಈ ರೋಗವನ್ನು ದಾಟಿಸಿದ್ದಳು ಎನ್ನಲಾಗುತ್ತದೆ.
ಹೆಚ್ಚಿನ ಜನ ಬಳಲುವುದು ಹಿಮೊಫಿಲಿಯ-ಎ ಕಾಯಿಲೆಯಿಂದ. ಇದರಲ್ಲಿ ರಕ್ತದಲ್ಲಿ ಇರಬೇಕಾದ ಹೆಪ್ಪುಗಟ್ಟುವ ಫ್ಯಾಕ್ಟರ್-8 ಎನ್ನುವ ಧಾತುವಿನ ಅಥವಾ ಪ್ರೊಟೀನ್‌ನ ಕೊರತೆಯಿರುತ್ತದೆ. ಹಿಮೋಫಿಲಿಯ-ಬಿ ಸಮಸ್ಯೆ ಇರುವವರಿಗೆ ರಕ್ತದಲ್ಲಿ ಫ್ಯಾಕ್ಟರ್-9 ಧಾತುವಿನ ಕೊರತೆ ಇರುತ್ತದೆ. ಆದರೆ ಈ ಸಮಸ್ಯೆ ಇದೆ ಎನ್ನುವುದು ತಿಳಿಯುವುದು ಹೇಗೆ?
ಕುಸುಮರೋಗದ ಲಕ್ಷಣಗಳೇನು?
ಅತಿ ಸಣ್ಣ ಗಾಯದಿಂದಲೂ ರಕ್ತ ಒಂದೇ ಸಮ ದೀರ್ಘ ಕಾಲದವರೆಗೆ ಹರಿಯುತ್ತದೆ. ಗಾಯಾಳು ಅಥವಾ ಇನ್ನಾರಾದರೂ ನಿಲ್ಲಿಸದಿದ್ದರೆ ರಕ್ತ ತಾನಾಗಿ ಹೆಪ್ಪುಗಟ್ಟುವುದೇ ಇಲ್ಲ. ಸ್ವಲ್ಪ ತಾಗಿದರೂ ಚರ್ಮದ ಮೇಲೆ ಗಾಯವಾಗಬಹುದು, ತರಚಿದಂತಾಗಿ ರಕ್ತ ಸೋರಬಹುದು. ದೊಡ್ಡ ಗಾಯಗಳು ಅಥವಾ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವಾಗ ವೈದ್ಯರ ಕಾಳಜಿ ಅಗತ್ಯವಾಗಿ ಬೇಕಾಗುತ್ತದೆ.
ಕೀಲುಗಳಲ್ಲಿ ನೋವು ಮತ್ತು ಊತ ಕಂಡುಬರಬಹುದು. ಪದೇಪದೆ ಉಂಟಾಗುವ ರಕ್ತಸ್ರಾವದ ಅಡ್ಡಪರಿಣಾಮ ಎಂಬಂತೆ ಮಂಡಿ, ಮಣಿಕಟ್ಟಿನಂಥ ಕೀಲುಗಳಲ್ಲಿ ನೋವು, ಪೆಡಸುತನ ಕಾಣಿಸಿಕೊಳ್ಳುತ್ತದೆ.
ಮೂಗಿನಲ್ಲಿ ಅಕಾರಣವಾಗಿ ಪದೇಪದೆ ರಕ್ತಸ್ರಾವವಾಗುತ್ತಿದ್ದರೆ, ಒಮ್ಮೆ ಪ್ರಾರಂಭವಾದ ಸ್ರಾವ ದೀರ್ಘಕಾಲ ಮುಂದುವರಿದರೆ, ಅದರಲ್ಲೂ ಮಕ್ಕಳಲ್ಲಿ ಈ ಸಮಸ್ಯೆ ಕಂಡುಬಂದರೆ ವೈದ್ಯರಲ್ಲಿ ಅಗತ್ಯವಾಗಿ ತೋರಿಸಬೇಕಾಗುತ್ತದೆ. ಮಲ-ಮೂತ್ರಗಳಲ್ಲಿಯೂ ರಕ್ತ ಕಾಣಬಹುದು.
ಇದನ್ನೂ ಓದಿ: Surgery: ಯಂತ್ರಕ್ಕೆ ಸಿಲುಕಿ ಬಾಲಕನ ಎಡಗೈ ಕಟ್; ಶಾಶ್ವತ ಅಂಗವೈಕಲ್ಯತೆಯಿಂದ ಪಾರು ಮಾಡಿದ ಬೆಂಗಳೂರು ವೈದ್ಯರು
ಈ ರೋಗಿಗಳಲ್ಲಿಯೂ ರೋಗಲಕ್ಷಣಗಳು ಒಂದೇ ರೀತಿಯಲ್ಲಿ ಇರುವುದಿಲ್ಲ. ರೋಗ ತೀವ್ರತೆ ಎಷ್ಟು, ಅಂದರೆ, ರಕ್ತದಲ್ಲಿ ಖೋತಾ ಇರುವ ಧಾತುಗಳ ಪ್ರಮಾಣವೆಷ್ಟು ಎನ್ನುವುದ ಆಧಾರದ ಮೇಲೆ ರೋಗ ತೀವ್ರತೆ ಕಂಡುಬರುತ್ತದೆ. ಈ ರೋಗ ಪತ್ತೆ ಮಾಡುವುದಕ್ಕೆ ಲಕ್ಷಣಗಳು ದಿಕ್ಸೋಚಿಗಳಾಗಬಹುದೇ ಹೊರತು, ರಕ್ತ ಪರೀಕ್ಷೆಯಿಲ್ಲದೆ ನಿರ್ಣಯ ಸಾಧ್ಯವಿಲ್ಲ. ರಕ್ತದಲ್ಲಿ ಕಾಣೆಯಾಗಿರುವ ಪ್ರೊಟೀನ್‌ಗಳನ್ನು ಸೇರಿಸುವಂಥ ಚಿಕಿತ್ಸೆಗಳು ಲಭ್ಯವಿದ್ದು, ಶೀಘ್ರವೇ ಪರಿಣತ ವೈದ್ಯರನ್ನು ಕಾಣಬೇಕಾಗುತ್ತದೆ.