ನವದೆಹಲಿ: ಜಗತ್ತಿನ ಮೊದಲ ಪುರುಷ ಗರ್ಭ ನಿರೋಧಕ (injectable male contraceptive) ಚುಚ್ಚುಮದ್ದು ಕ್ಲಿನಿಕಲ್ ಪ್ರಾಯೋಗಿಕ ಪರೀಕ್ಷೆಯನ್ನು (clinical trials) ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ(ICMR) ಯಶಸ್ವಿಯಾಗಿ ಕೈಗೊಂಡಿದೆ. ಈ ಚುಚ್ಚುಮದ್ದು ಪರಿಣಾಮಕಾರಿಯಾಗಿದ್ದು ಮತ್ತು ಯಾವುದೇ ಗಂಭೀರ ಅಡ್ಡ ಪರಿಣಾಮಗಳು ಕಂಡು ಬಂದಿಲ್ಲ(Side effects). ಮೂರನೇ ಹಂತದ ಕ್ಲಿನಿಕಲ್ ಪರೀಕ್ಷೆಯಲ್ಲಿ 25ರಿಂದ 45 ವಯೋಮಾನದ 303 ಅಭ್ಯರ್ಥಿಗಳು ಪಾಲ್ಗೊಂಡಿದ್ದರು. ಈ ಪರೀಕ್ಷೆಯ ಫಲಿತಾಂಶಗಳನ್ನು ಅಂತಾರಾಷ್ಟ್ರೀಯ ಆ್ಯಂಡ್ರಾಲಾಜಿ ಜರ್ನಲ್‌ನಲ್ಲಿ (Andrology journal) ಕಳೆದ ತಿಂಗಳು ಪ್ರಕಟಿಸಲಾಗಿದೆ.
ಮೂರನೇ ಹಂತದ ಕ್ಲಿನಿಕಲ್ ಪ್ರಯೋಗವನ್ನು ನವದೆಹಲಿ, ಉಧಮಪುರ, ಲೂಧಿಯಾನ, ಜೈಪುರ ಮತ್ತು ಖರಗಪುರ್‌ಗಳ ಆಸ್ಪತ್ರೆಗಳ ಸಹಯೋಗದಲ್ಲಿ ನಡೆಸಲಾಗಿತ್ತು. ಡ್ರಗ್ಸ್ ಕಂಟ್ರೋಲರ್ ಜನರಲ್ ಇಂಡಿಯಾ(DCGI) ಅನುಮತಿ ಮತ್ತು ಆಯಾ ಕೇಂದ್ರಗಳ ಸಾಂಸ್ಥಿಕ ನೈತಿಕ ಸಮಿತಿಗಳ ಅನುಮೋದನೆಯೊಂದಿಗೆ ಪರೀಕ್ಷೆಯನ್ನು ಕೈಗೊಳ್ಳಲಾಗಿತ್ತು.
303 ಆರೋಗ್ಯವಂತ, ಲೈಂಗಿಕವಾಗಿ ಸಕ್ರಿಯವಾಗಿರುವ ವಿವಾಹಿತ ಪುರುಷರು ಮತ್ತು ಅವರ ಆರೋಗ್ಯವಂತ ಮತ್ತು ಲೈಂಗಿಕವಾಗಿ ಸಕ್ರಿಯವಾಗಿರುವ ಪತ್ನಿಯರು ಕುಟುಂಬ ಯೋಜನಾ ಕ್ಲಿನಿಕ್ ಮತ್ತು ಮೂತ್ರಶಾಸ್ತ್ರ ಅಥವಾ ಸಂತಾನ ಶಕ್ತಿ ಹರಣ ಅಥವಾ ನೋ ಸ್ಕಾಲ್ಪೆಲ್ ವ್ಯಾಸೆಕ್ಟಮಿ ಶಸ್ತ್ರ ಚಿಕಿತ್ಸೆಗೆ ಮುಂದಾಗಿದ್ದರು. ಅಂಥವರನ್ನು ಈ ಪರೀಕ್ಷೆಗೆ ಬಳಸಿಕೊಳ್ಳಲಾಗಿದೆ. ಈ ಪರೀಕ್ಷೆಯ ವೇಳೆ ಪುರುಷರಿಗೆ 60 ಮಿಲಿಗ್ರಾಂ Reversible Inhibition of Sperm under Guidance (RISUG) ಇಂಜೆಕ್ಷನ್ ನೀಡಲಾಯಿತು. ಈ ಗರ್ಭ ನಿರೋಧಕ್ಕೆ ಸಂಬಂಧಿಸಿದಂತೆ ಈ ಇಂಜಕ್ಷನ್ ಪರಿಣಾಮ ಶೇ.99.02ರಷ್ಟು ಆಗಿದೆ ಮತ್ತು ತೀರಾ ನಗಣ್ಯ ಎನ್ನುವಂಥ ಅಡ್ಡಪರಿಣಾಮಗಳಾಗಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Male Pill: ಇನ್ನು ಪುರುಷರು ಗರ್ಭನಿರೋಧಕ ಮಾತ್ರೆಗಳನ್ನು ತಗೋಬಹುದು! ಇವು ಎಷ್ಟು ಸೇಫ್?
ಗರ್ಭನಿರೋಧಕ ಅಭಿವೃದ್ಧಿಯ ಇತಿಹಾಸದಲ್ಲಿ, ಇತರ ಎಲ್ಲ ಗರ್ಭನಿರೋಧಕಗಳಿಗೆ ಹೋಲಿಸಿದರೆ ಆರ್‌ಐಎಸ್‌ಯುಜಿ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಜಗತ್ತಿನಲ್ಲಿ ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆಯನ್ನು ನಿಯಂತ್ರಣಕ್ಕೆ ಪರ್ಯಾಯ ಮಾರ್ಗಗಳ ಹುಡುಕಾಟ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪುರುಷ ಗರ್ಭನಿರೋಧಕ ಚುಚ್ಚು ಮದ್ದು ಪ್ರಮುಖ ಅಸ್ತ್ರವಾಗಬಹುದು ಎಂದು ಹೇಳಲಾಗಿದೆ.
ಸಂತಾನ ಶಕ್ತಿ ಹರಣವು ಗರ್ಭನಿರೋಧಕ ಕ್ರಮವಾಗಿ ಸಾಕಷ್ಟು ಪರಿಣಾಮಕಾರಿಯಾಗಿದ್ದರೂ, ಈ ವಿಧಾನದ ಕೆಲವು ಪ್ರಮುಖ ಮಿತಿಗಳನ್ನು ಹೊಂದಿದೆ. ಹಾಗಾಗಿ, ಪುರುಷ ಗರ್ಭನಿರೋಧ ಚುಚ್ಚು ಮದ್ದು ಹೆಚ್ಚು ಪರಿಣಾಮಕಾರಿಯಾಗಬಲ್ಲದು. ಯಾಕೆಂದರೆ, ಈ ಚುಚ್ಚು ಮದ್ದು ಒಮ್ಮೆ ಚುಚ್ಚಿಸಿಕೊಂಡರೆ ಅದರ ಪರಿಣಾಮ ದೀರ್ಘಕಾಲದವರೆಗೆ ಇರಲಿದೆ ಮತ್ತು ಅಡ್ಡ ಪರಿಣಾಮಗಳು ತೀರಾ ನಗಣ್ಯವಾಗಿರಲಿವೆ. ಹಾಗಾಗಿ, ಇದೊಂದು ಅತ್ಯಂತ ಮಹತ್ವದ ಆವಿಷ್ಕಾರವಾಗಿರಲಿದೆ ಎಂದು ಹೇಳಲಾಗುತ್ತಿದೆ.