Site icon Vistara News

Nitasha Kaul: ಕರ್ನಾಟಕ ಸರ್ಕಾರ ಕರೆಸಿದ ಲಂಡನ್‌ ಲೇಖಕಿಗೆ ಬೆಂಗಳೂರು ವಿಮಾನ ನಿಲ್ದಾಣದಿಂದಲೇ ಗೇಟ್‌ಪಾಸ್; ʼನಗರ- ನಕ್ಸಲ್‌ʼ ಎಂದ ಬಿಜೆಪಿ

Nitasha Kaul

ಬೆಂಗಳೂರು: ಶನಿವಾರ ಮತ್ತು ಭಾನುವಾರ ಕರ್ನಾಟಕ ಸರಕಾರ (Karnataka Government) ಹಮ್ಮಿಕೊಂಡಿದ್ದ ʼಸಂವಿಧಾನ ಮತ್ತು ರಾಷ್ಟ್ರೀಯ ಐಕ್ಯತೆ ಸಮ್ಮೇಳನʼಕ್ಕೆ (constitution and national unity convention 24) ಕರೆಸಲಾಗಿದ್ದ ಭಾರತೀಯ ಮೂಲದ ಲಂಡನ್‌ ನಿವಾಸಿ ಲೇಖಕಿ ನಿತಾಶಾ ಕೌಲ್‌ (Nitasha Kaul) ಅವರನ್ನು ಬೆಂಗಳೂರು ವಿಮಾನ ನಿಲ್ದಾಣಕ್ಕೆ (Bengaluru international Airport) ಬಂದಿಳಿಯುತ್ತಿದ್ದಂತೆ ವಲಸೆ ಅಧಿಕಾರಿಗಳು (Immigration) ವಾಪಸ್ ಕಳಿಸಿದ್ದಾರೆ. “ಪಾಕಿಸ್ತಾನ ಪರ (Pakistan sympathizer) ಮಾತನಾಡುವ ಈಕೆ ನಗರ ನಕ್ಸಲ್‌ (Urban Naxal)ʼʼ ಎಂದು ಬಿಜೆಪಿ (BJP) ಟೀಕಿಸಿದೆ.

ಲಂಡನ್‌ನ ವೆಸ್ಟ್‌ಮಿನಿಸ್ಟರ್ ವಿಶ್ವವಿದ್ಯಾಲಯದಲ್ಲಿ ರಾಜಕೀಯ ಪ್ರಾಧ್ಯಾಪಕಿ ಹಾಗೂ ಲೇಖಕಿ ಆಗಿರುವ ನಿತಾಶಾ ಕೌಲ್ ಅವರನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರ ಸಂವಿಧಾನ ಮತ್ತು ರಾಷ್ಟ್ರೀಯ ಐಕ್ಯತೆ ಸಮ್ಮೇಳನಕ್ಕೆ ಆಹ್ವಾನ ನೀಡಿ ಕರೆಸಿತ್ತು. ಕಾರ್ಯಕ್ರಮದಲ್ಲಿ ಭಾಗಿಯಾಗಲು ನಿತಾಶಾ ಅವರು ಬೆಂಗಳೂರಿಗೆ ಬಂದಿಳಿದಿದ್ದು ಅಧಿಕಾರಿಗಳು ಅವರನ್ನು ತಡೆದು ವಿಚಾರಣೆ ನಡೆಸಿ ಲಂಡನ್​ಗೆ ವಾಪಸ್ ಕಳಿಸಿದ್ದಾರೆ.

“ಪ್ರಜಾಪ್ರಭುತ್ವ ಹಾಗೂ ಸಾಂವಿಧಾನಿಕ ಮೌಲ್ಯಗಳ ಕುರಿತು ಮಾತನಾಡಿದ್ದಕ್ಕೆ ನನಗೆ ಭಾರತಕ್ಕೆ ಪ್ರವೇಶವನ್ನು ನಿರಾಕರಿಸಲಾಗಿದೆ. ಎಲ್ಲ ದಾಖಲೆಗಳನ್ನು ಸಮರ್ಪಕವಾಗಿ ಹೊಂದಿದ್ದರೂ ಬೆಂಗಳೂರು ವಿಮಾನ ನಿಲ್ದಾಣದಿಂದ ನನ್ನನ್ನು ವಾಪಸ್‌ ಕಳುಹಿಸಲಾಯಿತು” ಎಂದು ನಿತಾಶಾ ಕೌಲ್ ಆರೋಪಿಸಿದ್ದಾರೆ. “ಆರೆಸ್ಸೆಸ್‌ ಕುರಿತು ತಾನು ಮಾಡಿರುವ ಟೀಕೆಗಳನ್ನು ಅಧಿಕಾರಿಗಳು ಪರೋಕ್ಷವಾಗಿ ಪ್ರಸ್ತಾಪಿಸಿದರು” ಎಂದು ಕೌಲ್‌ ಹೇಳಿದ್ದಾರೆ.

ನಿತಾಶಾ ಕೌಲ್ ಅವರನ್ನು ಫೆಬ್ರವರಿ 24 ಮತ್ತು 25 ರಂದು ಬೆಂಗಳೂರಿನಲ್ಲಿ ಆಯೋಜಿಸಿದ್ದ ‘ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಸಮಾವೇಶ’ದಲ್ಲಿ ಪ್ರತಿನಿಧಿಯಾಗಿ ಭಾಗವಹಿಸಲು ಕಾಂಗ್ರೆಸ್ ಸರ್ಕಾರ ಆಹ್ವಾನಿಸಿತ್ತು. ಈ ಬಗ್ಗೆ ಕೌಲ್ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ಅವರು ಕಳುಹಿಸಿದ ಆಹ್ವಾನದ ಪ್ರತಿ ಮತ್ತು ನೋಂದಣಿ ವಿವರಗಳನ್ನು ಎಕ್ಸ್ ಮೂಲಕ ಹಂಚಿಕೊಂಡಿದ್ದಾರೆ.

ಕಾಶ್ಮೀರಿ ಪಂಡಿತೆಯಾಗಿರುವ ನಿತಾಶಾ ಕೌಲ್, ಆರೆಸ್ಸೆಸ್‌ನ ಕಟು ಟೀಕಾಕಾರರಾಗಿದ್ದಾರೆ. ಕೌಲ್ ಭಾರತೀಯ ಪ್ರಜೆಯೂ ಆಗಿದ್ದಾರೆ. ಆದರೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದ ಕೌಲ್ ಅವರನ್ನು ಬೆಂಗಳೂರು ವಿಮಾನ ನಿಲ್ದಾಣದಿಂದಲೇ ವಾಪಸ್ ಕಳಿಸಲಾಗಿದೆ. ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಕೌಲ್, “ನಾವು ಏನೂ ಮಾಡಲು ಸಾಧ್ಯವಿಲ್ಲ. ದಿಲ್ಲಿಯಿಂದ ಆದೇಶ ಬಂದಿದೆ ಎಂಬ ಮಾತು ಹೊರತುಪಡಿಸಿ ಬೇರಾವ ಕಾರಣವನ್ನೂ ಅಧಿಕಾರಿಗಳು ನನಗೆ ನೀಡಲಿಲ್ಲ. ನಾನು ಭಾರತ ಪ್ರವೇಶಿಸಲು ಸಾಧ್ಯವಿಲ್ಲ ಎಂಬ ಯಾವುದೇ ಪೂರ್ವಭಾವಿ ಮಾಹಿತಿ ಅಥವಾ ನೋಟಿಸ್ ಅನ್ನು ನನಗೆ ನೀಡಲಾಗಿರಲಿಲ್ಲ” ಎಂದು ಬರೆದುಕೊಂಡಿದ್ದಾರೆ.

ನಾನು ಬೆಂಗಳೂರಿಗೆ ಬಂದಿಳಿದ 24 ಗಂಟೆಯ ನಂತರ ಬ್ರಿಟಿಷ್ ಏರ್‌ವೇಸ್ ವಿಮಾನದ ಮೂಲಕ ನನ್ನನ್ನು ಲಂಡನ್‌ಗೆ ವಾಪಸ್‌ ಕಳುಹಿಸಿದರು. ನಾನು ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ 12 ಗಂಟೆಗಳನ್ನು ಕಳೆದಿದ್ದೇನೆ. ಹಲವಾರು ಗಂಟೆಗಳ ಕಾಲ ನನ್ನನ್ನು ವಿಚಾರಣೆ ನಡೆಸಿದರು ಮತ್ತು 24 ಗಂಟೆಗಳ ನಂತರ ವಾಪಸ್ ಕಳುಹಿಸಿದರು ಎಂದು ಕೌಲ್ ಆರೋಪಿಸಿದ್ದಾರೆ.

ಪಾಕ್‌ ಸಹಾನುಭೂತಿಪರ, ನಗರ ನಕ್ಸಲ್‌: ಬಿಜೆಪಿ

ಕೌಲ್‌ ಅವರನ್ನು ಕಾರ್ಯಕ್ರಮಕ್ಕೆ ಕರೆಸಿದ ಉದ್ದೇಶವನ್ನೇ ಬಿಜೆಪಿ ಪ್ರಶ್ನಿಸಿದ್ದು, ಸಿದ್ದರಾಮಯ್ಯ ಸರ್ಕಾರವನ್ನು ಟೀಕಿಸಿದೆ. “ಭಾರತವನ್ನು ಒಡೆಯಲು ಬಯಸುವ ಪಾಕಿಸ್ತಾನಿ ಸಹಾನುಭೂತಿಪರಳನ್ನು ಆಹ್ವಾನಿಸುವ ಮೂಲಕ ಕಾಂಗ್ರೆಸ್ ಪಕ್ಷವು ಭಾರತದ ಸಂವಿಧಾನವನ್ನು ಅವಮಾನಿಸಿದೆʼ ಎಂದು ಟೀಕಿಸಿದೆ.

“ಸಿದ್ದರಾಮಯ್ಯನವರಿಗೆ ನಾಚಿಕೆ ಇಲ್ಲವೇ? ನೀವು ಸಂವಿಧಾನಕ್ಕೆ ಸವಾಲು ಹಾಕಲು, ಭಾರತದ ಏಕತೆ ಮತ್ತು ಸಮಗ್ರತೆಗೆ ಬೆದರಿಕೆ ಹಾಕಲು ಪ್ರಯತ್ನಿಸುತ್ತಿದ್ದೀರಾ? ಕಾಂಗ್ರೆಸ್ ಪಕ್ಷವು ತನ್ನ ವಿಭಜಕ ಅಜೆಂಡಾಗಳಿಗೆ ನೆಲವನ್ನು ಸಿದ್ಧಪಡಿಸಲು ಕರ್ನಾಟಕವನ್ನು ತನ್ನ ಪ್ರಯೋಗಾಲಯವನ್ನಾಗಿ ಬಳಸಿಕೊಳ್ಳುತ್ತಿದೆʼ ಇದು ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಯನ್ನು ದುರ್ಬಲಗೊಳಿಸುವುದು ಈಗ ಸ್ಪಷ್ಟವಾಗಿದೆ. ಕರ್ನಾಟಕ ತೆರಿಗೆ ಪಾವತಿದಾರರ ವೆಚ್ಚದಲ್ಲಿ, ಕಾಂಗ್ರೆಸ್ ಸರ್ಕಾರವು ಭಯೋತ್ಪಾದಕ ಸಹಾನುಭೂತಿಗಳು, ನಗರ ನಕ್ಸಲರು, ರಾಷ್ಟ್ರವಿರೋಧಿಗಳು, ಗಲಭೆ ಆಪಾದಿತರಿಗೆ ಮಣೆ ಹಾಸುತ್ತಿದ್ದು, ಚುನಾವಣೆಗೆ ಮುಂಚಿತವಾಗಿ ಭಾರತವನ್ನು ಅಸ್ಥಿರಗೊಳಿಸಲು ಹಣವನ್ನು ಹರಿಸುತ್ತಿದೆʼʼ ಎಂದು ಬಿಜೆಪಿ ಟೀಕಿಸಿದೆ.

“ಇಂಥ ಭಾರತ ವಿರೋಧಿ ಅಂಶವು ಭಾರತಕ್ಕೆ ಅನುಮಾನಾಸ್ಪದವಾಗಿ ಪ್ರವೇಶಿಸುವುದನ್ನು ತಡೆದ ನಮ್ಮ ಭದ್ರತಾ ಏಜೆನ್ಸಿಗಳಿಗೆ ಧನ್ಯವಾದಗಳು. ಕರ್ನಾಟಕ ಸರ್ಕಾರದ ಬಳಿ ಬರ ಪರಿಹಾರ ಅಥವಾ ಕರ್ನಾಟಕದ ಅಭಿವೃದ್ಧಿ ಅಗತ್ಯಗಳಿಗೆ ಖರ್ಚು ಮಾಡಲು ಹಣವಿಲ್ಲ. ಆದರೆ ರಾಹುಲ್ ಗಾಂಧಿಯನ್ನು ಸಮಾಧಾನಪಡಿಸುವ, ಅವರ ಸಿಎಂ ಕುರ್ಚಿಯನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ʼಬ್ರೇಕ್ ಇಂಡಿಯಾ ಬ್ರಿಗೇಡ್‌ʼಗೆ ಹಣಕಾಸು ನೀಡಲು ಸಿದ್ದರಾಮಯ್ಯನವರು ಸಂತೋಷಪಡುತ್ತಾರೆ. ಇದೆಲ್ಲವೂ ಡಾ. ಅಂಬೇಡ್ಕರ್ ಅವರ ಸಂವಿಧಾನದ ಹೆಸರಿನಲ್ಲಿ ನಡೆಯುತ್ತಿದೆ” ಎಂದು ಬಿಜೆಪಿ ಆಕ್ರೋಶ ಹೊರಹಾಕಿದೆ.

ಇದನ್ನೂ ಓದಿ: ಸಂವಿಧಾನ ಬದಲಿಸಲು ಬಂದವರನ್ನು ಅಧಿಕಾರದಿಂದ ಕಿತ್ತೊಗೆಯಿರಿ: ಸಿದ್ದರಾಮಯ್ಯ ಕರೆ

Exit mobile version