ನವದೆಹಲಿ: ನಿರಂತರ ಕೆಲಸದಿಂದ ಉಂಟಾಗುವ ಮಾನಸಿಕ ಒತ್ತಡ ನಿವಾರಣೆಗೆ ಪ್ರವಾಸ ಅತ್ಯಂತ ಉತ್ತಮ ಮಾರ್ಗ ಎನ್ನುವುದರಲ್ಲಿ ಸಂಶಯವಿಲ್ಲ. ಅದರಲ್ಲಿಯೂ ಪ್ರಕೃತಿ ನಮ್ಮೆಲ್ಲ ಚಿಂತೆಗಳನ್ನು ದೂರ ಮಾಡಿ ನೆಮ್ಮದಿಯನ್ನು ಒದಗಿಸುವ ಅದ್ಭುತ ಔಷಧವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಪ್ರವಾಸಪ್ರಿಯರು ಹೇಳುತ್ತಾರೆ. ಅದೇ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ರಜೆ ಬಂತೆಂದರೆ ಸಾಕು ಯುವ ಜನತೆ ಬ್ಯಾಗ್ ಪ್ಯಾಕ್ ಮಾಡಿ ಟೂರ್ ಹೊರಡುತ್ತಾರೆ. ಇದೀಗ ಗೂಗಲ್ ಈ ವರ್ಷ ಭಾರತೀಯರು ಅತೀ ಹೆಚ್ಚು ಹುಡುಕಿದ ಟಾಪ್ 10 ಪ್ರವಾಸಿ ತಾಣಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ನಮ್ಮ ರಾಜ್ಯದ ಕೊಡಗು ಕೂಡ ಸ್ಥಾನ ಪಡೆದುಕೊಂಡಿದೆ ಎನ್ನುವುದು ವಿಶೇಷ (Year Ender 2023).
1. ವಿಯೆಟ್ನಾಂ
ಈ ವರ್ಷ ಭಾರತೀಯರು ಅತೀ ಹೆಚ್ಚು ಸರ್ಚ್ ಮಾಡಿದ ಪ್ರವಾಸಿ ಸ್ಥಳಗಳ ಪೈಕಿ ವಿಯೆಟ್ನಾಂ ಮೊದಲ ಸ್ಥಾನದಲ್ಲಿದೆ. ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಏಷ್ಯಾದ ಈ ದೇಶವು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಅಲ್ಲಿನ ಜನಪ್ರಿಯ 5 ತಾಣಗಳಾದ ಹನೋಯ್, ಹಲಾಂಗ್ ಕೊಲ್ಲಿ, ಹುಹ್, ಹೋಯ್ ಆನ್ ಮತ್ತು ಹೋ ಚಿ ಮಿನ್ಹ್ ಸಿಟಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಇಲ್ಲಿನ ಕಡಲತೀರಗಳು ಮತ್ತು ಪರ್ವತದ ಅಕ್ಕಿ ಟೆರೇಸ್‌ಗಳು ಗಮನ ಸೆಳೆಯುತ್ತವೆ.
2. ಗೋವಾ
ಇದು ಭಾರತೀಯರು ಮಾತ್ರವಲ್ಲ ವಿದೇಶಿಗರ್ ಹಾಟ್ ಫೇವರೇಟ್ ತಾಣ. ಬ್ಯಾಚುಲರ್ ಪಾರ್ಟಿ ಆಯೋಜನೆ, ಹೆತ್ತವರ ವಿವಾಹ ವಾರ್ಷಿಕೋತ್ಸವ, ಹೊಸ ವರ್ಷಕ್ಕೆ ಸ್ವಾಗತ, ವಿಶ್ರಾಂತಿ ಪಡೆಯಲು ಹೀಗೆ… ಕಾರಣ ಯಾವುದೇ ಇರಲಿ ನೀವು ಗೋವಾಕ್ಕೆ ತೆರಳಬಹುದು. ಪ್ರಾಚೀನ ಕಡಲತೀರಗಳಿಂದ ಹಿಡಿದು ತಂಪಾದ ಬಾರ್‌ಗಳು, ರೆಸ್ಟೋರೆಂಟ್‌ಗಳು ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ. ಪುರಾತನ ಚರ್ಚ್‌ಗಳು, ಕೋಟೆಗಳು, ಮಾರ್ಕೆಟ್‌ಗಳು ನಿಮ್ಮನ್ನು ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತವೆ. ಆಫ್ ಸೀಸನ್ ಎನ್ನುವ ಕಾನ್ಸೆಪ್ಟ್ ಇಲ್ಲಿಲ್ಲ. ಯಾವಾಗ ಬೇಕಾದರೂ ತೆರಳಬಹುದು.
3. ಬಾಲಿ
ಸಾಹಸ ಮತ್ತು ಆಧ್ಯಾತ್ಮಿಕತೆಯ ಪರಿಪೂರ್ಣ ಮಿಶ್ರಣದಂತಿರುವ ಬಾಲಿ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣ. ಚಾರಣ ಮಾಡುವ ಜತೆಗೆ ಸರ್ಫಿಂಗ್ ಅಥವಾ ಡೈವಿಂಗ್‌ಗೂ ಇಲ್ಲಿ ಅವಕಾಶವಿದೆ. ತನಾಹ್ ಲೋಟ್, ಉಲುನ್ ದಾನು, ಗುನುಂಗ್ ಲೆಬಾಹ್ ಮತ್ತು ಗೋವಾ ಲಾವಾಹ್‌ನಂತಹ ದೇವಾಲಯಗಳೂ ಪ್ರವಾಸಿಗರನ್ನು ಆಕರ್ಷಿಸುತ್ತದೆ.
4. ಶ್ರೀಲಂಕಾ
ಭಾರತದೊಂದಿಗೆ ಪುರಾತನ ಕಾಲದಿಂದಲೂ ಸಂಬಂಧ ಹೊಂದಿರುವ, ನಿಸರ್ಗ ರಮಣೀಯ ತಾಣ ಶ್ರೀಲಂಕಾ. ಇತ್ತೀಚೆಗೆ ಈ ದ್ವೀಪ ರಾಷ್ಟ್ರ ಭಾರತ, ಚೀನಾ, ರಷ್ಯಾ, ಮಲೇಷ್ಯಾ, ಜಪಾನ್, ಇಂಡೋನೇಷ್ಯಾ ಮತ್ತು ಥೈಲ್ಯಾಂಡ್ ದೇಶಗಳ ಪ್ರಜೆಗಳು ವೀಸಾ ರಹಿತವಾಗಿಯೂ ಆಗಮಿಸಬಹುದು ಎಂದು ಘೋಷಿಸಿದೆ. ಈ ಅವಕಾಶ 2024ರ ಮಾರ್ಚ್ 31ರ ವರೆಗೂ ಲಭ್ಯ. ಅದ್ಭುತ ಕಡಲತೀರಗಳಿಂದ ಹಿಡಿದು ದಟ್ಟ ಅರಣ್ಯದವರೆಗೆ ನೀವು ನಿಸರ್ಗ ಸೌಂದರ್ಯವನ್ನು ಆಸ್ವಾದಿಸಬಹುದು. ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳು ಇಲ್ಲಿನ ಆಕರ್ಷಣೆ ಹೆಚ್ಚಿಸಿವೆ.
5. ಥೈಲ್ಯಾಂಡ್
ಅತೀ ಹೆಚ್ಚು ಹುಡುಕಲ್ಪಟ್ಟ ತಾಣಗಳ ಪೈಕಿ ಐದನೇ ಸ್ಥಾನದಲ್ಲಿರುವುದು ಥೈಲ್ಯಾಂಡ್. ಭಾರತ ಮತ್ತು ತೈವಾನ್ ಪ್ರಯಾಣಿಕರು 2024ರ ಮೇ ತನಕ ವೀಸಾ ರಹಿತರಾಗಿ ಥೈಲ್ಯಾಂಡ್‌ಗೆ ಆಗಮಿಸಬಹುದು ಎಂದು ಥೈಲ್ಯಾಂಡ್ ಕಳೆದ ತಿಂಗಳು ಘೋಷಿಸಿಕೊಂಡಿದೆ. ಈ ಕಾರಣಕ್ಕೂ ಭಾರತೀಯರು ಥೈಲ್ಯಾಂಡ್ ಬಗ್ಗೆ ಕುತೂಹಲಗೊಂಡು ಸರ್ಚ್ ಮಾಡಿದ್ದಾರೆ. ಇದು ವಿಶ್ವದ ಅತ್ಯುತ್ತಮ ಡೈವಿಂಗ್ ತಾಣಗಳನ್ನು ಹೊಂದಿದೆ.
6. ಕಾಶ್ಮೀರ
ಭಾರತದ ಮುಕುಟದ ರತ್ನದಂತಿರುವ ಕಾಶ್ಮೀರ ಪ್ರವಾಸಿಗರ ಜತೆಗೆ ಸಿನಿಮಾ ತಂಡವನ್ನೂ ಆಕರ್ಷಿಸುತ್ತದೆ. ಕಾಶ್ಮೀರವನ್ನು ಭೂಮಿಯ ಮೇಲಿನ ಸ್ವರ್ಗ ಎಂದೇ ಕರೆಯಲಾಗುತ್ತದೆ. ಚಳಿಗಾಲದಲ್ಲಿ ಹಿಮ ಆವರಿಸಿ ಶ್ವೇತ ಬಣ್ಣದಿಂದ ಕಾಶ್ಮೀರ ಹೊಳೆದರೆ, ವಸಂತ ಕಾಲದಲ್ಲಿ ಅದರ ಸೌಂದರ್ಯವು ವರ್ಣ ರಂಚಿತವಾಗಿ ಅರಳುತ್ತದೆ. ಶ್ರೀನಗರದ ಉದ್ಯಾನಗಳು, ಹಿಮನದಿಯ ಮೇಲಿನ ಸ್ಲೆಡ್ಜಿಂಗ್, ಜಲಪಾತ ಇಲ್ಲಿನ ಸೊಬಗನ್ನು ಹೆಚ್ಚಿಸುತ್ತದೆ.
7. ಕೊಡಗು
ನಮ್ಮ ರಾಜ್ಯದ ಕೊಡಗು ಈ ಪಟ್ಟಿಯಲ್ಲಿ 7ನೇ ಸ್ಥಾನ ಪಡೆದುಕೊಂಡಿದೆ. ಇದು ಕೂಡ ಭೂಮಿ ಮೇಲಿನ ಸ್ವರ್ಗದಂತೆಯೇ ಭಾಸವಾಗುತ್ತದೆ. ಪ್ರಕೃತಿಯೊಂದಿಗೆ ಕಾಲ ಕಳೆಯಬೇಕು ಎಂದುಕೊಳ್ಳುವವರಿಗೆ ಕೊಡಗು ಅತ್ಯುತ್ತಮ ಆಯ್ಕೆ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಪಶ್ಚಿಮ ಘಟ್ಟದಲ್ಲಿನ ಇದು ದಕ್ಷಿಣ ಭಾರತದ ಪ್ರಮುಖ ಪರಿಸರ ಪ್ರವಾಸೋದ್ಯಮ ತಾಣವಾಗಿ ಹೊರಹೊಮ್ಮಿದೆ. ಇಲ್ಲಿ ಅಳಿವಿನಂಚಿನಲ್ಲಿರುವ ವಿವಿಧ ಸಸ್ಯ ಮತ್ತು ಪ್ರಾಣಿ ಪ್ರಭೇದಗಳಿವೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವು ಪ್ರಮುಖ ಹುಲಿ ಆವಾಸಸ್ಥಾನವಾಗಿದ್ದು, ಅದರ ಸುತ್ತಮುತ್ತಲಿನ ಕಾಡುಗಳಲ್ಲಿ ಚಿರತೆ, ಆನೆ ಮತ್ತಿತರ ವೈವಿಧ್ಯಮಯ ಪ್ರಾಣಿ ಸಂಕುಲಗಳಿವೆ. ಅಬ್ಬಿ ಜಲಪಾತ, ದುಬಾರೆ ಆನೆ ಕ್ಯಾಂಪ್, ಗ್ಲಾಸ್ ಬ್ರಿಡ್ಜ್, ಮಂದಲ್‌ಪಟ್ಟಿ ಇತ್ಯಾದಿ ಇಲ್ಲಿನ ಪ್ರಮುಖ ಪ್ರವಾಸಿ ಕೇಂದ್ರಗಳು.
ಅಂಡಮಾನ್ ಮತ್ತು ನಿಕೋಬಾರ್
ನೀರೊಳಗೆ ಸಾಹಸ ಪ್ರದರ್ಶಿಸಲು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗಿಂತ ಉತ್ತಮ ತಾಣ ಇನ್ನೊಂದಿಲ್ಲ. ಇಲ್ಲಿನ ಸಮುದ್ರದೊಳಗೆ ಹವಳ ಕಂಡು ಬರುತ್ತದೆ. ಸ್ಕೂಬಾ ಡೈವಿಂಗ್ ಇಲ್ಲಿ ಬಹು ಜನಪ್ರಿಯ. ಅಕ್ಟೋಬರ್‌ನಿಂದ ಫೆಬ್ರವರಿ ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯ.
ಇಟಲಿ
ಈ ಯುರೋಪಿಯನ್ ನಗರವು ಬೇಸಗೆ ಪ್ರವಾಸಕ್ಕೆ ಹೆಸರುವಾಸಿ. ಕಲೆ, ವಾಸ್ತುಶಿಲ್ಪ ಮತ್ತು ಆಹಾರದ ಕೆಲವು ಶ್ರೇಷ್ಠ ಕೃತಿಗಳಿಗೆ ನೆಲೆಯಾಗಿರುವ ಇಟಲಿಗೆ ಪ್ರತಿವರ್ಷ ಸಾವಿರಾರು ಮಂದಿ ಭೇಟಿ ನೀಡುತ್ತಾರೆ. ಇತಿಹಾಸ ಮಹತ್ವ ಸಾರುವ ಸ್ಥಳಗಳಿಂದ ಹಿಡಿದು ಪ್ರಕೃತಿ ಸೌಂದರ್ಯದ ತಾಣಗಳವರೆಗೆ ಪ್ರವಾಸಿಗರಿಗೆ ಇಲ್ಲಿ ಬಹು ಆಯಾಮದ ಆಯ್ಕೆ ಲಭ್ಯ.
ಸ್ವಿಜರ್‌ಲ್ಯಾಂಡ್
ಅತೀ ಹೆಚ್ಚು ಹುಡುಕಲ್ಪಟ್ಟ ಟಾಪ್ 10 ಪಟ್ಟಿಯಲ್ಲಿ ಸ್ವಿಜರ್‌ಲ್ಯಾಂಡ್ ಕೂಡ ಸ್ಥಾನ ಪಡೆದುಕೊಂಡಿದೆ. ಆಲ್ಫ್ಸ್ ಪರ್ವತ ಶ್ರೇಣಿಯ ಉತ್ತರ ಮತ್ತು ದಕ್ಷಿಣ ಬದಿಗಳಲ್ಲಿರುವ ಸ್ವಿಜರ್‌ಲ್ಯಾಂಡ್ ಪ್ರಕೃತಿ ಪ್ರಿಯರ ಗಮನ ಸೆಳೆಯುತ್ತದೆ. ಹಿಮನದಿ ಮತ್ತು ಜಲಪಾತಗಳನ್ನು ಹೊಂದಿರುವ ಇಲ್ಲಿ ಅಸಂಖ್ಯ ಕಣಿವೆಗಳೂ ಇವೆ. ಜನೀವಾ(ಲಾಕ್ ಲೆಮನ್), ಜ್ಯೂರಿಚ್ ಸರೋವರ, ನ್ಯೂಚಾಟೆಲ್ ಸರೋವರಗಳು ಆಕರ್ಷಕವಾಗಿವೆ.
ಇದನ್ನೂ ಓದಿ: Year Ender 2023: ಕ್ರಿಸ್‌ಮಸ್ ಆಚರಣೆಯನ್ನು ನೋಡಲೇಬೇಕಾದ ಜಗತ್ತಿನ ಟಾಪ್ 10 ನಗರಗಳಿವು