ಬೆಂಗಳೂರು: ಕೋವಿಡ್ ವೈರಸ್‌ನಿಂದ ಪೀಡಿತರಾಗಿ ಬಳಲಿ ಚೇತರಿಸಿಕೊಂಡಿರುವ ಜನರಿಗೆ ಈಗ ಇನ್ನೊಂದು ವೈರಸ್‌ನ ಕಾಟ ಶುರುವಾಗಿದೆ. ಇದು ಹಳದಿ ಜ್ವರ (yellow fever).
ನೀವೇನಾದರೂ ಈಗ ವಿದೇಶಕ್ಕೆ ಹೋಗಬೇಕಿದ್ದರೆ ಹಳದಿ ಜ್ವರ ಲಸಿಕೆ (Yellow Fever vaccine) ಹಾಕಿಸಿಕೊಂಡಿರುವುದು ಕಡ್ಡಾಯ. ಆರೋಗ್ಯ ಇಲಾಖೆ ಇದೀಗ ಎಲ್ಲ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಹಳದಿ ಜ್ವರ ಲಸಿಕೆ ಕಡ್ಡಾಯಗೊಳಿಸಿದೆ.
ಸೌತ್ ಆಫ್ರಿಕಾ, ಕೀನ್ಯಾ, ನೈಜೀರಿಯಾ, ಉಗಾಂಡ, ರಿಪಬ್ಲಿಕ್ ಆಫ್ ಕಾಂಗೋ ಹಾಗೂ ದಕ್ಷಿಣ ಅಮೆರಿಕಾದ ಹಲವು ಭಾಗಗಳಲ್ಲಿ ಹಳದಿ ಜ್ವರ ಹೆಚ್ಚಾಗಿ ಕಾಣಿಕೊಂಡಿದೆ. ಇಲ್ಲಿಂದ ಇತರ ಕಡೆಗಳಿಗೂ ಹರಡುವ ಭೀತಿ ಇದೆ. ಹೀಗಾಗಿ, ಹೊರದೇಶದಿಂದ ಬರುವವರು ಹಾಗೂ ಹೊರ ದೇಶಕ್ಕೆ ತೆರಳುವವರಿಗೆ ಲಸಿಕೆ ಕಡ್ಡಾಯ ಮಾಡಲಾಗಿದೆ.
Flavivirus ಜಾತಿಯ ಒಂದು ವೈರಸ್ ಹಳದಿ ಜ್ವರಕ್ಕೆ ಕಾರಣವಾಗಿದೆ. ಇದು ಕೆಲವು ಜಾತಿಯ ಸೊಳ್ಳೆಗಳ ಮೂಲಕ ಹರಡುತ್ತದೆ. ತಲೆನೋವು, ಜ್ವರ, ವಾಂತಿ, ಮೈಕೈನೋವು ಹಳದಿ ಜ್ವರದ ಪ್ರಮುಖ ಲಕ್ಷಣಗಳು. ಜಾಂಡೀಸ್ ಥರದ ಲಕ್ಷಣಗಳು ಹಳದಿ ಜ್ವರ ಬಂದಾಗ ಕಾಣಿಸಿಕೊಳ್ಳುತ್ತವೆ.
ಸದ್ಯ ನಮ್ಮ ದೇಶದಲ್ಲಿ ಹಳದಿ ಜ್ವರ ಪತ್ತೆಯಾಗಿಲ್ಲ. ಆದ್ರೆ ಮುಂಜಾಗ್ರತಾ ಕ್ರಮ ಅತಿ ಮುಖ್ಯವಾಗಿದೆ. ಹೀಗಾಗಿ ವಿದೇಶಕ್ಕೆ ತೆರಳುವ ಪ್ರತಿಯೊಬ್ಬರೂ ಹಳದಿ ಜ್ವರಕ್ಕೆ ಲಸಿಕೆ ಹಾಕಿಸಿಕೊಳ್ಳೋದು ಕಡ್ಡಾಯ ಮಾಡಲಾಗಿದೆ. ಬೆಂಗಳೂರಿನ ಸಿ.ವಿ.ರಾಮನ್ ಆಸ್ಪತ್ರೆಯಲ್ಲಿ ಹಳದಿ ಜ್ವರದ ಲಸಿಕೆ ಲಭ್ಯವಿದೆ.
ಯೆಲ್ಲೋ ಫೀವರ್ ಲಸಿಕೆಗೆ ಕೇಂದ್ರ ಆರೋಗ್ಯ ಇಲಾಖೆ 300 ರೂ ನಿಗದಿ ಮಾಡಿದೆ. YF-Vax, Stamaril ಎಂಬ ಮಾರುಕಟ್ಟೆ ಹೆಸರುಗಳಲ್ಲಿ ಈ ಲಸಿಕೆಗಳು ಲಭ್ಯವಿದ್ದು, ಹಳದಿ ಜ್ವರದ ವಿರುದ್ಧ ಜೀವಾವಧಿ ರಕ್ಷಣೆ ನೀಡುತ್ತದೆ.