೨೦೨೨ರಲ್ಲಿ ಬಹುತೇಕ ಕೋವಿಡ್ ಮುಕ್ತ ಗಾಳಿಯನ್ನು ಜನ ಉಸಿರಾಡಿದ ವರ್ಷ. ಭಾರತದ ರಾಜಕಾರಣ ಕೂಡ ಮೂಲ ಸ್ವರೂಪಕ್ಕೆ ಬದಲಾಗಿತ್ತು. (Political turning points ) ಬಂಡಾಯದಿಂದ ಯೂ-ಟರ್ನ್ ತನಕ, ಮೆಗಾ ರೋಡ್ ಶೋ ತನಕ 2022ರಲ್ಲಿ ರಂಗೇರಿತ್ತು.
ಉತ್ತರಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾರಥ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಗೆದ್ದರೆ, ಪ್ರಧಾನಿ ನರೇಂದ್ರ ಮೋದಿಯವರ ತವರು ಗುಜರಾತ್‌ನಲ್ಲೂ ಪಕ್ಷ ಐತಿಹಾಸಿಕ ವಿಜಯ ಪತಾಕೆ ಹಾರಿಸಿತು. ರ‍್ಯಾಲಿಗಳು, ರೋಡ್ ಶೋಗಳಿಂದ ರಾಜಕೀಯ ವಿದ್ಯಮಾನಗಳ ಭರಾಟೆ ಕಂಡು ಬಂದಿತ್ತು. 2022ರಲ್ಲಿ ಗಮನ ಸೆಳೆದ 10 ಘಟನಾವಳಿಗಳು ಇಂತಿವೆ.
ಚುನಾವಣೆಗಳ ವರ್ಷ: ಈ ವರ್ಷ ಗೋವಾ, ಉತ್ತರಾಖಂಡ್, ಪಂಜಾಬ್, ಮಣಿಪುರ, ಉತ್ತರಪ್ರದೇಶ, ಹಿಮಾಚಲ ಪ್ರದೇಶ, ಗುಜರಾತ್ ಮತ್ತು ದಿಲ್ಲಿ ಮಹಾ ನಗರಪಾಲಿಕೆಗೆ (ಎಂಸಿಡಿ) ಚುನಾವಣೆ ನಡೆಯಿತು. ಈ ಚುನಾವಣೆಗಳಲ್ಲಿ ಬಿಜೆಪಿಯ ಪ್ರಾಬಲ್ಯ ಐದು ರಾಜ್ಯಗಳಲ್ಲಿನ ಜಯಭೇರಿಯೊಂದಿಗೆ ಮುಂದುವರಿಯಿತು. ಗೋವಾ, ಉತ್ತರಾಖಂಡ್, ಮಣಿಪುರ, ಉತ್ತರಪ್ರದೇಶ ಮತ್ತು ಗುಜರಾತ್‌ನಲ್ಲಿ ಭಾರತೀಯ ಜನತಾ ಪಕ್ಷ ಜಯ ಗಳಿಸಿತು. ಕಾಂಗ್ರೆಸ್ ಕೇವಲ ಹಿಮಾಚಲ ಪ್ರದೇಶದಲ್ಲಿ ಮಾತ್ರ ಜಯ ಗಳಿಸಿತು. ಪಂಜಾಬ್‌ನಲ್ಲಿ ಆಮ್ ಆದ್ಮಿ ಗೆದ್ದು ಅಚ್ಚರಿಯ ಫಲಿತಾಂಶ ನೀಡಿತು. ಆಪ್‌ನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಇದು ಮಹತ್ವದ್ದಾಗಿತ್ತು. ಉತ್ತರಪ್ರದೇಶ ಮತ್ತು ಗುಜರಾತ್‌ನಲ್ಲಿ ಬಿಜೆಪಿಯ ಭರ್ಜರಿ ಗೆಲುವು ದಾಖಲೆಗಳನ್ನು ಸೃಷ್ಟಿಸಿದೆ. ಉತ್ತರಪ್ರದೇಶದಲ್ಲಿ 37 ವರ್ಷಗಳ ಬಳಿಕ ಆಡಳಿತಾರೂಢ ಪಕ್ಷ ಮರಳಿ ಅಧಿಕಾರಕ್ಕೇರಿದಂತಾಗಿದೆ. ಆಪ್ ಗುಜರಾತ್ ಅನ್ನು ಪ್ರವೇಶಿಸಿದ್ದು, 5 ಸೀಟುಗಳನ್ನು ಗೆದ್ದಿತ್ತು. ಗುಜರಾತ್‌ನಲ್ಲಿ ಬಿಜೆಪಿ 182 ಸೀಟುಗಳಲ್ಲಿ 152 ಅನ್ನು ಗೆದ್ದು ತನ್ನದೇ ಹಳೆ ದಾಖಲೆಯನ್ನು ಮುರಿಯಿತು. ರಾಜ್ಯದಲ್ಲಿ ಏಳನೇ ಬಾರಿಗೆ ಅಧಿಕಾರಕ್ಕೇರಿತು. ಆಮ್ ಆದ್ಮಿ ದಿಲ್ಲಿ ಪಾಲಿಕೆ ಚುನಾವಣೆಯಲ್ಲಿ 15 ವರ್ಷಗಳ ಬಿಜೆಪಿ ಪ್ರಾಬಲ್ಯವನ್ನು ಅಳಿಸಿತು.
ಆಪ್ ಸಚಿವರ ವಿವಾದ: ಆಮ್ ಆದ್ಮಿ ಪಕ್ಷದ ಕೆಲವು ಸಚಿವರು ವರ್ಷ ಪೂರ್ತಿ ನಕಾರಾತ್ಮಕ ಕಾರಣಗಳಿಂದ ಸುದ್ದಿಯಲ್ಲಿದ್ದರು. ಪ್ರಾಮಾಣಿಕರ ಪಕ್ಷ ಎಂಬ ಹೆಗ್ಗಳಿಕೆ ಹೊಂದಿದ್ದ ಪಕ್ಷದಲ್ಲಿ ದಿಲ್ಲಿ ಸಚಿವರುಗಳ ಮುಖವಾಡ ಬಯಲಾಗಿತ್ತು. ಭ್ರಷ್ಟಾಚಾರ ಕೇಸ್‌ಗಳಲ್ಲಿ ದಿಲ್ಲಿ ಸಚಿವ ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರನಾಥ್ ಜೈನ್ ಕಾನೂನು ಕ್ರಮ ಎದುರಿಸಬೇಕಾಯಿತು. ದಿಲ್ಲಿ ಆರೋಗ್ಯ ಸಚಿವ ಸತ್ಯೇಂದ್ರನಾಥ್ ಮೇ30ರಿಂದ ಅಕ್ರಮ ಹಣ ವರ್ಗಾವಣೆ ಕೇಸ್‌ನಲ್ಲಿ ಜೈಲಿನಲ್ಲಿ ಇದ್ದಾರೆ.
ಕಾಂಗ್ರೆಸ್ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ
ಕಾಂಗ್ರೆಸ್ ಪಕ್ಷದ ಅಧ್ಯಕ್ಷೀಯ ಚುನಾವಣೆ ಭಾರಿ ಸುದ್ದಿಯಾಯಿತು. ಏಕೆಂದರೆ 25 ವರ್ಷಗಳ ಬಳಿಕ ಇದು ನಡೆದಿತ್ತು. ವಂಶಾಡಳಿತದ ಅಪಖ್ಯಾತಿ ಹಿನ್ನೆಲೆಯೂ ಇತ್ತು. ಈ ಸಲವೂ ಚುನಾವಣೆ ವಿವಾದದಿಂದ ಹೊರತಾಗಿರಲಿಲ್ಲ. ಅಶೋಕ್ ಗೆಹ್ಲೋಟ್ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬೇಕಿತ್ತು. ಆದರೆ ರಾಜಸ್ಥಾನ ಸಿಎಂ ಹುದ್ದೆಯನ್ನು ಸಚಿನ್ ಪೈಲಟ್ ಅವರಿಗೆ ಹಸ್ತಾಂತರಿಸಲು ಒಪ್ಪಿರಲಿಲ್ಲ. ಇದು ಪಕ್ಷದ ರಾಜಸ್ಥಾನ ಘಟಕದಲ್ಲಿ ಬಂಡಾಯದ ಹೊಗೆಯನ್ನು ಸೃಷ್ಟಿಸಿತ್ತು. ಅಂತಿಮವಾಗಿ ಮಲ್ಲಿಕಾರ್ಜುನ ಖರ್ಗೆಯವರನ್ನು ಆಯ್ಕೆ ಮಾಡುವುದರೊಂದಿಗೆ ಬಂಡಾಯ ತಣ್ಣಗಾಗಿತ್ತು. ಮಲ್ಲಿಕಾರ್ಜುನ ಖರ್ಗೆ ಅವರು 7,897 ಹಾಗೂ ಶಶಿ ತರೂರ್ 1,072 ಮತಗಳನ್ನು ಪಡೆದಿದ್ದರು.
ಭಾರತ್ ಜೋಡೊ ಯಾತ್ರಾ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅಳಿವಿನಂಚಿನಲ್ಲಿರುವ ಪಕ್ಷಕ್ಕೆ ಕಾಯಕಲ್ಪ ನೀಡಲು ಭಾರತ್ ಜೋಡೊ ಪಾದ ಯಾತ್ರೆಯನ್ನು ಕೈಗೊಂಡರು. ಈಗ 100 ದಿನಗಳನ್ನು ಪೂರ್ಣಗೊಳಿಸಿದೆ. ಇದು ಬ್ರಾಂಡ್ ರಾಹುಲ್ ರಿಲಾಂಚ್ ಯಾತ್ರೆ ಎಂದು ಬಿಜೆಪಿ ಟೀಕಿಸಿದೆ. ಕನ್ಯಾಕುಮಾರಿಯಿಂದ ಜಮ್ಮು ಕಾಶ್ಮೀರದ ತನಕ 3,570 ಕಿ.ಮೀ ದೂರದ ಯಾತ್ರೆ 150 ದಿನಗಳ ಕಾಲ ನಡೆಯುತ್ತಿದೆ. ಈಗ ದಿಲ್ಲಿಯಲ್ಲಿ ಮುಂದುವರಿದಿದೆ.
ಎನ್‌ಡಿಎ ತೊರೆದು ಮಹಾಘಟಬಂಧನ್ ಸೇರಿದ ನಿತೀಶ್ ಕುಮಾರ್
ಬಿಜಾರ ಸಿಎಂ ಮತ್ತು ಸಂಯುಕ್ತ ಜನತಾ ದಳ ನಾಯಕ ನಿತೀಶ್ ಕುಮಾರ್ ಅವರು ಎನ್‌ಡಿಎ ತೊರೆದು ಆಗಸ್ಟ್‌ನಲ್ಲಿ ಮಹಾ ಘಟಬಂಧನ್‌ಗೆ ಸೇರ್ಪಡೆಯಾದರು. ಆರ್‌ಜೆಡಿ ಬೆಂಬಲ ಪಡೆದು ಸರ್ಕಾರ ರಚಿಸಿದರು. 2024ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಮಹತ್ವದ ಯೂ ಟರ್ನ್ ತೆಗೆದುಕೊಂಡಿದ್ದಾರೆ. ಪರೋಕ್ಷವಾಗಿ ತೇಜಸ್ವಿ ಯಾದವ್ ತಮ್ಮ ಉತ್ತರಾಧಿಕಾರಿ ಎಂದೂ ಹೇಳಿದ್ದಾರೆ.
ಶಿವ ಸೇನಾ
ಶಿವಸೇನಾ ಪಕ್ಷಕ್ಕೆ 2022 ಭಾರಿ ಬಿಕ್ಕಟ್ಟಿನ ವರ್ಷವಾಗಿತ್ತು. ಪಕ್ಷ ಎರಡಾಗಿ ಹೋಳಾಯಿತು. ಏಕನಾಥ್ ಶಿಂಧೆ ನೇತೃತ್ವದ ಬಣ ಬಂಡಾಯವೆದ್ದಿತು. ನಾಟಕೀಯ ಸನ್ನಿವೇಶದಲ್ಲಿ ಬಿಜೆಪಿ ಜತೆ ಈ ಬಣ ಕೈಜೋಡಿಸಿತು. ಅಘಾಡಿ ಪಕ್ಷದ ಸರ್ಕಾರ ಪತನವಾಯಿತು. ಏಕನಾಥ್ ಶಿಂಧೆ ಸಿಎಂ ಆದರು.
ಮುಲಾಯಂ ಸಿಂಗ್ ಯಾದವ್
ಸಮಾಜವಾದಿ ಪಕ್ಷದ ಸ್ಥಾಪಕ ಮತ್ತು ಉತ್ತರಪ್ರದೇಶದ ಮಾಜಿ ಸಿಎಂ ಮುಲಾಯಂ ಸಿಂಗ್ ಯಾದವ್ ಈ ವರ್ಷ ಅಕ್ಟೋಬರ್ 10ರಂದು ನಿಧನರಾದರು. ಮೂರು ಬಾರಿ ಅವರು ಸಿಎಂ ಆಗಿದ್ದರು.
ನ್ಯಾಷನಲ್ ಹೆರಾಲ್ಡ್ ಕೇಸ್
ನ್ಯಾಷನಲ್ ಹೆರಾಲ್ಡ್ ಕೇಸ್ 2022ರಲ್ಲಿ ಗಾಂಧಿ ಕುಟುಂಬವನ್ನು ಕಾಡಲು ಆರಂಭಿಸಿತು. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ಪುತ್ರ ರಾಹುಲ್ ಗಾಂಧಿ ಮೊದಲ ಬಾರಿಗೆ ಜಾರಿ ನಿರ್ದೇಶನಾಲಯದ ಎದುರು ಪ್ರಕರಣಕ್ಕೆ ಸಂಬಂಧಿಸಿ ಹಾಜರಾದರು. ರಾಹುಲ್ ಗಾಂಧಿ ಐದು ಬಾರಿ ವಿಚಾರಣೆ ಎದುರಿಸಿದರು.
ಕೇಂದ್ರ ತನಿಖಾ ಸಂಸ್ಥೆಗಳು
ಕೇಂದ್ರೀಯ ತನಿಖಾ ಸಂಸ್ಥೆಗಳು ಭಾರಿ ಸಕ್ರಿಯವಾಗಿದ್ದ ವರ್ಷವಿದು. ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ವರ್ಷ ಪೂರ್ತಿ ಸುದ್ದಿಯಲ್ಲಿತ್ತು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮನೀಶ್ ಸಿಸೋಡಿಯಾ, ಡಿಕೆ ಶಿವಕುಮಾರ್ ಮೊದಲಾದವರು ವಿಚಾರಣೆ ಎದುರಿಸಿದರು. ಶಿವಸೇನಾ ಸಂಸದ ಸಂಜಯ್ ರಾವತ್, ಆಪ್ ಸಚಿವ ಸತ್ಯೇಂದ್ರನಾಥ್, ಮಹಾರಾಷ್ಟ್ರದ ಮಾಜಿ ಸಚಿವ ಅನಿಲ್ ದೇಶ್ ಮುಖ್, ನವಾಬ್ ಮಲಿಕ್ ಅರೆಸ್ಟ್ ಆದರು.
ರಾಷ್ಟ್ರೀಯ ಪಕ್ಷವಾದ ಆಮ್ ಆದ್ಮಿ ಪಾರ್ಟಿ
ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಾರ್ಟಿ ಈ ವರ್ಷ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿತು.
ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ 13% ಮತಗಳನ್ನು ಪಡೆದ ಬಳಿಕ ಆಮ್ ಆದ್ಮಿಗೆ ಈ ಹೆಗ್ಗಳಿಕೆ ಲಭಿಸಿದೆ. ಐದು ಸೀಟುಗಳನ್ನೂ ಪಕ್ಷ ಗೆದ್ದುಕೊಂಡಿದೆ. ಮತ್ತಷ್ಟು ರಾಜ್ಯಗಳಲ್ಲಿ ವಿಸ್ತರಿಸಲು ಉದ್ದೇಶಿಸಿದೆ.