ಬೆಂಗಳೂರು: ಇನ್ನೇನು 2023ರ ವಿಧಾನಸಭಾ ಚುನಾವಣೆಗಳು ಹತ್ತಿರವಾಗುತ್ತಿರುವಂತೆ ಕರ್ನಾಟಕದ ರಾಜಕೀಯ (Karnataka Politics) ಪಡಸಾಲೆಯಲ್ಲೆಲ್ಲ 150ರ ಜಪವೇ ಕೇಳಿಸುತ್ತಿದೆ. ಎರಡೂ ರಾಷ್ಟ್ರೀಯ ಪಕ್ಷಗಳಾದ ಭಾರತೀಯ ಜನತಾ ಪಾರ್ಟಿ(BJP) ಹಾಗೂ ಕಾಂಗ್ರೆಸ್(Congress) ಈ ಬಾರಿ 150 ಶಾಸಕರನ್ನು ಗೆಲ್ಲಿಸಿಕೊಂಡು ಐದು ವರ್ಷ ಆತಂಕವಿಲ್ಲದೆ ಅಧಿಕಾರ ಹಿಡಿಯುವ ಪ್ರಯತ್ನಕ್ಕೆ ಮುಂದಾಗಿವೆ.
2018ರಲ್ಲೂ ಜಪಿಸಿದ್ದ ಬಿಜೆಪಿ
ಚುನಾವಣೆಗಳಲ್ಲಿ ಜನಪ್ರಿಯ ಘೋಷಣೆಗಳನ್ನು ನೀಡುವುದು, ಅದನ್ನು ಜನಮಾನಸದಲ್ಲಿ ಬೇರೂರುವಂತೆ ಮಾಡುವಲ್ಲಿ ಬಿಜೆಪಿ ಎತ್ತಿದ ಕೈ. ಭಾರತದ ಚುನಾವಣಾ ಚಾಣಕ್ಯ ಎಂದೇ ಪ್ರಸಿದ್ಧವಾದ ಕೇಂದ್ರ ಗೃಹ ಸಚಿವ ಅಮಿತ್ ಷಾ (Amit Shah) ಅವರ ತಂಡ ಈ ಕಾರ್ಯವನ್ನು ಅತ್ಯಂತ ಯಶಸ್ವಿಯಾಗಿ ಮಾಡುತ್ತ ಅನೇಕ ಚುನಾವಣೆಗಳನ್ನು ಜಯಿಸಿದೆ. 2018ರಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗಳು ನಡೆದಿದ್ದವು. 2013ರಿಂದ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವ ಸಂಕಲ್ಪದಲ್ಲಿ ಆಗಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಮಿತ್ ಷಾ ಅವರು ಕರ್ನಾಟಕದಲ್ಲಿ 150ಕ್ಕೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ನೀಡಿದ್ದರು. ಅಸಲಿಗೆ ಈ ರೀತಿ ಗುರಿ ಇಟ್ಟುಕೊಳ್ಳುವುದು ಹೊಸತೇನೂ ಅಲ್ಲ. 2014ರಲ್ಲಿ ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಮುಂದಾಗಿದ್ದ ಬಿಜೆಪಿ, ಟಾರ್ಗೆಟ್ 272+ ನಿಗದಿಪಡಿಸಿತ್ತು. ದೇಶದ ಸಂಸತ್ತಿನಲ್ಲಿ 543 ಸಂಸದರಿದ್ದಾರೆ. ಯಾವುದೇ ಪಕ್ಷ ಅಥವಾ ಒಕ್ಕೂಟ ಅಧಿಕಾರ ಹಿಡಿಯಬೇಕಾದರೆ 272 ಸಂದರ ಬೆಂಬಲ ಹೊಂದಿರಬೇಕು. ಇದೇ ಗುರಿಯನ್ನು ಆಧರಿಸಿ 272+ ಗುರಿಯನ್ನು ಅಮಿತ್ ಷಾ ನಿಗದಿಪಡಿಸಿ ಅದನ್ನೇ ಚುನಾವಣೆಯುದ್ದಕ್ಕೂ ಪ್ರಚಾರ ಮಾಡಿದ್ದರು. ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿಯವರು ತಮ್ಮ ಭಾಷಣಗಳಲ್ಲೆಲ್ಲ ಇದೇ ಮಾತನ್ನು ಪ್ರಸ್ತಾಪಿಸಿ ಜನರ ಮನಸ್ಸಿನಲ್ಲೂ ಆಳವಾಗಿ ಬೇರೂರುವಂತೆ ಮಾಡಿದ್ದರು.
2018ರ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕ ಪ್ರವಾಸಕ್ಕೆ ಆಗಮಿಸಿದ ಅಮಿತ್ ಷಾ 150+ ಗುರಿ ನೀಡಿದ್ದರು. ಕರ್ನಾಟಕದ ವಿಧಾನಸಭೆಯಲ್ಲಿ 224 ಶಾಸಕರಿದ್ದಾರೆ. ಯಾವುದೇ ಪಕ್ಷ ಅಥವಾ ಒಕ್ಕೂಟ ಅಧಿಕಾರ ಹಿಡಿಯಲು 113 ಶಾಸಕರ ಬೆಂಬಲ ಬೇಕು. ಈ ನಿಟ್ಟಿನಲ್ಲಿ ಹಿಂದಿನ ಚುನಾವಣೆಗಳಲ್ಲಿ ಸರಳ ಬಹುಮತದ ಗುರಿಗಳನ್ನು ಹೊಂದಲಾಗುತ್ತಿತ್ತು. ಆದರೆ ಕಳೆದ ಒಂದು-ಒಂದೂವರೆ ದಶಕದ ಕರ್ನಾಟಕ ರಾಜಕಾರಣದಲ್ಲಿ ಪಕ್ಷಾಂತರ ಮಿತಿ ಮೀರಿದೆ. ಸರಳ ಬಹುಮತದಷ್ಟೆ ಶಾಸಕರಿದ್ದರೆ ಒಂದು ಗುಂಪನ್ನು ಪ್ರತಿಪಕ್ಷಗಳು ಸೆಳೆದು ಸರ್ಕಾರವನ್ನು ಪತನಗೊಳಿಸುವ ಅಪಾಯ ಹೆಚ್ಚಾಗುತ್ತಿದೆ. ಈ ಕಾರಣಕ್ಕಾಗಿಯೇ 150ಕ್ಕೂ ಹೆಚ್ಚು ಸೀಟು ಪಡೆಯುವ ಗುರಿಯನ್ನು ಅಮಿತ್ ಷಾ ನಿಗದಿಪಡಿಸಿದ್ದರು.
2018ರ ಮೇ 12ರಂದು ಒಂದೇ ಹಂತದಲ್ಲಿ ಚುನಾವಣೆ ನಡೆದು ಮೇ 15ರಂದು ಫಲಿತಾಂಶ ಘೋಷಣೆಯಾಗಿತ್ತು. ಕಾಂಗ್ರೆಸ್ ಸರ್ಕಾರವನ್ನು ಸೋಲಿಸಲು ಬಿಜೆಪಿ ಸಫಲವಾಯಿತು. ಆದರೆ ಸತತ ಪ್ರವಾಸ, ಪ್ರಧಾನಿ ಮೋದಿಯವರ ಹೈ ಡೆಸಿಬಲ್ ಪ್ರಚಾರದ ನಂತರವೂ ನಿರೀಕ್ಷಿತ 150+ ಗುರಿ ತಲುಪಲಾಗಲಿ, ಸ್ವತಂತ್ರವಾಗಿ ಸರ್ಕಾರ ರಚಿಸಲಾಗಲಿ ಸಾಧ್ಯವಾಗಲಿಲ್ಲ. ಮುಂದೆ ವಿವಿಧ ರಾಜಕೀಯ ಬೆಳವಣಿಗೆಗಳು ನಡೆದವು. ಬಹುಮತ ತಮ್ಮ ಬಳಿ ಇದೆಯೆಂದು ಬಿ.ಎಸ್. ಯಡಿಯೂರಪ್ಪ ಅವರನ್ನು ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ್ನಾಗಿ ಆಯ್ಕೆ ಮಾಡಿ, ರಾಜ್ಯದ 23ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನವನ್ನೂ ಸ್ವೀಕರಿಸಿದರು. ನಂತರ ಸರಳ ಬಹುಮತ ಸಾಬೀತುಪಡಿಸಲು ಆಗದೆ, ರಾಜೀನಾಮೆ ನೀಡಿದರು. ಕಾಂಗ್ರೆಸ್ ಜತೆಗೆ ಜೆಡಿಎಸ್ ಮೈತ್ರಿ ಮಾಡಿಕೊಂಡು ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆದರು. ಮತ್ತೆ ನಡೆದ ರಾಜಕೀಯ ಪಲ್ಲಟದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‌ನ 17 ಶಾಸಕರು ರಾಜೀನಾಮೆ ನೀಡಿ ಬಿಜೆಪಿಯೊಂದಿಗೆ ಕೈಜೋಡಿಸಿದರು. ಮತ್ತೆ ಯಡಿಯೂರಪ್ಪ ಮುಖ್ಯಮಂತ್ರಿ ಆದರು.
ಇದೀಗ 2023ರ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವಾಗ ಮತ್ತೆ 150+ ಗುರಿಯನ್ನು ಅಮಿತ್ ಷಾ ಬಿತ್ತಿದ್ದಾರೆ.
ಮೋದಿ ಕೆಲಸವೇ ಆಧಾರ
ಏಪ್ರಿಲ್ 1ರಂದು ತುಮಕೂರು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರ 115ನೇ ಜಯಂತಿಯಲ್ಲಿ ಅಮಿತ್ ಷಾ ಭಾಗವಹಿಸಿದರು. ಈ ಸಂದರ್ಭದಲ್ಲಿ ಕೋರ್ ಕಮಿಟಿ ಸಭೆ ನಡೆಸಿ ಹೊಸ ಗುರಿಯನ್ನು ನೀಡಿರುವ ಅಮಿತ್ ಷಾ, ಎಲ್ಲ ರೀತಿಯಲ್ಲೂ ಪ್ರಯತ್ನ ನಡೆಸುವಂತೆ ತಿಳಿಸಿ ಹೋಗಿದ್ದಾರೆ. ನಮ್ಮ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಹಾಗೂ ಕೆಲಸ ಎರಡೂ ಇದೆ. ಇದರ ಜತೆಗೆ, ಇತ್ತೀಚೆಗಷ್ಟೆ ಐದು ರಾಜ್ಯಗಳಲ್ಲಿ ನಾಲ್ಕು ರಾಜ್ಯಗಳ ಚುಕ್ಕಾಣಿಯನ್ನು ಬಿಜೆಪಿ ಹಿಡಿದಿದೆ. ಅದರಲ್ಲೂ ಉತ್ತರ ಪ್ರದೇಶದಂತಹ ರಾಜ್ಯದಲ್ಲಿ ಮೂರು ದಶಕದಲ್ಲಿ ಇದೇ ಮೊದಲ ಬಾರಿಗೆ ಪಕ್ಷವೊಂದು ಮರು ಆಯ್ಕೆಯಾಗಿದೆ. ದೇಶದ ಜನರ ವಿಶ್ವಾಸ ಬಿಜೆಪಿ ಕಡೆಗಿದೆ. ಇದೆಲ್ಲದರ ಜತೆಗೆ, 2018ರ ಚುನಾವಣೆಯಲ್ಲಿ ಪ್ರತಿಪಕ್ಷ ಸ್ಥಾನದಿಂದ ಸೆಣೆಸಿದ್ದೆವು. ಈ ಬಾರಿ ಆಡಳಿತದಲ್ಲಿದ್ದಿಕೊಂಡು ಚುನಾವಣೆ ಎದುರಿಸುತ್ತಿದ್ದೇವೆ. ಬಜೆಟ್ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವ ಮೂಲಕ ಹಾಗೂ ಪಕ್ಷವನ್ನು ಪರಿಣಾಮಕಾರಿಯಾಗಿ ಸಂಘಟಿಸುವ ಮೂಲಕ ಗುರಿಯನ್ನು ತಲುಪಬೇಕು. ಕರ್ನಾಟಕದ 60% ಜನರು ಕೇಂದ್ರ ಸರ್ಕಾರದ ಯಾವುದಾದರೂ ಒಂದು ಯೋಜನೆಯ ಫಲಾನುಭವಿಗಳಾಗಿದ್ದಾರೆ. ಈ ಅಂಶವನ್ನೂ ಚುನಾವಣೆ ಲಾಭಕ್ಕೆ ಬಳಸಿಕೊಳ್ಳಬೇಕು ಎಂದಿದ್ದರು.
ಬಿ.ಎಸ್. ಯಡಿಯೂರಪ್ಪ ಅವರನ್ನು ವಯಸ್ಸಿನ ಕಾರಣಕ್ಕೆ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಲಾಗಿದೆ. ಆದರೆ ಅವರ ಕೊಡುಗೆ ಅಪಾರ. ಅವರು ಇನ್ನೂ ಜನಬೆಂಬಲ ಹೊಂದಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಯಡಿಯೂರಪ್ಪ ಅವರನ್ನೂ ಮುಂದಿಟ್ಟುಕೊಂಡು ಚುನಾವಣೆ ಎದುರಿಸಬೇಕು ಎಂದಿದ್ದರು. ಅದಕ್ಕೆ ಅನುಗುಣವಾಗಿ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ನಡೆದ ಶ್ರೀ ಶಿವಕುಮಾರ ಸ್ವಾಮೀಜಿಗಳ 115ನೇ ಜಯಂತಿ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಅವರೂ ಉಪಸ್ಥಿತರಿರುವಂತೆ ನೋಡಿಕೊಳ್ಳಲಾಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಇಡೀ ಕಾರ್ಯಕ್ರಮದ ಉಸ್ತುವಾರಿಯನ್ನು ಯಡಿಯೂರಪ್ಪ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ವಹಿಸಿದ್ದರು.
ಹೆಚ್ಚಿನ ಓದಿಗಾಗಿ: ಸಂಪುಟ ವಿಸ್ತರಣೆ ಬಗ್ಗೆ ಕರ್ನಾಟಕದಲ್ಲೆ ತೀರ್ಮಾನ: CM ಬೊಮ್ಮಾಯಿಗೆ ತಿಳಿಸಿದ ವರಿಷ್ಠರು
ಕಾಂಗ್ರೆಸ್ 150 ಗುರಿ
ಅಮಿತ್ ಷಾ ಅವರು ರಾಜ್ಯ ಪ್ರವಾಸ ಕೈಗೊಂಡ ಒಂದು ದಿನದ ಮೊದಲು ಅಂದರೆ ಮಾರ್ಚ್ 31ರಂದು ರಾಹುಲ್ ಗಾಂಧಿ ಅವರು ಪ್ರವಾಸ ಕೈಗೊಂಡಿದ್ದರು. ಇತ್ತೀಚೆಗೆ ಕಾಂಗ್ರೆಸ್ ಆಯೋಜಿಸಿರುವ ಆನ್‌ಲೈನ್ ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ಹೆಚ್ಚು ಕ್ರಿಯಾಶೀಲರಾಗಿದ್ದ ಕಾರ್ಯಕರ್ತರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಕರ್ನಾಟಕವು ಸಹಜವಾಗಿ ಕಾಂಗ್ರೆಸ್ ಮನಸ್ಥಿತಿಯ ರಾಜ್ಯ. ಇಲ್ಲಿ ಕಾಂಗ್ರೆಸ್ ಪರ ಅಲೆ ಇದೆ. ಈ ರಾಜ್ಯದಲ್ಲಿ 150ಕ್ಕಿಂತ ಕಡಿಮೆ ಕ್ಷೇತ್ರಗಳಲ್ಲಿ ಜಯಿಸುವ ಗುರಿಯನ್ನೇ ಹೊಂದಬಾರದು ಎಂದು ಗುರಿ ನೀಡಿದ್ದರು.
2018ರ ಚುನಾವಣೆಯಲ್ಲಿ ಅಧಿಕಾರದಲ್ಲಿದ್ದು ಚುನಾವಣೆ ಎದುರಿಸಿದ್ದ ಕಾಂಗ್ರೆಸ್ ಈ ಬಾರಿ ವಿರೋಧ ಪಕ್ಷದಲ್ಲಿದೆ. ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಹಾಗೂ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿ ಸಿದ್ದರಾಮಯ್ಯ ಇದ್ದಾರೆ. ಪ್ರಾರಂಭದಿಂದಲೂ ಕಾಂಗ್ರೆಸ್‌ನಲ್ಲಿ ನಾಯಕರ ನಡುವಿನ ಗೊಂದಲದಿಂದಾಗಿ ಚುನಾವಣೆಗಳಲ್ಲಿ ಕಳಪೆ ಪ್ರದರ್ಶನ ನೀಡಿದ ಉದಾಹರಣೆಳಿವೆ. ಈ ವಿಚಾರವನ್ನು ಸೂಕ್ಷ್ಮವಾಗಿ ಪ್ರಸ್ತಾಪಿಸಿದ ರಾಹುಲ್ ಗಾಂಧಿ, ನಾವು ಒಗ್ಗಟ್ಟಾಗಿ ಕೆಲಸ ಮಾಡಿದರೆ, ಸರಿಯಾದ ವಿಚಾರವನ್ನು ಕೈಗೆತ್ತಿಕೊಂಡರೆ ಗೆಲ್ಲಬಹುದು. ಕೆಲಸ ಮಾಡುವವರನ್ನೇ ನಾವು ನಾಯಕರನ್ನಾಗಿಸುತ್ತೇವೆ. ಇದರಲ್ಲಿ ನಮಗೆ ಸ್ಪಷ್ಟತೆ ಇದೆ. ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಿ ಮತ ಕೇಳಬೇಕು. ಕೋವಿಡ್ ನಿರ್ವಹಣೆಯಲ್ಲಿ ವಿಫಲ, ಭ್ರಷ್ಟಾಚಾರದಂತಹ ವಿಚಾರ ಪ್ರಸ್ತಾಪಿಸಿ ರಾಜ್ಯ ಸರ್ಕಾರದ ವಿರುದ್ಧ ಜನಾಭಿಪ್ರಾಯ ಮೂಡಿಸಬೇಕು ಎಂದು ಕಾರ್ಯಕರ್ತರು ಹಾಗೂ ನಾಯಕರಿಗೆ ಕಿವಿಮಾತು ಹೇಳಿದ್ದರು.
ಈ ನಡುವೆ ಜೆಡಿಎಸ್ ಎಲ್ಲಿದೆ?
ಎರಡು ರಾಷ್ಟ್ರೀಯ ಪಕ್ಷಗಳು ಟಾರ್ಗೆಟ್ 150+ ಇರಿಸಿಕೊಂಡು ಕಾರ್ಯೋನ್ಮುಖವಾಗಿದ್ದರೆ ಇತ್ತ ಜೆಡಿಎಸ್ ತನ್ನದೇ ಕಾರ್ಯಸೂಚಿ ಹೊಂದಿದೆ. 2021ರ ಜುಲೈನಲ್ಲೆ ಮಹತ್ವದ ಸಭೆಯನ್ನು ನಡೆಸಿದ್ದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, 2023ರ ಚುನಾವಣೆಯಲ್ಲಿ 150-170 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಪ್ರಕಟಿಸಿದ್ದರು. ಜತೆಗೆ, 2022ರ ಜನವರಿ 15ರೊಳಗೆ 150 ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡುವುದಾಗಿಯೂ ಹೇಳಿದ್ದರು. ಅದೇಕೊ 2022ರ ಏಪ್ರಿಲ್ ಮಧ್ಯಭಾಗ ಸಮೀಪಿಸಿದರೂ ಇನ್ನೂ ಅಭ್ಯರ್ಥಿಗಳ ಘೋಷಣೆ ಮಾಡಿಲ್ಲ. ಆದರೆ ಕಳೆದ ಕೆಲ ದಿನಗಳಿಂದ ಎಚ್.ಡಿ. ಕುಮಾರಸ್ವಾಮಿಯವರು ಸಾಕಷ್ಟು ಕ್ರಿಯಶೀಲರಾಗಿ ತೊಡಗಿಸಿಕೊಂಡಿದ್ದಾರೆ. ಸರ್ಕಾರ ಹಾಗೂ ಕಾಂಗ್ರೆಸ್ ವಿರುದ್ಧ ಹರಿಹಾಯುತ್ತಲೇ ಪ್ರವಾಸ ಮಾಡುತ್ತಿದ್ದಾರೆ. ರಾಜ್ಯದ 180 ಕ್ಷೇತ್ರಗಳಲ್ಲಿ ಹಾದುಹೋಗುವ ಜನತಾ ಜಲಧಾರೆ ಅಭಿಯಾನಕ್ಕೆ ಮಂಗಳವಾರ ಚಾಲನೆ ನೀಡಿದ್ದಾರೆ. ಇಂತಿಷ್ಟೆ ಸ್ಥಾನಗಳಲ್ಲಿ ಜಯಿಸಬೇಕು ಎಂದು ಗುರಿ ಇಲ್ಲದಿದ್ದರೂ, ಸರಳ ಬಹುಮತದೊಂದಿಗೆ ಅಧಿಕಾರ ನೀಡುವಂತೆ ಕೋರುತ್ತಿದ್ದಾರೆ. ತಮಗೆ ಅಧಿಕಾರ ನೀಡಿ ಐದು ವರ್ಷದೊಳಗೆ ಎಲ್ಲ ನೀರಾವರಿ ಯೋಜನೆಗಳನ್ನೂ ಪೂರ್ಣಗೊಳಿಸಲಾಗುತ್ತದೆ. ಇಲ್ಲದಿದ್ದರೆ ಪಕ್ಷವನ್ನೇ ವಿಸರ್ಜನೆ ಮಾಡುವುದಾಗಿ ಹೇಳಿದ್ದಾರೆ.