Site icon Vistara News

ರಾಜ್ಯಕ್ಕಿಂದು ಅಮಿತ್‌ ಷಾ; ಬಿಜೆಪಿಯಲ್ಲಿ ಆತಂಕದ ʼಸಂತೋಷʼ

B L Santosh and LookOut Notice

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಒಂದು ವರ್ಷಕ್ಕೂ ಕಡಿಮೆ ಅವಧಿ ಇರುವ ಸಮಯದಲ್ಲಿ ರಾಷ್ಟ್ರೀಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ನೀಡಿರುವ ʼಬದಲಾವಣೆʼಯ ಹೇಳಿಕೆ ಸಂಚಲನ ಉಂಟುಮಾಡಿದೆ. ಹೇಳಿಕೆ ಬೆನ್ನಲ್ಲೇ “ಚುನಾವಣಾ ಚಾಣಕ್ಯ” ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಷಾ ಒಂದು ದಿನದ ಪ್ರವಾಸಕ್ಕಾಗಿ ರಾಜ್ಯಕ್ಕೆ ಸೋಮವಾರ ಆಗಮಿಸುತ್ತಿರುವುದು ಸಂಚಲನಕ್ಕೆ ಮತ್ತಷ್ಟು ವೇಗ ನೀಡಿದೆ.

ಮೈಸೂರಿನ ಕಾರ್ಯಕರ್ತರ ಸಮಾವೇಶದಲ್ಲಿ ಭಾನುವಾರ ಮಾತನಾಡಿದ್ದ ಬಿ.ಎಲ್‌. ಸಂತೋಷ್‌, ಇಂದು ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳ ಸರಾಸರಿ ವಯಸ್ಸು 56.5 ವರ್ಷ. ಇಬ್ಬರು ಮುಖ್ಯಮಂತ್ರಿಗಳು ಹಿರಿಯರಿರುವ ಕಾರಣ ಇಷ್ಟಿದೆ. ಆ ಇಬ್ಬರೂ ಕಡಿಮೆ ವಯಸ್ಸಿನವರಾಗಿದ್ದರೆ ಸರಾಸರಿ ವಯಸ್ಸು ಇನ್ನೂ ಕಡಿಮೆ ಇರುತ್ತಿತ್ತು. ಕೇಂದ್ರ ಮಂತ್ರಿ ಮಂಡಲದ ಸರಾಸರಿ ವಯಸ್ಸು 57 ವರ್ಷ. ಇದರಲ್ಲಿ 99.9% ಜನರು ನಿಶ್ಚಿತ ಕುಟುಂಬದಿಂದ ಬಂದಿಲ್ಲ ಅಥವಾ ರಾಜಕೀಯ ಕುಟುಂಬದವರನ್ನು ಮದುವೆ ಆಗಿಲ್ಲ. ಸಮಾಜದಿಂದಲೇ ಎಲ್ಲರನ್ನೂ ಕರೆತಂದಿರುವುದರಿಂದ, ಹೊಸ ವ್ಯವಸ್ಥೆ ಸೃಷ್ಟಿಯಾಗುತ್ತಿದೆ ಎಂದರು.

ನವದೆಹಲಿ ಕಾರ್ಪೊರೇಷನ್‌ ಚುನಾವಣೆ ಉದಾಹರಣೆ ನೀಡಿದ ಸಂತೋಷ್‌, ಕಳೆದ ಬಾರಿ(2017) ನವದೆಹಲಿ ಕಾರ್ಪೊರೇಷನ್‌ ಚುನಾವಣೆಯಲ್ಲಿ ಹಾಲಿಗಳಿಗೆ ಟಿಕೆಟ್‌ ಇಲ್ಲ ಎಂದು ನಿರ್ಧಾರ ಮಾಡಲಾಯಿತು. (ಈ ಚುನಾವಣೆಯಲ್ಲಿ ದೆಹಲಿಯ ಮೂರೂ ಪಾಲಿಕೆಗಳಲ್ಲಿ ಬಿಜೆಪಿ ಜಯಗಳಿಸಿತ್ತು). ಗುಜರಾತ್‌ನಲ್ಲಿ ಚುನಾವಣೆ ಟಿಕೆಟ್‌ ನೀಡುವ ವೇಳೆ, ಎರಡು ಬಾರಿ ಶಾಸಕರಾದವರಿಗೆ ಹಾಗೂ ಅವರ ಮೊದಲ ಹಂತದ ಕುಟುಂಬದವರಿಗೆ ಟಿಕೆಟ್‌ ನೀಡಬಾರದು ಎಂದು ನಿರ್ಧಾರ ಮಾಡಲಾಯಿತು. ಇಂದು ಆ ರಾಜ್ಯದ ಸಭೆಯಲ್ಲಿ ಭಾಗವಹಿಸಿದರೆ, ಎಲ್ಲ ಹೊಸ ಮುಖಗಳು ಕಾಣಿಸುತ್ತವೆ ಎಂದರು. ನಂತರ ಕರ್ನಾಟಕದತ್ತ ದೃಷ್ಟಿ ಹರಿಸಿದ ಸಂತೋಷ್‌, “ಕರ್ನಾಟದಲ್ಲೂ ಕೆಲವು ಜಿಲ್ಲೆಗಳಲ್ಲಿ ಕೊನೆಯ ಸಾಲಿನಲ್ಲಿ ಕುಳಿತವರು ಕೊನೆಯವರೆಗೂ ಅಲ್ಲೇ ಇರುವ ಸ್ಥಿತಿಯಿದೆ. ಇಂದು ಆ ಸ್ಥಿತಿಯನ್ನು ಬದಲಾಯಿಸುವ ಧೈರ್ಯ, ತಾಕತ್ತು ಪಕ್ಷಕ್ಕೆ ಬಂದಿದೆʼ ಎಂದರು. ಈ ಮಾತಿಗೆ ಸಂತೋಷಗೊಂಡ ಕಾರ್ಯಕರ್ತರು ಚಪ್ಪಾಳೆಮ ಶಿಳ್ಳೆ ಹೊಡೆದು ಸ್ವಾಗತಿಸಿದರು.

ಮಾತು ಮುಂದುವರಿಸಿದ ಸಂತೋಷ್‌, ʼ ಈ ಬದಲಾವಣೆಗಳು ಎಲ್ಲ ಕಡೆಯೂ ಎಲ್ಲ ಸಮಯದಲ್ಲೂ ಆಗುತ್ತದೆ ಎಂದು ಹೇಳುವುದಿಲ್ಲ. ಆದರೆ ಬೇರೆ ಪಕ್ಷಗಳು ಕನಸು ಮನಸ್ಸಿನಲ್ಲೂ ಊಹಿಸಲು ಸಾಧ್ಯವಾಗದ ಬದಲಾವಣೆ ಬಿಜೆಪಿಯಲ್ಲಿ ಆಗುತ್ತಿದೆʼ ಎಂದರು. ಇದರ ನಂತರ ಸಂತೋಷ್‌ ಹೇಳಿದ ಮಾತು; “ಗುಜರಾತ್‌ನಲ್ಲಿ ಮುಖ್ಯಮಂತ್ರಿ ಬದಲಾವಣೆ ಆದ ಕೂಡಲೆ ಇಡೀ ಮಂತ್ರಿ ಮಂಡಲ ಬದಲಾಯಿತು” ಈಗ ರಾಜ್ಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ.

ಇದನ್ನೂ ಓದಿ | ಭಾರತಕ್ಕೆ ಸಮಸ್ಯೆ ಆದಾಗ ನೀವೆಲ್ಲಿದ್ದಿರಿ? ಯುರೋಪ್‌ಗೆ ಪಾಠ ಮಾಡಿದ ಜೈಶಂಕರ್‌

ಹಿಂದಿನ ಸಾಲಿನಲ್ಲಿ ಕುಳಿತ ಕಾರ್ಯಕರ್ತರು ಪ್ರತಿ ಚುನಾವಣೆಯಲ್ಲೂ ಯಾವುದೋ ಒಂದು ಕುಟುಂಬಕ್ಕೆ ಕೆಲಸ ಮಾಡುವುದಾಗುತ್ತದೆ. ಇದು ಬದಲಾಗಲು ಬಿಜೆಪಿಯಲ್ಲಿ ಅವಕಾಶಗಳಿವೆ ಎನ್ನಲಾಗುತ್ತಿತ್ತು. ಆದರೂ ಕೆಲ ಜಿಲ್ಲೆಗಳಲ್ಲಿ ಅದದೇ ಕುಟುಂಬದವರು ಆಡಳಿತ ನಡೆಸುತ್ತಿದ್ದಾರೆ. ಇದು ಸ್ಥಳೀಯ ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಸಂತೋಷ್‌ ಅವರು ಬದಲಾವಣೆಯ ಮಾತನ್ನಾಡಿದ ಕೂಡಲೆ ಇದೇ ಕಾರಣಕ್ಕೆ ಕಾರ್ಯಕರ್ತರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಇದೇ ಮಾತು, ಈಗಾಗಲೆ ಬಿಜೆಪಿಯಲ್ಲಿ ಬೇರು ಬಿಟ್ಟಿರುವ ನಾಯಕರಿಗೆ ನಡುಕ ಉಂಟುಮಾಡಿದೆ. ಇನ್ನೇನು ಚುನಾವಣೆ ಹತ್ತಿರದಲ್ಲಿರುವಾಗ ಸಂತೋಷ್‌ ಈ ಮಾತನ್ನು ಹೇಳಿರುವುದು, ಮುಂದಿನ ಬಾರಿ ತಮಗೆ ಟಿಕೆಟ್‌ ಕೈತಪ್ಪಬಹುದೇ ಎಂಬ ಲೆಕ್ಕಾಚಾರಕ್ಕೆ ಕಾರಣವಾಗಿದೆ.

ಮುಖ್ಯಮಂತ್ರಿ ಬದಲಾವಣೆ?

ಹೊಸಬರಿಗೆ ಟಿಕೆಟ್‌ ನೀಡುವ ವಿಚಾರಕ್ಕಿಂತಲೂ ಸದ್ಯ ಬಿಜೆಪಿಯಲ್ಲಿ ಮಂತ್ರಿಮಂಡಲ ಪುನಾರಚನೆಗೆ ಸಂತೋಷ್‌ ಮಾತು ಕಿಚ್ಚು ಹಚ್ಚಿಸಿದೆ. ಗುಜರಾತ್‌ನಲ್ಲಿ ಮುಖ್ಯಮಂತ್ರಿಯನ್ನು ಬದಲಾಯಿಸಿದ ಕೂಡಲೆ ಇಡೀ ಮಂತ್ರಿಮಂಡಲ ಬದಲಾಯಿತು ಎಂದು ಸಂತೋಷ್‌ ಹೇಳಿದ್ದಾರೆ. ಸದ್ಯ ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆ ಚರ್ಚೆ ನಡೆಯುತ್ತಿದೆ. ಕೇಂದ್ರ ಗೃಹಸಚಿವ ಅಮಿತ್‌ ಷಾ ಸೋಮವಾರ ರಾತ್ರಿ ಕರ್ನಾಟಕಕ್ಕೆ ಆಗಮಿಸುತ್ತಾರೆ.

ಮಂಗಳವಾರ ಕೆಲವು ಸರ್ಕಾರಿ ಹಾಗೂ ಕೆಲವು ಸಂಘಟನಾತ್ಮಕ ಸಭೆಗಳಲ್ಲಿ ಭಾಗವಹಿಸುತ್ತಾರೆ. ಈ ಸಂದರ್ಭದಲ್ಲಿ ಸಚಿವ ಸಂಪುಟ ವಿಸ್ತರಣೆ ಚರ್ಚೆ ಆಗುತ್ತದೆ ಎಂಬ ನಿರೀಕ್ಷೆ ಇದೆ. ಇದೇ ವೇಳೆ, ರಾಜ್ಯದಲ್ಲಿ ಈಗ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸರ್ಕಾರ ನಡೆಯುತ್ತಿದೆ. ಇತ್ತೀಚೆಗೆ ಸರ್ಕಾರದ ಮೇಲಿನ 40% ಕಮಿಷನ್‌ ಆರೋಪ, ಈಶ್ವರಪ್ಪ ರಾಜೀನಾಮೆಯಂತಹ ಅನೇಕ ವಿಚಾರಗಳು ಸರ್ಕಾರದ ವರ್ಚಸ್ಸನ್ನು ತಗ್ಗಿಸಿವೆ. ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲೆ ಚುನಾವಣೆ ಎದುರಿಸಿದರೆ ಜಯಗಳಿಸುವ ಕುರಿತು ಪಕ್ಷದಲ್ಲೆ ಎರಡು ರೀತಿಯ ಭಾವನೆಗಳಿವೆ. ಇದೀಗ ಗುಜರಾತ್‌ನಲ್ಲು ಮುಖ್ಯಮಂತ್ರಿ ಬದಲಾವಣೆ ಹೇಳಿಕೆ, ಅದೇ ವೇಳೆಗೆ ಅಮಿತ್‌ ಷಾ ಆಗಮನದ ವಿಚಾರಗಳು ರಾಜ್ಯದಲ್ಲೂ ಸಿಎಂ ಬದಲಾವಣೆಯ ಚರ್ಚೆಗೆ ವೇಗ ನೀಡಿವೆ.

ಇದನ್ನೂ ಓದಿ | ಗದಾಧಾರಿ V/S ಘಂಟಾಧಾರಿ ಹಿಂದುತ್ವ: ಬಿಜೆಪಿ ವಿರುದ್ಧ ಹರಿಹಾಯ್ದ ಮಹಾರಾಷ್ಟ್ರ CM ಠಾಕ್ರೆ

Exit mobile version