ಬಳ್ಳಾರಿ: ಇಂದು ಭಾರತ್ ಜೋಡೋ ಪಾದಯಾತ್ರೆಯ ಬಳ್ಳಾರಿ ಸಮಾವೇಶ ನಡೆಯಲಿದೆ. ಅದಕ್ಕೂ ಮುನ್ನ ಪಾದಯಾತ್ರೆ ನಡೆಯಲಿದ್ದು, ಮುಂಜಾನೆ 6.40ಕ್ಕೆ ನಡಿಗೆ ಆರಂಭವಾಗಿದೆ.
ಬೆಳಗ್ಗೆ 6.40ಕ್ಕೆ ಹಲಕುಂದಿ ಮಠದಿಂದ ಪಾದಯಾತ್ರೆ ಪ್ರಾರಂಭವಾಗಿದ್ದು, ಸುಮಾರು 8.8 ಕಿಮೀ ನಡೆಯಲಿರುವ ರಾಹುಲ್ ಗಾಂಧಿ ಬಳ್ಳಾರಿ ನಗರಕ್ಕೆ 9.30ಕ್ಕೆ ತಲುಪಲಿದ್ದಾರೆ. 9.30ಕ್ಕೆ ಕಮ್ಮ ಭವನ ತಲುಪಲಿದ್ದು, ಮಧ್ಯಾಹ್ನ 1.30ರ ತನಕ ಕಮ್ಮ ಭವನ ಬಳಿ ವಿಶ್ರಾಂತಿ ಪಡೆಯಲಿದ್ದಾರೆ. ಮಧ್ಯಾಹ್ನ 1.30ರಿಂದ 3 ಗಂಟೆ ತನಕ ಬಳ್ಳಾರಿ ಮುನಿಸಿಪಲ್ ಮೈದಾನದಲ್ಲಿ ಸಾರ್ವಜನಿಕ ಸಮಾವೇಶ ನಡೆಯಲಿದೆ. ರಾತ್ರಿ ಸಂಗನಕಲ್ಲು ಗ್ರಾಮದಲ್ಲಿ ರಾಹುಲ್ ವಾಸ್ತವ್ಯ ಮಾಡಲಿದ್ದಾರೆ.
ಯಾತ್ರೆಯಲ್ಲಿ ಭಾಗವಹಿಸಲು ಮಲ್ಲಿಕಾರ್ಜುನ ಖರ್ಗೆ ರಾತ್ರಿಯೇ ಚೆನ್ನೈನಿಂದ ವಿಶೇಷ ವಿಮಾನದ ಮೂಲಕ ಬಂದಿದ್ದಾರೆ. ಖರ್ಗೆಯೊಂದಿಗೆ ಗೌರವ ವಲ್ಲಭ ಸೇರಿದಂತೆ ಐದು ಜನ ಆಗಮಿಸಿದ್ದಾರೆ. ಸಮಾವೇಶಕ್ಕೆ ರಾಜಸ್ಥಾನ ಮತ್ತು ಜಾರ್ಖಂಡ್ ಸಿಎಂ ಅಗಮಿಸಲಿರುವ ನಿರೀಕ್ಷೆಯಿದೆ. ಯಾತ್ರೆಯ ಉದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಕಾರಿನಲ್ಲಿ ರಾಹುಲ್ ಆಗಮನ
ರಾಹುಲ್ ಗಣಿನಾಡಿಗೆ ಕಾರಿನ ಮೂಲಕ ನಿನ್ನೆ ಸಂಜೆ 6.40ಕ್ಕೆ ಎಂಟ್ರಿ ಕೊಟ್ಟರು. ಕಾರಿನಲ್ಲಿಯೇ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿರುವ ಸ್ಥಳವನ್ನು ಪ್ರವೇಶ ಮಾಡಿದರು. ಇದರಿಂದ ಬಳ್ಳಾರಿ ಗಡಿಯಲ್ಲಿ ಸ್ವಾಗತಕ್ಕೆ ನಿಂತಿದ್ದ ಪೂರ್ಣಕುಂಭ ಹೊತ್ತು ನಿಂತಿದ್ದವರು ಮತ್ತು ಮುಖಂಡರಿಗೆ ನಿರಾಸೆಯಾಯಿತು. ಬಳ್ಳಾರಿ ಜಿಲ್ಲೆಗೆ ಪಾದಯಾತ್ರೆ ಮೂಲಕವೇ ಪ್ರವೇಶ ಮಾಡುತ್ತಾರೆ ಎಂದು ಜಿಲ್ಲೆಯ ಗಡಿ ಎಂಟ್ರಿಯಲ್ಲಿ ಮತ್ತು ಹಲಕುಂದಿ ರಸ್ತೆಯ ಎರಡು ಬದಿಯಲ್ಲೂ ಜನರು ಕಾಯುತ್ತಾ ನಿಂತಿದ್ದರು. ಆದರೆ ಕಾಂಗ್ರೆಸ್ ಯುವರಾಜ ಆಂಧ್ರದ ಓಬಳಾಪುರಂ ದಾಟಿದ ಮೇಲೆ ವಾಹನದಲ್ಲಿಯೇ ಆಗಮಿಸಿದರು.
ಬಳ್ಳಾರಿ ಜಿಲ್ಲೆಯ ಹಲಕುಂದಿ ಮಠ ಪಕ್ಕದ ಖಾಲಿ ಸ್ಥಳದಲ್ಲಿಯೇ ರಾಹುಲ್ ಗಾಂಧಿಗೆ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿತ್ತು. 58 ಕಂಟೈನರ್‌ಗಳು ವಾಸ್ತವ್ಯ ಸ್ಥಳದಲ್ಲಿದ್ದವು. ಪಾದಯಾತ್ರೆಯಲ್ಲಿ ಬಂದಿದ್ದ ಸುಮಾರು 200ಕ್ಕೂ ಹೆಚ್ಚು ಜನರಿಗೆ ಕಂಟೈನರ್‌ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ರಾಹುಲ್ ಗಾಂಧಿಗೆ ಝೆಡ್ ಪ್ಲಸ್ ಸೆಕ್ಯೂರಿಟಿ ಇರುವುದರಿಂದ ವಾಸ್ತವ್ಯ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪಟ್ಟಿಯಲ್ಲಿ ಹೆಸರಿಲ್ಲದ ಕಾಂಗ್ರೆಸ್ ಶಾಸಕರನ್ನು ಕೂಡ ಒಳಗಡೆ ಬಿಡಲಿಲ್ಲ. ಎಸ್ಪಿ ರಂಜಿತ್ ಕುಮಾರ್ ಅವರು ವಾಸ್ತವ್ಯದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಇದನ್ನೂ ಬಳಸಿ | Bharat Jodo | ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕಲಾಗುತ್ತಿದೆ: ರಾಹುಲ್ ಗಾಂಧಿ ಆರೋಪ