ಬೆಂಗಳೂರು: ವಿಧಾನಸಭೆ ಚುನಾವಣೆಗೆ ತಯಾರಿ ಆರಂಭಿಸಿರುವ ರಾಜ್ಯ ಬಿಜೆಪಿ, ಜತೆಜತೆಗೇ ಬಿಬಿಎಂಪಿ ಚುನಾವಣೆಯತ್ತಲೂ ಗಮನಹರಿಸಿದೆ. ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ರಾಜ್ಯ ಪ್ರಭಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ರಾಜ್ಯ ಪದಾಧಿಕಾರಿಗಳ ಸಭೆಯನ್ನು ನಡೆಸಲಾಗಿದ್ದು, ಅನೇಕ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಮಲ್ಲೇಶ್ವರಲ್ಲಿರುವ ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಪದಾಧಿಕಾರಿಗಳ ಸಭೆ ನಡೆಯಿತು. ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಜಿಲ್ಲಾ ಘಟಕಗಳ ಅಧ್ಯಕ್ಷರು, ವಿವಿಧ ಪ್ರಕೋಷ್ಠಗಳ ಅಧ್ಯಕ್ಷರು ಭಾಗಿಯಾಗಿದ್ದರು.
ಬಿಜೆಪಿ ದುರ್ಬಲ ಎನ್ನಲಾಗುವ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ನಳಿನ್ ಕುಮಾರ್ ಕಟೀಲ್ ಪ್ರವಾಸ ಮಾಡಬೇಕು. ಸೆಪ್ಟೆಂಬರ್ ಮೊದಲ ವಾರದಿಂದ ಅಕ್ಟೋಬರ್ ಎರಡನೇ ವಾರದವರೆಗೆ ರಾಜ್ಯದ ವಿವಿಧೆಡೆ ಜನೋತ್ಸವ ಸಮಾವೇಶಗಳನ್ನು ನಡೆಸಬೇಕು ಎಂದು ನಿರ್ಧಾರ ಮಾಡಲಾಗಿದೆ.
ದೊಡ್ಡಬಳ್ಳಾಪುರದಲ್ಲಿ ಈಗಾಗಲೆ ನಡೆಯಬೇಕಿದ್ದ ಹಾಗೂ ಸದ್ಯದಲ್ಲೆ ದಿನಾಂಕ ನಿಗದಿಯಾಗುವ ಸಮಾವೇಶ ನಡೆಸಬೇಕು. ಅದೂ ಸೇರಿ ಒಟ್ಟು ಏಳು ಬೃಹತ್ ಜಿಲ್ಲಾ ಸಮಾವೇಶಗಳನ್ನು ನಡೆಸಲು ನಿರ್ಧಾರ ಮಾಡಲಾಗಿದೆ. ಸಿಎಂ ನೇತೃತ್ವದಲ್ಲಿ ಒಂದು ತಂಡ, ಕಟೀಲ್ ನೇತೃತ್ವದಲ್ಲಿ ಮತ್ತೊಂದು ತಂಡದಿಂದ ಪ್ರವಾಸ ಮಾಡಲಾಗುತ್ತದೆ. ಈಗಾಗಲೆ ಪ್ರವಾಸದ ವೇಳಾಪಟ್ಟಿ ಸಿದ್ಧವಾಗಿದ್ದು, ಸದ್ಯದಲ್ಲೆ ವಿಸ್ತೃತ ಯೋಜನೆ ಮಾಡಲಾಗುತ್ತದೆ.
ಬಿಬಿಎಂಪಿ ಚುನಾವಣೆಗೂ ಸಿದ್ಧತೆ
ವಿಧಾನಸಭೆ ಚುನಾವಣೆಗೆ ಸಿದ್ಧವಾಗುತ್ತಿರುವಾಗಲೇ, ಅನಿವಾರ್ಯವಾಗಿ ಬಿಬಿಎಂಪಿ ಚುನಾವಣೆಯನ್ನು ಎದುರಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಚುನಾವಣೆಯನ್ನೂ ಗಮನದಲ್ಲಿರಿಸಿಕೊಂಡು ಕಾರ್ಯಕ್ರಮಗಳನ್ನು ರೂಪಿಸಲು ನಿರ್ಧಾರ ಮಾಡಲಾಗಿದೆ. ಬಿಬಿಎಂಪಿ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ತೋರಿದರೆ ವಿಧಾನಸಭೆ ಚುನಾವಣೆಗಳಿಗೂ ಅನುಕೂಲವಾಗುತ್ತದೆ. ಈ ಹಿನ್ನೆಲೆಯಲ್ಲಿ ಮುಂದಿನ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯನ್ನು ಬೆಂಗಳೂರಿನಲ್ಲಿ ನಡೆಸಲು ನಿರ್ಧಾರ ಮಾಡಲಾಗಿದೆ. ಸೆಪ್ಟೆಂಬರ್ 10, 11 ರಂದು ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಸಲು ತೀರ್ಮಾನಿಸಲಾಗಿದೆ.
ಇದನ್ನೂ ಓದಿ | ಮಾಜಿ ಸಿಎಂ ಯಡಿಯೂರಪ್ಪ ಫುಲ್ ಆ್ಯಕ್ಟೀವ್: ಬಿಜೆಪಿ ಕಚೇರಿ, ಕೇಶವ ಕೃಪಾಗೆ ಭೇಟಿ