Site icon Vistara News

Blast in Bengaluru: ಸರಣಿ ಸ್ಫೋಟದ ಪ್ರಯೋಗಾರ್ಥ ರಾಮೇಶ್ವರಂ ಕೆಫೆ ಬ್ಲಾಸ್ಟ್? ಸರ್ಕಾರದ ವಿರುದ್ಧ ಗುಡುಗಿದ ಸಿ.ಟಿ.ರವಿ

Blast in Bengaluru Experimental preparation for serial blasts says CT Ravi

ಬೆಂಗಳೂರು: ವೈಟ್‌ಫೀಲ್ಡ್‌ನ (Whitefield) ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ನಡೆದ ಬಾಂಬ್‌ ಸ್ಫೋಟ ಪ್ರಕರಣ (Blast in Bengaluru) ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಕೆಂಡಕಾರಿದ್ದಾರೆ. ಮತಾಂಧತೆಯ ಅತಿರೇಕದ ಪರಿಣಾಮವಾಗಿ ಪಾಕಿಸ್ತಾನದ ಪ್ರೀತಿಯನ್ನು ಬೆಳಗಾವಿ, ವಿಧಾನಸೌಧದಲ್ಲಿ ವ್ಯಕ್ತಪಡಿಸಲಾಗಿದೆ. ದು ಸರಣಿ ಸ್ಫೋಟದ ಪ್ರಯೋಗಾರ್ಥ ತಯಾರಿ ಎಂದು ಅನುಮಾನ ಮೂಡುವಂತಿದೆ ಎಂದು ಹೇಳಿದ್ದಾರೆ.

ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿ.ಟಿ. ರವಿ, ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಆಗಿತ್ತು. ಈಗ ಬೆಂಗಳೂರಿನಲ್ಲಿ ಎಲ್‍ಇಡಿ ಬಾಂಬ್ ಸ್ಫೋಟ ಆಗಿದೆ. ಕಳೆದ 11 ವರ್ಷಗಳಲ್ಲಿ ಬೆಂಗಳೂರಿನಲ್ಲಿ ಸಣ್ಣ- ದೊಡ್ಡದು ಸೇರಿ ಆರು ಸ್ಫೋಟಗಳಾಗಿವೆ. ಇದು ಸರಣಿ ಸ್ಫೋಟದ ಪ್ರಯೋಗಾರ್ಥ ತಯಾರಿಯೇ ಎಂಬ ಅನುಮಾನ ಮೂಡುವಂತಿದೆ ಎಂದು ಹೇಳಿದರು.

ಕರ್ನಾಟಕ ಸರ್ಕಾರವು ಬಾಂಬ್ ಸ್ಫೋಟದ ಕುರಿತ ಸಮಗ್ರ ತನಿಖೆಯನ್ನು ಎನ್.ಐ.ಎ.ಗೆ ಒಪ್ಪಿಸಬೇಕು.‌ ಬ್ರ್ಯಾಂಡ್ ಬೆಂಗಳೂರಿಗೆ ಬಾಂಬ್ ಭೀತಿ ಎದುರಾಗಿದೆ. ಶುಕ್ರವಾರ (ಮಾ. 1) ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟವು ಸರಣಿ ಸ್ಫೋಟದ ಪರೀಕ್ಷಾರ್ಥ ಸ್ಫೋಟ ಅಥವಾ ರಿಹರ್ಸಲ್ ಇರಬಹುದು. ಈ ಮೂಲಕ ಮುನ್ಸೂಚನೆ ಕೊಟ್ಟಿರಬಹುದು ಎಂದು ಶಂಕೆ ವ್ಯಕ್ತಪಡಿಸಿದರು.

ಕರ್ನಾಟಕವನ್ನು ಭಯೋತ್ಪಾದಕರು ಸ್ಲೀಪರ್ ಸೆಲ್ ಆಗಿ ಮಾಡಿಕೊಂಡದ್ದು ಹೊಸತಲ್ಲ. ತರಬೇತಿ ಕೇಂದ್ರವಾಗಿಯೂ ಕರ್ನಾಟಕವನ್ನು ಬಳಸಿಕೊಂಡಿದ್ದಾರೆ. ಕೊಪ್ಪದಲ್ಲಿ ಹಿಂದೆ ಬಂದೂಕು, ಬಾಂಬ್ ತಯಾರಿಸುವ ತರಬೇತಿಯನ್ನು ಕೊಡಲಾಗುತ್ತಿತ್ತು. ತೀರ್ಥಹಳ್ಳಿಯಲ್ಲಿ ಕುಕ್ಕರ್ ಬಾಂಬ್ ತಯಾರಿಸಲಾಗುತ್ತಿತ್ತು. ಕೊಡಗಿನಲ್ಲೂ ಭಯೋತ್ಪಾದಕರಿಗೆ ತರಬೇತಿ ಕೊಡಲಾಗುತ್ತಿತ್ತು. ಈ ಎಲ್ಲ ಮಾಹಿತಿ ಸರ್ಕಾರದ ಬಳಿ ಇದೆ ಎಂದು ‌ಸಿ.ಟಿ. ರವಿ ವಿವರಿಸಿದರು.

ದೇಶದ ಉತ್ತರ ಭಾಗದಲ್ಲಿ ಬಾಂಬ್ ಸ್ಫೋಟದ ಸದ್ದು ಕ್ಷೀಣವಾಗಿದೆ. ಬಹುತೇಕ ನಿಂತುಹೋಗಿದೆ. ಭಾರತದ ದಕ್ಷಿಣ ಭಾಗದಲ್ಲಿ ಕೇರಳ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಬಾಂಬ್ ಸದ್ದು ಕೇಳಿಸುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಸಿ.ಟಿ. ರವಿ ಆಗ್ರಹಿಸಿದರು.

ಮತಾಂಧತೆಯ ಅತಿರೇಕದಿಂದ ಭಯೋತ್ಪಾದನೆ ಆರಂಭ

ಭಯೋತ್ಪಾದನೆ ಆರಂಭವಾಗುವುದೇ ಮತಾಂಧತೆಯ ಅತಿರೇಕದಿಂದ ಎಂದು ಹೇಳಿದ ಸಿ.ಟಿ.ರವಿ, ಮತಾಂಧತೆಯ ಅತಿರೇಕವನ್ನು ಕೋವಿಡ್ ಸಂದರ್ಭದಲ್ಲಿ ಹಲವೆಡೆ ಗಮನಿಸಿದ್ದೇವೆ. ಪಾದರಾಯನಪುರದಲ್ಲಿ ಕೋವಿಡ್ ವಾರಿಯರ್ಸ್‍ಗಳ ಮೇಲೆ ದಾಳಿ ನಡೆದಿತ್ತು. ಡಿ.ಜೆ.ಹಳ್ಳಿ- ಕೆಜೆ.ಹಳ್ಳಿ ಗಲಭೆ ಸಂದರ್ಭದಲ್ಲಿ ದಲಿತ ಶಾಸಕ ಅಖಂಡ ಶ್ರೀನಿವಾಸಮೂರ್ತಿಯವರ ಮನೆ ಸುಟ್ಟಿದ್ದರು. 200ಕ್ಕೂ ಹೆಚ್ಚು ಮನೆಗಳ ವಾಹನಗಳನ್ನು ಸುಟ್ಟದ್ದಲ್ಲದೆ, ಪೊಲೀಸ್ ಠಾಣೆಗೆ ಬೆಂಕಿ ಹಾಕಿದ್ದರು ಎಂದು ಆಕ್ರೋಶವನ್ನು ಹೊರಹಾಕಿದರು.

ಹಿಂದೆ ಕೊಯಮತ್ತೂರಿನಲ್ಲಿ ಸರಣಿ ಸ್ಫೋಟ ನಡೆದಿತ್ತು. ಈಗ ಆ ಥರ ಸರಣಿ ಸ್ಫೋಟದ ತಯಾರಿ ಮಾಡುತ್ತಿದ್ದಾರೆ. ಮತಾಂಧ ಶಕ್ತಿಗಳು ಮತ್ತು ಭಯೋತ್ಪಾದಕರು ಕೈಜೋಡಿಸಿದ್ದಾರೆ ಎಂಬ ಸಂಶಯ ಇದೆ. ಈ ಸರ್ಕಾರ ಬಂದ ಬಳಿಕ ಎನ್‍ಐಎ ಬಂಧಿತ ಶಂಕಿತ ಭಯೋತ್ಪಾದಕರ ಸಂಖ್ಯೆ 21 ಎಂದು ಸಿ.ಟಿ. ರವಿ ತಿಳಿಸಿದರು.‌

ಜುಲೈನಲ್ಲಿ 5 ಜನರು, ಡಿಸೆಂಬರ್‌ನಲ್ಲಿ 8, ಜನವರಿಯಲ್ಲಿ ದಾಳಿ ಸಂಚಿನಲ್ಲಿ 8 ಜನ ಶಂಕಿತ ಭಯೋತ್ಪಾದಕರನ್ನು ಬಂಧಿಸಲಾಗಿತ್ತು. ಹಿಂದೆ ಭಟ್ಕಳವನ್ನು ಜೈನರ ಕಾಶಿ ಎಂದು ಕರೆಯಲಾಗುತ್ತಿತ್ತು. ಈಗ ಅದು ಭಯೋತ್ಪಾದಕರ ನೆಲೆಯಾಗಿದೆ. ಭಯೋತ್ಪಾದಕರ ಜತೆ ಭಟ್ಕಳದ ಹೆಸರು ತಳಕು ಹಾಕಿಕೊಂಡಿದೆ (ಉದಾ: ಯಾಸೀನ್ ಭಟ್ಕಳ್) ಎಂದು ಸಿ.ಟಿ. ರವಿ ಹೇಳಿದರು.

ಇದನ್ನೂ ಓದಿ: Blast in Bengaluru: ರಾಮೇಶ್ವರಂ ಕೆಫೆ – ಮಂಗಳೂರು ಬ್ಲಾಸ್ಟ್‌ಗೆ ಸಾಮ್ಯತೆ; ಇಲ್ಲ ಅಂದ್ರು ಸಿಎಂ, ಇದೆ ಅಂದ್ರು ಡಿಸಿಎಂ!

ಇದೆಲ್ಲವನ್ನೂ ಗಮನಿಸಿದಾಗ ಭಾರತವನ್ನು ಆಕ್ರಮಿಸಿ ಇಸ್ಲಾಮಿ ರಾಷ್ಟ್ರವಾಗಿ ಮಾಡುವ ಅರಬ್ ಯೋಜನೆಯ ಪ್ರಕಾರ ನಡೆಯುವಂತಿದೆ. ಆ ಯೋಜನೆಯಂತೆ ಗಾಂಧಾರ ಕಳಕೊಂಡಿದ್ದು, ಅದು ಅಪಘಾನಿಸ್ತಾನವಾಗಿದೆ. ಸಿಂಧ್ ಕಳಕೊಂಡಿದ್ದು, ಪಾಕಿಸ್ತಾನವಾಗಿದೆ. ಬಂಗಾಲ ತುಂಡರಿಸಿ ಬಾಂಗ್ಲಾದೇಶ ಮಾಡಲಾಗಿದೆ. ಕಾಶ್ಮೀರವನ್ನು ಭಾರತದಿಂದ ತುಂಡರಿಸುವ ಸಂಚು ಕೂಡ ಆ ಯೋಜನೆಯ ಮುಂದುವರಿದ ಭಾಗವಾಗಿತ್ತು. ಸಿಮಿ ಕಚೇರಿ ಮೇಲೆ ದಾಳಿ ನಡೆದಾಗ ನಕ್ಷೆ ಲಭಿಸಿತ್ತು. ಮೊಘಲರ ಆಳ್ವಿಕೆ ಇದ್ದ ಪ್ರದೇಶಗಳನ್ನು ಇಸ್ಲಾಮಿಕ್ ರಾಷ್ಟ್ರ ಮಾಡಬೇಕೆಂದು ಯೋಜನೆ ರೂಪಿಸಿ ಹಲವು ರೀತಿಯ ತಯಾರಿ ಮಾಡುತ್ತಿದ್ದ ಮಾಹಿತಿ ಅದರಲ್ಲಿತ್ತು. ಇದು ಅದರ ಮುಂದುವರಿದ ಭಾಗ ಇರಬಹುದು. ಇದರ ಸಮಗ್ರ ತನಿಖೆ ಮಾಡಲು ಇದನ್ನು ಎನ್‍ಐಎಗೆ ಒಪ್ಪಿಸಬೇಕು ಎಂದು ಸಿ.ಟಿ. ರವಿ ಆಗ್ರಹಿಸಿದರು.

Exit mobile version