ಬೆಂಗಳೂರು: ಇದೇ ಫೆಬ್ರವರಿ 27ಕ್ಕೆ 79 ತುಂಬಿ 80ನೇ ವರ್ಷ ರನ್ನಿಂಗ್‌ನಲ್ಲಿರೋ ಯಡಿಯೂರಪ್ಪ ಅವರ ಹುಮ್ಮಸ್ಸು, ಮಾತಿನ ಧೃಡತೆ ಇನ್ನೂ ಕುಂದಿಲ್ಲ. ʼನಾನು ಇನ್ನೂ ಹತ್ತು ವರ್ಷ ಇದೇ ರೀತಿ ರಾಜಕೀಯದಲ್ಲಿ ಸಕ್ರಿಯನಾಗಿರುತ್ತೀನಿʼ ಎಂದು ವಿಜಯಪುರದಲ್ಲಿ ಸ್ವತಃ ಬಿ.ಎಸ್. ಯಡಿಯೂರಪ್ಪ (BSY) ಮಂಗಳವಾರ ಘೋಷಿಸಿದ್ದಾರೆ. ವಾಯವ್ಯ ಪದವೀಧರ ಕ್ಷೇತ್ರದ ಚುನಾವಣೆ ಸಲುವಾಗಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಕಾರ್ಯಕ್ರಮದಲ್ಲಿ BSY ಮಾತನಾಡಿದ್ದಾರೆ.
75ವರ್ಷ ತುಂಬಿದವರಿಗೆ ಅಧಿಕಾರವಿಲ್ಲ ಎಂಬ ಅಲಿಖಿತ ಹಾಗೂ ಕಾಲಕ್ಕೆ ತಕ್ಕಂತೆ ಅದನ್ನು ಹೊಂದಿಸಿಕೊಳ್ಳಬಹುದಾದ ನಿಯಮ ಬಿಜೆಪಿಯಲ್ಲಿದೆ. ತಮಗೆ ಇಷ್ಟವಾದವರನ್ನು ಮುಂದುವರಿಸಲು ಇದೇ ನಿಯಮದಲ್ಲಿ ಕಾರಣ ಸಿಗುತ್ತದೆ, ಅದೇ ರೀತಿ ತಮಗೆ ಬೇಡವಾದವರಿಗೆ ಗೇಟ್ ಪಾಸ್ ಅಥವಾ ಗವರ್ನರ್ ಹುದ್ದೆಗೆ ಕಳಿಸಲೂ ಈ ನಿಯಮ ಉಪಯೋಗಕ್ಕೆ ಬರುತ್ತದೆ ಎನ್ನುವುದು ಸಾರ್ವಜನಿಕವಾಗಿ ಕೇಳಿಬರುವ ಮಾತು.
ಇದನ್ನೂ ಓದಿ | ಬಿಎಸ್‌ವೈ- ಸಿದ್ದು Photo: ರಾಜ್ಯಸಭೆ ಚುನಾವಣೆ ಫಿಕ್ಸಿಂಗ್ ಊಹಾಪೋಹಕ್ಕೆ ರೆಕ್ಕೆ
75 ತುಂಬಿದ ನಂತರವೂ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗುವ ಅವಕಾಶವನ್ನು ಬಿಜೆಪಿ ನೀಡಿತು. ಇದಕ್ಕೆ ಯಡಿಯೂರಪ್ಪ ಅವರು ಯಾರಿಗೋ ಆಪ್ತರಾಗಿದ್ದರು ಎನ್ನುವುದಕ್ಕಿಂತಲೂ ಅವರ ಶಕ್ತಿಯೇ ಪ್ರಮುಖ ಕಾರಣ ಎನ್ನಬಹುದು. ಶಕ್ತಿ ಎಂದರೆ ಕೇವಲ ಜನಬಲ ಮಾತ್ರವಲ್ಲ. ಜನಬಲ ಅವರಿಗೆ ಇದ್ದೇ ಇದೆ. ಅದರಲ್ಲೂ ವೀರಶೈವ ಲಿಂಗಾಯತ ಸಮುದಾಯದ ಸಾಲಿಡ್ ವೋಟ್‌ಬ್ಯಾಂಕ್ ಈಗಲೂ ಯಡಿಯೂರಪ್ಪ ಬೆನ್ನಿಗಿದೆ. ಆದರೆ ಈ ವೋಟ್‌ಬ್ಯಾಂಕ್ ಎನ್ನುವುದು ಅವರು ಬಿಜೆಪಿಯಲ್ಲಿರುವವರೆಗೂ ಇದ್ದೇ ಇರುತ್ತದೆ ಎನ್ನುವುದು ಈ ಹಿಂದೆ ಕೆಜೆಪಿ ಮಾಡಿದ ಸಂದರ್ಭದಲ್ಲಿ ಸಾಬೀತಾಗಿದೆ. ಸದ್ಯದ ಮಟ್ಟಿಗೆ ಲಿಂಗಾಯತ ಸಮುದಾಯ ಯಡಿಯೂರಪ್ಪ ಅವರನ್ನೇ ಮೊದಲ ನಾಯಕ ಎಂದು ಒಪ್ಪಿಕೊಂಡಿದೆ ಎನ್ನಬಹುದು.
ಯಡಿಯೂರಪ್ಪ ಅವರು 75 ದಾಟಿದ ನಂತರವೂ ಅಧಿಕಾರದಲ್ಲಿ ಮುಂದುವರಿಯುವಂತೆ ಮಾಡಿದ ಇನ್ನೊಂದು ಶಕ್ತಿ ಎಂದರೆ ಬೇರೆ ಬೇರೆ ಪಕ್ಷದಲ್ಲಿನ ಫ್ರೆಂಡ್ಸ್ ಸರ್ಕಲ್. ಹಾಗೆ ನೋಡಿದರೆ ಯಡಿಯೂರಪ್ಪ, ದೇವೇಗೌಡರಿಂದ ಸಿದ್ದರಾಮಯ್ಯ ಆದಿಯಾಗಿ ಎಲ್ಲರ ಜತೆಗೂ ಜಗಳ ಆಡಿದವರು. ಆದರೆ ಎಲ್ಲರ ಜತೆಗೂ ಫ್ರೆಂಡ್‌ಷಿಪ್ ಹೊಂದಿರುವವರು. ಯಡಿಯೂರಪ್ಪ ಜನಸಂಘದ ಕಾಲದಿಂದಲೂ ಬಿಜೆಪಿಯಲ್ಲಿದ್ದಾರೆ. ಅವರೇ ಹೇಳುವಂತೆ ʼಅಟಲ್‌ಜಿ, ಆಡ್ವಾಣಿ ಜಿ ಗರಡಿಯಲ್ಲಿ ಬೆಳೆದವರುʼ. ಆದರೂ ಸಾಮಾಜಿಕವಾಗಿ ಯಡಿಯೂರಪ್ಪ ಬೆನ್ನ ಹಿಂದೆ ಹಿಂದುತ್ವವಾದಿ, ರಾಷ್ಟ್ರೀಯವಾದಿ, ಕೋಮುವಾದಿ ಎಂಬ ಹಣೆಪಟ್ಟಿ ಅಂಟಿಕೊಳ್ಳಲೇ ಇಲ್ಲ.
ಅಧಿಕಾರಕ್ಕೆ ಬಂದಾಗಲೂ BSY ಒಂಥರ ಜಾತ್ಯಾತೀತ ವ್ಯಕ್ತಿಯೇ. ಬಿಜೆಪಿಯ ಹಾರ್ಡ್‌ಕೋರ್ ವಿಚಾರಗಳಾದ ಗೋಹತ್ಯೆ, ಮತಾಂತರ ನಿಷೇಧ, ಹಿಂದು ಕಾರ್ಯಕರ್ತರ ಹತ್ಯೆ, ಜಮ್ಮು ಕಾಶ್ಮೀರ ಸೇರಿ ಎಲ್ಲದರ ಕುರಿತೂ ಯಡಿಯೂರಪ್ಪ ಅವರಿಗೆ ಒಲವಿದೆ. ಆದರೆ ತೀರಾ ಅದಕ್ಕೇ ಅಂಟಿಕೊಂಡಿಲ್ಲ. ಪಕ್ಷ ಸೂಚನೆ ನೀಡಿದಾಗ ಈ ವಿಚಾರಗಳಲ್ಲಿ ಒಂದು ಲಿಖಿತ ಹೇಳಿಕೆ ನೀಡಿ ಹೋಗುವುದು ಅಷ್ಟೆ. ಅವರ ಆದ್ಯತೆಗಳು ಬೇರೆ.
ಅಲ್ಪಸಂಖ್ಯಾತರು ಬಹುಸಂಖ್ಯಾತರೆನ್ನದೆ ಯೋಜನೆಗಳನ್ನು ಘೋಷಿಸುವುದು, ಮಠ ಮಾನ್ಯಗಳನ್ನು ಹತ್ತಿರ ಮಾಡಿಕೊಳ್ಳುವುದು. ವೀರಶೈವ ಲಿಂಗಾಯತ ಸಮುದಾಯದವರು ತಮಗಿಂತ ಮೇಲೆ ಏರಬಾರದು ಎನ್ನುವ ಒಂದು ವಿಚಾರ ಹೊರತುಪಡಿಸಿ ಪ್ರಪಂಚದ ಎಲ್ಲ ಜಾತಿಯ ಕಾರ್ಯಕರ್ತ, ನಾಯಕನನ್ನೂ ಅವರು ಬೆಳೆಸಿದರು ಎಂಬ ಮಾತು ಬಿಜೆಪಿ ವಲಯದಲ್ಲೇ ಇದೆ. ಅಷ್ಟರ ಮಟ್ಟಿಗೆ ಅವರು ಜಾತ್ಯಾತೀತರು. ಈ ಕಾರಣಕ್ಕಾಗಿಯೇ, ಬಿಜೆಪಿಯನ್ನು ಬದ್ಧ ಧ್ವೇಷಿಸುವವರೂ ಯಡಿಯೂರಪ್ಪ ಅವರನ್ನು ಇಷ್ಟಪಡುತ್ತಾರೆ. ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದಲ್ಲೂ ಅವರ ವಿಶೇಷ ಫ್ಯಾನ್ಸ್ ಇದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್‌ನೊಂದಿಗೂ ಇರುವ ಸಖ್ಯದ ಮೂಲಕ ಬಿಜೆಪಿ ಹೈಕಮಾಂಡ್‌ಗೆ ಆಗಿಂದಾಗ್ಗೆ ಟಾಸ್ಕ್ ಕೊಟ್ಟವರು ಯಡಿಯೂರಪ್ಪ.
ಇದನ್ನೂ ಓದಿ | ಯಡಿಯೂರಪ್ಪ ಸರ್ಜಿಕಲ್ ಸ್ಟ್ರೈಕ್ ಫೇಲ್: ಬಿಜೆಪಿಯಲ್ಲಿ ಸಂತೋಷ್ ಮೇಲುಗೈ
ತಾವು ಹೇಳಿದ ಅಭ್ಯರ್ಥಿಗೆ ಟಿಕೆಟ್ ಕೊಡದಿದ್ದರೆ ಏನು ಮಾಡಬೇಕು ಗೊತ್ತಿದೆ ಎನ್ನುವ ಧೋರಣೆ. ಈದೀಗ ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಜತೆಗೊಂದು ಏರ್‌ಪೋರ್ಟ್ ಸೆಲ್ಫಿಗೆ ಪೋಸ್ ಕೊಟ್ಟಿದ್ದಾರಲ್ಲ ಹಾಗೆ. ನನಗೆ ಪಾರ್ಟಿ ಸರ್ಕಲ್ ಮೀರಿ ಫ್ರೆಂಡ್‌ಷಿಪ್ ಇದೆ ಎನ್ನುವುದನ್ನು ಒಮ್ಮೊಮ್ಮೆ ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿ ಮೂಲಕ, ಕೆಲವೊಮ್ಮೆ ಕಾಂಗ್ರೆಸ್ ನಾಯಕರ ಮೂಲಕ ತೋರಿಸಿಕೊಟ್ಟಿದ್ದಾರೆ.
ಇಷ್ಟೆಲ್ಲ ಪವರ್‌ಫುಲ್ ಯಡಿಯೂರಪ್ಪ ಅವರು 78 ವರ್ಷ 6 ತಿಂಗಳು ಮುಗಿಸಿದ್ದಾಗ ಬಿಜೆಪಿ ವರಿಷ್ಠರು ರಾಜೀನಾಮೆ ಪಡೆದರು. ತಾನು ಸ್ವಯಿಚ್ಛೆಯಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದರೂ ಅವರ ಧ್ವನಿ ನಡುಗುತ್ತಿತ್ತು. ʼಮುಖ್ಯಮಂತ್ರಿಯಾದರೂ ಮಂತ್ರಿಮಂಡಲ ರಚಿಸಲು ಅವಕಾಶ ನೀಡಲಿಲ್ಲ, ಪ್ರವಾಹ ಬರಗಾಲದ ಸಮಯದಲ್ಲಿ ನಾನೇ ಎಲ್ಲ ಕಡೆ ಓಡಾಡಬೇಕಾಯಿತುʼ ಎಂದು ತಮಗಾದ ನೋವನ್ನೂ ಹಂಚಿಕೊಂಡು 2021ರ ಜುಲೈ 26ರಂದು ರಾಜೀನಾಮೆ ನೀಡಿದರು.
ಯಡಿಯೂರಪ್ಪ ಅವರ ರಾಜಕೀಯ ಇಲ್ಲಿಗೆ ಮುಗಿಯಿತು ಎಂದೇ ಎಲ್ಲರೂ ಭಾವಿಸಿದ್ದರು. ಅವರ ಸ್ಥಾನಕ್ಕೆ ಪುತ್ರ ಬಿ.ವೈ. ವಿಜಯೇಂದ್ರ ಅವರನ್ನು ಪ್ರತಿಷ್ಠಾಪನೆ ಮಾಡುವ ಕಾರ್ಯ ಆರಂಭವಾಗುತ್ತದೆ ಎನ್ನಲಾಗಿತ್ತು. ಈ ಕುರಿತು ಒಂದೆರಡು ಪ್ರಯತ್ನಗಳು ನಡೆದವಾದರೂ ಪೂರ್ಣ ಪ್ರಮಾಣದಲ್ಲಿ ಇನ್ನೂ ಫಲ ನೀಡಿಲ್ಲ. ಈ ನಡುವೆ ಕಳೆದೊಂದು ವಾರದಿಂದ ಯಡಿಯೂರಪ್ಪ ಫುಲ್ ಆಕ್ಟಿವ್ ಆಗಿದ್ದಾರೆ.
ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ಚುನಾವಣೆಗೆ ಮತ್ತದೆ ಹಳೇ ಖದರ್‌ನಲ್ಲಿ ಓಡಾಡುತ್ತಿದ್ದಾರೆ. ಮಂಗಳವಾರ ವಿಜಯಪುರದಲ್ಲಿ ಮಾತನಾಡುತ್ತ ತಮ್ಮ ಮೇಲಿನ ಅನುಮಾನಗಳಿಗೆ ತೆರೆ ಎಳೆಯುವ ಕೆಲಸ ಮಾಡಿದ್ದಾರೆ. ” ಇನ್ನು ಹತ್ತು ವರ್ಷ ಪ್ರವಾಸ ಮಾಡುತ್ತೇನೆ. 2023ರ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ಕೆಲಸ ಆರಂಭಿಸಿದ್ದೇನೆ. ಯಡಿಯೂರಪ್ಪನಿಗೆ ಎಪ್ಪತ್ತೊಂಭತ್ತು, ಎಂಭತ್ತು ವರ್ಷ ಆಗಿದೆ ಎಂದು ಯಾರೂ ಚಿಂತಿಸಬೇಕಿಲ್ಲ. ಇನ್ನೂ ಹತ್ತು ವರ್ಷ ಅಂದರೆ ತೊಂಭತ್ತು ವರ್ಷವಾಗುವವರೆಗೂ ಇದೇ ರೀತಿ ಕೆಲಸ ಮಾಡುತ್ತೇನೆ. ಅದಕ್ಕೆ ನಿಮ್ಮೆಲ್ಲರ ಬೆಂಬಲ, ಆಶೀರ್ವಾದ ಹೀಗೇ ಇರಲಿʼ ಎಂದಿದ್ದಾರೆ.
ರಾಜಕೀಯದ ರಾಜಾಹುಲಿ ಮತ್ತೆ ಗುಟುರು ಹಾಕಿದೆ. ಇನ್ನೂ ಹತ್ತು ವರ್ಷ ಕ್ರಿಯಾಶೀಲವಾಗಿರುತ್ತೇನೆ ಎನ್ನುವುದು ಪಕ್ಷದಲ್ಲಿ ಕೆಲವರಿಗೆ ಸಂತಸವನ್ನೂ ಕೆಲವರಿಗೆ ಆತಂಕವನ್ನೂ ಉಂಟುಮಾಡಿರಲಿಕ್ಕೆ ಸಾಕು.
ಇದನ್ನೂ ಓದಿ | ನನಗೆ ಸಾಮರ್ಥ್ಯ ಇದೆ: BJP ಹೈಕಮಾಂಡ್‌ಗೆ ಪರೋಕ್ಷ ಸಂದೇಶ ನೀಡಿದ ವಿಜಯೇಂದ್ರ ?