Site icon Vistara News

Cauvery Dispute : ಕಾವೇರಿ ಕೊಳ್ಳದಲ್ಲಿ ಜನಜಾಗೃತಿ ಯಾತ್ರೆಗೆ ಬಿಜೆಪಿ ನಿರ್ಧಾರ; ಕೇಂದ್ರಕ್ಕೆ ಪತ್ರ ಬರೆದ ಸಿಎಂ ಮೇಲೆ ಸಿಟ್ಟು

Basavaraja Bommai Cauvery

ಬೆಂಗಳೂರು: ಕಾವೇರಿ ನದಿ ನೀರು ವಿಷಯದಲ್ಲಿ (Cauvery dispute) ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ನಡೆಸಲು ಬಿಜೆಪಿ ಮುಂದಾಗಿದೆ. ಆದರೆ, ಸೆಪ್ಟೆಂಬರ್‌ 21ರಂದು ಸುಪ್ರೀಂಕೋರ್ಟ್‌ ವಿಚಾರಣೆ (Supreme court hearing) ಗಮನಿಸಿ ರೂಪುರೇಷೆಯನ್ನು ಸಿದ್ಧಪಡಿಸಲಾಗುವುದು ಎಂದು ತಿಳಿಸಿದೆ. ಕಾವೇರಿ ವಿವಾದ ಸುಪ್ರೀಂಕೋರ್ಟ್‌ನಲ್ಲಿರುವಾಗ ಕೇಂದ್ರ ಸರ್ಕಾರಕ್ಕೆ (central government) ಪತ್ರ ಬರೆದ ರಾಜ್ಯ ಸರ್ಕಾರದ ನಡೆಯನ್ನು ಅದು ಖಂಡಿಸಿದೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾವೇರಿ ಜಲಾನಯನ ಪ್ರದೇಶದ ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು ಮತ್ತು ಹಾಸನ ಜಿಲ್ಲೆಗಳ ಎಲ್ಲ ತಾಲ್ಲೂಕುಗಳಲ್ಲಿ ಕಾವೇರಿ ಜನಜಾಗೃತಿ ಯಾತ್ರೆಯನ್ನು ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು.

ಸೆಪ್ಟೆಂಬರ್‌ 21ರ ಸುಪ್ರೀಂ ಕೋರ್ಟ್ ತೀರ್ಪಿನ ಸಂಬಂಧ ಸರಕಾರದ ನಡೆಯನ್ನು ಕಾದು ನೋಡುತ್ತೇವೆ. ಬೆಂಗಳೂರಿನ 28 ಕ್ಷೇತ್ರಗಳಲ್ಲೂ ಜನಜಾಗೃತಿ ಯಾತ್ರೆಯನ್ನು ಮಾಡುತ್ತೇವೆ. ಪಾದಯಾತ್ರೆ, ಧರಣಿ, ಸತ್ಯಾಗ್ರಹದ ರೂಪದಲ್ಲಿ ಹೋರಾಟ ಇರಲಿದೆ ಎಂದರು. ಈ ಕುರಿತು ಇಂದಿನ ಬಿಜೆಪಿ ಮುಖಂಡರ ಸಭೆಯಲ್ಲಿ ನಿರ್ಧರಿಸಿದ್ದಾಗಿ ತಿಳಿಸಿದರು. ಹೋರಾಟದ ಮುಂದಿನ ರೂಪುರೇಷೆಯನ್ನು 21ರಂದು ನಿರ್ಧರಿಸಲಾಗುವುದು ಎಂದು ತಿಳಿಸಿದರು.

ಕೇಂದ್ರಕ್ಕೆ ಪತ್ರ ಬರೆದದ್ದು ಯಾಕೆ? ಇದು ರಾಜಕಾರಣವಲ್ಲವೇ?

ಕಾವೇರಿ ವಿಚಾರದಲ್ಲಿ ರಾಜಕಾರಣ ಮಾಡಬಾರದು ಎಂದು ನಾವು ನಿರ್ಧರಿಸಿದ್ದೆವು. ಆದರೆ, ಸುಪ್ರೀಂ ಕೋರ್ಟಿನಲ್ಲಿ ಪ್ರಕರಣ ಇರುವಾಗ ಮುಖ್ಯಮಂತ್ರಿಗಳು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಮಾತುಕತೆಗೆ ಕೋರಿದ್ದಾರೆ. ಮಾತುಕತೆಗೆ ತಮಿಳುನಾಡು, ಕೇರಳ, ಪಾಂಡಿಚೇರಿ ಬರುವುದೇ? ಇದೆಲ್ಲ ಅವರಿಗೆ ಗೊತ್ತಿದ್ದರೂ ಕೂಡ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಕೇಂದ್ರದತ್ತ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ ಎಂದು ಟೀಕಿಸಿದರು. ರಾಜ್ಯದ ನೀರಿನ ಹಕ್ಕನ್ನು ರಕ್ಷಿಸಲು ಈ ರಾಜ್ಯ ಸರಕಾರಕ್ಕೆ ಬದ್ಧತೆ, ದಕ್ಷತೆ ಮತ್ತು ಯೋಗ್ಯತೆ ಇಲ್ಲ ಎಂದು ಬೊಮ್ಮಾಯಿ ಆಕ್ಷೇಪಿಸಿದರು.

ಬರ, ಪ್ರವಾಹ ಬಂದಾಗ ನಾವು ಕೇಂದ್ರವನ್ನು ಕಾದು ಕುಳಿತಿದ್ದೇವಾ?

ಬರಗಾಲ ವಿಚಾರ ಬಂದಾಗ ಕೇಂದ್ರಕ್ಕೆ ಕಾನೂನು ಬದಲಿಸಲು ಕೋರಿದರು. ಯಡಿಯೂರಪ್ಪ ಅವರ ಕಾಲದಲ್ಲಿ ಬರಗಾಲ, ಪ್ರವಾಹ ಬಂದಿತ್ತು. ನಾವು ಕೇಂದ್ರಕ್ಕೆ ಕಾಯುತ್ತ ಕೂತಿದ್ದೇವಾ? ಬರಗಾಲ ಘೋಷಿಸಿ ಪರಿಹಾರ ಕೊಟ್ಟಿದ್ದೇವೆ. ಪ್ರವಾಹ ಬಂದಾಗಲೂ ಪರಿಹಾರ ಕೊಟ್ಟಿದ್ದೇವೆ. ಹಲವು ಪಟ್ಟು ಪರಿಹಾರವನ್ನು ಕೊಟ್ಟಿದ್ದೇವೆ. ಕೇಂದ್ರವನ್ನು ಕಾಯಲಿಲ್ಲ; ಎಲ್ಲ ಇಲಾಖೆಗಳಿಗೆ ರಾಜ್ಯದ ಬೊಕ್ಕಸದಿಂದ ಹಣ ಬಿಡುಗಡೆ ಮಾಡಿ ಬರಗಾಲ ಕಾಮಗಾರಿಗಳನ್ನು ಮಾಡಿದ್ದೇವೆ. ಈ ಕೆಲಸ ಇವರಿಗೆ ಯಾಕೆ ಮಾಡಲಾಗುತ್ತಿಲ್ಲ? ಮಾತೆತ್ತಿದರೆ ಪತ್ರ ಬರೆಯುತ್ತಾರೆ. ಪತ್ರ ಬರೆದರೆ ಜವಾಬ್ದಾರಿ ಮುಗಿಯಿತೇ ಎಂದು ಕೇಳಿದರು.

ಇದೆಲ್ಲ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಪ್ರಯತ್ನ

ಹೊಣೆಯಿಂದ ನುಣುಚಿಕೊಳ್ಳಲು ಪತ್ರ ಬರೆಯುವ ಪ್ರವೃತ್ತಿ ಅತ್ಯಂತ ಖಂಡನೀಯ. ಮಾತುಕತೆ ಮಾಡುವುದಿದ್ದರೆ ಸ್ಟಾಲಿನ್ ಜೊತೆ ಮಾತನಾಡಬೇಕಿತ್ತು. ಇಂಡಿಯದ ಮಿತ್ರ ಪಕ್ಷದ ಸ್ಟಾಲಿನ್ ಅವರು ಮಾತುಕತೆಗೆ ಬರುತ್ತಾರಾ? ಪತ್ರ ಬರೆದು ನೋಡಲಿ ಎಂದು ಆಗ್ರಹಿಸಿದರು ಬೊಮ್ಮಾಯಿ.

ನೀರಿಲ್ಲದೆ ನಷ್ಟವಾದರೆ ಸರಕಾರ ಎಕರೆಗೆ 25 ಸಾವಿರ ರೂ ಪರಿಹಾರ ಕೊಡಬೇಕು

ಈಗಾಗಲೇ ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ, ಹಾಸನದಲ್ಲಿ 1 ಲಕ್ಷ ಹೆಕ್ಟೇರಿಗಿಂತ ಹೆಚ್ಚು ಬೆಳೆ ನಾಶವಾಗಿದೆ. ಕೃಷಿ ಇಲಾಖೆಯವರು ಖುಷ್ಕಿ, ಅರೆ ಖುಷ್ಕಿ ಬೆಳೆ ಬೆಳೆಯಲು ಸೂಚಿಸಿದ್ದಾರೆ. ಬೆಳೆದು ನಿಂತ ಕಬ್ಬು, ಭತ್ತ, ಮೆಕ್ಕೆಜೋಳ, ತೋಟಗಾರಿಕಾ ಬೆಳೆಗಳ ಪರಿಸ್ಥಿತಿ ಏನು? ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರು ಕೊಡದೆ ನಷ್ಟ ಅನುಭವಿಸಿದ ರೈತರಿಗೆ ಪ್ರತಿ ಎಕರೆಗೆ 25 ಸಾವಿರ ಪರಿಹಾರವನ್ನು ರಾಜ್ಯ ಸರಕಾರ ಕೊಡಬೇಕು ಎಂದು ಬೊಮ್ಮಾಯಿ ಆಗ್ರಹಿಸಿದರು.

ಪರಿಹಾರ ನೀಡದಿದ್ದರೆ ಶಾಶ್ವತವಾಗಿ ಸಾಲಬಾಧೆಯಿಂದ ಅವರು ಬಳಲುತ್ತಾರೆ. ಕೂಡಲೇ ಆ ಪ್ರದೇಶದಲ್ಲಿ ಸಾಲ ಮನ್ನಾ ಮಾಡುವಂತೆ ಅವರು ಒತ್ತಾಯಿಸಿದರು. 21ರಂದು ಸುಪ್ರೀಂ ಕೋರ್ಟಿನಲ್ಲಿ ಮತ್ತೆ ವಿಚಾರಣೆ ನಡೆಯಲಿದ್ದು, ಕಾನೂನು ಸಮರವನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಸಲಹೆ ನೀಡಿದರು.

ಡಿ.ಕೆ. ಶಿವಕುಮಾರ್‌ಗೆ ದೊಡ್ಡ ವಕೀಲರು ಗೊತ್ತು, ರಾಜ್ಯ ಪರ ವಾದ ಮಾಡಿಸಲಿ

ಇಲ್ಲಿನ ಪರಿಸ್ಥಿತಿ ಕುರಿತು ಸುಪ್ರೀಂ ಕೋರ್ಟಿನ ಮುಂದೆ ವಾಸ್ತವ ಚಿತ್ರಣ ನೀಡಬೇಕಿದೆ. ಅಲ್ಲಿ ಸರಿಯಾಗಿ ವಾದವನ್ನೇ ಮಾಡಿಲ್ಲ. ಸಿಡಬ್ಲ್ಯುಎಂಎ ಮುಂದೆ ಕೂಡ ಸರಿಯಾಗಿ ವಾದ ಮಂಡನೆ ಆಗಬೇಕಿದೆ ಎಂದ ಅವರು, ಜನಸಂಪನ್ಮೂಲ ಮತ್ತು ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರಿಗೆ ಬಹಳ ಹಿರಿಯ ವಕೀಲರು ಚಿರಪರಿಚಿತರು; ಅವರು ಶಿವಕುಮಾರರ ಕೇಸಿನಲ್ಲಿ ವಾದಿಸಿ ಯಶಸ್ವಿಯೂ ಆಗುತ್ತಾರೆ. ಅದೇ ಹಿರಿಯ ವಕೀಲರು ಅಥವಾ ಬೇರೆ ಹಿರಿಯರನ್ನು ನೇಮಿಸಿ ರಾಜ್ಯದ ಹಿತಾಸಕ್ತಿ ಯಾಕೆ ಕಾಪಾಡಬಾರದು ಎಂದು ಪ್ರಶ್ನಿಸಿದರು.

ಕಾವೇರಿ ದಕ್ಷಿಣ ಕರ್ನಾಟಕದ ಜೀವನದಿ. ನೀರಿನ ಬರ ಬಂದರೆ ಜನಜೀವನ ಸ್ತಬ್ಧವಾಗಲಿದೆ. ಯಾವುದೇ ಕಾರಣಕ್ಕೂ ನೀರನ್ನು ಬಿಡದೇ ಇರಲು ಆಗ್ರಹಿಸಿ ಹೋರಾಟ ಮಾಡಲಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ಪ್ರಕಟಿಸಿದರು. ಕುಂಟುನೆಪ ಹೇಳಿ ನೀರು ಬಿಟ್ಟಲ್ಲಿ ಉಗ್ರವಾದ ಹೋರಾಟ ಮಾಡುವುದಾಗಿ ತಿಳಿಸಿದರು.

ಇದನ್ನೂ ಓದಿ: Cauvery Water Dispute: ಸಿಡಬ್ಲ್ಯುಆರ್‌ಸಿ ಆದೇಶ ಮರು ಪರಿಶೀಲಿಸುವಂತೆ ಕೇಂದ್ರ ಜಲ ಸಂಪನ್ಮೂಲ ಸಚಿವರಿಗೆ ಸಿಎಂ ಪತ್ರ

ಎರಡರ ಬದಲು ಮೂರು ಬೆಳೆ ಬೆಳೆಯಲು ತ.ನಾಡು ಹುನ್ನಾರ

ತಮಿಳುನಾಡು ರಾಜ್ಯವು ನಿಗದಿತ ಮಿತಿಗಿಂತ ಅತ್ಯಂತ ಹೆಚ್ಚು ಕುರುವೈ ಬೆಳೆಯನ್ನು ಅಕ್ರಮವಾಗಿ ಬೆಳೆಯುತ್ತಿದೆ. ಟ್ರ್ರಿಬ್ಯೂನಲ್ ಪ್ರಕಾರ 32 ಟಿಎಂಸಿ ಬಳಸಬೇಕಿದ್ದು, 67 ಟಿಎಂಸಿ ಬಳಕೆಯಾಗಿದೆ ಎಂದರು. ಕಾವೇರಿ ವಿಚಾರದಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. ಜೂನ್ ತಿಂಗಳಿನಲ್ಲೇ ಸಮರ್ಪಕ ನಿರ್ವಹಣೆ ಮಾಡಬೇಕಿದ್ದರೂ ಅದನ್ನು ಮಾಡಿಲ್ಲ. ಎರಡು ಬೆಳೆ ಬದಲಾಗಿ 3 ಬೆಳೆ ಬೆಳೆಯುವ ಹುನ್ನಾರ ತಮಿಳುನಾಡಿನದು ಎಂದು ಆಕ್ಷೇಪಿಸಿದರು.

ರಾಜ್ಯದಲ್ಲಿ ವ್ಯತಿರಿಕ್ತ ಪರಿಸ್ಥಿತಿ ಇದೆ. ರಾಜ್ಯದ ಶೇ 30ರಷ್ಟು ಬೇಡಿಕೆಯನ್ನೂ ಈಡೇರಿಸಿಲ್ಲ. ಮಂಡ್ಯ ಜಿಲ್ಲೆಯಲ್ಲಿ 33 ಟಿಎಂಸಿ ಬದಲು 7.5 ಟಿಎಂಸಿ ಕೊಡಲಾಗಿದೆ. ಕುಡಿಯುವ ನೀರಿನ ಪರಿಸ್ಥಿತಿಯೂ ಗಂಭೀರವಾಗುತ್ತಿದೆ. ಬೆಂಗಳೂರು, ಹಾಸನ, ಮಂಡ್ಯ ಮತ್ತಿತರ ಜಿಲ್ಲೆಗಳಿಗೆ 18 ಟಿಎಂಸಿ ಬೇಕಿದೆ. ಆದರೆ, ಲೈವ್ ಸ್ಟೋರೇಜ್ 13 ಟಿಎಂಸಿ ಮಾತ್ರ ಇದೆ. ಇಂಥ ಗಂಭೀರ ಪರಿಸ್ಥಿತಿ ಇದ್ದರೂ ಸಿಡಬ್ಲ್ಯುಆರ್‍ಸಿಯಲ್ಲಿ ಸರಿಯಾಗಿ ವಾದ ಮಂಡಿಸಿಲ್ಲ ಎಂದು ವಿವರಿಸಿದರು.

ಹಿರಿಯ ನಾಯಕರಾದ ಬಿ.ಎಸ್‌. ಯಡಿಯೂರಪ್ಪ, ಸದಾನಂದ ಗೌಡ, ಗೋವಿಂದ ಕಾರಜೋಳ ಮೊದಲಾದ ನಾಯಕರು ಉಪಸ್ಥಿತರಿದ್ದರು.

Exit mobile version