ಚಿತ್ರದುರ್ಗ: ಪಠ್ಯಪುಸ್ತಕ ಸಮಿತಿ ವಿಸರ್ಜನೆ ಮಾಡಲಾಗಿದೆಯೇ ವಿನಃ ಆರ್‌ಎಸ್‌ಎಸ್ ಸಂಸ್ಥಾಪಕ ಡಾ. ಕೇಶವ ಬಲಿರಾಂ ಹೆಡಗೆವಾರ್ ಅವರ ಪಠ್ಯ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಅಚ್ಚರಿಯ ವಿಚಾರ ಏನೆಂದರೆ, ಕಳೆದು ಸುಮಾರು ಒಂದು ತಿಂಗಳಿಂದ ರಾಜ್ಯಾದ್ಯಂತ ವಿವಾದ ನಡೆಯುತ್ತಿದ್ದರೂ, ಸ್ವತಃ ಬೊಮ್ಮಾಯಿಯವರೇ ಹೇಳಿಕೆಗಳನ್ನು ನೀಡಿದ್ದರೂ ಪಠ್ಯಪುಸ್ತಕಗಳನ್ನು CM ಬೊಮ್ಮಾಯಿ ನೋಡಿದ್ದು ,ಓದಿದ್ದು ಜೂನ್ 3ರಂದೇ ಮೊದಲ ಬಾರಿಗಂತೆ!
ಜಿಲ್ಲೆಯ ಹಿರಿಯೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಆಗಮಿಸಿ ಅವರು, ದೇವರಕೊಟ್ಟ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಅನೇಕ ದಿನಗಳ ಚರ್ಚೆ ವಾಗ್ವಾದದ ನಂತರ ರೋಹಿತ್ ಚಕ್ರತೀರ್ಥ ಸಮಿತಿಯನ್ನು ಶುಕ್ರವಾರವಷ್ಟೆ ಸಿಎಂ ಬೊಮ್ಮಾಯಿ ವಿಸರ್ಜನೆ ಮಾಡಿದ್ದರು.
ಇದನ್ನೂ ಓದಿ | ರೋಹಿತ್ ಚಕ್ರತೀರ್ಥ ಅವರನ್ನು ಕೈಬಿಡುವ ಕುರಿತು ಶಿಕ್ಷಣ ಸಚಿವರ ಜತೆ ಚರ್ಚೆ: ಸಿಎಂ ಬೊಮ್ಮಾಯಿ
ರೋಹಿತ್ ಚಕ್ರತೀರ್ಥ ಅವರ ಸಮಿತಿಯು ತನ್ನ ಕೆಲಸವನ್ನು ಪೂರ್ಣಗೊಳಿಸಿದೆ. ಕೆಲಸ ಪೂರ್ಣಗೊಂಡ ನಂತರ ಸಮಿತಿಯನ್ನು ವಿಸರ್ಜನೆ ಮಾಡಲಾಗಿದೆ. ಸಮಿತಿಯನ್ನು ವಜಾ ಮಾಡಿಲ್ಲ. ಹೀಗಾಗಿ ಸದ್ಯಕ್ಕೆ ಇನ್ನೊಂದು ಸಮಿತಿ ರಚನೆ ಮಾಡುವ ಪ್ರಶ್ನೆಯೇ ಇಲ್ಲ ಎಂದು CM ಬೊಮ್ಮಾಯಿ ಸ್ಪಷ್ಟಪಡಿಸಿದರು.
ಬಸವಣ್ಣನವರ ಕುರಿತು ತಪ್ಪು ಮಾಹಿತಿ ನೀಡಲಾಗಿದೆ ಎಂಬ ಕುರಿತು ಪ್ರತಿಕ್ರಿಯಿಸಿದ ಬೊಮ್ಮಾಯಿ, ನಮ್ಮದು ಬಸವ ಪಥ ಸರ್ಕಾರ ಎಂದು ಈ ಹಿಂದೆಯೂ ಹೇಳಿದ್ದೇನೆ. ಬಸವಣ್ಣನವರ ಕುರಿತು ಸಮಗ್ರ ತಿಳುವಳಿಕೆ ಬರುವ ನಿಟ್ಟಿನಲ್ಲಿ ಅನೇಕ ಕಾರ್ಯ ಮಾಡಬೇಕಿದೆ. ಆದರೆ ರೋಹಿತ್ ಚಕ್ರತೀರ್ಥ ಸಮಿತಿಯೇ ತಪ್ಪು ಮಾಡಿದೆ ಎಂದು ಸಾಣೆಹಳ್ಳಿ ಶ್ರೀಗಳು ತಿಳಿಸಿದಂತೆ ಆಗಿಲ್ಲ. ನಾನೂ ಇಷ್ಟು ದಿನ ಪಠ್ಯಪುಸ್ತಕ ಓದಿರಲಿಲ್ಲ. ಶುಕ್ರವಾರ ಎಲ್ಲವನ್ನೂ ತರಿಸಿಕೊಂಡು ನೋಡಿದ್ದೇನೆ. 2015ರಲ್ಲಿ ಪ್ರೊ. ಬರಗೂರು ರಾಮಚಂದ್ರಪ್ಪ ಸಮಿತಿ ನೀಡಿದ ಪಠ್ಯಕ್ಕೂ ಇದೀಗ ರೋಹಿತ್ ಚಕ್ರತೀರ್ಥ ಸಮಿತಿಗೂ ಇರುವುದು ಒಂದೇ ವಾಕ್ಯದ ವ್ಯತ್ಯಾಸ. ಸಾಣೆಹಳ್ಳಿ ಶ್ರೀಗಳು ತಿಳಿಸುತ್ತಿರುವ ತಪ್ಪು ಬರಗೂರು ರಾಮಚಂದ್ರಪ್ಪ ಸಮಿತಿ ಪರಿಷ್ಕರಣೆ ಸಂದರ್ಭದಲ್ಲಿ ಆದಂತಹದ್ದು. ಮುಂದೆ ಬಸವಣ್ಣನವರ ಕುರಿತು ಯಾವ ವಿಚಾರ ಸೇರ್ಪಡೆ ಮಾಡಬೇಕೆಂದು ತೀರ್ಮಾನ ಮಾಡುತ್ತೇವೆ ಎಂದರು.
ಆರ್‌ಎಸ್‌ಎಸ್ ಸಂಸ್ಥಾಪಕ ಡಾ. ಕೇಶವ ಬಲಿರಾಂ ಹೆಡಗೆವಾರ್ ಅವರ ಪಠ್ಯವನ್ನು ತೆಗೆದುಹಾಕಲಾಗುತ್ತದೆಯೇ ಎಂಬ ಪ್ರಶ್ನೆಗೆ ʼʼಹೆಡಗೆವಾರ್ ಪಠ್ಯವನ್ನು ಏಕೆ ತೆಗೆಯಬೇಕು? ಅವರ ವಿಚಾರದ ಪಠ್ಯದಲ್ಲಿ ತಪ್ಪೇನಿದೆ?ʼʼ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಮರುಪ್ರಶ್ನೆ ಮಾಡಿದರು.
ಇದನ್ನೂ ಓದಿ | ರೋಹಿತ್ ಚಕ್ರತೀರ್ಥ ಸಮಿತಿ ಮೇಲಿನ ಆರೋಪಕ್ಕೆ ಸಚಿವ ನಾಗೇಶ್‌ರವರ ಸಂಪೂರ್ಣ ವರದಿ ಇಲ್ಲಿದೆ