Site icon Vistara News

CM Siddaramaiah: ಸಿಎಂ ವಿರುದ್ಧದ ಪ್ರಾಸಿಕ್ಯೂಷನ್;​ ವಾದ ಆಲಿಸಿ ಸೆ.2ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್‌

Prosecution against CM Hc adjourns hearing to September 2

ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಾಸಿಕ್ಯೂಷನ್ ಸಂಬಂಧ ವಾದ ಆಲಿಸಿದ ಹೈಕೋರ್ಟ್‌ ಸೆ.2ಕ್ಕೆ ಅರ್ಜಿ ವಿಚಾರಣೆಯನ್ನು ಮತ್ತೆ ಮುಂದೂಡಿದೆ. ಮುಡಾ ಹಗರಣದಲ್ಲಿ (Muda Scam) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವಿರುದ್ಧ ರಾಜ್ಯಪಾಲರ ಪ್ರಾಸಿಕ್ಯೂಷನ್‌ಗೆ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯು ವಾದ ಮಂಡನೆ ಬಳಿಕ ಶನಿವಾರ (ಆ.31) ಮಧ್ಯಾಹ್ನ 2:30ಕ್ಕೆ ಮುಂದೂಡಿಕೆಯಾಗಿತ್ತು. ಶನಿವಾರ ಬೆಳಗ್ಗೆ 10:30ಕ್ಕೆ ಶುರುವಾಗಿದ್ದ ವಿಚಾರಣೆಯಲ್ಲಿ ಸಿಎಂ ವಿರುದ್ಧದ ಪ್ರಾಸಿಕ್ಯೂಷನ್​ಗೆ ರಾಜ್ಯಪಾಲರಿಂದ ವಿವೇಚನೆ ಬಳಸಿಯೇ ಅನುಮತಿ ನೀಡಲಾಗಿದೆ ಎಂದು ವಕೀಲ ತುಷಾರ ಮೆಹ್ತಾ ವಾದ ಮಂಡಿಸಿದ್ದರು. ಬಳಿಕ ಸ್ನೇಹಮಯಿ‌ಕೃಷ್ಣ ಪರ ಹಿರಿಯ ವಕೀಲ‌ ಮಣೀಂಧರ್ ಸಿಂಗ್ ವಾದ ಆರಂಭಿಸಿ, ಸರ್ಕಾರದ ಬದಲು ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಯಬೇಕಿದ್ದು ಮನವಿ ಮಾಡಿದರು. ಮಣೀಂದರ್ ಸಿಂಗ್ ಮುಂದಿನ ವಾದ ಸೋಮವಾರ ಮಂಡಿಸುವುದಾಗಿ ಮನವಿ ಮಾಡಿದಾಗ, ವಿಚಾರಣೆಯನ್ನೂ ಶನಿವಾರ ಮಧ್ಯಾಹ್ನ 2.30 ಕ್ಕೆ ಮುಂದೂಡಿತು. ಮಧ್ಯಾಹ್ನದ ನಂತರ ಪ್ರತಿವಾದಿ ಪ್ರದೀಪ್‌ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ, ಅಬ್ರಹಾಂ ಪರ ವಕೀಲ ರಂಗನಾಥ ರೆಡ್ಡಿ ವಾದ ಮಂಡಿಸಿದ್ದರು.

ಸಿಎಂ ಪಾತ್ರ ಏನು ಎಂದು ಪ್ರಶ್ನಿಸಿದ‌ ಜಡ್ಜ್

ಈ ವೇಳೆ ಮಧ್ಯ ಪ್ರವೇಶಿಸಿದ ನ್ಯಾಯಮೂರ್ತಿಗಳು ಬಹಳ ಜನ ವಾದ ಮಂಡನೆ ಮಾಡಿದ್ದೀರಿ. ಆದರೆ ಇದರಲ್ಲಿ ಸಿಎಂ ಪಾತ್ರ ಏನು ಎಂದು ಯಾರು ಹೇಳಿಲ್ಲ. ಸಿಎಂ ಪಾತ್ರದ ಬಗ್ಗೆ ನೀವು ಉತ್ತರಿಸುತ್ತೀರಾ ಎಂದು ದೂರುದಾರರ ಪರ ವಕೀಲರಿಗೆ ಪ್ರಶ್ನೆ ಮಾಡಿದರು. ಈ ವೇಳೆ ಎಜಿ ಶಶಿಕಿರಣ್ ಶೆಟ್ಟಿ ಮಧ್ಯಪ್ರವೇಶಿಸಿ, ಇವರು ಸಿಎಂ ವಿರುದ್ಧ ಆರೋಪಿಸುವುದಕ್ಕೆ ಏನು ಇಲ್ಲ.. ಹೀಗಾಗಿ ಸಿಎಂ ವಿರುದ್ಧ ಆರೋಪಗಳಿಲ್ಲವೆಂದು ಪ್ರತಿಕ್ರಿಯಿಸಿದರು.

ಮುಖ್ಯಮಂತ್ರಿಗಳ ಪಾತ್ರ, ಕ್ಯಾಬಿನೆಟ್ ನಿರ್ಣಯದ ಬಗ್ಗೆ ವಾದ ಮಂಡಿಸುತ್ತೇನೆ. ಕೆಲ ಸಂದರ್ಭಗಳಲ್ಲಿ ಕ್ಯಾಬಿನೆಟ್ ರಾಜ್ಯಪಾಲರಿಗೆ ಸಲಹೆ ನೀಡುವ ಅರ್ಹತೆ ಕಳೆದುಕೊಳ್ಳುತ್ತದೆ. ಆರ್.ಎಸ್.ನಾಯಕ್ ಪ್ರಕರಣ ಉಲ್ಲೇಖಿಸಿ ಪ್ರಭುಲಿಂಗ್ ನಾವದಗಿ ವಾದ ಶುರು ಮಾಡಿದರು. ಸಿಎಂ ಸಿದ್ದರಾಮಯ್ಯರನ್ನು ರಕ್ಷಣೆ ಮಾಡುವ ಸಲುವಾಗಿಯೇ ಕ್ಯಾಬಿನೆಟ್‌ ನಿರ್ಣಯವನ್ನು ಮಾಡಲಾಗಿದೆ. ಇಂತಹ ನಿರ್ಣಯವನ್ನು ರಾಜ್ಯಪಾಲರು ಪರಿಗಣಿಸುವ ಅಗತ್ಯವಿಲ್ಲ.

ಮುಖ್ಯಮಂತ್ರಿಗಳ ವಿರುದ್ಧ ಆರೋಪ ಬಂದಾಗ ಅದರ ವಿರುದ್ಧ ಕ್ರಮ ಕೈಗೊಳ್ಳುವ ಸಂಪೂರ್ಣ ಅಧಿಕಾರ ರಾಜ್ಯಪಾಲರಿಗಿದೆ. ಕ್ಯಾಬಿನೆಟ್ ನಿರ್ಣಯ ವಿರುದ್ಧ ರಾಜ್ಯಪಾಲರು ಕ್ರಮ ಜರಗಿಸಿದ್ದಾರೆ ಅನ್ನೋದು ಸರಿಯಲ್ಲ . ಸಿಎಂ ವಿರುದ್ಧ ಬಂದ ದೂರಿಗೆ ಕ್ರಮ ಕೈಗೊಳ್ಳುವ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡುವ ಅಧಿಕಾರ ಸರ್ಕಾರಕ್ಕಿದೆ. ಸಿಎಂ ಪ್ರಾಸಿಕ್ಯೂಷನ್ ವಿಚಾರದಲ್ಲಿ ಕ್ಯಾಬಿನೆಟ್ ನಿರ್ಧಾರ ಸಮಂಜಸವಲ್ಲಎಂದು ಸುಪ್ರೀಂಕೋರ್ಟ್‌ನ ಎ.ಕೆ.ಕ್ರೈಪಾಕ್ ಕೇಸ್ ಉಲ್ಲೇಖಿಸಿದರು. ಸಂವಿಧಾನದ 163 ಅಡಿಯಲ್ಲಿ ಸಿಎಂ ಕೂಡಾ ಕ್ಯಾಬಿನೆಟ್‌ನ ಭಾಗವಾಗಿದ್ದಾರೆ. ಹೀಗಾಗಿ ಸಿಎಂ ಹೊರತಾದ ಕ್ಯಾಬಿನೆಟ್ ಇರಲು ಸಾಧ್ಯವಿಲ್ಲ. ಕ್ಯಾಬಿನೆಟ್ ನಿರ್ಣಯವನ್ನು ರಾಜ್ಯಪಾಲರು ಪರಿಗಣಿಸಬೇಕಿಲ್ಲ.

2018ರಲ್ಲಿ ಪಿಸಿ ಆಕ್ಟ್ ಸೆ.17 ಎ ಮತ್ತು 19 ತಿದ್ದುಪಡಿ ಮಾಡಲಾಗಿದೆ. ಆದರೆ ಸೆ.17 ಎ ನಲ್ಲಿ ಆರೋಪಿಗೆ ನೋಟಿಸ್ ನೀಡಲು ಅವಕಾಶವಿಲ್ಲ. ಸೆ.19 ಅಡಿಯಲ್ಲಿ ನೋಟಿಸ್ ನೀಡಲು ಅವಕಾಶವಿದೆ. ಆರೋಪಿಗೆ ನೋಟಿಸ್ ನೀಡಿ ತನಿಖೆಗೆ ಅವಕಾಶ ನೀಡಬಾರದು. ನೋಟಿಸ್ ನೀಡಿದರೆ ತನಿಖೆಯೇ ಪೂರ್ವಾಗ್ರಹಕ್ಕೊಳಗಾಗಲಿದೆ. 17 ಎ ಹಂತದಲ್ಲಿ ರಾಜ್ಯಪಾಲರ ಕ್ರಮ ಪ್ರಶ್ನಿಸಲು ಆರೋಪಿಗೆ ಅವಕಾಶವಿಲ್ಲ. ಎಫ್‌ಐಆರ್ ದಾಖಲಾದ ಬಳಿಕವಷ್ಟೇ ಆರೋಪಿಗೆ ಅದನ್ನು ಪ್ರಶ್ನಿಸುವ ಹಕ್ಕು ಬರಲಿದೆ. ಮುಡಾ ಅಕ್ರಮದ ಕುರಿತು ಮಾಧ್ಯಮಗಳಲ್ಲಿ ಬಂದ ಸುದ್ದಿ ಆಧರಿಸಿ ತನಿಖೆಗಾಗಿ ಏಕಸದಸ್ಯ ಆಯೋಗ ರಚನೆಗೆ ಸೂಚಿಸಿದ್ದಾರೆ. ಅದರಲ್ಲಿ ಇದರಲ್ಲಿ ಸಿಎಂ ಮೇಲೆ ಆರೋಪ ಬಂದಿದೆ, ಹೀಗಾಗಿ ಅವರು ರಚಿಸಿರುವ ಕಮಿಟಿಯಿಂದ ತನಿಖೆ ಆಗಬಾರದು.

ಕಾನೂನಿನ ಪ್ರಕಾರವೇ ಈ ಕೇಸ್‌ ತನಿಖೆ ಆಗಬೇಕು . ನಿವೇಶನಗಳ ಹಂಚಿಕೆ ಬಗ್ಗೆ ಅನುಮಾನ ಸರ್ಕಾರಕ್ಕೂ ಇದೆ ತನಿಖಾ ತಂಡದ ಕಾರ್ಯವ್ಯಾಪ್ತಿಯಲ್ಲಿ ನಿಯಮ 6,7,8ರ ಬಗ್ಗೆ ಆಕ್ಷೇಪಣೆಗಳಿವೆ. ಮೇಲ್ನೋಟಕ್ಕೆ ಅಕ್ರಮವನ್ನು ಪರಿಗಣಿಸಲಾಗಿದೆ ಎನ್ನುವ ಅಂಶ ಸರ್ಕಾರದ ಆದೇಶಗಳಲ್ಲಿ ಇರುವ ಬಗ್ಗೆ ನಾವದಗಿ ನ್ಯಾಯಾಲಯದ ಗಮನ ಸೆಳೆದರು. ಇದನ್ನು ಸ್ಕ್ಯಾಮ್ ಅಂತ ಹೇಳಲ್ಲ ಆದರೆ ಕಾನೂನು ಮೀರಿ ನಡೆದಿರುವುದು ತನಿಖೆ ಆಗಬೇಕು ಎಂದು ಪ್ರತಿವಾದಿಸಿದರು.

ಎಸ್ ಆರ್ ಬೊಮ್ಮಯಿ ಕೇಸ್ ಪ್ರಸ್ತಾಪ ಮಾಡಿದ ಪ್ರಭುಲಿಂಗ ನಾವದಗಿ, ರಾಜ್ಯಪಾಲರ ಅಧಿಕಾರವನ್ನು ಮೊಟಕುಗೊಳಿಸಲು ಸಾಧ್ಯವಿಲ್ಲ. ರಾಜ್ಯಪಾಲರ ಅಧಿಕಾರ ಚಲಾಯಿಸಲು ಕ್ಯಾಬಿನೆಟ್ ಸಲಹೆ ಅವಶ್ಯಕತೆ ಇಲ್ಲ ಎಂದು ಉಲ್ಲೇಖಿಸಿದರು. ಟಾಡಾ ಪ್ರಕರಣದಲ್ಲೂ ಕೇಸ್ ಹಾಕುವ ಮುನ್ನ ಪೂರ್ವಾನುಮತಿ ಬೇಕಿತ್ತು. ಆದರೆ ಮೌಖಿಕ ಅನುಮತಿಯೂ ಸಾಕೆಂದು ಸುಪ್ರೀಂಕೋರ್ಟ್ ಹೇಳಿದೆ. ಹೀಗಾಗಿ ಹಲವು ಪ್ರಕರಣಗಳಲ್ಲಿ ಅನುಮತಿ ಪರವಾದ ತೀರ್ಪುಗಳಿವೆ. ಬಿ.ಎಸ್.ಯಡಿಯೂರಪ್ಪ ಅವರ ಕೇಸ್‌ ಅನ್ನು ಪರಿಗಣಿಸಲು ಸಾಧ್ಯವಿಲ್ಲ. ಎಸ್ಒಪಿ ಪಾಲನೆ ಮಾಡಬೇಕಿರುವುದು ಕೇವಲ ಸಿಬಿಐ ಕೇಸ್‌ನಲ್ಲಿ ಮಾತ್ರ. ಹೀಗಾಗಿ ಆ ತೀರ್ಪನ್ನು ಪರಿಗಣನೆಗೆ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಆಗ ಸಚಿವ ಸಂಪುಟ ನೀಡಿದ್ದ ಸೂಚನೆಯನ್ನು ರಾಜ್ಯಪಾಲರು ಉಲ್ಲೇಖಿಸಿರಲಿಲ್ಲ. ಹೀಗಾಗಿ ವಿಭಾಗೀಯ ಪೀಠ ಅದನ್ನು ರಾಜ್ಯಪಾಲರ ಮರುಪರಿಶೀಲನೆಗೆ ಸೂಚಿಸಿತ್ತು ಎಂದು ಪ್ರಭುಲಿಂಗ ನಾವದಗಿ ವಾದ ಮಂಡಿಸಿದ್ದರು.

17-a ಭ್ರಷ್ಟಾಚಾರ ತಡೆ ಕಾಯಿದೆ ಬಗ್ಗೆ ಮಾಹಿತಿ ನೀಡುತ್ತಾ ಇದರಲ್ಲಿ ಸಿಎಂ ಪಾತ್ರದ ಬಗ್ಗೆ ಮನವರಿಕೆ ಮಾಡಿದ್ದರು. ಆಗ 17-A ಹೇಳೋದು ಯಾವುದಾದರೂ ಹಣ ಪಡೆದಿದ್ದರಾ ಅಥವಾ ಕೊಟ್ರಾ, ಶಿಫಾರಸು ಮಾಡಿದ್ರಾ ಅನ್ನೋ ಬಗ್ಗೆ ಎಂದು ಜಡ್ಜ್ ಪ್ರಶ್ನೆ ಮಾಡಿದಾಗ ಶಿಫಾರಸು ಮಾಡಬೇಕು ಅಂತ ಇಲ್ಲ. ಮೌಖಿಕ ಸೂಚನೆ ಕೊಟ್ಟರು ಸಾಕು ಅದು 17-a ಕೆಳಗಡೆ ಬರುತ್ತದೆ. ಇವರು ಅಧಿಕಾರ ಬಳಸಿ ಕೆಲಸ ಮಾಡಿಸಿರಬಹುದು. ಸಾರ್ವಜನಿಕ ಸೇವಕ ಮೌಖಿಕವಾಗಿ ಶಿಫಾರಸ್ಸು ಮಾಡಿದ್ದರೂ ತನಿಖೆಗೊಳಪಡುತ್ತಾರೆ. ಪಿಸಿ ಆಕ್ಟ್ ಅಡಿ ತನಿಖೆಗೆ ಒಳಪಡಿಸಬಹುದು. ಎಫ್ಐಆರ್ ದಾಖಲಾದ ಬಳಿಕವೂ ಸಿಎಂಗೆ ಎಫ್‌ಐಆರ್ ಪ್ರಶ್ನಿಸಲು ಅವಕಾಶ ದೊರೆಯುತ್ತದೆ. ಹೀಗಾಗಿ ರಾಜ್ಯಪಾಲರ ಆದೇಶ ರದ್ದುಪಡಿಸದಂತೆ ಮನವಿ ಮಾಡಿ ಎಂದು ವಾದ ಮುಕ್ತಾಯಗೊಳಿಸಿದರು. ಇದೇ ವೇಳೆ ನನ್ನ ವಾದವೂ ಸಹ ತುಷಾರ ಮೆಹ್ತಾ ವಾದವೇ .. ಹೀಗಾಗಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿ ತಿರಸ್ಕರಿಸಿ ಕೆಳ ನ್ಯಾಯಾಲಯ ತೀರ್ಪು ಕೊಡಲು ಅವಕಾಶ ಕೊಡಿ ಎಂದು ಪ್ರದೀಪ್‌ ಮನವಿ ಮಾಡಿದರು.‌

ಇದನ್ನೂ ಓದಿ: CM Siddaramaiah : ಮುಡಾ ಕೇಸ್‌; ಹೈಕೋರ್ಟ್‌ನಲ್ಲಿ ಸಿಎಂ ಭವಿಷ್ಯ ನಿರ್ಧಾರ! ಹೇಗಿತ್ತು ರಾಜ್ಯಪಾಲರ ಪರ ತುಷಾರ್ ಮೆಹ್ತಾ ವಾದ

ಠಾಣೆಯಲ್ಲಿ ದೂರು ದಾಖಲಿಸಲು ಹಿಂದೇಟು

ಪ್ರಭುಲಿಂಗ ನಾವದಗಿ ಬಳಿಕ ಅಬ್ರಹಾಂ ಪರ ವಕೀಲ ರಂಗನಾಥ ರೆಡ್ಡಿ ವಾದ ಮಂಡನೆ ಶುರು ಮಾಡಿದರು.
ನಾನು ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದೇನೆ, ಬಳಿಕ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದೇನೆ
ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದೇನೆ ಎಂದರು. ಈ ಕೇಸ್‌ನಲ್ಲಿ ಮೊದಲಿಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ದೂರು ದಾಖಲು ಮಾಡದ ಹಿನ್ನೆಲೆ ರಾಜ್ಯಪಾಲರ ಅನುಮತಿ ಕೇಳಲಾಯಿತು. ಡಾ.ಅಶೋಕ್ ಪ್ರಕರಣದಲ್ಲಿ ಹೈಕೋರ್ಟ್ ತೀರ್ಪು ನೀಡಿದೆ. 17 ಎ ಅಡಿ ಖಾಸಗಿ ದೂರುದಾರರು ಅನುಮತಿ ಪಡೆಯಬಹುದು. ಹೀಗಾಗಿ ರಾಜ್ಯಪಾಲರ ಅನುಮತಿ ಪಡೆದು ದೂರು ದಾಖಲಿಸಲಾಗಿದೆ ಎಂದರು.

ಭೂ ಸ್ವಾಧೀನ ಪ್ರಕ್ರಿಯೆ ಹಾಗೂ ಲ್ಯಾಂಡ್ ಕನ್ವರ್ಷನ್ ಅಕ್ರಮಗಳ ಬಗ್ಗೆ ಉಲ್ಲೇಖಿಸಿ ವಾದ ಮುಂದುವರಿಸಿದ ಅವರು, ಮೂಡಾ ಮೂರನೇ ಹಂತದಲ್ಲಿ ವಶಪಡಿಸಿಕೊಂಡ ಭೂಮಿಯೇ ಇಲ್ಲ. ದೇವನೂರು ಬಡವಾಣೆ ಮಾಡಿದ ಸ್ಥಳದಲ್ಲಿ ಕೆಸರೆ ಗ್ರಾಮದ ಆಸ್ತಿಯನ್ನು ತೋರಿಸಿದ್ದಾರೆ. ಇಲ್ಲಿ ನಡೆದಿರುವ ಕೃಷಿ ಭೂಮಿಯ ಭೂ ಪರಿವರ್ತನೆಯೂ ಅಕ್ರಮವಾಗಿರುತ್ತದೆ.

ಕೆಸರೆ ಗ್ರಾಮದ ಜಮೀನಿನ ಬಗ್ಗೆ ವಿವರಣೆ ನೀಡಿದ ರಂಗನಾಥ ರೆಡ್ಡಿ ಸಿದ್ದರಾಮಯ್ಯ ಪಾತ್ರದ ಬಗ್ಗೆ ಮಾಹಿತಿ ನೀಡಿದರು. 2005 ಕನ್ವರ್ಸನ್‌ ನಿವೇಶನ ಹಂಚಿಕೆ ಬಳಿಕ ಮಲ್ಲಿಕಾರ್ಜುನ ಸ್ವಾಮಿಗೆ ಮಾರಿದ್ದಾರೆ. ಇಲ್ಲದೆ ಇರುವ ಜಮೀನನ್ನು ಗಿಫ್ಟ್ ಡೀಡ್ ಮಾಡಿದ್ದಾರೆ, ಜಮೀನು ಇಲ್ಲದ ಮೇಲೆ ಗಿಫ್ಟ್ ಡೀಡ್ ಹೇಗೆ ವ್ಯಾಲ್ಯೂಡ್ ಆಗುತ್ತೆ ಎಂದರು. ಆಗ ನ್ಯಾಯಮೂರ್ತಿಗಳು ಲ್ಯಾಂಡ್ ಡಿನೋಟಿಫೈ ಮಾಡಿದ ಮೇಲೆ ಆ ಜಮೀನು ಮೂಲ ಮಾಲೀಕನಿಗೆ ಹೋಗಬೇಕಲ್ಲವೇ ಎಂದು ಪ್ರಶ್ನೆ ಮಾಡಿದರು. ಆಗ ರಂಗನಾಥ್‌ರೆಡ್ಡಿ ಆ ಜಮೀನು ಅವರಿಗೆ ಹೋಗಿಲ್ಲ. ಎಲ್ಲದರಲ್ಲೂ ಮೈಲಾರಯ್ಯ ಹೆಸರು ಮಾತ್ರ ಬಂದಿದೆ. ಅಲ್ಲಿ ಜಮೀನೇ ಇಲ್ಲದೇ ಇಷ್ಟು ವ್ಯವಹಾರ ಮಾಡಿದ್ದಾರೆ ಎಂದು ಲಿಖಿತ ವಾದ ಮಂಡಿಸಿದ್ದರು.

ಮುಡಾ ಹೆಸರಿಗೆ ಕಂದಾಯ ದಾಖಲೆಗಳಿವೆ. 2004 ರವರೆಗೆ ಹಲವು ಜನರಿಗೆ ನಿವೇಶನ ಹಂಚಿಕೆ ಮಾಡಲಾಗಿದೆ.
ಕೆಸರೆ ಗ್ರಾಮ ದೇವನೂರು ಬಡಾವಣೆಯಾಗಿ ಬದಲಾದ ನಂತರ ಮಾರಾಟ ಮಾಡಲಾಗಿದೆ. ಕೃಷಿ ಜಮೀನೆಂದು ದೇವರಾಜು ಎಂಬುವರಿಂದ ಕ್ರಯ ಮಾಡಲಾಗಿದೆ . ಕೆಸರೆ ಗ್ರಾಮದ 464 ಸರ್ವೆ ನಂಬರಿನ ಖುಷ್ಕಿ ಜಮೀನೆಂದು ಉಲ್ಲೇಖಸಿದ್ದಾರೆ. ಅಷ್ಟರಲ್ಲಾಗಲೇ ದೇವನೂರು ಬಡಾವಣೆಯಾಗಿ ನಿವೇಶನ ಹಂಚಲಾಗಿತ್ತು. 2004ರಲ್ಲಿ ಸಿಎಂ ಮೈದುನ ಮಲ್ಲಿಕಾರ್ಜುನಸ್ವಾಮಿ ಎಂಬುವರು ಖರೀದಿ ಮಾಡಿದ್ದರು. ಅಸ್ತಿತ್ವವೇ ಇಲ್ಲದ ಕೃಷಿ ಭೂಮಿಗೆ 15 ಜುಲೈ 2005 ರಂದು ತಹಸೀಲ್ದಾರ್, ಡಿಸಿ ಸ್ಥಳ ಪರಿಶೀಲನೆ ಮಾಡಿ ಭೂಪರಿವರ್ತನೆ ಮಾಡಲಾಗಿದೆ. ಕೃಷಿಯೇತರ ವಾಸದ ಉದ್ದೇಶಕ್ಕೆ ಪರಿವರ್ತನೆ ಮಾಡಲಾಗಿದೆ. ಆಗಿನ ಜಿಲ್ಲಾಧಿಕಾರಿ ಕುಮಾರ್ ನಾಯಕ್ ಭೂಪರಿವರ್ತನೆ ವರದಿ ನೀಡಿದ್ದಾರೆ.

ಮೊದಲಿಗೆ 60-40 ಅನುಪಾತದಲ್ಲಿ ಸೈಟ್ ಹಂಚಿಕೆ ಮಾಡಲು ನಗರಾಭಿವೃದ್ಧಿ ಇಲಾಖೆಯಿಂದ ನಿರ್ಧಾರ ಮಾಡಿತ್ತು. ನಂತರ 50- 50 ಅನುಪಾತದಲ್ಲಿ ನಿವೇಶನಗಳ ಹಂಚಿಕೆ ಮಾಡಿದೆ. ಸುಮಾರು 20 ನಿವೇಶನಗಳನ್ನು ಹಂಚಿಕೆ‌ ಮಾಡಿದ್ದಾರೆ. ಅರ್ಜಿದಾರನ ಪತ್ನಿ ಮಾಲೀಕರಲ್ಲದ ಮೇಲೆ ಯಾವ ರೀತಿ ನಿವೇಶನ ಪಡೆದರು. ಅಧಿಕಾರ ಬಳಸಿದ್ದಾರೆ ಅನ್ನೋದು ಬಿಟ್ರೆ ಬೇರೆ ಯಾವ ದಾಖಲೆಗಳು ಇಲ್ಲ ಎಂದು ರಂಗನಾಥ್‌ ವಾದಿಸಿದ್ದರು. ಈ ವೇಳೆ ಮುಡಾ ಕೃಷಿ ಜಮೀನಿನಲ್ಲಿ ನಿವೇಶನ ಹಂಚಿಕೆ ಮಾಡಿದೆ. ಬೇಕಿದ್ದರೆ ದಾನಪತ್ರವನ್ನು ಪ್ರಶ್ನಿಸಲಿ ಎಂದು ಸಿಎಂ ಪರ ವಕೀಲರು ಉತ್ತರಿಸಿದರು . ದಾನಪತ್ರ ಇಬ್ಬರು ವ್ಯಕ್ತಿಗಳ ನಡುವಿನ ಹಸ್ತಾಂತರ ಹೇಗೆ ಪ್ರಶ್ನಿಸುತ್ತಾರೆ ನ್ಯಾಯಮೂರ್ತಿಗಳು ಮರುಪ್ರಶ್ನೆ ಹಾಕಿದರು.

ಇದನ್ನೂ ಓದಿ: CM Siddaramaiah: ಸಿದ್ದರಾಮಯ್ಯಗೆ ಮುಡಾ ಪರೀಕ್ಷೆ! ಸರ್ಕಾರದ ಬದಲು ಸ್ವತಂತ್ರ ಸಂಸ್ಥೆಯಿಂದ ತನಿಖೆಗೆ ದೂರದಾರರಿಂದ ಒತ್ತಾಯ

ಸಿಎಂ ಮಗನ ಮೇಲೆ ಯಾಕಿಲ್ಲ ಕೇಸ್‌

ಜತೆಗೆ ಡಿನೋಟಿಫಿಕೇಷನ್ ಆದಾಗ ಸಿದ್ದರಾಮಯ್ಯ ಡಿಸಿಎಂ ಆಗಿದ್ದರು. ಲ್ಯಾಂಡ್ ಕನ್ವರ್ಷನ್ ಆದಾಗಲೂ ಸಿದ್ದರಾಮಯ್ಯ ಡಿಸಿಎಂ ಆಗಿದ್ದರು. 50- 50 ಹಂಚಿಕೆ ಕೇಳಿದಾಗ ಸಿದ್ದರಾಮಯ್ಯ ಸಿಎಂ ಆಗಿದ್ದರು. ಈ ಬೆಳವಣಿಗೆ ನಡೆದಾಗಲೆಲ್ಲಾ ಸಿದ್ದರಾಮಯ್ಯ ಡಿಸಿಎಂ ಅಥವಾ ಸಿಎಂ ಆಗಿದ್ದರು ಎಂಬುವುದು ನಿಮ್ಮ ಆರೋಪವೇ ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಅವರು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ರಂಗನಾಥ್‌ ರೆಡ್ಡಿ ಮುಖ್ಯಮಂತ್ರಿಗಳು ತಮ್ಮ ಅಧಿಕಾರ ಬಳಸಿ ಇದೆಲ್ಲಾ ಮಾಡಿದ್ದಾರೆ. ಕೆಸರೆ ಗ್ರಾಮ 20 ವರ್ಷಗಳ ಹಿಂದೆ ಡಿಲಿಟ್ ಮಾಡಿದ್ದಾರೆ. ಬಳಿಕ‌ ದೇವನೂರು ಬಡಾವಣೆ ಆಗಿದೆ. 2021ರಲ್ಲಿ ಸಿಎಂ ಪುತ್ರ ಯತೀಂದ್ರ ಮುಡಾ ಸದಸ್ಯರಾಗಿದ್ದರು. ಪರಿಹಾರದ ನಿವೇಶನಗಳನ್ನು ನೀಡುವ ಕುರಿತಾದ ನಿರ್ಣಯಗಳನ್ನು ಕೈಗೊಳ್ಳುವ ಸಭೆಗಳಲ್ಲಿಯೂ ಯತೀಂದ್ರ ಇದ್ದರು. ಇದರ ಹಿಂದೆ ಅವರಿದ್ದಾರೆ ಎಂದಾಗ, ನ್ಯಾಯಮೂರ್ತಿಗಳು ಮತ್ತೆ ಸಿಎಂ ಬಿಟ್ಟು ಮಗನ ಮೇಲೆ ಯಾಕೆ ಕೇಸ್ ಮಾಡಲಿಲ್ಲ ಎಂದು ಪ್ರಶ್ನಿಸಿದರು. ಅಸ್ತಿತ್ವದಲ್ಲಿಯೇ ಇಲ್ಲದ ಭೂಮಿಗೆ ಮುಡಾದಲ್ಲಿ ದಾಖಲೆಗಳಿವೆ. ಭೂಮಿಗೆ ಪರಿಹಾರವಾಗಿ ಮುಖ್ಯಮಂತ್ರಿಯವರ ಪತ್ನಿಗೆ 14 ನಿವೇಶನಗಳನ್ನು ನೀಡಲಾಗಿದೆ. ಮುಖ್ಯಮಂತ್ರಿಯವರ ಕಚೇರಿಯ ಪಾತ್ರ ವಿವಿಧ ಹಂತಗಳಲ್ಲಿ ಇದೆ ಎಂದು ವಾದಿಸಿದರು.

ರಂಗನಾಥರೆಡ್ಡಿಗೆ ರಾಜ್ಯಪಾಲರು ಒಂದುವರೆ ಗಂಟೆ ಸಮಯ ಕೊಟ್ರಾ

25.10.2021 ರಲ್ಲಿ 50:50 ಅನುಪಾತದಲ್ಲಿ ನಿವೇಶನ ಹಂಚಿಕೆಗೆ ಮನವಿ ಮಾಡಲಾಗಿದೆ. ಸಿಎಂ ಪುತ್ರ ಇದ್ದ ಮುಡಾ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ನಂತರ ಸಿಎಂ ಪತ್ನಿಗೆ 25.11.21 ರಲ್ಲಿ ಹಕ್ಕು ಬಿಡುಗಡೆ ಮಾಡಿದ್ದಾರೆ. ನಂತರ ಸಿಎಂ ಪತ್ನಿಗೆ ಬದಲಿ ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ಟಿ.ಜೆ.ಅಬ್ರಹಾಂ ಪರ ವಕೀಲ ರಂಗನಾಥರೆಡ್ಡಿ ವಾದ ಮಂಡಿಸಿದ್ದರು. ಮುಂದುವರಿದು, ರಾಜ್ಯಪಾಲರು ನನ್ನನ್ನು ಕರೆದು ಒಂದುವರೆ ಗಂಟೆ ಮಾಹಿತಿ ಪಡೆದಿದ್ದಾರೆ. ನಾನು ಕೊಟ್ಟ ದಾಖಲೆ ಪರಿಶೀಲನೆಗೆ ಕರೆದಿದ್ದರು. ಕ್ಲಾರಿಫಿಕೇಷನ್ ಸಹ ತೆಗೆದುಕೊಂಡರು ಎಂದು ರಂಗನಾಥ್‌ರೆಡ್ಡಿ ಹೇಳಿದರು. ಈ ವೇಳೆ ಆಶ್ಚರ್ಯದೊಂದಿಗೆ ನ್ಯಾಯಮೂರ್ತಿಗಳು ರಾಜ್ಯಪಾಲರು ನಿಮಗೆ ಒಂದುವರೆ ಗಂಟೆ ಸಮಯ ಕೊಟ್ರಾ ಎಂದು ಕೇಳಿದರು.

ಒಳಸಂಚು ನಡೆಸಿದ್ದಾಗಿ ಆರೋಪ

ಜಮೀನಿನ ಎಲ್ಲ ಪ್ರಕ್ರಿಯೆಗಳು ಆಗುವಾಗ ಅರ್ಜಿದಾರರು ಅಧಿಕಾರದಲ್ಲಿದ್ದರು. ಉನ್ನತ ಹುದ್ದೆ ಅಲಂಕರಿಸಿದ್ದಾಗ ಅವರು ಪ್ರಭಾವ ಬೀರಿ ಈ ಕೆಲಸ ಆಗಿದೆ . 1998ರಿಂದ 2024 ವರೆಗೂ ಆಗಿರುವ ಬೆಳವಣಿಗೆಗಳಲ್ಲಿ ಇವರು ಹಿಂದೆ ಇದ್ದಾರೆ. ಒಳಸಂಚು ನಡೆಸಿ ಪಡೆದಿದ್ದಾರೆ ಎಂದು ರಂಗನಾಥ್‌ ರೆಡ್ಡಿ ವಾದಿಸಿದರು. ಯಾವುದೇ ಜಮೀನು ಕಳೆದುಕೊಳ್ಳದೇ ಸಿಎಂ ಪತ್ನಿ ಪರಿಹಾರ ಪಡೆದಿದ್ದಾರೆ ಎಂದು ಟಿ.ಜೆ.ಅಬ್ರಹಾಂ ಪರ ವಕೀಲ ರಂಗನಾಥ ರೆಡ್ಡಿ ವಾದಮಂಡನೆ ಅಂತ್ಯಗೊಳ್ಳಿಸಿದರು. ಕೊನೆಯಲ್ಲಿ ರಂಗನಾಥ ರೆಡ್ಡಿ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಎರಡು ಪ್ರಕರಣ ಬಾಕಿ ಇದೆ ಎಂದಾಗ, ನನ್ನ ಮುಂದೆ ಪ್ರಕರಣ ವಿಚಾರಣೆ ನಡೆಯುತ್ತಿದೆ. ಇಲ್ಲಿ ಇತ್ಯಾರ್ಥವಾಗದೇ ಬೇರೆ ವಿಚಾರಣೆ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಮನವಿ ತಿರಸ್ಕರಿಸಿದರು.

ತಾತ್ಕಾಲಿಕ ತಡೆಯಾಜ್ಞೆ ತೆಗೆಯುವಂತೆ ವಕೀಲ ರಂಗನಾಥ್‌ರೆಡ್ಡಿ ಮನವಿ ಮಾಡಿದಾಗ ನಾನು ಇಲ್ಲಿ ವಿಚಾರಣೆ ಮಾಡಬೇಕಾದರೆ ಹೇಗೆ ಕೆಳ ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ಆಗುತ್ತೆ. ಇಂತಹ ಸಬ್ ಮಿಷನ್ ಮಾಡಬೇಡಿ, ಅರ್ಜಿ ಇತ್ಯರ್ಥ ಮಾಡಬೇಕಿರುವುದು ಹೈಕೋರ್ಟ್.. ರಾಜ್ಯಪಾಲರ ತೀರ್ಮಾನ ಸರಿಯೋ -ತಪ್ಪೋ ಅನ್ನೋದು ತೀರ್ಮಾನ ಮಾಡಬೇಕಿದೆ. ಹೀಗಾಗಿ ಅಲ್ಲಿಯವರೆಗೂ ಕೆಳ ನ್ಯಾಯಾಲಯದಲ್ಲಿ ವಿಚಾರಣೆ ಅಸಾಧ್ಯ ಎಂದು ಸೆ.2 ಸೋಮವಾರ ಮಧ್ಯಾಹ್ನ 2.30ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಲಾಯಿತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version