Site icon Vistara News

CT Ravi: ಓವರಾಗಿ ಆಡಿದ್ರೆ ಹಸ್ತಕ್ಕೇ ಆಪರೇಷನ್‌ ಮಾಡ್ತೀವಿ ಹುಷಾರ್‌; ಸಿ.ಟಿ ರವಿ ಎಚ್ಚರಿಕೆ

CT Ravi Warning

ಬೆಂಗಳೂರು: ಕಾಂಗ್ರೆಸ್ ಪಕ್ಷದ ನೇತೃತ್ವದ ರಾಜ್ಯ ಸರಕಾರವು (Congress Government) ಅತಿಯಾಗಿ ವರ್ತಿಸಿದರೆ ಹಸ್ತಕ್ಕೆ ಆಪರೇಷನ್ (Reverse Operation) ಹೇಗೆ ಮಾಡಬೇಕೆಂದು ನಮಗೆ ಗೊತ್ತಿದೆ ಎಂದು ಬಿಜೆಪಿ ಹಿರಿಯ ಮುಖಂಡ, ಮಾಜಿ ಸಚಿವ ಸಿ.ಟಿ.ರವಿ (CT Ravi) ಅವರು ಎಚ್ಚರಿಕೆ ನೀಡಿದ್ದಾರೆ.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶನಿವಾರ (ಆಗಸ್ಟ್‌ 19) ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಈ ಹಿಂದೆ ನಮಗೆ 104 ಸೀಟು ಬಂದಿತ್ತು. ಯಾರಿಗೂ ಬಹುಮತ ಇರಲಿಲ್ಲ. ಕಾಂಗ್ರೆಸ್‌-ಜೆಡಿಎಸ್‌ ಸರ್ಕಾರ ಮೂರೇ ತಿಂಗಳಲ್ಲಿ ಅಧ್ವಾನವಾಗಿತ್ತು. ಒಬ್ಬರಿಗೆ ಒಬ್ಬರನ್ನು ಕಂಡರೆ ಆಗದ ಸ್ಥಿತಿ ಇತ್ತು ಎಂದು ವಿವರಿಸಿದರು. ಅದರ ಪರಿಣಾಮವಾಗಿ ಲೋಕಸಭಾ ಚುನಾವಣೆಯಲ್ಲಿ (Parliament Election) ಹೊಂದಾಣಿಕೆ ಆದರೂ ಎರಡೂ ಪಕ್ಷಗಳು ಹೀನಾಯವಾಗಿ ಸೋತಿದ್ದವು. ಹೀಗಾಗಿ ನಾವು ಆಪರೇಷನ್‌ ಮಾಡುವುದಕ್ಕೆ ಒಂದು ಅರ್ಥವಿತ್ತು. ಈಗ ಕಾಂಗ್ರೆಸ್‌ಗೆ ಏನಾಗಿದೆ? ಸಂಪೂರ್ಣ ಬಹುಮತವಿದ್ದರೂ ಯಾಕೆ ಈ ಆಪರೇಷನ್‌ ಎಂದು ಕೇಳಿದರು.

ಕಾಂಗ್ರೆಸ್‌ಗೆ ಈಗ ಪೂರ್ಣ ಬಹುಮತ ಇದೆ. ಅತಿ ಮಾಡಲು ಹೋದರೆ ಪರಿಸ್ಥಿತಿ ಕೆಟ್ಟದ್ದಾಗಲಿದೆ. ಕಾಂಗ್ರೆಸ್ ಪಕ್ಷ ಸಂಪೂರ್ಣ ಬಹುಮತ ಪಡೆದು ಆಡಳಿತ ನಡೆಸುತ್ತಿದೆ. ಒಳ್ಳೆಯ ಆಡಳಿತ ನಡೆಸುವ ಗುರಿ ಇಟ್ಟುಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.

ʻʻಇಲ್ಲದೇ ಇರುವುದನ್ನು ಮಾಡಲು ಹೊರಟರೆ ಸುಮ್ಮನೆ ಕುಳಿತುಕೊಳ್ಳುವವರು ನಾವಲ್ಲ. ನಾವೇನಾದರೂ ಮಾಡಿದರೆ ಮೇಲೇಳಲು ಆಗಲ್ಲ. ನಾವೇನು ಮಾಡುತ್ತೇವೆಂದು ಹೇಳುವುದಿಲ್ಲ. ಮುಟ್ಟಿನೋಡುವಂತೆ ಮಾಡುತ್ತೇವೆʼʼ ಎಂದು ಸಿ.ಟಿ ರವಿ ಎಚ್ಚರಿಸಿದರು.

ಕಾಂಗ್ರೆಸ್‌ಗೆ ಹಿರಿಯ ಶಾಸಕರನ್ನೇ ಹಿಡಿದಿಟ್ಟುಕೊಳ್ಳಲಾಗುತ್ತಿಲ್ಲ

ನಾವು ಮಾಡಿದಾಗ ಆಪರೇಷನ್ ಎನ್ನುತ್ತಾರೆ. ಅದೆಲ್ಲ ಪಟ್ಟಿ ನಮ್ಮಲ್ಲಿದೆ. ಅದನ್ನು ಮುಖಕ್ಕೆ ಹಿಡಿಯಬಯಸುತ್ತೇವೆ. ತಮ್ಮ ಪಕ್ಷದ ಹಿರಿಯ ಶಾಸಕರನ್ನು ಹಿಡಿದಿಡಲಾಗದ ಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷ ಇದೆ. ನಮ್ಮ ಪಕ್ಷ ಬಿಟ್ಟು ಯಾರೂ ಹೋಗುವುದಿಲ್ಲ ಎಂದು ಪ್ರಶ್ನೆಗಳಿಗೆ ಉತ್ತರ ಕೊಟ್ಟರು.

ಎಲ್ಲ ಸರಿ ಇಲ್ಲದಿದ್ದಾಗ ತಾನೇ ಪ್ರೇಮ ಪತ್ರ ಶುರುವಾಗೋದು?

ಇವತ್ತು 4 ಜನ ಸಚಿವರು ಪತ್ರ ಬರೆದಿದ್ದಾರೆ. ಎಲ್ಲವೂ ಸರಿ ಇದ್ದರೆ ಯಾಕೆ ಪತ್ರ ಬರೆಯುತ್ತಾರೆ ಎಂದು ಕೇಳಿದರು. ಎಲ್ಲವೂ ಸರಿ ಇಲ್ಲದಾಗ ರಾಜಕೀಯದಲ್ಲಿ ಪ್ರೇಮಪತ್ರಗಳು ಶುರುವಾಗುತ್ತವೆ. ಈಗ ಕಾಂಗ್ರೆಸ್‍ನಲ್ಲಿ ಎಲ್ಲವೂ ಸರಿ ಇಲ್ಲವೆಂದು ಸಚಿವರು, ಶಾಸಕರೇ ಹೇಳುವಾಗ ಯಾರೂ ಅಲ್ಲಿಗೆ ಹೋಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನು ಮೀರಿ ಅತಿರೇಕಕ್ಕೆ ಕೈ ಹಾಕಿದರೆ ನಮಗೂ ಏನು ಮಾಡಬೇಕೆಂದು ಗೊತ್ತಿದೆ ಎಂದು ಎಚ್ಚರಿಕೆ ನೀಡಿದರು. ನಮಗೆ ಪಾರ್ಟಿ ಕಟ್ಟಲು ಗೊತ್ತು. ಅದನ್ನು ಉಳಿಸಿಕೊಳ್ಳುವುದೂ ಗೊತ್ತು. ಅಡ್ಡ ಬಂದವರಿಗೆ ಹೇಗೆ ಉತ್ತರ ಕೊಡಬೇಕೆಂದು ಗೊತ್ತಿದೆ ಎಂದು ಸವಾಲೆಸೆದರು.

ಚೆಸ್‌ ನಮಗೂ ಗೊತ್ತು, ನಾವು ರಾಜನಿಗೇ ಚೆಕ್‌ಮೇಟ್‌ ಇಡುತ್ತೇವೆ

ನಾವು ರಾಜಕೀಯ ದೃಷ್ಟಿಯಿಂದ ಕಾಂಗ್ರೆಸ್ ಶಾಸಕರನ್ನು ಸಂಪರ್ಕ ಮಾಡಿಲ್ಲ ಎಂದು ಪ್ರಶ್ನೆಗೆ ಉತ್ತರ ಕೊಟ್ಟ ಅವರು, ರಾಜಕೀಯದ ಪಗಡೆ ದಾಳ ಏಕಮುಖ ಅಲ್ಲ; ಚೆಸ್ ಏಕಮುಖ ಅಲ್ಲ. ನಮಗೆ ಚೆಕ್‍ಮೇಟ್ ಮಾಡಲು ಬಂದರೆ ನಾವೂ ಚೆಕ್‍ಮೇಟ್ ಮಾಡಲು ಸಿದ್ಧರಿದ್ದೇವೆ. ನಾವು ಸೈನಿಕನಿಗೆ ಚೆಕ್‍ಮೇಟ್ ಮಾಡುವುದಿಲ್ಲ. ನಮ್ಮ ಚೆಕ್‍ಮೇಟ್ ರಾಜನಿಗೇ ಇರುತ್ತದೆ ಎಂದು ಸಿ.ಟಿ. ರವಿ ನುಡಿದರು.

ಡಿ.ಕೆ.ಶಿವಕುಮಾರ್ ಡಿಸಿಎಂ ಆಗಿದ್ದಾರೆ. ತಮ್ಮ ಹುದ್ದೆಯ ಜವಾಬ್ದಾರಿಯಿಂದ ಮಾತನಾಡಲಿ. ಆ ದಿನಗಳ ಧ್ವನಿ ಅವರದಾಗಬಾರದು ಎಂದು ಸಲಹೆ ನೀಡಿದರು.

ನೀವು ಮೊದಲು ಲೋಕಾಯುಕ್ತಕ್ಕೆ ಬಾಗಿಲು ಹಾಕಿದ್ದಿರಿ. ಕೇಸು ಮುಚ್ಚಿಹಾಕಲು ಎಸಿಬಿ ತಂದಿದ್ದೀರಿ. ಅರ್ಕಾವತಿ 8 ಸಾವಿರ ಕೋಟಿ ಕುರಿತ ನನ್ನ ಆರೋಪಕ್ಕೆ ಒಂದು ಶಬ್ದದಲ್ಲಾದರೂ ಪ್ರತಿಕ್ರಿಯೆ ಕೊಟ್ಟಿದ್ದೀರಾ ಎಂದು ಕಾಂಗ್ರೆಸ್ ಪಕ್ಷದವರನ್ನು ತರಾಟೆಗೆ ತೆಗೆದುಕೊಂಡರು. ಇದ್ದ ಮೂವರಲ್ಲಿ ಕದ್ದವರ್ಯಾರು? ಎಂದು ಕೇಳಿದರು.

ಇದನ್ನೂ ಓದಿ: Karnataka politics : ಡಿಕೆ ಶಿವಕುಮಾರ್‌ ಆಪರೇಷನ್‌ ಆಟಕ್ಕೆ ಬ್ರೇಕ್‌ ಹಾಕಿದ್ರಾ ರಾಜಾಹುಲಿ?; ಮತ್ತೆ ಚಿಗುರಿದ ಬಿಜೆಪಿ

ದೇವೇಗೌಡರೇ ಪ್ರಧಾನಿ ಆಗಿದ್ದಾರೆ; ಸಿದ್ದರಾಮಯ್ಯ ಯಾಕಾಗಬಾರದು ಎಂಬ ಎಚ್‌. ವಿಶ್ವನಾಥ್‌ ಪ್ರಶ್ನೆ ಪ್ರಿಯಾಂಕ ಗಾಂಧಿ ಮತ್ತು ರಾಹುಲ್‌ ಗಾಂಧಿ ಅರ್ಹರಲ್ಲ. ಅವರ ನೇತೃತ್ವವನ್ನು ಒಪ್ಪುವುದಿಲ್ಲ ಎಂಬ ಪರೋಕ್ಷ ಸೂಚನೆಯಲ್ಲವೇ, ಈ ಮೂಲಕ ಸಿದ್ದರಾಮಯ್ಯ ಅವರು ಪ್ರಧಾನಿ ಹುದ್ದೆಗೆ ಟವೆಲ್‌ ಹಾಕಿದಂತಲ್ಲವೇ ಎಂದು ಸಿ.ಟಿ. ರವಿ ಪ್ರಶ್ನಿಸಿದರು. ಕಾಂಗ್ರೆಸ್‌ ಏನೇ ಮಾಡಿದರು ಬಹುಮತ ಸಿಗುವುದಿಲ್ಲ. ಮೋದಿಯವರೇ ಮತ್ತೆ ಪ್ರಧಾನಿಯಾಗಲಿದ್ದಾರೆ ಎಂದರು ಸಿ.ಟಿ. ರವಿ.

Exit mobile version