Site icon Vistara News

Daali Dhananjay: ಮೈಸೂರು ಲೋಕಸಭೆಗೆ ಡಾಲಿ ಧನಂಜಯ್‌ ಕಾಂಗ್ರೆಸ್‌ ಅಭ್ಯರ್ಥಿ; ಚರ್ಚೆ ಬಗ್ಗೆ ಸಿಎಂ ಹೇಳಿದ್ದೇನು?

CM Siddaramaiah and Daali Dhananjaya

ಮಂಡ್ಯ: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ರಣತಂತ್ರವನ್ನು ರೂಪಿಸುತ್ತಿದೆ. ಇನ್ನು ಹೈವೋಲ್ಟೇಜ್‌ ಕ್ಷೇತ್ರ ಎಂದೆನಿಸಿಕೊಂಡಿರುವ ಸಿಎಂ ತವರು ಜಿಲ್ಲೆಯಾದ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ‌(Mysore Lok Sabha constituency) ದೊಡ್ಡದೊಂದು ಸಂಚಲನ ಸೃಷ್ಟಿ ಮಾಡಲು ಸಿದ್ಧತೆಯನ್ನು ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಖ್ಯಾತ ಚಿತ್ರ ನಟ, ನಟ ರಾಕ್ಷಸ ಡಾಲಿ ಧನಂಜಯ (Daali Dhananjay) ಅವರನ್ನು ಕಣಕ್ಕಿಳಿಸಲು ತೆರೆಮರೆ ಹಿಂದೆ ಕಸರತ್ತು ನಡೆಯುತ್ತಿದೆ ಎಂದೇ ಹೇಳಲಾಗುತ್ತಿದೆ. ಆದರೆ, ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಇದನ್ನು ನಿರಾಕರಣೆ ಮಾಡಿದ್ದಾರೆ.

ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಡಾಲಿ ಧನಂಜಯ್‌ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಸ್ಪರ್ಧೆ ವಿಚಾರ ಪ್ರಸ್ತಾಪವೇ ಆಗಿಲ್ಲ. ಚರ್ಚೆಯೂ ಆಗಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ಆದರೆ, ಈಚೆಗಿನ ಬೆಳವಣಿಗೆಯನ್ನು ಗಮನಿಸಿದಾಗ ಅವರನ್ನು ಮೈಸೂರು – ಕೊಡಗು ಲೋಕಸಭಾ ಕ್ಷೇತ್ರಕ್ಕೆ ಕಣಕ್ಕಿಳಿಸುವ ಮೂಲಕ ಪ್ರಬಲ ಎದುರಾಳಿಯನ್ನಾಗಿ ಮಾಡಬೇಕು ಎಂದು ಕಾಂಗ್ರೆಸ್‌ ತಂತ್ರಗಾರಿಕೆಯನ್ನು ರೂಪಿಸುತ್ತಿದೆ ಎನ್ನಲಾಗಿದೆ. ಈ ಹಿಂದೆ “ಬಡವರ ಮಕ್ಕಳು ಬೆಳೆಯಬೇಕು” ಎಂದು ಹೇಳಿದ್ದ ಧನಂಜಯ್‌ ಒಂದು ವೇಳೆ ಸ್ಪರ್ಧೆ ಮಾಡಿದರೆ ಪ್ರಬಲ ಎದುರಾಳಿಯಾಗಲಿದ್ದಾರೆ ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ ಇದೆ.

ಠಕ್ಕರ್‌ ಕೊಡುತ್ತಿರುವ ಪ್ರತಾಪ್‌ ಸಿಂಹ

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಬಿಜೆಪಿ ಸಂಸದರಾಗಿರುವವರು ಪ್ರತಾಪ್‌ ಸಿಂಹ (MP Pratapsimha). ಅವರು ಸಿಎಂ ಸಿದ್ದರಾಮಯ್ಯ ಮತ್ತು ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರಿಗೆ ನೇರವಾದ ಠಕ್ಕರ್‌ ಕೊಡುತ್ತಿದ್ದಾರೆ. ಒಂದು ಹಂತದಲ್ಲಿ ಪ್ರತಾಪ್‌ ಸಿಂಹ ವಿರುದ್ಧ ಯತೀಂದ್ರ ಸಿದ್ದರಾಮಯ್ಯ ಅವರೇ ಕಣಕ್ಕಿಳಿಯುತ್ತಾರೆ ಎಂಬ ಚರ್ಚೆ ನಡೆದಿತ್ತು. ಆದರೆ, ಈಗ ಚರ್ಚೆಯ ದಿಕ್ಕು ಸ್ವಲ್ಪ ಬದಲಾಗಿ ಡಾಲಿ ಧನಂಜಯ ಅವರ ಹೆಸರು ಕೇಳಿಬರುತ್ತಿದೆ.

ಒಂದು ವೇಳೆ ಡಾಲಿ ಧನಂಜಯ ಅವರು ಮೈಸೂರು ಕ್ಷೇತ್ರದಲ್ಲಿ ಕಣಕ್ಕಿಳಿದರೆ ದೊಡ್ಡ ಮಟ್ಟದ ಸಂಚಲನವಂತೂ ಕ್ರಿಯೇಟ್ ಆಗಲಿದೆ. ಸಿದ್ದರಾಮಯ್ಯ ಜತೆ ಆಪ್ತ ಒಡನಾಟ ಹೊಂದಿರುವ ಡಾಲಿ ಅವರು ಜನಪ್ರಿಯ ನಟ ಆಗಿರುವ ಕಾರಣಕ್ಕೆ ಪ್ರಚಾರ ನಿರಾಯಾಸವಾಗಿ ನಡೆಯುತ್ತದೆ. ಮತ್ತು ಗೆಲ್ಲುವುದು ಕಷ್ಟವಲ್ಲ ಎಂಬ ಲೆಕ್ಕಾಚಾರ ಕಾಂಗ್ರೆಸ್‌ನದ್ದು.

ಬಜೆಟ್‌ ಭಾಷಣದಲ್ಲಿ ಡಾಲಿ ಸಂಭಾಷಣೆ ಉಲ್ಲೇಖಿಸಿದ್ದ ಸಿದ್ದರಾಮಯ್ಯ!

ರಾಜ್ಯ ಸರ್ಕಾರ ಈಗಾಗಲೇ ಡಾಲಿ ಧನಂಜಯ ಅವರನ್ನು ಲಿಡ್ಕರ್‌ ಕಂಪನಿಯ ರಾಯಭಾರಿಯಾಗಿ ಮಾಡಿದೆ. ಸಿದ್ದರಾಮಯ್ಯ ಅವರು ತಮ್ಮ ಬಜೆಟ್‌ ಭಾಷಣದಲ್ಲಿ ಡಾಲಿ ಧನಂಜಯ ಅವರ ಸಿನಿಮಾದ ಸಂಭಾಷಣೆಯನ್ನು ಉಲ್ಲೇಖಿಸಿದ್ದಾರೆ.

ಸಮಾಜ ಕಲ್ಯಾಣ ಇಲಾಖೆ ಅನುದಾನಗಳನ್ನ ಮಂಡಿಸುವ ಮುನ್ನ ಸಿಎಂ ಸಿದ್ದರಾಮಯ್ಯನವರು ʻಡೇರ್ ಡೆವಿಲ್ ಮುಸ್ತಫಾʼ ಚಿತ್ರದ ಎರಡು ಸಾಲುಗಳನ್ನು ಸದನದಲ್ಲಿ ಹೇಳಿದ್ದಾರೆ. “ಒಂದು ತೋಟದಲ್ಲಿ ನೂರು ಹೂವು ಅರಳಲಿ, ಎಲ್ಲಾ ಕೂಡಿ ಆಡುವಂತಹ ಗಾಳಿ ಬೀಸಲಿ” ಎಂಬ ಸಾಲುಗಳನ್ನ ಹೇಳುವ ಮೂಲಕ ಸಮಾಜ ಕಲ್ಯಾಣ ಇಲಾಖೆಗೆ ಕೊಟ್ಟಿರುವ ಅನುದಾನವನ್ನು ಮಂಡಿಸಿದ್ದರು.

ಇದನ್ನೂ ಓದಿ : Karnataka Budget Session 2024: ಡಾಲಿ ಧನಂಜಯ್‌ ಬರೆದ ಸಾಲುಗಳು ಬಜೆಟ್‌ನಲ್ಲಿ ಹೈಲೈಟ್‌!

Daali Dhanajanya: ಯಾಕೆ ಡಾಲಿ ಧನಂಜಯ ಅವರಿಗೆ ಬೇಡಿಕೆ?

ಡಾಲಿ ಧನಂಜಯ ಅವರು ಒಬ್ಬ ನಟನಾಗಿ, ನಿರ್ಮಾಪಕನಾಗಿ ದೊಡ್ಡ ಜನಪ್ರಿಯತೆಯನ್ನು ಪಡೆದಿದ್ದಾರೆ. ವಿಭಿನ್ನ ಜಾನರ್‌ಗಳ ಸಿನಿಮಾಗಳನ್ನು ನಿರ್ಮಿಸಿ ಹೊಸ ಅಲೆ ಕ್ರಿಯೇಟ್‌ ಮಾಡಿದ್ದಾರೆ. ಹಾಗಾಗಿ ಅವರಿಗೆ ಫ್ಯಾನ್‌ ಫಾಲೋಯಿಂಗ್‌ ಅಪಾರವಾಗಿದೆ. ಡಾಲಿ ಧನಂಜಯ ಅವರು ಲಿಂಗಾಯತರು. ಮೈಸೂರಿನಲ್ಲಿ ಎಸ್ಸಿ, ಕುರುಬ, ಮುಸ್ಲಿಂ ಕಾಂಗ್ರೆಸ್​ ಪಾಲಿನ ಸಾಂಪ್ರದಾಯಿಕ ಮತಗಳು. ಅದಕ್ಕೆ ಲಿಂಗಾಯತ ಶಕ್ತಿ ಸೇರಿಕೊಂಡರೆ ಗೆಲ್ಲಬಹುದು ಎಂಬ ಲೆಕ್ಕಾಚಾರವನ್ನು ಮಾಡಲಾಗಿದೆ.

ಡಾಲಿ ಧನಂಜಯ ಅವರು ಸಾಮಾಜಿಕ ಬದ್ಧತೆ, ಸೈದ್ಧಾಂತಿಕ ಸ್ಪಷ್ಟತೆ ಇರುವ ವ್ಯಕ್ತಿ. ಅವರ ಚಿಂತನೆಗಳು ಕಾಂಗ್ರೆಸ್‌ಗೆ ಹೆಚ್ಚು ಹತ್ತಿರವಾಗಿವೆ. 2014ರ ಚುನಾವಣೆಯಲ್ಲಿ ಪ್ರತಾಪ್‌ ಸಿಂಹ ಗೆದ್ದಿದ್ದು ತಮ್ಮ ಜನಪ್ರಿಯತೆಯ ಆಧಾರದಲ್ಲಾಗಿದೆ. ಈಗಲೂ ಜನಪ್ರಿಯತೆಯನ್ನೇ ಬಂಡವಾಳ ಮಾಡಿಕೊಂಡು ಗೆಲ್ಲಬಹುದು ಎನ್ನುವುದು ಕಾಂಗ್ರೆಸ್‌ ಲೆಕ್ಕಾಚಾರವಾಗಿದೆ.

ಇದನ್ನೂ ಓದಿ : Dolly Dhananjay: `ಅಭಿಮಾನದ ತೇರು ಎಳೆಯಲುʼ ಸಜ್ಜಾಗುತ್ತಿದೆ ‘ಡಾಲಿ ಉತ್ಸವ’!

ನಿಜಕ್ಕೂ ಡಾಲಿ ಧನಂಜಯ ಅವರಿಗೆ ಅನಿವಾರ್ಯತೆ ಇದೆಯೇ?

  1. ಡಾಲಿ ಧನಂಜಯ ಅವರ ಈಗಿನ ಸಿನಿಮಾ ಕ್ರೇಜ್‌ ನೋಡಿದರೆ ಅವರು ಸಂಪೂರ್ಣವಾಗಿ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.
  2. ಅವರಿಗೆ ಆಂತರಿಕವಾಗಿ ರಾಜಕೀಯದ ಒಲವು ಇರುವುದು ಅವರ ಸಿನಿಮಾಗಳ ಡೈಲಾಗ್‌ಗಳಲ್ಲಿ ಸ್ವಷ್ಟವಿದೆ. ಹಾಗಂತ ಈಗಲೇ ಪ್ರವೇಶ ಮಾಡುತ್ತಾರಾ ಎಂಬ ಪ್ರಶ್ನೆ ಎದುರಾಗುತ್ತದೆ.
  3. ಒಂದು ವೇಳೆ ಕಾಂಗ್ರೆಸ್‌ನಿಂದ ದೊಡ್ಡ ಮಟ್ಟದಲ್ಲಿ ಒತ್ತಡ ಬಂದರೆ ಸ್ಪರ್ಧೆ ಮಾಡಲೂಬಹುದು. ಮೇಲ್ನೋಟಕ್ಕೆ ನೋಡಿದರೆ ಸದ್ಯ ಡಾಲಿ ಧನಂಜಯ ಅವರಿಗೆ ಚುನಾವಣೆ ರಂಗ ಪ್ರವೇಶದ ಅನಿವಾರ್ಯತೆ ಇಲ್ಲ!

ನಿಜವಾಗಿ ಅವರನ್ನು ಸೆಳೆಯಲು ಯತ್ನಿಸುತ್ತಿರುವುದು ಬಿಜೆಪಿ!

  1. ಈಗ ಡಾಲಿ ಧನಂಜಯ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್‌ ನಡೆಸುತ್ತಿರುವ ಕಾರ್ಯತಂತ್ರದ ಬಗ್ಗೆ ಬಹಿರಂಗ ಚರ್ಚೆ ನಡೆಯುತ್ತಿರುವುದು ನಿಜವಾದರೂ ಮೊದಲು ಈ ಚರ್ಚೆ ಆರಂಭವಾಗಿದ್ದು ಬಿಜೆಪಿಯಲ್ಲಿ!
  2. ಸಂಸದರಾಗಿರುವ ಪ್ರತಾಪ್‌ಸಿಂಹ ಅವರಿಗೆ ಟಿಕೆಟ್‌ ಸಿಗುವುದಿಲ್ಲ ಎಂಬ ಚರ್ಚೆ ನಡೆಯುತ್ತಿರುವುದು ಎಲ್ಲರಿಗೂ ಗೊತ್ತಿದೆ. ಒಂದು ವೇಳೆ ಅವರಿಗೆ ಅಲ್ಲದೆ ಹೋದರೆ ಬೇರೆ ಯಾರಿಗೆ ಎಂಬ ಪ್ರಶ್ನೆ ಎದುರಾದಾಗ ಮೊದಲು ಬಂದ ಹೆಸರು ಮೈಸೂರಿನ ಯದುವೀರ ಕೃಷ್ಣ ಒಡೆಯರ್‌. ಆದರೆ, ಅವರು ಒಪ್ಪದಿದ್ದರೆ ಮತ್ಯಾರು ಎಂಬ ಪ್ರಶ್ನೆಗೆ ಬಿಜೆಪಿಯಲ್ಲೇ ಕೇಳಿಬಂದ ಹೆಸರು ಡಾಲಿ ಧನಂಜಯ. ಆದರೆ, ಈಗ ಅವರ ಹೆಸರು ಕಾಂಗ್ರೆಸ್‌ನಿಂದಲೂ ಕೇಳಿಬರುತ್ತಿದೆ.
  3. ಅಂದರೆ ಒಂದು ವೇಳೆ ಡಾಲಿ ಧನಂಜಯ ಅವರು ಲೋಕಸಭಾ ಚುನಾವಣಾ ಕಣಕ್ಕೆ ಇಳಿಯಲು ಬಯಸಿದ್ದೇ ಆದರೆ ಅವರಿಗೆ ಟಿಕೆಟ್‌ ಕೊಡಲು ಎರಡೂ ಪಕ್ಷಗಳು ಸಿದ್ಧವಾಗಿವೆ ಎಂಬ ಅಭಿಪ್ರಾಯವಿದೆ. ಆದರೆ, ಡಾಲಿ ಧನಂಜಯ ಏನು ಹೇಳ್ತಾರೆ? ಮುಂದೆ ಉತ್ತರ ನೀಡಬಹುದು ಎಂಬ ನಿರೀಕ್ಷೆ ಇದೆ.

ಲೋಕಸಭೆ ಟಾರ್ಗೆಟ್‌ ಬಗ್ಗೆ ಸಿಎಂ ಹೇಳಿದ್ದೇನು?

ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಲೋಕಸಭೆ ಚುನಾವಣೆಗೆ ತಯಾರಿ ನಡೆಯುತ್ತಿದೆ. ಕನಿಷ್ಠ 20 ಸ್ಥಾನ ಗೆಲ್ಲುತ್ತೇವೆ. ಬಿಜೆಪಿಯವರು ಇಷ್ಟು ಸೀಟ್ ಗೆಲ್ಲುತ್ತೇವೆ ಎಂದು ಬುರುಡೆ ಬಿಡುತ್ತಿದ್ದಾರೆ. ಬಡವರ ವಿರೋಧಿಗಳು ಬಜೆಟ್ ಬಗ್ಗೆ ಮಾತನಾಡುತ್ತಾರೆ ಎಂದು ಹೇಳಿದ್ದಾರೆ.

ಗ್ಯಾರಂಟಿ ಸಮಾವೇಶ ಮೂಲಕ ಚುನಾವಣಾ ಪ್ರಚಾರ

ಗ್ಯಾರಂಟಿ ಫಲಾನುಭವಿಗಳ ಸಮಾವೇಶವನ್ನು ಆಯೋಜನೆ ಮಾಡುವ ಮೂಲಕ ಕಾಂಗ್ರೆಸ್ ಚುನಾವಣೆ ಪ್ರಚಾರ ಆರಂಭಿಸಿದೆಯಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ನಿಮ್ಮ ಪ್ರಶ್ನೆಯಲ್ಲೇ ಉತ್ತರವೂ ಇದೆ ಎಂದು ಹೇಳಿದರು.

Exit mobile version