Site icon Vistara News

DK Shivakumar : ಬಾರ್‌ ಕೌನ್ಸಿಲ್‌ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಿಂದ ಡಿ.ಕೆ ಶಿವಕುಮಾರ್‌ ಹೆಸರು ಡಿಲೀಟ್‌

DK Shivakumar Bar council

ಬೆಂಗಳೂರು: ಮೈಸೂರು ಬಾರ್ ಕೌನ್ಸಿಲ್​​ನಿಂದ (Mysore Bar council) ಆಗಸ್ಟ್‌ 12ರಂದು ಆಯೋಜಿಸಿರುವ ಎರಡು ದಿನಗಳ ರಾಜ್ಯ ಮಟ್ಟದ ನ್ಯಾಯವಾದಿಗಳ ಸಮಾವೇಶದ (State level two day advocates conference) ಆಮಂತ್ರಣ ಪತ್ರಿಕೆಯನ್ನು ಮರುಮುದ್ರಿಸಲಾಗಿದೆ. ಪರಿಷ್ಕೃತ ಆಮಂತ್ರಣ ಪತ್ರಿಕೆಯಲ್ಲಿ (Invitation revised) ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (DCM DK Shivakumar) ಅವರ ಹೆಸರನ್ನು ತೆಗೆಯಲಾಗಿದೆ (DK Shivakumar Name deleted). ಡಿ.ಕೆ. ಶಿವಕುಮಾರ್‌ ಅವರ ವಿರುದ್ಧ ಇನ್ನೂ ಕೆಲವು ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇರುವುದರಿಂದ ಅವರು ನ್ಯಾಯಾಧೀಶರ ಜತೆ ವೇದಿಕೆ ಹಂಚಿಕೊಳ್ಳಲು ಅವಕಾಶ ನೀಡುವುದು ತಪ್ಪು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಉದ್ಘಾಟನೆ ಮಾಡುವ ಈ ಕಾರ್ಯಕ್ರಮದಲ್ಲಿ ಸುಪ್ರೀಂಕೋರ್ಟ್‌ನ ನ್ಯಾಯಾಧೀಶರಾದ ಎ.ಎಸ್‌. ಬೋಪಣ್ಣ, ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾ ಪ್ರಸನ್ನ ಬಿ. ವರಾಳೆ, ಭಾರತೀಯ ಬಾರ್‌ ಕೌನ್ಸಿಲ್‌ ಅಧ್ಯಕ್ಷರಾದ ಮನನ್‌ ಕುಮಾರ್‌ ಮಿಶ್ರಾ, ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ್‌ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಡಿ.ಕೆ. ಶಿವಕುಮಾರ್‌ ಅವರು ಕೂಡಾ ಅತಿಥಿಗಳಾಗಿದ್ದರು.

ಆದರೆ, ಮಾಜಿ ಕಾನೂನು ಸಚಿವರು ಮತ್ತು ಬಿಜೆಪಿ ಶಾಸಕ ಸುರೇಶ್‌ ಕುಮಾರ್‌ (BJP MLA Suresh kumar) ಅವರು ಕರ್ನಾಟಕ ಹೈಕೋರ್ಟ್‌ನ ರಿಜಿಸ್ಟ್ರಾರ್‌ಗೆ ದೂರು ಸಲ್ಲಿಸಿ, ಡಿ.ಕೆ. ಶಿವಕುಮಾರ್‌ ಅವರಿಗೆ ವೇದಿಕೆಯಲ್ಲಿ ಅವಕಾಶ ಕಲ್ಪಿಸುವುದು ಸರಿಯಲ್ಲ ಎಂದು ವಾದಿಸಿದ್ದರು.

ಸುರೇಶ್‌ ಕುಮಾರ್‌ ಆಕ್ಷೇಪವೇನು?

ಮೈಸೂರಿನಲ್ಲಿ ಆ.12ರಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್‌ (Karnataka State Bar Council) ವತಿಯಿಂದ ವಕೀಲರ ರಾಜ್ಯ ಮಟ್ಟದ 10ನೇ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಸಿಎಂ, ಸುಪ್ರೀಂ ಕೋರ್ಟ್‌, ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಮತ್ತಿತರ ಗಣ್ಯರು ಭಾಗವಹಿಸುತ್ತಾರೆ. ಆದರೆ, ಹಲವು ಪ್ರಕರಣ ಎದುರಿಸುತ್ತಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ನ್ಯಾಯಾಂಗದ ಶಿಷ್ಟಾಚಾರದ ಪ್ರಕಾರ ಕಾರ್ಯಕ್ರಮದಲ್ಲಿ ಭಾಗವಹಿಸಬಹುದೇ ಎಂದು ಪ್ರಶ್ನಿಸಿದ್ದರು.

ನಾನು ಹಿಂದೆ ಕಾನೂನು ಸಚಿವನಾಗಿದ್ದಾಗ ರಾಜ್ಯದ ಉಚ್ಚ ನ್ಯಾಯಾಲಯದ ಅಂದಿನ ಮುಖ್ಯ ನ್ಯಾಯಮೂರ್ತಿ ಗಳೊಂದಿಗೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ನ್ಯಾಯಾಲಯದ ಹೊಸ ಕಟ್ಟಡದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿತ್ತು. ಆಗ ಮುಖ್ಯ ನ್ಯಾಯಮೂರ್ತಿಗಳೊಡನೆ ವೇದಿಕೆ ಮೇಲೆ ಕುಳಿತುಕೊಳ್ಳುವ ಅತಿಥಿಗಳ ಮೇಲೆ (ಕಾನೂನು ಸಚಿವನಾಗಿದ್ದ ನನ್ನದೂ ಸೇರಿದಂತೆ) ಏನಾದರೂ ಕ್ರಿಮಿನಲ್ ಕೇಸ್ ಇದೆಯೇ ಎಂದು ಪ್ರಶ್ನಿಸಲಾಗಿದ್ದ ಘಟನೆ ನೆನಪಿಗೆ ಬರುತ್ತಿದೆ. ನನ್ನ ಮೇಲೆ ಯಾವುದೇ ಪ್ರಕರಣ ಇರಲಿಲ್ಲ ಎಂಬುದು ಬೇರೆ ವಿಚಾರ ಎಂದು ತಿಳಿಸಿದ್ದರು.

ಡಿ.ಕೆ. ಶಿವಕುಮಾರ್ ಅವರು ಎದುರಿಸುತ್ತಿರುವ ಕೆಲ ಕೇಸ್‌ಗಳು ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ ಮುಂದೆ ಇರುವುದು ಎಲ್ಲರಿಗೂ ತಿಳಿದ ವಿಷಯ. ಅಂತಹ ವ್ಯಕ್ತಿ ಈ ಕಾರ್ಯಕ್ರಮದ ವೇದಿಕೆಯಲ್ಲಿ ನ್ಯಾಯಮೂರ್ತಿಗಳ ಜೊತೆ ಭಾಗವಹಿಸುವುದು ಸೂಕ್ತವೇ? ಕಾರ್ಯಕ್ರಮದ ಯೋಜಕ ವಕೀಲರ ಪರಿಷತ್ ಈ ಕುರಿತು ಸ್ಪಷ್ಟೀಕರಣ ನೀಡಬೇಕು.. ನ್ಯಾಯಮೂರ್ತಿಗಳಿಗೆ ಇದು ಸಮ್ಮತವೇ? ಶಿಷ್ಟಾಚಾರ ಎಲ್ಲರಿಗೂ ಅನ್ವಯವಾಗಬೇಕಲ್ಲವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದ ಸುರೇಶ್‌ ಕುಮಾರ್‌ ಅವರು, ಈ ಬಗ್ಗೆ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ಗೂ ಪತ್ರ ಬರೆದಿದ್ದರು.‌

ಇದನ್ನೂ ಓದಿ: DK Shivakumar :‌ ಡಿಕೆಶಿ ಮೇಲೆ ಬಿಬಿಎಂಪಿ ಕಮಿಷನ್‌ ಆರೋಪ; ಅಜ್ಜಯ್ಯನ ಮೇಲೆ ಪ್ರಮಾಣಕ್ಕೆ ಸವಾಲು

ನಾನು ಕಾರ್ಯಕ್ರಮಕ್ಕೆ ಹೋಗಲ್ಲ ಎಂದಿದ್ದ ಡಿ.ಕೆ. ಶಿವಕುಮಾರ್‌

ಈ ನಡುವೆ, ಸುರೇಶ್‌ ಕುಮಾರ್‌ ಅವರು ಎತ್ತಿದ ಆಕ್ಷೇಪಗಳಿಗೆ ಡಿ.ಕೆ ಶಿವಕುಮಾರ್‌ ಕೆಂಡಾಮಂಡಲರಾಗಿದ್ದರು. ಅದೇ ಹೊತ್ತಿಗೆ ತಾನು ಇದು ಮಾತ್ರವಲ್ಲ, ಇಂಥ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ವಿವಾದ ಆಗುತ್ತೆ ಎಂಬ ಕಾರಣಕ್ಕೆ ಅಲ್ಲಿಗೆ ಹೋಗುವುದಿಲ್ಲ. ನನ್ನ ಮೇಲೆ ಕೇಸ್ ಇದ್ದಾವೋ ಇಲ್ಲವೋ ಅದು ಬೇರೆ ವಿಷಯ. ಈ ಹಿಂದೆ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಕೂಡ ಸಿಎಂ ಆಗಿದ್ದರು. ಅವರ ಮೇಲೆ ಕೇಸ್ ಇರಲಿಲ್ಲವಾ? ಅವರು ಬಾರ್ ಕೌನ್ಸಿಲ್ ಕಾರ್ಯಕ್ರಮದಲ್ಲಿ ಭಾಗಿಯಾಗಿರಲಿಲ್ಲವೇ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸುರೇಶ್‌ ಕುಮಾರ್‌ ಅವರನ್ನು ಪ್ರಶ್ನಿಸಿದ್ದರು.

ನಾನು ಯಾರಿಗೂ ಮುಜುಗರ ಮಾಡುತ್ತಿಲ್ಲ. ಮೈಸೂರು ಬಾರ್ ಕೌನ್ಸಿಲ್‌ನಿಂದ ಕಾರ್ಯಕ್ರಮಕ್ಕೆ ಕರೆದಿದ್ದರು. ನನಗೆ ಸಾಕಷ್ಟು ಆಹ್ವಾನಗಳು ಬರುತ್ತವೆ. ಜಡ್ಜ್‌ಗಳು‌ ಕೂಡ ಮದುವೆ ಕಾರ್ಯಕ್ರಮಗಳಿಗೆ ಕರೆಯುತ್ತಾರೆ. ನಾನು ಈ ರೀತಿಯಲ್ಲಿ ವಿವಾದ ಆಗುತ್ತೆ ಅಂತಲೇ ಹೋಗಲ್ಲ ಎಂದು ತಿಳಿಸಿದ್ದರು.

Exit mobile version