ಬೆಂಗಳೂರು: ಮೇ 18 ಮಾಜಿ ಪ್ರಧಾನಿ ದೇವೇಗೌಡರ ಜನ್ಮದಿನ. 90 ವರ್ಷದ ಹಿರಿಯ ರಾಜಕಾರಣಿ, ಕರ್ನಾಟಕದ ಮಾಜಿ ಮುಖ್ಯಮಂತ್ರಿ, ರಾಷ್ಟ್ರದ ಮಾಜಿ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ಮೇರು ವ್ಯಕ್ತಿತ್ವ ದೇವೇಗೌಡ ಅವರದ್ದು. ಈ ಶುಭ ಸಂದರ್ಭದಂದು ಪ್ರಧಾನಿ ಮೋದಿಯವರು ಟ್ವೀಟ್ ಮೂಲಕ ದೇವೇಗೌಡರಿಗೆ ಶುಭ ಕೋರಿದ್ದಾರೆ. ಜತೆಗೆ ಅನೇಕ ಗಣ್ಯರು ಈ ವೇಳೆ ಶುಭಾಶಯ ತಿಳಿಸಿದ್ದಾರೆ.
ದೇವೇಗೌಡರ ಜನ್ಮದಿನದಂದು ಅವರ ಬಗ್ಗೆ ತಿಳಿಯಬೇಕಾದ 8 ವಿಷಯಗಳು
- ದೇವೇಗೌಡ ಅವರು ಜನಿಸಿದ್ದು ಮೈಸೂರಿನ ಹೊಳೇನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ. 1933ರ ಮೇ 18ರಂದು ಒಕ್ಕಲಿಗ ಕುಟುಂಬದಲ್ಲಿ ಜನನ.
- ಕೃಷಿ ಮನೆತನದಲ್ಲಿ ಜನಿಸಿ ಸ್ವತಃ ಇವರೂ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಈ ಕಾರಣದಿಂದ ಅವರಿಗೆ ಮುಂದೆ ʼಮಣ್ಣಿನ ಮಗʼ ಎಂಬ ಬಿರುದು ದೊರಕಿತು. ಅವರು ಸಿವಿಲ್ ಇಂಜಿನಿಯರಿಂಗ್ ಡಿಪ್ಲೊಮ ಪದವಿ ಪಡೆದಿದ್ದಾರೆ.
- ದೇವೇಗೌಡ ಅವರು 1953ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪಾದಾರ್ಪಣೆ ಮಾಡಿದ್ದರು. 1953ರಿಂದ 1962ರವರೆಗೆ ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯನಿರ್ವಹಿಸಿದ್ದರು.
- 1962ರಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದು ಬಂದರು. 1989ರವರೆಗೆ ನಡೆದ ಎಲ್ಲಾ ಚುನಾವಣೆಗಳಲ್ಲಿ ಗೆಲು ಸಾಧಿಸಿದ ಹೆಗ್ಗಳಿಕೆಗೆ ಪಾತ್ರರಾದವರು.
- ಇಂದಿರಾ ಗಾಂಧಿ ಪ್ರಧಾನಮಂತ್ರಿಯಾದಾಗ 1957-1977ರ ಅವಧಿಯಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯಾಗಿತ್ತು. ಆ ವೇಳೆ ದೇವೇಗೌಡ ಅವರನ್ನು ಬಂಧಿಸಿ ಬೆಂಗಳೂರಿನ ಕೇಂದ್ರ ಕಾರಾಗ್ರಹಕ್ಕೆ ಸೇರಿಸಲಾಗಿತ್ತು.
- 1994ರಿಂದ 1996ರವರೆಗೆ ದೇವೇಗೌಡ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ.
- ದೇವೇಗೌಡ ಅವರು 1954ರಲ್ಲಿ ಚೆನ್ನಮ್ಮ ಅವರನ್ನು ವಿವಾಹವಾದರು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಹಿರಿಯ ರಾಜಕಾರಣಿ ಎಚ್.ಡಿ. ರೇವಣ್ಣ ಸೇರಿದಂತೆ 4 ಗಂಡು ಮಕ್ಕಳು ಹಾಗೂ 2 ಹೆಣ್ಣುಮಕ್ಕಳಿರುವ ತುಂಬು ಕುಟುಂಬ ಅವರದ್ದು.
- ದೇವೇಗೌಡರು ಎರಡು ಬಾರಿ ಜನತಾ ಪಾರ್ಟಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ನಂತರದಲ್ಲಿ, ಜನತಾ ಪಾರ್ಟಿ ಹಲವು ಸಣ್ಣ ಸಣ್ಣ ಪಕ್ಷಗಳನ್ನು ಒಗ್ಗೂಡಿ ಜನತಾದಳ ಎಂದು ಬದಲಾವಣೆಗೊಂಡಿತು.
- 1966ರಲ್ಲಿ ರಾಷ್ಟ್ರದ 11ನೇ ಪ್ರಧಾನಮಂತ್ರಿಯಾಗಿ ದೇವೇಗೌಡ ಅವರು ಆಯ್ಕೆಯಾದರು. ಪಿ.ವಿ. ನರಸಿಂಹ ರಾವ್ ಸರ್ಕಾರ ಚುನಾವಣೆಯಲ್ಲಿ ಸೋತಿತ್ತು, ಹಾಗೂ ಉಳಿದ ಪಕ್ಷಗಳು ಬಹುಮತ ಸಾಬೀತುಪಡಿಸುವಲ್ಲಿ ವಿಫಲವಾಗಿದ್ದವು. ಈ ಸಂದರ್ಭದಲ್ಲಿ ದೇವೇಗೌಡ ಅವರನ್ನು ಪ್ರಧಾನಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಲಾಯಿತು. ಸುಮಾರು 11 ತಿಂಗಳು ದೇಶದ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಮೂಲದ ಮೊದಲ ಪ್ರಧಾನಮಂತ್ರಿಯಾದ ಹಿರಿಮೆ ದೇವೇಗೌಡ ಅವರದ್ದು.
ಇದನ್ನೂ ಓದಿ: ರವೀಂದ್ರನಾಥ ಟಾಗೋರ್ ಜನ್ಮದಿನಕ್ಕೆ ಅವರ 7 ಪುಟ್ಟ ಕವನಗಳು