Site icon Vistara News

Harish Poonja: ಶಾಸಕ ಹರೀಶ್‌ ಪೂಂಜಾರನ್ನು ಬಂಧಿಸಿದರೆ ಮುಂದಾಗುವ ಅನಾಹುತಕ್ಕೆ ಸರ್ಕಾರವೇ ಹೊಣೆ: ಗುಡುಗಿದ ವಿಜಯೇಂದ್ರ

Harish Poonja Govt responsible for disaster if MLA Harish Poonja is arrested says BY Vijayendra

ಬೆಂಗಳೂರು: ಪ್ರತಿಭಟನೆ ವೇಳೆ ಪೊಲೀಸರಿಗೆ ಧಮ್ಕಿ ಹಾಕಿದ ಆರೋಪದಲ್ಲಿ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ (Harish Poonja) ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿರುವ ಬೆನ್ನಲ್ಲೇ ಅವರನ್ನು ಬಂಧಿಸಲು ಪೊಲೀಸರು ಮುಂದಾಗಿರುವುದನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರವಾಗಿ ಖಂಡಿಸಿದ್ದಾರೆ. ಒಂದು ವೇಳೆ ಅವರನ್ನು ಬಂಧಿಸಿದರೆ ಮುಂದಾಗುವ ಅನಾಹುತಗಳಿಗೆ ರಾಜ್ಯ ಸರ್ಕಾರವೇ ಹೊಣೆಯಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ಈ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡಿದ ಬಿ.ವೈ. ವಿಜಯೇಂದ್ರ, ಸತ್ಯ ಮರೆಮಾಚುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ. ಅಕ್ರಮ ಕಲ್ಲು ಗಣಿಗಾರಿಕೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಿ, ನಮ್ಮ ಆಕ್ಷೇಪ ಇಲ್ಲ. ಆದರೆ, ಅದರಲ್ಲಿ ಬಿಜೆಪಿ ಯುವ ಮೋರ್ಚಾ ಸದಸ್ಯ ಶಶಿರಾಜ್ ಹೆಸರನ್ನು ಸೇರಿಸಿರುವುದು ಸರಿಯಲ್ಲ. ಅಕ್ರಮ ಕಲ್ಲು ಗಣಿಗಾರಿಕೆಯಲ್ಲಿ ಅವನ ಹೆಸರು ಸೇರಿಸಿದ್ದಕ್ಕೆ ನಮ್ಮ ಶಾಸಕರು ಠಾಣೆಗೆ ಹೋಗಿದ್ದಾರೆ. ನಮ್ಮ ಕಾರ್ಯಕರ್ತರ ಪರವಾಗಿ ಠಾಣೆಗೆ ಹೋಗಿ ಶಕ್ತಿ ತುಂಬುವ ಕೆಲಸವನ್ನು ಮಾಡಿದ್ದಾರೆ. ಪೊಲೀಸ್ ಅಧಿಕಾರಿಗಳು ಚುನಾವಣಾ ನೀತಿ ಸಂಹಿತೆ ಇದೆ ಎಂಬ ಕಾರಣಕ್ಕೆ ಪ್ರತಿಭಟನೆಗೆ ಅವಕಾಶ ಕೊಟ್ಟಿಲ್ಲ. ಆಡಳಿತ ಪಕ್ಷವು ಬಿಜೆಪಿ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉದ್ವೇಗದಿಂದ ಮಾತನಾಡಿದ್ದಾರೆ

ನಮ್ಮ ಶಾಸಕರಾದ ಹರೀಶ್‌ ಪೂಂಜಾ ಅವರು ಉದ್ವೇಗದಿಂದ ಮಾತನಾಡಿದ್ದಾರೆ. ಅದು ಸರಿಯಲ್ಲ ಅಂತ ಶಾಸಕರಿಗೂ ಅನ್ನಿಸಿದೆ. ಒಬ್ಬ ಜನಪ್ರತಿನಿಧಿಯನ್ನು ಅರೆಸ್ಟ್ ಮಾಡುತ್ತಾರೆಂದಾದರೆ ಮುಂದೆ ಆಗುವ ಅನಾಹುತಗಳಿಗೆ ಸರ್ಕಾರವೇ ಜವಾಬ್ದಾರಿ ಆಗಬೇಕಾಗುತ್ತದೆ. ದಕ್ಷಿಣ ಕನ್ನಡ ಈಗ ಶಾಂತಿಯುತವಾಗಿದೆ. ನಮ್ಮ ಶಾಸಕರ ಮೇಲೆ ಕ್ರಮ ಕೈಗೊಳ್ಳುವುದನ್ನು ಕೂಡಲೇ ಕೈಬಿಡಬೇಕು ಎಂದು ಬಿ.ವೈ. ವಿಜಯೇಂದ್ರ ಒತ್ತಾಯಿಸಿದರು.

ಇದನ್ನೂ ಓದಿ: Prajwal Revanna Case: ನಿಖಿಲ್ ಎಲ್ಲಿದ್ದೀಯಪ್ಪಾ ಎಂದಿದ್ದಾಯ್ತು, ಈಗ ಪ್ರಜ್ವಲ್ ಎಲ್ಲಿದ್ದೀಯಪ್ಪಾ ಎನ್ನುತ್ತಿದ್ದಾರೆ ಬ್ರದರ್ ಸ್ವಾಮಿಗಳು!

ಮುಂದಾಗುವ ಅನಾಹುತಕ್ಕೆ ಸರ್ಕಾರವೇ ಹೊಣೆ

ಸರ್ಕಾರ ಹಾಗೂ ಗೃಹ ಸಚಿವರಿಗೆ ಮಾಧ್ಯಮಗಳ ಮೂಲಕ ಒತ್ತಾಯ ಮಾಡುತ್ತೇನೆ. ವಿಧಾನಸೌಧದಲ್ಲಿ ಪಾಕಿಸ್ತಾನ್‌ ಜಿಂದಾಬಾದ್ ಎಂದು ಕೂಗಿದವನನ್ನು ಬಂಧಿಸಲು ಹಿಂದೆ ಮುಂದೆ ನೋಡುತ್ತೀರಿ. ಆದರೆ, ಜನಪ್ರತಿನಿಧಿಯನ್ನು ಇಂತಹ ವಿಚಾರಗಳಲ್ಲಿ ಬಂಧನ ಮಾಡಲು ಮುಂದೆ ಬರುತ್ತೀರಿ. ಜನಪ್ರತಿನಿಧಿಯನ್ನು ಬಂಧಿಸುವ ಕ್ರಮ ಯಾವುದೇ ಕಾರಣಕ್ಕೂ ಸರಿಯಲ್ಲ. ರಾಜಕಾರಣಿಗಳ ಒತ್ತಡದಿಂದ ಬಂಧನ ಮಾಡೋದು ಸರಿಯಲ್ಲ. ಶಾಸಕರು ಉದ್ವೇಗದಲ್ಲಿ ಮಾತನಾಡಿದ್ದರಲ್ಲಿ ದುರುದ್ದೇಶ ಇಲ್ಲ. ನಾನು ಕೂಡ ಶಾಸಕರ ಜತೆ ಮಾತನಾಡಿದ್ದೇನೆ. ಈ ರೀತಿ ಮಾತನಾಡಿದ್ದು ಸರಿಯಲ್ಲ ಎಂದು ಹೇಳಿದ್ದೇನೆ. ಅದಕ್ಕವರು ತಾವು ಆಡಿದ ಮಾತುಗಳ ಹಿಂದೆ ಯಾವುದೇ ದುರುದ್ದೇಶ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಸರ್ಕಾರ ಈಗ ಏನು ಮಾಡುತ್ತದೆಯೋ ಎಂಬುದನ್ನು ನೋಡುತ್ತೇನೆ. ಸರ್ಕಾರ ತಪ್ಪು ತಿದ್ದಿಕೊಳ್ಳದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ. ಆಗುವ ಅನಾಹುತಗಳಿಗೆ ಸರ್ಕಾರವೇ ಕಾರಣವಾಗಬೇಕಾಗುತ್ತದೆ ಎಂದು ಬಿ.ವೈ. ವಿಜಯೇಂದ್ರ ಎಚ್ಚರಿಕೆ ನೀಡಿದರು.

ಪೊಲೀಸರಿಗೆ ಧಮ್ಕಿ ಕೇಸ್‌; ಶಾಸಕ ಹರೀಶ್ ಪೂಂಜಾ ಅರೆಸ್ಟ್‌ ಆಗ್ತಾರಾ? ಮನೆ ಮುಂದೆ ಹೈಡ್ರಾಮಾ!

ಮಂಗಳೂರು: ಪ್ರತಿಭಟನೆ ವೇಳೆ ಪೊಲೀಸರಿಗೆ ಧಮ್ಕಿ ಹಾಕಿದ ಆರೋಪದಲ್ಲಿ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ (Harish Poonja) ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿರುವ ಬೆನ್ನಲ್ಲೇ ಅವರನ್ನು ಅರೆಸ್ಟ್‌ ಮಾಡಲು ಮನೆಗೆ ಪೊಲೀಸರು ಬಂದಿದ್ದಾರೆ. ಆದರೆ, ತಮ್ಮ ರೂಮಿನಲ್ಲೇ ಇರುವ ಹರೀಶ್‌ ಪೂಂಜಾ ಅವರು ಇನ್ನೂ ಹೊರಗೆ ಬಂದಿಲ್ಲ. ಈ ನಡುವೆ ಸ್ಥಳಕ್ಕೆ ಲಾಯರ್‌ಗಳು, ಬಿಜೆಪಿ ಕಾರ್ಯಕರ್ತರು ಬಂದಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಹೈಡ್ರಾಮಾಕ್ಕೆ ಕಾರಣವಾಯಿತು.

ಅಕ್ರಮ ಕಲ್ಲು ಗಣಿಗಾರಿಕೆ (Illegal quarrying) ಪ್ರಕರಣದಲ್ಲಿ ಬಿಜೆಪಿ ಯುವ ಮುಖಂಡನ ಬಂಧನ ಖಂಡಿಸಿ ನಡೆದ ಪ್ರತಿಭಟನೆ ವೇಳೆ ಬೆಳ್ತಂಗಡಿ ಪಿಎಸ್‌ಐಗೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಶಾಸಕರ ವಿರುದ್ಧ ಕೇಸ್‌ ದಾಖಲಾಗಿತ್ತು. ಈ ಸಂಬಂಧ ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ಮಿತ್ತಿಲದಲ್ಲಿರುವ ಶಾಸಕ ಹರೀಶ್ ಪೂಂಜಾ ಮನೆಗೆ ಬುಧವಾರ (ಮೇ 22) ಮಧ್ಯಾಹ್ನದ ವೇಳೆಗೆ ಪೊಲೀಸರು ಆಗಮಿಸಿದ್ದರು. ಸರ್ಕಲ್ ಇನ್ಸ್‌ಪೆಕ್ಟರ್‌ ಸುಬ್ಬಪೂರ್ ಮಠ್‌ ಮತ್ತು ಪಿಎಸ್ಐ ಚಂದ್ರಶೇಖರ್ ನೇತೃತ್ವದ ಪೊಲೀಸರ ತಂಡ ಆಗಮಿಸಿತ್ತು.

Harish Poonja case Belthangady BJP MLA Harish Poonja arrested for taunting police

ಶಾಸಕರ ಮನೆ ಮುಂದೆ ಸೇರಿದ ನೂರಾರು ಬಿಜೆಪಿ ಕಾರ್ಯಕರ್ತರು

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮನೆಗೆ ಪೊಲೀಸರು ಆಗಮಿಸಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಧಾವಿಸಿದ್ದಾರೆ. ಅಲ್ಲದೆ, ಇನ್ನೂ ಹಲವರು ಅತ್ತ ಆಗಮಿಸಿ ಆಕ್ರೋಶವನ್ನು ಹೊರಹಾಕಿದ್ದಾರೆ.

ಮನೆ ಮುಂದೆ ಹೈಡ್ರಾಮಾ

ಹರೀಶ್ ಪೂಂಜ ಬಂಧನಕ್ಕೆ ಪೊಲೀಸರು ಬಂದಿದ್ದರಿಂದ ಗರ್ಡಡಿ ಹರೀಶ್ ಪೂಂಜ ನಿವಾಸಕ್ಕೆ ವಕೀಲರ ತಂಡ ಭೇಟಿ ನೀಡಿದೆ. ಪೊಲೀಸರ ಜತೆ ವಕೀಲರ ತಂಡದಿಂದ ಮಾತುಕತೆ ನಡೆಸಲಾಯಿತು. ಈ ವೇಳೆ ನಿರಂತರವಾಗಿ ಚರ್ಚೆ ನಡೆಸಲಾಯಿತು. ಮನೆಯ ಹೊರಗಡೆ ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗುತ್ತಿದ್ದರು. ಅಲ್ಲದೆ, ಪೊಲೀಸರು ಹಾಗು ಕಾರ್ಯಕರ್ತರ ನಡುವಿನ ಹೈ ಡ್ರಾಮಾಕ್ಕೆ ಪೂಂಜ ನಿವಾಸವು ಸಾಕ್ಷಿಯಾಯಿತು. ಇನ್ನು ಪೂಂಜಾ ನಿವಾಸದತ್ತ ಸಂಸದ ನಳಿನ್ ಕುಮಾರ್ ಕಟೀಲ್, ಬ್ರಿಜೇಶ್ ಚೌಟ ದೌಡಾಯಿಸಿದರು.

ನೋಟಿಸ್ ಇಲ್ಲದೇ ಅರೆಸ್ಟ್ ಮಾಡುವುದು ಅಪರಾಧ

ಈ ವೇಳೆ ಶಾಸಕ ಹರೀಶ್ ಪೂಂಜಾ ಪರ ವಕೀಲ ಶಂಭು ಶಂಕರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ವಿಚಾರಣೆಗೆ ಕರೆದುಕೊಂಡು ಹೋಗಲು ಬಂದಿದ್ದಾಗಿ ಪೊಲೀಸರು ಹೇಳಿದ್ದಾರೆ. ನಿಯಮ ಪ್ರಕಾರ ಆ ಕ್ರಮ ಇಲ್ಲ. ಪೊಲೀಸರು ಮನೆಗೆ ಒಳಗೆ ಕುಳಿತಿದ್ದಾರೆ. ನೋಟಿಸ್ ಈವರೆಗೆ ಕೊಟ್ಟಿಲ್ಲ. ಶಾಸಕರು ಅವರ ಕೆಲಸ ಮಾಡದ ಹಾಗೆ ಮಾಡಿದ್ದಾರೆ. ಮನೆಯಲ್ಲಿಯೇ ಕೂಡಿ ಹಾಕಿದ ಹಾಗೆ ಮಾಡಿದ್ದಾರೆ. ಒತ್ತಡಕ್ಕೆ ಮಣಿದು ಪೊಲೀಸರು ಇಲ್ಲಿಯೇ ಕುಳಿತಿದ್ದಾರೆ. ನೋಟಿಸ್ ಇಲ್ಲದೆ ಅರೆಸ್ಟ್ ಮಾಡುವುದು ಅಪರಾಧ ಎಂದು ಹೇಳಿದ್ದಾರೆ.

ಯಾವುದೇ ನೋಟಿಸ್ ನೀಡದೆ, ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಕರೆಯುವಂತಿಲ್ಲ. ಅದು ಕಾನೂನು ಬಾಹಿರವಾಗುತ್ತದೆ. ಅಲ್ಲದೆ, ಶಾಸಕ ಹರೀಶ್ ಪೂಂಜಾ ವಿರುದ್ಧ ಎರಡು ಎಫ್‌ಐಆರ್ ದಾಖಲಾಗಿವೆ. ಅದರಲ್ಲಿ ಕೆಲವು ಸೆಕ್ಷನ್ ನಾನ್ ಬೇಲಬಲ್ ಸೆಕ್ಷನ್‌ಗಳಿವೆ. ಸುಪ್ರೀಂ ಕೋರ್ಟ್‌ನ ಈ ಹಿಂದಿನ ಆದೇಶದ ಪ್ರಕಾರ 7 ವರ್ಷಕ್ಕಿಂತ ಕಡಿಮೆ ಶಿಕ್ಷೆಯಾಗುವ ಪ್ರಕರಣಗಳಲ್ಲಿ ಬಂಧನ ಅನಿವಾರ್ಯವಲ್ಲ. ಅತ್ಯಂತ ಅಪರೂಪದ ಪ್ರಕರಣಗಳಲ್ಲಿ ಬಂಧನ ಮಾಡಲು ಅವಕಾಶವಿರುತ್ತದೆ. ಆದರೆ, ಎಲ್ಲ ಪ್ರಕರಣಗಳಲ್ಲೂ ಬಂಧನ ಅಗತ್ಯವಿಲ್ಲ. ವಿಚಾರಣೆಗೆ ಕರೆಯಲು ಪೇದೆಯ ಮೂಲಕ ನೋಟಿಸ್ ನೀಡಬಹುದು. ಆದರೆ ಹಿರಿಯ ಅಧಿಕಾರಿಗಳು ಬರುವ ಅಗತ್ಯತೆ ಏನಿದೆ? ಇದು ಶಾಸಕ ಪೂಂಜಾ ವಿರುದ್ಧ ಟಾರ್ಗೆಟ್ ಮಾಡಿ ಬಂಧಿಸುವ ಹುನ್ನಾರ ಆಗಿದೆ. ನೋಟಿಸ್ ನೀಡಲು ಕೇಳಿದ್ದೇವೆ. ಈ ವರೆಗೂ ನೋಟಿಸ್ ನೀಡಿಲ್ಲ ಎಂದು ವಕೀಲ ಶಂಭು ಶಂಕರ್ ಆಪಾದಿಸಿದರು.

Harish Poonja case Belthangady BJP MLA Harish Poonja arrested for taunting police

ಏನಿದು ಕೇಸ್‌?

ಬೆಳ್ತಂಗಡಿಯ ಮೆಲಂತಬೆಟ್ಟುವಿನ ಕಲ್ಲು ಕ್ವಾರಿ ಮೇಲೆ ತಹಸೀಲ್ದಾರ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಗುರುವಾಯನಕೆರೆಯ ಬಿಜೆಪಿಯ ಯುವ ಮೋರ್ಚಾದ ತಾಲೂಕು ಅಧ್ಯಕ್ಷ ಶಶಿರಾಜ್ ಶೆಟ್ಟಿ ಎಂಬುವವರನ್ನು ಬಂಧನ ಮಾಡಲಾಗಿತ್ತು. ಇದನ್ನು ಖಂಡಿಸಿ ರಾತ್ರೋರಾತ್ರಿ ಪೊಲೀಸ್ ಠಾಣೆ ಎದುರು ಶಾಸಕ ಹರೀಶ್ ಪೂಂಜಾ ಹಾಗೂ ಬಿಜೆಪಿ ಕಾರ್ಯಕರ್ತರು ಧರಣಿ ನಡೆಸಿ, ಆಕ್ರೋಶ ಹೊರಹಾಕಿದ್ದರು.

ಇದನ್ನೂ ಓದಿ | Phone tapping: ಗೃಹ ಸಚಿವರಿಗೆ ಅಶೋಕ್‌ ರೈಟಿಂಗ್‌ನಲ್ಲಿ ಕಂಪ್ಲೇಂಟ್‌ ಕೊಡಲಿ; ಫೋನ್‌ ಕದ್ದಾಲಿಕೆ ಆರೋಪಕ್ಕೆ ಡಿಕೆಶಿ ತಿರುಗೇಟು

ಪ್ರತಿಭಟನೆ ವೇಳೆ ‘ಪೊಲೀಸ್ ಠಾಣೆ ನಿಮ್ಮ‌ ಅಪ್ಪಂದಾʼ ಅಂತ ಬೆಳ್ತಂಗಡಿ ಪಿಎಸ್‌ಐ ಮುರುಳಿಧರ್ ನಾಯ್ಕ್‌ಗೆ ಶಾಸಕ ಹರೀಶ್‌ ಪೂಂಜಾ ಧಮ್ಕಿ ಹಾಕಿದ್ದರು. ಮನೆಯಲ್ಲಿದ್ದವರನ್ನು ಯಾವುದೇ ದಾಖಲೆಗಳಿಲ್ಲದೆ ಹೆಂಗಸರು, ಮಕ್ಕಳೆದುರು ಬಂಧನ ಮಾಡಿರುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ. ಅಮಾಯಕನ ಬಂಧನವಾಗಿದ್ದು, ಕೂಡಲೇ ಆತನನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದ್ದರು. ಹೀಗಾಗಿ ಶಾಸಕರ ವಿರುದ್ಧ ಪ್ರಕರಣ ದಾಖಲಾಗಿತ್ತು.

Exit mobile version