Site icon Vistara News

ಶಾಲಾ ಪಾಠದಲ್ಲಿ RSS: ವಿವಾದಕ್ಕೊಳಗಾಗಿರುವ ಹೆಡಗೇವಾರ್‌ ಕುರಿತ ಪೂರ್ಣ ಪಠ್ಯ ಇಲ್ಲಿದೆ ನೋಡಿ!

ಬೆಂಗಳೂರು: ಕರ್ನಾಟಕದ ಶಾಲಾ ಪಠ್ಯ ಪುಸ್ತಕಗಳ ಬದಲಾವಣೆ ಈಗ ವಿವಾದವಾಗಿದೆ. ಪಠ್ಯಪುಸ್ತಕ ಪರಿಷ್ಕರಣೆಗೆ ಲೇಖಕ ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ರಾಜ್ಯ ಸರ್ಕಾರ ನೇಮಿಸಿದ್ದ ಸಮಿತಿಯು ಅನೇಕ ಬದಲಾವಣೆಗಳನ್ನು ಮಾಡಿದೆ. ಇದರಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ(RSS) ಸಂಸ್ಥಾಪಕ ಡಾ. ಕೇಶವ ಬಲಿರಾಂ ಹೆಡಗೇವಾರ್‌ (K. B. Hedgewar) ಅವರ ಭಾಷಣದ ಪಠ್ಯವನ್ನು ಸೇರಿಸಿರುವುದೂ ಒಂದು. ಹೆಡಗೇವಾರ್‌ ಅವರ ಕುರಿತು ಪಠ್ಯದಲ್ಲಿ ಸೇರಿಸುವ ಬಗ್ಗೆ ಅನೇಕ ಚರ್ಚೆಗಳು, ವಿವಾದಗಳು ಉಂಟಾಗುತ್ತಿವೆ. ಆದರೆ ಈ ಪಠ್ಯದಲ್ಲಿ ಏನಿರಲಿದೆ ಎಂಬುದರ ಬಗ್ಗೆ ಮಾಹಿತಿ ಲಭ್ಯವಿಲ್ಲ. ಕೆ.ಬಿ. ಹೆಡಗೇವಾರ್‌ ಅವರು ಬರೆದ ʼಪ್ರೇರಣಾʼ ಎಂಬ ಕೃತಿಯಿಂದ ಆಯ್ದ ಭಾಗವನ್ನು ಈ ಪಠ್ಯದಲ್ಲಿ ಸೇರಿಸಲಾಗಿದೆ. ನೀವು ಯಾರನ್ನು ಆದರ್ಶ ವ್ಯಕ್ತಿಯನ್ನಾಗಿ ಸ್ವೀಕರಿಸಬೇಕು ಎಂದು ಕೆ.ಬಿ. ಹೆಡಗೇವಾರ್‌ ಅವರು ಮಾತನಾಡಿದ್ದಾರೆ. ಆ ಪಾಠದ ಸಂಪೂರ್ಣ ಪಠ್ಯ ಇಲ್ಲಿದೆ.

ಪಠ್ಯ ಹೀಗಿದೆ:

ಮೊದಲ ಪುಟ

ಪ್ರವೇಶ : “ನಿಮ್ಮ ಆದರ್ಶ ವ್ಯಕ್ತಿ ಯಾರು?” ಎಂಬ ಪ್ರಶ್ನೆ ಕೇಳಿದಾಗ ಜನರು ಬಗೆ ಬಗೆಯ
ಉತ್ತರಗಳನ್ನು ನೀಡುವುದುಂಟು. ಕೆಲವರಿಗೆ ದೇಶದಲ್ಲಿ ಆಗಿಹೋದ ಸ್ವಾತಂತ್ರ್ಯ ಹೋರಾಟಗಾರರು
ಆದರ್ಶವಾಗಿ ತೋರಬಹುದು. ಕೆಲವರಿಗೆ ತಮ್ಮ ಊರು ಅಥವಾ ರಾಜ್ಯದ ಮಹಾನ್‌ ವ್ಯಕ್ತಿಗಳು,
ಐತಿಹಾಸಿಕ ವ್ಯಕ್ತಿಗಳು ಆದರ್ಶವಾಗಬಹುದು. ಕೆಲವರು ತಮ್ಮ ಕಣ್ಣೆದುರು ಕಾಣುವ ಹಿರಿಯರನ್ನು
ಆದರ್ಶವೆಂದು ಗಣಿಸಬಹುದು. ಇನ್ನು ಕೆಲವರಿಗೆ ತಂತಮ್ಮ ತಂದೆತಾಯಿಯರು ಅಥವಾ ಕುಟುಂಬದ
ಯಾವುದಾದರೂ ಸದಸ್ಯರೇ ಆದರ್ಶವಾಗಿರುತ್ತಾರೆ. ಆದರೆ ವ್ಯಕ್ತಿಯ ಹೊರತಾಗಿ ಒಂದು ತತ್ತ್ವವನ್ನು
ಆದರ್ಶ ಎಂದು ಪರಿಗಣಿಸುವವರು ವಿರಳ. ವ್ಯಕ್ತಿಗಳನ್ನು ಆದರ್ಶವಾಗಿ ಪರಿಗಣಿಸಿದಾಗ, ಅವರು ನೂರಕ್ಕೆ
ನೂರು ದೋಷರಹಿತರಾಗಿ ಸತ್ಪುರುಷರಾಗಿ ಮಹಾತ್ಮರಾಗಿ ಇರಬೇಕಾದ್ದು ಒ೦ದು ಅನಿವಾರ್ಯತೆ.
ಆದರೆ ಅಂಥ ನಿಷ್ಕಳಂಕ ವ್ಯಕ್ತಿತ್ವ ಸಿಗುವುದು ಸಾಧ್ಯವೆ? ಬಲು ಕಠಿಣ. ಹಾಗಾಗಿ ಎಂದೂ ವ್ಯಕ್ತಿಗಳನ್ನು
ಉದಾಹರಣೆಯಾಗಿ ಅಥವಾ ಆದರ್ಶವಾಗಿ ಇರಿಸಿಕೊಳ್ಳುವ ಬದಲು ಎಂದೂ ಬದಲಾಗದ ತತ್ತ್ವಗಳನ್ನು.
ಶಾಶ್ಚತ ಮೌಲ್ಯಗಳನ್ನು ಆದರ್ಶವಾಗಿ ಇರಿಸಿಕೊಳ್ಳುವುದು ಒಳ್ಳೆಯದು ಎಂಬ ಆಶಯವನ್ನು ಇಲ್ಲಿ
ಲೇಖಕರು ಪ್ರತಿಪಾದಿಸಿದ್ದಾರೆ.

ನಿಜವಾದ ಆದರ್ಶ ಪುರುಷ ಯಾರಾಗಬೇಕು?

ಎರಡನೇ ಪುಟ

ನನ್ನ ಗೆಳೆಯರು ನನಗೆ ಬಗೆ ಬಗೆಯ ಪ್ರಶ್ನೆಗಳನ್ನು ಹಾಕುವುದುಂಟು. ಅವುಗಳಲ್ಲೊಂದು: ನಾವು ನಮ್ಮ ಮುಂದೆ ಇಟ್ಟುಕೊಳ್ಳಬೇಕಾದ ಆದರ್ಶ ಯಾವುದು? ತತ್ತ್ವವೇ ಅಥವಾ ವ್ಯಕ್ತಿಯೇ? ಯಾರಾದರೊಬ್ಬ ವ್ಯಕ್ತಿಯನ್ನೇ ಆದರ್ಶವೆಂದು ನಾವು ಭಾವಿಸುವುದಾದರೆ, ಆತ ಯಾರು?

ತತ್ತ್ವವೇ ಎಂದೆಂದೂ ನಮ್ಮ ಆದರ್ಶವಾಗಿರಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ತತ್ತ್ವದ ಪ್ರತಿಪಾದನೆಯು ಎಷ್ಟು ಸವಿ ಅನಿಸುತ್ತದೋ ಅದನ್ನು ಆಚರಣೆಯಲ್ಲಿ ತರುವುದು ಅಷ್ಟೇ ಕಠಿಣ. ಸಮಾಜದಲ್ಲಿ ಮೂರ್ತಿಪೂಜೆಯು ರೂಢಿಯಲ್ಲಿ ಬಂದಿರುವುದಕ್ಕೂ ಇದೇ ಕಾರಣ. ವಾಸ್ತವವಾಗಿ ಕಲ್ಲಿನಲ್ಲಿ ಭಗವಂತ ಇದ್ದಾನೆಯೆ? ಅದೃಶ್ಯ, ಅವ್ಯಕ್ತ ಹಾಗೂ ಅಸ್ಪಷ್ಟ ವಿಶ್ವಚಾಲಕ ಶಕ್ತಿಯನ್ನು ನಿರ್ಗುಣ ಮತ್ತು ನಿರಾಕಾರ ರೂಪದಲ್ಲಿ ಪೂಜೆ ಮಾಡುವುದು ಎಲ್ಲರಿಗೂ ಸಾಧ್ಯವಿಲ್ಲ. ಆದ್ದರಿಂದ ಆ ವಿಶ್ವವ್ಯಾಪೀ ಶಕ್ತಿಯದೇ ದೃಶ್ಯರೂಪವಾಗಿ ಭಾವಿಸಿ ಮೂರ್ತಿಯನ್ನು ಜನರು ಪೂಜಿಸುತ್ತಾರೆ. ಆದರೂ ಮೂರ್ತಿಪೂಜೆಯೇ ಧರ್ಮದ ಜೀವಾಳವಲ್ಲ. ಮೂರ್ತಿಪೂಜೆ ಮಾಡುವುದು, ಆ ಮೂರ್ತಿ ಸುಂದರವಾಗಿದೆ, ಲಕ್ಷಣವಾಗಿದೆ ಎಂದಾಗಲೀ ಉತ್ತಮ ಕಲೆಯ ಪ್ರತೀಕ ಎಂದಾಗಲೀ ಅಲ್ಲ. ಆದರೆ ಒಂದು ವಿಶಿಷ್ಟ ತತ್ತ್ವವು ಆ ಮೂರ್ತಿಯ ರೂಪದಲ್ಲಿ ಗೋಚರವಾಗುತ್ತದೆ ಎಂದೇ ಅದಕ್ಕೆ ಪೂಜೆ ಸಲ್ಲುತ್ತದೆ. ಜನಸಾಮಾನ್ಯರಿಗೆ ವಿಶ್ವಶಕ್ತಿಯ ನಿರಾಕಾರ ಸ್ವರೂಪದ ಅರಿವು ಮೂಡಿಸಲು ಮೂರ್ತಿ ಪೂಜೆಯು ಒಂದು ಸುಲಭ ಸಾಧನ, ಅಷ್ಟೆ.

ಒಬ್ಬ ಆದರ್ಶ ವ್ಯಕ್ತಿಯ ಬಗ್ಗೆ ಚಿ೦ತಿಸುವಾಗಲೂ ಇದೇ ನಮ್ಮ ದೃಷ್ಟಿ. ನಮ್ಮಿಂದ ಎಂದೂ ದೂರವಾಗದಂಥ ಹಾಗೂ ನಾವೂ ಆತನಿಂದ ದೂರ ಹೋಗದಂಥ ವ್ಯಕ್ತಿಯೇ ನಮ್ಮ ಆದರ್ಶ ಆಗಬಲ್ಲನು. ನಾವು ಯಾರನ್ನು ಸದ್ಗುಣಗಳ ಸಾಕಾರ ಸ್ವರೂಪನೆಂದೂ, ಸರ್ವಥಾ ಪ್ರಮಾದಾತೀತನೆಂದೂ ಭಾವಿಸುವೆವೋ ಆ ವ್ಯಕ್ತಿಯೇ ನಮ್ಮ ಆದರ್ಶವಾಗಬೇಕು. ಇಲ್ಲವಾದಲ್ಲಿ ಆದರ್ಶವೆಂದು ಭಾವಿಸಲ್ಪಟ್ಟ ವ್ಯಕ್ತಿಯಿಂದ ಏನಾದರೂ ತಪ್ಪಾದರೆ ನಾವು ಬೇರೊಬ್ಬನನ್ನು ಹುಡುಕಬೇಕಾಗುತ್ತದೆ. ಆ ಎರಡನೆಯವನಲ್ಲಿ ದೋಷ ಕಂಡುಬಂದರೆ, ಅವನ ಬಗ್ಗೆ ಇರುವ ಶ್ರದ್ಧೆ ಸಹ ಹಾರಿಹೋಗುವುದು ಸ್ವಾಭಾವಿಕ. ಆಗ ಪುನಃ ನಾವು ಮೂರನೆಯ ವ್ಯಕ್ತಿಯನ್ನು ಹುಡುಕುವಂತೆ ಆದೀತು. ಹೀಗಾದರೆ ನಿತ್ಯವೂ ಹೊಸ ಹೊಸ ವ್ಯಕ್ತಿಯನ್ನು ಆದರ್ಶಕ್ಕಾಗಿ ಹುಡುಕುತ್ತ ಹೊರಡಬೇಕಾಗುತ್ತದೆ. ಆದ್ದರಿಂದ ಆದರ್ಶ ವ್ಯಕ್ತಿಯನ್ನು ಕುರಿತು ಯೋಚಿಸುವಾಗ ದೋಷರಹಿತ ವ್ಯಕ್ತಿಯನ್ನಾರಿಸುವುದೇ ಯೋಗ್ಯ. ಅಷ್ಟೇ ಅಲ್ಲ, ನಾವು ಆದರ್ಶವೆಂದು ಭಾವಿಸುವ ಎಲ್ಲ ಗುಣಗಳೂ ಆ ವ್ಯಕ್ತಿಯಲ್ಲಿ ನಮಗೆ ಎದ್ದು ಕಾಣಬೇಕು.

ಇದನ್ನೂ ಓದಿ: ʼಮೈಸೂರು ಹುಲಿʼಯನ್ನು ಕೈಬಿಟ್ಟಿಲ್ಲ: ಟಿಪ್ಪು ಸುಲ್ತಾನ್‌ ಪಾಠ ಇರಲಿದೆ ಎಂದ ನಾಗೇಶ್‌

ನಾವು ಧ್ವಜವನ್ನೇ ಗುರುವೆಂದು ಭಾವಿಸಿ ಗುರುಪೂರ್ಣಿಮಾ ದಿನದಂದು ಅದನ್ನು ಪೂಜಿಸುತ್ತೇವೆ. ನಾವು ಯಾವ ವ್ಯಕ್ತಿಯನ್ನೂ ಪೂಜಿಸುವುದಿಲ್ಲ. ಏಕೆಂದರೆ ಯಾರೇ ಆಗಲಿ ಅವರು ತಮ್ಮ ಮಾರ್ಗದಲ್ಲಿ ಅಚಲರಾಗಿಯೇ ಇದ್ದಾರು ಎಂಬ ಭರವಸೆಯಾದರೂ ಏನು? ಕೇವಲ ತತ್ತ್ವ ಒಂದೇ ಆ ಅಚಲ ಪದವಿಯಲ್ಲಿ ಇರಬಲ್ಲದು. ಅದನ್ನು ಧ್ವಜವು ಸಾಂಕೇತಿಸುವುದು. ಯಾವ ಧ್ವಜವನ್ನು ನೋಡಿದೊಡನೆ ನಮ್ಮ ರಾಷ್ಟ್ರದ ಸಮಸ್ತ ಇತಿಹಾಸ, ಸಂಸ್ಕೃತಿ ಹಾಗೂ ಪರಂಪರೆಗಳು ನಮ್ಮ ಕಣ್ಣಿಗೆ ಕಟ್ಟುತ್ತವೆಯೋ, ಯಾವುದನ್ನು ಕಂಡ ಕೂಡಲೇ ಹೃದಯದ ಭಾವನೆಗಳು ಉಕ್ಕಿ ಬರುತ್ತವೆಯೋ, ಹೃದಯದಲ್ಲಿ ಅಪೂರ್ವ ಸ್ಫೂರ್ತಿಯ ಸಂಚಾರವಾಗುತ್ತದೆಯೋ ಅಂತಹ ಧ್ವಜವನ್ನೇ ನಾವು ನಮ್ಮ ಗುರುವೆಂದು ಭಾವಿಸುತ್ತೇವೆ.

ಮಹಾಪುರುಷರ ವಿಷಯದಲ್ಲಿ ಕೆಲವು ವಿಚಿತ್ರ ಭಾವನೆಗಳು ಸಮಾಜದಲ್ಲಿ ಬೇರೂರಿಬಿಟ್ಟಿವೆ. ಶ್ರೀಕೃಷ್ಣನನ್ನು ಆದರ್ಶ ಎನ್ನಬಹುದಾದಂಥ ಹಲವಾರು ಮಹಾನ್‌ ಕಾರ್ಯಗಳನ್ನು ಅವನು ತನ್ನ ಜೀವನದಲ್ಲಿ ಸಾಧಿಸಿದ್ದಾನೆ. ಆದರೆ ಶ್ರೀಕೃಷ್ಣನು ತನ್ನ ಜೀವನದಲ್ಲಿ ಮಾಡಿದ ಅದ್ಭುತ ಕಾರ್ಯಗಳನ್ನು ನಮ್ಮ ಕೈಗಳಿಂದ ಮಾಡುವುದು ಅಸಾಧ್ಯ; ಅವನಾದರೋ ದೇವರು. ಪೂರ್ಣಾವತಾರನಾಗಿದ್ದ; ದೇವರ ಅನುಕರಣೆಯನ್ನು ಮನುಷ್ಯರು ಮಾಡಲು ಸಾಧ್ಯವೆ? – ಇತ್ಯಾದಿ ಹಲವಾರು ಭಾವನೆಗಳು ನಮ್ಮ ಸಮಾಜದಲ್ಲಿ ರೂಢವಾಗಿವೆ. ಶ್ರೀಕೃಷ್ಣನಂತಹ ಪೂರ್ಣ ಪುರುಷರನ್ನು ಈಶ್ವರನ ಅಥವಾ ಅವತಾರಿಗಳ ಸಾಲಿಗೆ ತಳ್ಳಿ, ಅವರಂತೆ ನಡೆಯುವುದು ನಮ್ಮ ಶಕ್ತಿಗೆ ನಿಲುಕದ ವಿಷಯವೆಂಬ ಭಾವನೆ ಬಂದಿದೆ. ಶ್ರೀರಾಮ ಶ್ರೀಕೃಷ್ಣರನ್ನು ಪೂಜಿಸುವುದು, ರಾಮಾಯಣ, ಮಹಾಭಾರತ, ಗೀತೆ ಮುಂತಾದ ಶ್ರೇಷ್ಠ ಗ್ರಂಥಗಳನ್ನು ಪಠಿಸುವುದು ಗುಣಗ್ರಹಣಕ್ಕಾಗಿ ಅಲ್ಲ. ಕೇವಲ ಪುಣ್ಯಸಂಚಯಕ್ಕಾಗಿ! ಎಂಥ ಸಂಕುಚಿತ ಯೋಜನೆ ಇದು!

ಇದಕ್ಕೆ ಒಂದು ಸಣ್ಣ ಉದಾಹರಣೆ ಹೇಳುತ್ತೇನೆ. ಒಮ್ಮೆ ನಮ್ಮ ಪರಿಚಿತ ಮಹನೀಯರೊಬ್ಬರು ನಮ್ಮಲ್ಲಿ ಬಂದರು. ಅವರು ದಿನನಿತ್ಯ ಸ್ನಾನ, ಸಂಧ್ಯಾವಂದನೆಗಳಾದ ನಂತರ ಅಧ್ಯಾತ್ಮ ರಾಮಾಯಣದ ಒಂದು ಅಧ್ಯಾಯವನ್ನು ಓದುತ್ತಿದ್ದರು. ಒಂದು ದಿನ ನಾನು ಊಟದ ಸಮಯದಲ್ಲಿ. “ನೀವು ಈಗಾಗಲೇ ಪಠಿಸಿರುವ ಅಧ್ಯಾಯಗಳನ್ನು ಆಚರಣೆಯಲ್ಲಿ ತರಲು ಯತ್ನಿಸಿರಬೇಕು ಅಲ್ಲವೆ?” ಎಂದು ಅವರನ್ನು ಕೇಳಿದೆ. ನಾನು ಅಷ್ಟು ಕೇಳಿದ್ದೇ ತಡ ಅವರು ಕೆರಳಿ ಕೆಂಡವಾದರು. “ನೀವು ಶ್ರೀರಾಮಚಂದ್ರನ, ಆ ಪ್ರತ್ಯಕ್ಷ ಭಗವಂತನ ಅಪಹಾಸ್ಯ ಮಾಡುವಿರಾ? ಭಗವಂತನ ಗುಣ ಎಂದಾದರೂ ಮನುಷ್ಯನಲ್ಲಿ ಬಂದೀತೆ? ಆದರೆ ಪುಣ್ಯಸಂಚಯ ಹಾಗೂ ಮೋಕ್ಷಪ್ರಾಪ್ತಿಗಾಗಿ ಗ್ರಂಥಪಠಣ ಮಾಡುತ್ತೇನೆʼʼ ಎಂದರು.

ಇದನ್ನೂ ಓದಿ: ಯಾರೆಷ್ಟೇ ವಿರೋಧಿಸಿದರೂ ಹೆಡಗೇವಾರ್ ‌ಪಾಠ ಸೇರ್ಪಡೆ ಖಚಿತ ಎಂದ ಬಿ.ಸಿ. ನಾಗೇಶ್

ನಮ್ಮ ಸಮಾಜದ ಅಧಃಪತನಕ್ಕೆ ಕಾರಣವಾದ ಅಂಶಗಳಲ್ಲಿ ಇದೂ ಒಂದು. ವಾಸ್ತವಿಕವಾಗಿ ನಮ್ಮ ಧಾರ್ಮಿಕ ಸಾಹಿತ್ಯದಲ್ಲಿ ಒಂದಕ್ಕಿಂತ ಒಂದು ಶ್ರೇಷ್ಠವಾದ ಗ್ರಂಥಗಳಿವೆ. ನಮ್ಮ ಗತ ಇತಿಹಾಸವಾದರೂ ಅಷ್ಟೇ. ಅತ್ಯಂತ ಮಹತ್ವಪೂರ್ಣವಾಗಿದೆ, ವೀರರಸಪ್ರಧಾನವಾಗಿದೆ. ಹಾಗೆಯೇ ಸ್ಫೂರ್ತಿದಾಯಕವೂ ಆಗಿದೆ. ಆದರೆ ನಾವೆಂದೂ ಅವುಗಳ ಬಗ್ಗೆ ಯೋಗ್ಯ ದೃಷ್ಟಿಯಿಂದ ಯೋಜಿಸಲು ಕಲಿತಿಲ್ಲ. ಎಲ್ಲಿಯಾದರೂ ಯಾರಾದರೊಬ್ಬ ಕರ್ತೃತ್ವವುಳ್ಳ ಅಥವಾ ವಿಚಾರವಂತ ವ್ಯಕ್ತಿ ಜನ್ಮತಾಳಿದರೆ ಸಾಕು, ನಾವು ಆತನನ್ನು ಅವತಾರಿಗಳ ಶ್ರೇಣಿಗೆ ತಳ್ಳಿಬಿಡುತ್ತೇವೆ. ಅವನಿಗೆ ದೇವತ್ವವನ್ನು ಹೊರಿಸಲು ಕಿಂಚಿತ್ತೂ ತಡಮಾಡೆವು. ಈಗಂತೂ ಛತ್ರಪತಿ ಶಿವಾಜಿ ಮತ್ತು ಲೋಕಮಾನ್ಯ ತಿಲಕರನ್ನು ಸಹ ಅವತಾರಿಗಳ ಪಟ್ಟಿಗೆ ಹಾಕಲಾಗಿದೆ.

ಮೂರನೇ ಪುಟ

ಶಿವಾಜಿ ಮಹಾರಾಜರನ್ನು ಶ್ರೀ ಶಂಕರರ ಅವತಾರವೆಂದು ಹೇಳಲಾಗುತ್ತಿದೆ. “ಶಿವಚರಿತ್ರೆ” (ಶಿವಾಜಿಯ ಚರಿತ್ರೆ)ಯಲ್ಲಿ ಇದರ ಸಮರ್ಥನೆಗಾಗಿ ಒಂದು ಉಲ್ಲೇಖವನ್ನೂ ಸೇರಿಸಲಾಗಿದೆ! ಬಿಡಿ, ಲೋಕಮಾನ್ಯ ತಿಲಕರು ನಮ್ಮ ಕಾಲದಲ್ಲೇ ಆಗಿಹೋದ ನಾಯಕರು. ಆದರೆ ನಾನೊಮ್ಮೆ ಅವರದೊಂದು ಚಿತ್ರ ನೋಡಿದೆ. ಅದರಲ್ಲಿ ಅವರನ್ನು ಚತುರ್ಭುಜರನ್ನಾಗಿ ಮಾಡಿ, ಕೈಗಳಲ್ಲಿ ಶಂಖ, ಚಕ್ರ, ಗದೆ, ಪದ್ಮಗಳನ್ನು ಕೊಡಲಾಗಿತ್ತು! ಈ ರೀತಿ ನಮ್ಮ ಮಹಾಪುರುಷರನ್ನು ದೇವತೆಗಳ ಶ್ರೇಣಿಗೆ ತಳ್ಳುವುದು ನಿಜಕ್ಕೂ ಅದೆಷ್ಟು ವಿಚಿತ್ರ! ಮಹಾನ್‌ ವಿಭೂತಿ ಪುರುಷರು ಕಣ್ಣಿಗೆ ಬೀಳುವುದೇ ತಡ, ಅವರಾಗಲೇ ದೇವಸ್ಥಾನ ಸೇರಿದಂತೆಯೇ ಲೆಕ್ಕ! ಅಲ್ಲಿ ಅವರ ಪೂಜೆಯೇನೋ ಭಾವಭಕ್ತಿಗಳಿಂದ ನಡೆಯುತ್ತದೆ; ಆದರೆ ಅವರ ಗುಣಗಳನ್ನು ಅನುಸರಿಸುವ ಸೊಲ್ಲು ಮಾತ್ರ ಕೇಳುವುದಿಲ್ಲ. ಒಟ್ಟಿನಲ್ಲಿ ನಮ್ಮ ಜವಾಬ್ದಾರಿಯನ್ನು ಬುದ್ಧಿಪೂರ್ವಕವಾಗಿ ದೂರ ಸರಿಸುವಂಥ ಈ ಅದ್ಭುತ ಕಲೆಯನ್ನು ನಾವು ಸೊಗಸಾಗಿ ಸಾಧಿಸಿಕೊಂಡಿದ್ದೇವೆ.

ಆದ್ದರಿಂದ ನಾವು ಯಾರ ಗುಣಗಳನ್ನನುಸರಿಸಲು ಸಾಧ್ಯವೋ ಅಂಥ ನಿರ್ದೋಷ ವ್ಯಕ್ತಿಯನ್ನೇ ಆದರ್ಶವಾಗಿ ಭಾವಿಸಬೇಕಾಗಿದೆ. ಇನ್ನೂ ಪೂರ್ತಿಯಾಗಿ ಅರಳದ ಮೊಗ್ಗುಗಳ ಬದಲು ಪೂರ್ಣ ಅರಳಿದ ಪುಷ್ಪಗಳು ನಮ್ಮ ಆದರ್ಶವಾಗಬೇಕು. ಏಕೆಂದರೆ ಅರೆಬಿರಿದ ಮೊಗ್ಗುಗಳಲ್ಲಿ ಅಕಸ್ಮಾತ್‌ ಕ್ರಿಮಿಕೀಟಗಳು ಸೇರಿದರೆ ಮುಂದೆ ಅವು ಪೂರ್ಣ ವಿಕಸಿತವಾಗಲಾರವು. ಯಾವ ಪುಷ್ಪವು ಪೂರ್ತಿ ಅರಳಿದೆಯೋ, ನಿಸ್ಸಂದೇಹವಾಗಿಯೂ ಶುದ್ಧವಾಗಿ ಕ್ರಿಮಿರಹಿತವಾಗಿದೆಯೋ ಮತ್ತು ಯಾವುದರ ಒಳಹೊರಗನ್ನು ಚೆನ್ನಾಗಿ ಕಾಣಬಹುದೋ ಅಂಥ ಪುಪ್ಪವನ್ನೇ ಆದರ್ಶವಾಗಿ ಸ್ವೀಕರಿಸುವುದರಿಂದ ನಮ್ಮ ಕಾರಕುಸುಮದಲ್ಲಿಯೂ ನವಚೈತನ್ಯದ ಸೊಬಗು ತುಂಬಿಬಂದೀತು. ಇದನ್ನೇ ಬೇರೆ ಪದಗಳಲ್ಲಿ ಹೇಳುವುದಾದರೆ, ಯಾರ ಜೀವನಕುಸುಮವು ಪ್ರಸನ್ನವಾಗಿ ಪೂರ್ತಿಯಾಗಿ ಅರಳಿದೆಯೋ ಅಕಲಂಕವಾಗಿದೆಯೋ ನಿರ್ಭೀಡೆಯಿಂದ ಸೂರ್ಯಪ್ರಕಾಶಕ್ಕೆ ಮುಖಮಾಡಿ ನಿಂತಿದೆಯೋ, ಯಾರ ಧ್ಯೇಯವು ಶಾಶ್ವತ ಸತ್ಯವಾಗಿದೆಯೋ ಅಂಥ ವ್ಯಕ್ತಿಯನ್ನೇ ನಾವು ಆದರ್ಶವಾಗಿ ಸ್ವೀಕರಿಸಬೇಕು.

ಕೃತಿಕಾರರ ಪರಿಚಯ

ಕೇಶವ ಬಲಿರಾಮ ಹೆಡಗೇವಾರರು ವಿಶ್ವದ ಅತಿ ದೊಡ್ಡ ಸ್ವಯಂಸೇವಕ ಸಂಘಟನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್‌)ದ ಸಂಸ್ಥಾಪಕರು. ಇವರು 1889ರ ಏಪ್ತಿರ್‌ 1ರಂದು ಮಹಾರಾಷ್ಟ್ರದ ನಾಗಪುರದಲ್ಲಿ ಜನಿಸಿದರು. ಸ್ವಾಮಿ ವಿವೇಕಾನಂದರು. ಶ್ರೀ ಅರವಿಂದರು ಹಾಗೂ ನಾಯಕ ದಾಮೋದರ ಸಾವರ್ಕರರ ಚಿಂತನೆಗಳಿಂದ ಪ್ರಭಾವಿತರಾದರು. ಕಲಕತ್ತೆಯಲ್ಲಿ ವೈದ್ಯಕೀಯ ಪದವಿ ಪಡೆದು ವೈದ್ಯರಾಗಿ ಜನಸೇವೆ ಮಾಡಿದರು. ತಿಲಕರ ಸ್ವರಾಜ್ಯ ಹೋರಾಟದಿಂದ ಪ್ರಭಾವಿತರಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು ಹಾಗೂ ಅಸಹಕಾರ ಚಳವಳಿಯಲ್ಲಿ ಪಾಲ್ಗೊಂಡು ಜೈಲುವಾಸವನ್ನು ಅನುಭವಿಸಿದರು. ಜಂಗಲ್‌ ಸತ್ಯಾಗ್ರಹದಲ್ಲಿ ಪಾಲ್ಗೊಂಡ ಕಾರಣ ಮತ್ತೆ ೯ ತಿಂಗಳ ಅವಧಿಗೆ ಅವರು ಬ್ರಿಟಿಷ್‌ ಸರಕಾರದಲ್ಲಿ ಕಾರಾಗೃಹವಾಸ ಅನುಭವಿಸಬೇಕಾಯಿತು. ಭಾರತದ ಸ್ವಾತಂತ್ರ್ಯವು ಅರ್ಥಪೂರ್ಣವಾಗಬೇಕಾದರೆ ಭಾರತೀಯರು ತಮ್ಮ ನೆಲದ ಸಂಸ್ಕೃತಿ, ಸತ್ವಗಳನ್ನು ಅರಿತುಕೊಳ್ಳಬೇಕು ಎಂಬುದು ಅವರ ನಿಲುವಾಗಿತ್ತು. ಅವರು ಪ್ರಾರಂಭಿಸಿದ ರಾಷ್ಟೀಯ ಸ್ವಯಂಸೇವಕ ಸಂಘವು ಇಂದು ಸರಿಸುಮಾರು 6೦ ಲಕ್ಷ ಸದಸ್ಯರನ್ನು ಒಳಗೊಂಡಿದೆ. ಪ್ರಸ್ತುತ ಪಾಠವನ್ನು ಅವರ “ಪ್ರೇರಣಾ” ಎಂಬ ಕೃತಿಯಿಂದ ಆರಿಸಿಕೊಳ್ಳಲಾಗಿದೆ.

Exit mobile version