Site icon Vistara News

ಕನ್ನಡ ಸಾಹಿತ್ಯ ಸಮ್ಮೇಳನ | 11 ಮುಸ್ಲಿಮರಿಗೆ ಅವಕಾಶ, ಇಬ್ಬರಿಗೆ ಸನ್ಮಾನ; ಮುಸ್ಲಿಂ ಪ್ರಾತಿನಿಧ್ಯ ಇಲ್ಲವೆನ್ನುವುದು ಬೇಜವಾಬ್ದಾರಿ ಮಾತು: ಮಹೇಶ್‌ ಜೋಶಿ ಸಂದರ್ಶನ

kannada sahitya sammelana mahesh joshi interview

ರಮೇಶ ದೊಡ್ಡಪುರ, ಬೆಂಗಳೂರು
ಘೋಷಣೆಯಾಗಿ ಎರಡು ವರ್ಷವಾದರೂ ಕೊರೊನಾ ಕರಿನೆರಳಿನ ಕಾರಣಕ್ಕೆ ಮುಂದೂಡುತ್ತಲೇ ಸಾಗಿದ್ದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲಿ ಜನವರಿ 6-8ರವರೆಗೆ ನಡೆಯುತ್ತಿದೆ. ಪ್ರೊ. ದೊಡ್ಡರಂಗೇಗೌಡರ ಅಧ್ಯಕ್ಷತೆಯ ಸಮ್ಮೇಳನವೂ ಇತರೆ ಸಮ್ಮೇಳನಗಳಂತೆಯೇ ಒಂದಷ್ಟು ಚರ್ಚೆ, ವಿವಾದ ಹುಟ್ಟುಹಾಕಿದೆ. ಈ ಬಗ್ಗೆ ಕಸಾಪ ಅಧ್ಯಕ್ಷ ಡಾ. ಮಹೇಶ್‌ ಜೋಶಿ ಅವರು ʼವಿಸ್ತಾರ ನ್ಯೂಸ್‌ʼಗೆ ನೀಡಿದ ಸಂದರ್ಶನದಲ್ಲಿ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಸಾಹಿತ್ಯ ಸಮ್ಮೇಳನದ ಮುಖ್ಯ ಉದ್ದೇಶ ಏನು?
-ಸಾಹಿತ್ಯ ಸಮ್ಮೇಳನ ನಡೆಸುವ ಉದ್ದೇಶ ಬಹಳ ಸ್ಪಷ್ಟವಾಗಿದೆ. 1915ರಲ್ಲಿ ಕಸಾಪ ಸ್ಥಾಪನೆ ಆದ ಸಂದರ್ಭದಲ್ಲಿ ಏಕೀಕರಣವೇ ಮುಖ್ಯ ಉದ್ದೇಶವಾಗಿತ್ತು. ನಂತರದಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕ ಎಂಬ ವಿಚಾರದಲ್ಲಿ ಸಮ್ಮೇಳನ ನಡೆಯುತ್ತಿದ್ದವು. ಈಗ ಕನ್ನಡದ ಕಲೆ, ಜಾನಪದ, ಭಾಷೆ, ಉದ್ಯೋಗದ ಜತೆಗೆ ಜತೆಗೆ ಕನ್ನಡದ ಅಸ್ಮಿತೆಯ ರಕ್ಷಣೆಯ ಅಭಿವೃದ್ಧಿ. ಈ ವಿಚಾರದಲ್ಲಿ ಇರುವ ಸಮಸ್ಯೆಗಳೇನು? ಅದಕ್ಕೆ ಪರಿಹಾರ ಏನು? ಎಂಬ ಕುರಿತು ಗೋಷ್ಠಿಗಳನ್ನು ಏರ್ಪಡಿಸುವುದು ಸಮ್ಮೇಳನದ ಉದ್ದೇಶ.

ಹೊಸ ಸಾಹಿತಿಗಳಿಗೆ ಅವಕಾಶ, ಉತ್ತೇಜನ ನೀಡುವುದು. ಎಲ್ಲ ಕ್ಷೇತ್ರಗಳ ಸಮಸ್ಯೆ, ಸವಾಲುಗಳ ಜತೆಗೆ ಕನ್ನಡಿಗರು ಮಾಡಿರುವ ಸಾಧನೆಗಳನ್ನೂ ತಿಳಿಸಬೇಕು. 75ವರ್ಷಗಳಿಂದ ಕೇವಲ ಸಮಸ್ಯೆ ಮಾತ್ರವೇ ಇಲ್ಲ, ಸಾಧನೆಯೂ ಇದೆ. ಮೌಲಿಕವಾದ ಹಾಗೂ ಸರ್ಕಾರಕ್ಕೆ ಮಾರ್ಗದರ್ಶನ ನೀಡುವ ಕಾರ್ಯವೂ ಈ ಸಮ್ಮೇಳನಗಳಲ್ಲಿ ಆಗುತ್ತಿದೆ.

ನೀವು ತಿಳಿಸಿದ ಉದ್ದೇಶಕ್ಕೆ ಅನುಗುಣವಾಗಿ 86ನೇ ಸಮ್ಮೇಳನ ರೂಪಿತವಾಗಿದೆಯೇ?
-ಖಂಡಿತ ಆಗಿದೆ. ಆಹ್ವಾನ ಪತ್ರಿಕೆ ನೋಡಿ. ಮೊಟ್ಟ ಮೊದಲ ಬಾರಿಗೆ ಅತಿ ಹೆಚ್ಚು ಗೋಷ್ಠಿಗಳನ್ನು ಈ ಬಾರಿ ರೂಪಿಸಲಾಗಿದೆ. ನಾವು ಹೊಸಬರಿಗೆ ಅವಕಾಶಗಳನ್ನು ನೀಡುತ್ತಿದ್ದೇವೆ. ಕನ್ನಡದ ಮುಂದಿನ ಪೀಳಿಗೆ ಶಕ್ತಿಯುತವಾಗಿ ಬರಬೇಕಿದೆ. ಮುಂದಿನ ಪೀಳಿಗೆ ಕನ್ನಡವನ್ನೇ ಮಾತನಾಡದ ಸ್ಥಿತಿ ಇರುವಾಗ, ಅವರಿಗೆ ವೇದಿಕೆ ಕೊಟ್ಟು ಅವರಲ್ಲಿರುವ ಕನ್ನಡದ ಪ್ರೇಮ ಹೆಚ್ಚಿಸುವ ಕೆಲಸವನ್ನೂ ಸ್ಪಷ್ಟವಾಗಿ ಮಾಡುತ್ತಿದ್ದೇವೆ.

ಮುಸ್ಲಿಮರಿಗೆ ಪ್ರಾತನಿಧಿತ್ವ ನೀಡುವ ಕುರಿತು ಈಗ ಒಂದಷ್ಟು ಚರ್ಚೆಗಳು ನಡೆಯುತ್ತಿವೆಯಲ್ಲ?
-ಪ್ರಜಾಪ್ರಭುತ್ವದಲ್ಲಿ ಪರ ವಿರೋಧಗಳು ಬರುವುದು ಸಹಜ. ಧರ್ಮಸ್ಥಳದಲ್ಲಿ ನಡೆದ ಸಮ್ಮೇಳನಕ್ಕೂ ಪರ್ಯಾಯ ಮಾಡಿದರು. ಅತ್ಯಂತ ಶಿಸ್ತಿನಿಂತ, ಸುವ್ಯವಸ್ಥಿತವಾಗಿ ನಡೆಯುವ ಆಳ್ವಾಸ್‌ ನುಡಿಸಿರಿಗೂ ಪರ್ಯಾಯ ಮಾಡಿದರು. ಇದೇನೂ ಹೊಸದಲ್ಲ. ನಮ್ಮ ಸಮ್ಮೇಳನಕ್ಕೂ, ಪರ್ಯಾಯಕ್ಕೆ ಬರುವವರ ಸಂಖ್ಯೆಗೂ ಹೋಲಿಕೆ ಮಾಡಿ ನೋಡಿ. 200 ಜನ ಬರುತ್ತಾರೆ ಎಂದು ಹೇಳುತ್ತಿದ್ದಾರೆ. ಅದರಲ್ಲೂ ಎಷ್ಟು ಜನ ಹೋಗುವುದಿಲ್ಲೋ ಗೊತ್ತಿಲ್ಲ. ನಮ್ಮಲ್ಲಿ ಲಕ್ಷಾಂತರ ಜನರು ಬರುತ್ತಾರೆ. ಹಾಗಾಗಿ ಅದರ ಬಗ್ಗೆ ಅಷ್ಟೊಂದು ಮಹತ್ವವನ್ನು ನೀಡುವುದು ಬೇಡ.

ಕಸಾಪ ಸಮ್ಮೇಳನಕ್ಕೆ ಪರ್ಯಾಯ ನಡೆಸುವ ಉದ್ದೇಶ ಏನು ಇರಬಹುದು?
-ಮೊದಲನೆಯದಾಗಿ ನನಗೆ ಬಿ.ಎಂ. ಹನೀಫ್‌ ಮೆಸೇಜ್‌ ಮಾಡಿದರು. “ಶಭಾಷ್‌ ಮಹೇಶ್‌ ಜೋಶಿ. ಪ್ರಧಾನ ವೇದಿಕೆಯಲ್ಲಿ ಧರ್ಮಧ್ವೇಷ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮುಸ್ಲಿಮರ ಕಡೆಗಣನೆ. 83 ಸಾಧಕರಲ್ಲಿ ಒಬ್ಬರೂ ಮುಸ್ಲಿಂ ಇಲ್ಲʼ ಎಂದು ಮೆಸೇಜ್‌ ಮಾಡಿದರು. ನಾನು ಒಬ್ಬ ವ್ಯಕ್ತಿ ಬಗ್ಗೆ ಮಾತನಾಡುವುದಿಲ್ಲ. ಆದರೆ ಹನೀಫ್‌ ಬಗ್ಗೆ ಏಕೆ ಮಾತನಾಡುತ್ತೇನೆ ಎಂದರೆ ಅವರೊಬ್ಬ ಪತ್ರಕರ್ತ. ಪತ್ರಿಕಾಧರ್ಮ ಅವರಿಗೆ ಗೊತ್ತಿರಬೇಕಾದವರು, ಸುಳ್ಳು ಸುದ್ದಿ ಸೃಷ್ಟಿ ಮಾಡಬಾರದು. ಮೊದಲನೆಯದಾಗಿ 83 ಸಂಖ್ಯೆಯೇ ತಪ್ಪು. ನಾವು 86 ಜನರಿಗೆ ಸನ್ಮಾನ ಮಾಡುತ್ತಿದ್ದೇವೆ.

ಆಹ್ವಾನ ಪತ್ರಿಕೆಯ 5ನೇ ಪುಟದ 29ನೇ ಹೆಸರು ರಾಜು ನದಾಫ್‌ ಎಂದು ಇದೆ. ಇವರು ಹಾವೇರಿ ಜಿಲ್ಲೆಯ ಹಿರಿಯ ಪತ್ರಕರ್ತರು, ಜಿಲ್ಲಾ ಮುಖ್ಯ ವರದಿಗಾರರು. ಅವರ ಹೆಸರು ರಾಜಾ ಸಾಹೇಬ್‌ ನದಾಫ್‌, ಆದರೆ ತಾವೇ ರಾಜು ನದಾಫ್‌ ಎಂದು ಗುರುತಿಸಿಕೊಂಡಿದ್ದಾರೆ. 8 ನೇ ಪುಟದ 26ನೇ ಹೆಸರು ಕೆ. ಎ. ದೊಡ್ಡಮನಿ. ಅವರ ಪೂರ್ಣ ಹೆಸರು ಖಾಜಾಸಾಹಬ್‌ ಅಮೀನ್‌ ಸಾಹಬ್‌ ದೊಡ್ಡಮನಿ. ಇವರೆಲ್ಲ ಹಿಂದುವೇ? ಜೈನರೇ? ಅಥವಾ ಹನೀಫ್‌ ಅವರನ್ನು ಮುಸ್ಲಿಂ ಸಮಾಜದಿಂದ ಬಹಿಷ್ಕಾರ ಹಾಕಿದ್ದಾರೆಯೇ?

ಜವಾಬ್ದಾರಿಯುತ ಪತ್ರಕರ್ತ ಆಗಬೇಕಿದ್ದ ಈತ ಅತ್ಯಂತ ಬೇಜವಾಬ್ದಾರಿ ಮನುಷ್ಯ. ಸಾಮರಸ್ಯದಿಂದ ಜೀವನ ನಡೆಸುವವರ ನಡುವೆ ಬೆಂಕಿ ಹಚ್ಚುವ ಮನುಷ್ಯ ಈತ. ಅವರದ್ದೇ ಸಮುದಾಯದ ಸಾಧಕರು ಯಾರು ಎಂದು ಇವರಿಗೇ ಗೊತ್ತಿಲ್ಲ. ಇದೆಂತಹ ಕುಚೇಷ್ಟೆ? ಇವರೆಲ್ಲರೂ ಕುತಂತ್ರವಾದಿಗಳು, ಮಾನಸಿಕ ವ್ಯಾಧಿಗಳಿಂದ ಬಳಲುತ್ತಿದ್ದಾರೆ.

ಇದು ಕನ್ನಡ ಸಾಹಿತ್ಯ ಸಮ್ಮೇಳನವೇ ವಿನಃ ಧರ್ಮ ಸಾಹಿತ್ಯ ಸಮ್ಮೇಳನ ಅಲ್ಲ. ಕನ್ನಡ ಮಾತ್ರವೇ ಇಲ್ಲಿ ಸಂಪೂರ್ಣ ಮಾನದಂಡ. ಎಲ್ಲರನ್ನೂ ಕನ್ನಡಿಗ ಎಂಬ ದೃಷ್ಟಿಯಿಂದ ನೋಡುತ್ತೇನೆಯೇ ಹೊರತು ಮುಸ್ಲಿಂ ಕನ್ನಡಿಗ, ಕುರುಬ ಕನ್ನಡಿಗ ಎಂದು ನೋಡುವುದಿಲ್ಲ.

ಪೆಂಡಾಲ್‌ ವಿಚಾರದಲ್ಲಿ ತಾವು ಹೇಳಿದ್ದು ಸುಳ್ಳು ಎಂದು ಪುರುಷೋತ್ತಮ ಬಿಳಿಮಲೆ ಹೇಳಿದ್ದಾರಲ್ಲ?
-ಪೆಂಡಾಲ್‌ ವಿಚಾರ ಸುಳ್ಳು ಎಂದರೆ ಅವರು ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಿ. ಅವರಿಗೆ ನಿಜವಾಗಿ ಮಾನನಷ್ಟವಾಗಿದ್ದರೆ ದಯವಿಟ್ಟು ಮಾನನಷ್ಟ ಮೊಕದ್ದಮೆ ಹಾಕಲಿ. ಸಮ್ಮೇಳನದ ಸಂದರ್ಭದಲ್ಲಿ ಪುರುಷೋತ್ತಮ ಬಿಳಿಮಲೆಯಂಥವರು ನನ್ನ ಆರೋಗ್ಯ ವಿಚಾರಿಸಲು ಮಾತನಾಡುತ್ತಾರ? ಹಾಗಾದರೆ ನನ್ನ ಜತೆ ಮಾತಾಡುವ ಅವಶ್ಯಕತೆ ಏನಿತ್ತು? ಅವರು ಮಾನನಷ್ಟ ಮೊಕದ್ದಮೆ ಹೂಡಿದರೆ ನಾನು ಸಾಕ್ಷ್ಯಾಧಾರ ನೀಡುತ್ತೇನೆ.

ಸ್ಪರ್ಧಾತ್ಮಕ ಪರೀಕ್ಷೆ ಕುರಿತ ಗೋಷ್ಠಿಗೆ ಪುರುಷೋತ್ತಮ ಬಿಳಿಮಲೆ ಅವರನ್ನೇ ಅಧ್ಯಕ್ಷತೆಗೆ ಕರೆದಿದ್ದೆ. ಅವರು ಜೆಎನ್‌ಯುನಲ್ಲಿದ್ದವರು, ಕನ್ನಡಿಗರಿಗೆ ತರಬೇತಿ ಕೊಟ್ಟವರು ಎಂಬ ಕಾರಣಕ್ಕೆ ಈ ಆಹ್ವಾನ ನೀಡಲಾಗಿತ್ತು. ಯಾವಾಗ ಪೆಂಡಾಲ್‌ ವಿಚಾರ ಪ್ರಚಾರವಾಯಿತೋ, ಆರೋಗ್ಯ ಸರಿಯಿಲ್ಲ ಎಂದು ಗೋಷ್ಠಿಗೆ ಆಗಮಿಸುವುದರಿಂದ ತಪ್ಪಿಸಿಕೊಂಡರು. ಆಗ ಆರೋಗ್ಯ ಸರಿಯಿಲ್ಲ ಎಂದು ಹೇಳಿದವರು ಈಗ ಪರ್ಯಾಯ ಮಾಡಲು ಆರೋಗ್ಯ ಸರಿಯಾಗಿದೆ ಎಂದರೆ ಹನೀಫ್‌ ಅವರು ಏನಾದರೂ ಪವಾಡ ಮಾಡಿದ್ದಾರೆಯೇ?

ಮುಸ್ಲಿಮರಿಗೆ ಅವಕಾಶ ನೀಡಿಲ್ಲ ಎನ್ನುವುದು ಸುಳ್ಳೇ?
-ಹೌದು. ಈ ಬಾರಿಯ ಸಮ್ಮೇಳನದಲ್ಲಿ ಒಟ್ಟು 11 ಮುಸ್ಲಿಮರಿಗೆ ಅವಕಾಶ ನೀಡಲಾಗಿದೆ. ಇವರೆಲ್ಲರೂ ಗೋಷ್ಠಿ, ಸ್ವಾಗತ, ನಿರೂಪಣೆ, ಸ್ವಾಗತದಲ್ಲಿ ಅವಕಾಶ ಮುಂತಾದೆಡೆ ಭಾಗವಹಿಸುತ್ತಿದ್ದಾರೆ. ಈ ಹಿಂದೆ ನಡೆದಿದ್ದ ಕಲಬುರ್ಗಿ ಸಮ್ಮೇಳನದಲ್ಲಿ 10, ಧಾರವಾಡದಲ್ಲಿ ೧೦, ಮೈಸೂರಿನಲ್ಲಿ ೧೦, ರಾಯಚೂರಿನಲ್ಲಿ ೭ ಮುಸ್ಲಿಮರಿಗೆ ಅವಕಾಶ ನೀಡಲಾಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಶ್ರವಣಬೆಳಗೊಳದಲ್ಲಿ ಕೇವಲ 5 ಮುಸ್ಲಿಮರಿಗೆ ಅವಕಾಶ ನೀಡಲಾಗಿತ್ತು. ಆಗ ಈ ವಿಚಾರ ಏಕೆ ದೊಡ್ಡದಾಗಿ ಕಾಣಲಿಲ್ಲ? ಮಾಧ್ಯಮದಲ್ಲಿರುವವನಿಗೆ ಇದೆಲ್ಲ ಗೊತ್ತಾಗಬಾರದೇ?

ಈ ಬಾರಿಯ ಸಮ್ಮೇಳನದಲ್ಲಿ ನಿರ್ಣಯಗಳು ಹೇಗಿರುತ್ತವೇ?
ನನ್ನ ಅವಧಿಯಲ್ಲಿ ಬಹಳ ಸ್ಪಷ್ಟ ಬದಲಾವಣೆ ನೋಡುತ್ತೀರಿ. ನಿರ್ಣಯಗಳ ಸಂಖ್ಯೆ ಕಡಿಮೆ ಇರುತ್ತದೆ. ಅದನ್ನು ಅನುಷ್ಠಾನ ಮಾಡುವ ಭಗೀರಥ ಪ್ರಯತ್ನ ಮಾಡುತ್ತೇನೆ. ನಾನು ಒಬ್ಬ ಸರ್ಕಾರಿ ಅಧಿಕಾರಿಯಾಗಿದ್ದರಿಂದ ನನಗೆ ಅನುಷ್ಠಾನ ಹೇಗೆ ಮಾಡಬೇಕು, ಫಾಲೊಅಪ್‌ ಹೇಗೆ ಮಾಡಬೇಕೆಂದು ಗೊತ್ತಿದೆ. ನಿರ್ಣಯ ಅನುಷ್ಠಾನಕ್ಕಾಗಿಯೇ ಒಬ್ಬರು ನಿವೃತ್ತ ಕೆಎಎಸ್‌ ಅಥವಾ ಐಎಎಸ್‌ ಅಧಿಕಾರಿಯನ್ನು ನೇಮಿಸಲಾಗುತ್ತದೆ.

ಸಮ್ಮೇಳನಕ್ಕೆ ರಾಜ್ಯ ಸರ್ಕಾರದಿಂದ ಸಹಕಾರ ಹೇಗಿದೆ? ಈ ಹಿಂದೆ ಒಂದಷ್ಟು ವೈಮನಸ್ಸು ಕಾಣುತ್ತಿತ್ತಲ್ಲ?
-ಅದ್ಭುತವಾಗಿದೆ. ಜಿಲ್ಲಾಡಳಿತ ಹಾಗೂ ಕಸಾಪ ಒಟ್ಟಿಗೆ ಸೇರಿ ಕನ್ನಡದ ರಥವನ್ನು ಎಳೆದುಕೊಂಡು ಹೋಗುವ ಎರಡು ಗಾಲಿಗಳು. ಹಿಂದೆ ಕೆಲವು ಚರ್ಚೆಗಳು ನಡೆದಿದ್ದವು. ನನಗೆ ವೈಯಕ್ತಿಕ ಪ್ರತಿಷ್ಠೆ ಇಲ್ಲ. ಸಾಹಿತ್ಯ ಪರಿಷತ್ತು ಸ್ವಾಯತ್ತ ಪರಿಷತ್ತು. ಇದನ್ನು ತೋರಿಸುವುದು ನನ್ನ ಕರ್ತವ್ಯ. ನಾನು ಈ ಸರ್ಕಾರ, ಆ ಸರ್ಕಾರ ಎಂದಲ್ಲ. ನಾನು ಚುನಾಯಿತಗೊಂಡಿರುವವನು. ಅತಿ ಹೆಚ್ಚು ಮತಗಳಿಂದ ನನ್ನನ್ನು ಗೆಲ್ಲಿಸಿದ್ದಾರೆ ಎಂದರೆ ಮತದಾರರಿಗೆ ನನ್ನಿಂದ ನಿರೀಕ್ಷೆಯಿದೆ. ಅದಕ್ಕೆ ತಕ್ಕಂತೆ ನಡೆದುಕೊಂಡಿದ್ದೇನೆ. ಈ ಬಾರಿಯ ಸಮ್ಮೇಳನವು ಅತ್ಯಂತ ವ್ಯವಸ್ಥಿತವಾಗಿ, ಶಿಸ್ತಿನಿಂದ ನಡೆಯುತ್ತದೆ.

ಹಾವೇರಿ ಸಮ್ಮೇಳನದ ವಿಶೇಷತೆ ಏನು?
-ದೈವ ಸಂಕಲ್ಪ ಎನ್ನುವ ಹಾಗೆ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ (ಬಸವರಾಜ ಬೊಮ್ಮಾಯಿ) ಹಾಗೂ ಕಸಾಪ ಅಧ್ಯಕ್ಷರ(ಮಹೇಶ್‌ ಜೋಶಿ) ಇಬ್ಬರದ್ದೂ ಒಂದೇ ಜಿಲ್ಲೆ, ಅದೇ ಜಿಲ್ಲೆಯಲ್ಲಿ ಸಮ್ಮೇಳನ ನಡೆಯುತ್ತಿದೆ. ಇಲ್ಲಿ ಅನೇಕ ಸಾಧು ಸಂತರು, ಶರಣರು, ಕ್ರಾಂತಿಪುರುಷರು ಹುಟ್ಟಿದ್ದಾರೆ. ಶಿಶುನಾಳ ಷರೀಫ್‌, ಕನಕದಾಸರು, ಸರ್ವಜ್ಞ, ಹಾನಗಲ್‌ ಕುಮಾರಸ್ವಾಮಿಗಳು, ಪಾಪು, ಚಂಪಾ, ಮಹದೇವ ಬಣಕಾರ್‌, ಶ್ರೀನಿವಾಸ ಹಾವನೂರು, ಪುಟ್ಟರಾಜ ಗವಾಯಿಗಳು, ಗಳಗನಾಥರು…. ಹಾವೇರಿ ಜಿಲ್ಲೆ ರಜತ ಸಂಭ್ರಮವೂ ನಡೆಯುತ್ತಿದೆ. ಕರ್ನಾಟಕದ ಏಕೀಕರಣದಲ್ಲಿ ಹಾವೇರಿ ಗಣನೀಯ ಪಾತ್ರ ವಹಿಸಿದೆ. ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆ ನೀಡಿದೆ. ಪತ್ರಿಕೋದ್ಯಮದಲ್ಲೂ ಮಹತ್ವದ ಪಾತ್ರ ವಹಿಸಿದೆ. ಈ ವರ್ಷದ ಡಾ. ಹಿರೇಮಲ್ಲೂರು ಈಶ್ವರನ್‌, ಸು.ರಂ. ಎಕ್ಕುಂಡಿ ಅವರ ಶತಮಾನೋತ್ಸವ ನಡೆಯುತ್ತಿರುವ ವಿಶೇಷತೆಗಳ ನಡುವೆ ಸಮ್ಮೇಳನ ನಡೆಯುತ್ತಿದೆ. ನಾನು ಕನ್ನಡಿಗ ಎಂದು ಎದೆ ಉಬ್ಬಿಸಿಕೊಂಡು ಪ್ರತಿಯೊಬ್ಬರೂ ಹೋಗಬೇಕು ಎನ್ನುವಂತಹ ಸಮ್ಮೇಳನ ಆಗಬೇಕು ಎಂದು ವ್ಯವಸ್ಥೆ ಮಾಡಲಾಗುತ್ತಿದೆ.

ಇದನ್ನೂ ಓದಿ | Dr Doddarange Gowda | ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಡಾ. ದೊಡ್ಡರಂಗೇಗೌಡಗೆ ಸನ್ಮಾನ

Exit mobile version