Site icon Vistara News

Karnataka Election 2023 : ಮುಖ್ಯಮಂತ್ರಿ ಆಯ್ಕೆಗೆ ಸಿಎಲ್‌ಪಿ ಸಭೆ ಶುರು; ಕೆಪಿಸಿಸಿ ಅಧ್ಯಕ್ಷರೇ ಸಿಎಂ ಆಗಲಿ ಎಂದ ಆದಿಚುಂಚನಗಿರಿ ಶ್ರೀ

Karnataka Election 2023 clp meeting started for decide new cm

#image_title

ಬೆಂಗಳೂರು: ನೂತನ ಮುಖ್ಯಮಂತ್ರಿ ನೇಮಕಕ್ಕೆ ಕರ್ನಾಟಕ ಕಾಂಗ್ರೆಸ್‌ನ ಶಾಸಕಾಂಗ ಪಕ್ಷದ ಸಭೆಯು ನಗರದ ಖಾಸಗಿ ಹೊಟೇಲ್‌ನಲ್ಲಿ ಆರಂಭಗೊಂಡಿದೆ. ಇದೇ ಹೊತ್ತಿನಲ್ಲಿ ಕುರುಬರ ಸಂಘ, ಮಠಾದಧೀಶರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಿ ಎಂದು ಒತ್ತಾಯಿಸಿದರೆ, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಮಠಾಧೀಶರು, ಒಕ್ಕಲಿಗ ನಾಯಕರು ಸಭೆ ನಡೆಸಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಪರ ಬ್ಯಾಟಿಂಗ್‌ ಮಾಡಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೇಮಿಸಿರುವ ವೀಕ್ಷಕರ ಸಮ್ಮುಖದಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾದ 135 ಶಾಸಕರ ಸಭೆ ನಡೆಯುತ್ತಿದೆ. ಕಾಂಗ್ರೆಸ್‌ ಬೆಂಬಲದಿಂದ ಆಯ್ಕೆಯಾಗಿರುವ ಸರ್ವೋದಯ ಪಕ್ಷದ ದರ್ಶನ್‌ ಪುಟ್ಟಣ್ಣಯ್ಯ, ಹರಪನಹಳ್ಳಿ ಕ್ಷೇತ್ರದ ಪಕ್ಷೇತರ ಶಾಸಕಿ ಲತಾ ಮಲ್ಲಿಕಾರ್ಜುನ ಕೂಡ ಸಭೆಯಲ್ಲಿ ಭಾಗವಹಿಸಿದ್ದಾರೆ. ವೀಕ್ಷಕರಾದ ಪಕ್ಷದ ಹಿರಿಯ ನಾಯಕ, ಮಹಾರಾಷ್ಟ್ರದ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಜಿತೆಂದ್ರ ಸಿಂಗ್‌, ಎಐಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ದೀಪಕ್‌ ಬಾಬ್ರಿಯಾ ಶಾಸಕರ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ.

ಸಭೆಗೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಈ ಸಭೆಯಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಬಹುದೆಂದು ನಿರೀಕ್ಷಿಸಲಾಗುತ್ತಿದೆ. ಆದರೆ ಪಕ್ಷದ ಉನ್ನತ ಮೂಲಗಳ ಪ್ರಕಾರ ಪಕ್ಷದ ವೀಕ್ಷಕರು ಎಲ್ಲ ಶಾಸಕರ ಅಭಿಪ್ರಾಯವನ್ನು ಪಡೆದು ಪಕ್ಷದ ಹೈಕಮಾಂಡ್‌ಗೆ ವರದಿ ನೀಡಲಿದ್ದಾರೆ. ಹೈಕಮಾಂಡ್‌ ಪಕ್ಷದ ಉನ್ನತ ನಾಯಕರೊಂದಿಗೆ ಚರ್ಚಿಸಿ ನೂತನ ಮುಖ್ಯಮಂತ್ರಿಯ ಹೆಸರನ್ನು ಘೋಷಣೆ ಮಾಡಲಿದೆ.

ಈಗ ಆಯ್ಕೆಯಾಗಿರುವ 135 ಶಾಸಕರ ಪೈಕಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿ ಎಂದು 72 ಶಾಸಕರು ಒತ್ತಾಯಿಸುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ ಕೆ ಶಿವಕುಮಾರ್‌ ಪರವಾಗಿ 48 ಮಂದಿ ನಿಂತಿದ್ದಾರೆ. ಇನ್ನು 15 ಶಾಸಕರು ಪಕ್ಷ ಯಾವುದೇ ತೀರ್ಮಾನ ತೆಗೆದುಕೊಂಡರೂ ನಾವು ಅದಕ್ಕೆ ಬದ್ಧ ಎಂಬ ನಿಲುವು ಹೊಂದಿದ್ದಾರೆ. ಹೀಗಾಗಿ ಈಗ ಪಕ್ಷ ಯಾವ ತೀರ್ಮಾನ ತೆಗೆದುಕೊಳ್ಳಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಕೆಲವರು ಸಭೆಯಲ್ಲಿ ವೋಟಿಂಗ್‌ ನಡೆಯಲಿ ಎಂದರೆ, ಇನ್ನು ಕೆಲವರು ವೋಟಿಂಗ್‌ ಬೇಡ ಎನ್ನುತ್ತಿದ್ದಾರೆ.

ಸಭೆಗೆ ಆಗಮಿಸಿದ ನೂತನ ಕಾಂಗ್ರೆಸ್‌ ಶಾಸಕರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಮಾತ್ರವಲ್ಲದೆ ಪಕ್ಷದ ನಾಯಕರಾದ ಡಾ. ಜಿ ಪರಮೇಶ್ವರ್‌, ಎಂ.ಬಿ. ಪಾಟೀಲ್‌ , ಶಾಮನೂರು ಶಿವಶಂಕರಪ್ಪ ಕೂಡ ಮುಖ್ಯಮಂತ್ರಿ ಹುದ್ದೆಗೆ ಬೇಡಿಕೆ ಮಂಡಿಸಿದ್ದಾರೆ. ಈ ಬಾರಿ 37 ಮಂದಿ ಲಿಂಗಾಯಿತ ಶಾಸಕರು ಗೆದ್ದು ಬಂದಿದ್ದು, ಮುಖ್ಯಮಂತ್ರಿ ಹುದ್ದೆಗೆ ಅವರೂ ಲಾಬಿ ನಡೆಸುವ ನಾಯಕರಿಗೆ ಆನೆ ಬಲ ಬಂದಂತಾಗಿದೆ. ಹೀಗಾಗಿ ಮುಖ್ಯಮಂತ್ರಿ ಆಯ್ಕೆಯು ತೀವ್ರ ಕುತೂಹಲ ಮೂಡಿಸಿದೆ.

ಕೆಪಿಸಿಸಿ ಅಧ್ಯಕ್ಷರೇ ಸಿಎಂ ಆಗಲಿ!
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡಿ ಎಂದು ಒತ್ತಾಯಿಸಲು ರಾಜ್ಯ ಒಕ್ಕಲಿಗರ ಸಂಘ ಕರೆದಿದ್ದ ಸಭೆಯಲ್ಲಿ ಮಾತನಾಡಿದ ಶ್ರೀ ಆದಿಚುಂಚನಗಿರಿ ಮಠದಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ʻʻ ಚುನಾವಣೆಯ ವೇಳೆಗೆ ಕೆಪಿಸಿಸಿ ಅಧ್ಯಕ್ಷರಾಗಿದ್ದವರನ್ನೇ ಮುಖ್ಯಮಂತ್ರಿಯಾಗಿ ನೇಮಿಸುವ ಪರಿಪಾಠ ಕಾಂಗ್ರೆಸ್‌ನಲ್ಲಿದೆ ಹೀಗಾಗಿ ಈ ಬಾರಿ ಡಿ.ಕೆ. ಶಿವಕುಮಾರ್‌ ಅವರಿಗೇ ಮುಖ್ಯಮಂತ್ರಿ ಹುದ್ದೆ ನೀಡಬೇಕುʼʼ ಎಂದು ಒತ್ತಾಯಿಸಿದ್ದಾರೆ. ಡಿ ಕೆ ಶಿವಕುಮಾರ್‌ ಎಲ್ಲ ಸಮುದಾಯದವನ್ನು ಒಟ್ಟಿಗೆ ಕರೆದುಕೊಂಡು ಹೋಗುವ ನಾಯಕ. ಕಾಂಗ್ರೆಸ್‌ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಲು ಶ್ರಮಿಸಿದ್ದಾರೆ. ಶ್ರಮ ಪಟ್ಟವರಿಗೆ ಫಲ ಸಿಗಲೇಬೇಕು. ಅವರು ಈ ಹುದ್ದೆಗೆ ಎಲ್ಲ ರೀತಿಯಲ್ಲಿಯೂ ಅರ್ಹರು ಎಂದು ಶ್ರೀಗಳು ಹೇಳಿದ್ದಾರೆ. ಈ ಸಭೆಯಲ್ಲಿ ಪಟ್ಟನಾಯಕನಹಳ್ಳಿಯ ಸ್ಫಟಿಕಪುರಿ ಸಂಸ್ಥಾನ ಮಠದ ನಂಜಾವಧೂತ ಸ್ವಾಮೀಜಿ ಉಪಸ್ಥಿತರಿದ್ದರು.

ದೆಹಲಿಯಲ್ಲಿ ಪ್ರಕಟ?

ವೀಕ್ಷಕರು ಇಂದೇ ಶಾಸಕರ ಅಭಿಪ್ರಾಯದ ಕುರಿತು ಹೈಕಮಾಂಡ್‌ಗೆ ವರದಿ ನೀಡಲಿದ್ದು, ದೆಹಲಿಯಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾನುವಾರ ತಡ ರಾತ್ರಿ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರೊಂದಿಗೆ ಸಭೆ ನಡೆಸಿ ಅಂತಿಮ ತೀರ್ಮಾನ ಪ್ರಕಟಿಸುವ ಸಾಧ್ಯತೆ ಇದೆ.

ಹೈಕಮಾಂಡ್‌ ಆಯ್ಕೆ ಯಾರಿರಬಹುದು?

ಸೋನಿಯಾಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಶೀಮ್ಲಾಕ್ಕೆ ತೆರೆಳಿದ್ದು, ಸಭೆಯ ನಡೆಸಲು ಸಾಧ್ಯವಾಗದೇ ಇದ್ದಲ್ಲಿ ಅವರೊಂದಿಗೆ ದೂರವಾಣಿಯಲ್ಲಿ ಚರ್ಚಿಸಿ ನಾಳೆ ಅಂತಿಮ ಹೆಸರನ್ನು ರಾಜ್ಯಕ್ಕೆ ರವಾನಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಆದರೆ ಪಕ್ಷದ ಉನ್ನತ ಮೂಲಗಳು ಭಾನುವಾರ ನಡೆಯುವ ಸಿಎಲ್‌ಪಿ ಸಭೆಯಲ್ಲಿಯೇ ನೂತನ ಮುಖ್ಯಮಂತ್ರಿಯನ್ನು ಆಯ್ಕೆಮಾಡಿ, ಘೋಷಿಸಲಾಗುತ್ತದೆ ಎಂದೂ ಹೇಳುತ್ತಿವೆ.

ಇದನ್ನೂ ಓದಿ: Karnataka Election 2023 : ಸಿಎಲ್‌ಪಿಗೆ ವೀಕ್ಷಕರಾಗಿ ಸುಶೀಲ್‌ ಕುಮಾರ್‌ ಶಿಂಧೆ, ಜಿತೆಂದ್ರ ಸಿಂಗ್‌, ದೀಪಕ್‌ ನೇಮಕ

Exit mobile version