Site icon Vistara News

Karnataka Election 2023 : ವಿಧಾನಸಾಭಾ ಚುನಾವಣೆಯ ಮತ ಎಣಿಕೆ ಹೇಗೆ ಗೊತ್ತೇ?

Karnataka Election 2023 How votes are counted in elections details in kannada

#image_title

ಬೆಂಗಳೂರು: ರಾಜ್ಯ ವಿಧಾನಸಭಾ ಚನಾವಣೆಯ (Karnataka Election 2023) ಮತ ಎಣಿಕೆ ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದೆ. ಈಗ ಎಲ್ಲರ ಚಿತ್ತ ಮತ ಎಣಿಕೆ ಕೇಂದ್ರಗಳತ್ತ ನೆಟ್ಟಿವೆ. ಯಾರು ಗೆಲ್ಲಬಹುದು, ಯಾವ ಪಕ್ಷ ಅಧಿಕಾರ ಹಿಡಿಯಬಹುದು ಎಂಬುದನ್ನು ಇಡೀ ರಾಜ್ಯದ ಜನ ಕಾತುರದಿಂದ ಕಾಯುತ್ತಿದ್ದಾರೆ.

ಮತದಾನದಕ್ಕೆ ಇವಿಎಂಗಳ ಬಳಕೆ ಆರಂಭವಾದ ಮೇಲೆ ಮತ ಎಣಿಕೆ ಪ್ರಕ್ರಿಯೆಯು ಸರಳವಾಗಿದ್ದು, ಬೇಗನೆ ನಡೆಯಲಿದೆ. ಬೆಳಗ್ಗೆ 8 ಗಂಟೆಯಿಂದ ಎಣಿಕೆ ಕಾರ್ಯ ಆರಂಭವಾಗಲಿದ್ದು, ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ 14 ರಿಂದ 20 ಸುತ್ತುಗಳವರೆಗೆ ಮತ ಎಣಿಕೆ ನಡೆಯುವ ಸಾಧ್ಯತೆಳಿವೆ. ರಾಜ್ಯದ 224 ಕ್ಷೇತ್ರಗಳಲ್ಲಿನ ಮತಗಳ ಎಣಿಕೆಗೆ ಒಟ್ಟು 36 ಮತ ಎಣಿಕೆ ಕೇಂದ್ರಗಳನ್ನು ತೆರೆಯಲಾಗಿದೆ. ಇಲ್ಲಿ ಚುನಾವಣಾ ಕಣದಲ್ಲಿರುವ 2,615 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಾಗುತ್ತದೆ.

ರಾಜ್ಯದ 58,545 ಬೂತ್‌ಗಳಲ್ಲಿ ಮತದಾನ ನಡೆದಿತ್ತು. ಇದಕ್ಕಾಗಿ 62,988 ಬ್ಯಾಲೆಟ್‌ ಯೂನಿಟ್‌ಗಳನ್ನು ಮತ್ತು 58,545 ಕಂಟ್ರೋಲ್‌ ಯುನಿಟ್‌ಗಳನ್ನು ಮತದಾನಕ್ಕೆ ಬಳಸಿಕೊಳ್ಳಲಾಗಿತ್ತು. ಪ್ರತಿಯೊಬ್ಬ ಅಭ್ಯರ್ಥಿಗೂ ಎಣಿಕೆ ಸಂದರ್ಭದಲ್ಲಿ ಉಪಸ್ಥಿತರಿರಲು ಏಜೆಂಟ್‌ ರನ್ನು ನೇಮಿಸಲು ಅವಕಾಶ ನೀಡಲಾಗಿದೆ. ಅಲ್ಲದೆ, ಅಭ್ಯರ್ಥಿ ಕೂಡ ಮತ ಎಣಿಕೆ ಕೇಂದ್ರದಲ್ಲಿ ಉಪಸ್ಥಿತರಿರಬಹುದು. ಮತ ಎಣಿಕೆ ಕೇಂದ್ರಕ್ಕೆ ಅಗತ್ಯ ಸೌಕರ್ಯಗಳನ್ನು ಈಗಾಗಲೇ ಚುನಾವಣಾ ಆಯೋಗ ಒದಗಿಸಿದೆ.

ಹೇಗೆ ನಡೆಯಲಿದೆ ಮತ ಎಣಿಕೆ?

ಪ್ರತಿಯೊಂದು ಮತ ಎಣಿಕೆ ಕೇಂದ್ರದಲ್ಲಿಯೂ ಒಂದು ದೊಡ್ಡ ಸಭಾಂಗಣದಲ್ಲಿ ಮತ ಎಣಿಕೆಗೆ ವ್ಯವಸ್ಥೆ ಮಾಡಲಾಗಿರುತ್ತದೆ. ಇದರಲ್ಲಿ ಒಟ್ಟು 14 ಟೇಬಲ್‌ಗಳನ್ನು ಹಾಕಿರಲಾಗುತ್ತದೆ. ಒಂದು ಟೇಬಲ್‌ನಲ್ಲಿ ಮೂವರು ಸಿಬ್ಬಂದಿಯನ್ನು (ಒಬ್ಬ ಎಣಿಕೆಯ ಮೇಲ್ವಿಚಾರಕ, ಒಬ್ಬ ಎಣಿಕೆಯ ಸಹಾಯಕ, ಒಬ್ಬ ಹೆಚ್ಚುವರಿ ಸಿಬ್ಬಂದಿ) ನಿಯೋಜಿಸಲಾಗಿರುತ್ತದೆ. ಪ್ರತಿಯೊಂದು ಎಣಿಕೆ ಟೇಬಲ್‌ಗೆ ಬ್ಯಾರಿಕೇಡ್ ಅಥವಾ ತಂತಿ ಮೆಷ್ ಹಾಕಲಾಗಿರುತ್ತದೆ. ಇದರಿಂದ ಮತ ಎಣಿಕೆಯ ಏಜೆಂಟ್‌ಗಳು ಇವಿಎಂಗಳನ್ನು ಮುಟ್ಟಲಾಗುವುದಿಲ್ಲ. ಆದರೆ, ಮತ ಎಣಿಕೆಯ ಏಜೆಂಟರುಗಳಿಗೆ, ಎಣಿಕೆಯ ಸಮಗ್ರ ಪ್ರಕ್ರಿಯೆಯನ್ನು ನೋಡಲು ಮುಕ್ತ ಅವಕಾಶವನ್ನು ಕಲ್ಪಿಸಲಾಗಿರುತ್ತದೆ. ರಿಟರ್ನಿಂಗ್ ಅಧಿಕಾರಿಯ (ಆರ್‌ಓ) ಅಂದರೆ ಚುನಾವಣಾಧಿಕಾರಿಯ ನೇತೃತ್ವದಲ್ಲಿ ಮತ ಎಣಿಕೆ ಕಾರ್ಯನಡೆಯಲಿದೆ.

ಮತ ಎಣಿಕೆಯ ಸಭಾಂಗಣ ಹೀಗಿರಲಿದೆ.

ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭಿಸಲಾಗುತ್ತದೆ. ಮೊದಲಿಗೆ ಅಂಚೆಯ ಮೂಲಕ ಬಂದ ಮತಪತ್ರಗಳನ್ನು ಎಣಿಕೆ ಮಾಡಲಾಗುತ್ತದೆ. ಇದಕ್ಕೆ 30 ನಿಮಿಷ ಕಾಲಾವಕಾಶ ನೀಡಲಾಗಿರುತ್ತದೆ. ಒಂದು ವೇಳೆ ಈ ಸಮಯದೊಳಗೆ ಅಂಚೆ ಮತಗಳ ಎಣಿಕೆ ಮುಗಿಯದಿದ್ದರೂ, ಈ ಸಮಯದ ನಂತರ ಇವಿಎಂಗಳ ಮತ ಎಣಿಕೆಯನ್ನು ಆರಂಭಿಸಬಹುದಾಗಿರುತ್ತದೆ. ಅಂಚೆ ಮತಪತ್ರಗಳ ಎಣಿಕೆಯನ್ನು ಅಂತಿಮಗೊಳಿಸುವ ಮೊದಲು ಇವಿಎಂನ ಎಲ್ಲಾ ಸುತ್ತುಗಳ ಎಣಿಕೆಯ ಫಲಿತಾಂಶವನ್ನು ಪ್ರಕಟಿಸುವಂತಿಲ್ಲ. ಅಂಚೆ ಮತಪತ್ರಗಳನ್ನು ರಿಟರ್ನಿಂಗ್ ಅಧಿಕಾರಿಯು ತನ್ನ ಟೇಬಲ್‌ನಲ್ಲಿ ಎಣಿಸಲಿದ್ದಾರೆ.

ಬ್ಯಾಲೆಟ್ ಯೂನಿಟ್‌ ಇರುವುದಿಲ್ಲ!

ಇವಿಎಂನ ಮೂಲಕ ಮತದಾನ ಕೇಂದ್ರಗಳಲ್ಲಿ ಚಲಾಯಿಸಲ್ಪಟ್ಟ ಮತಗಳ ಎಣಿಕೆಯನ್ನು, ಮತ ಎಣಿಕೆ ಸಭಾಂಗಣದಲ್ಲಿ ಒದಗಿಸಿದ ಟೇಬಲ್‌ಗಳಲ್ಲಿ ಸಹಾಯಕ ರಿಟರ್ನಿಂಗ್ ಅಧಿಕಾರಿ (ಎಆರ್‌ಓ) ನಡೆಸುತ್ತಾರೆ. ಆ ಉದ್ದೇಶಕ್ಕಾಗಿ ಮತಕೇಂದ್ರಗಳಿಂದ ತಂದ ಇವಿಎಂಗಳ ಕಂಟ್ರೋಲ್ ಯೂನಿಟ್‌ಗಳನ್ನು ವಿವಿಧ ಮತ ಎಣಿಕೆ ಟೇಬಲ್‌ಗಳಿಗೆ ವಿತರಿಸಲಾಗುತ್ತದೆ. ಮತದಾನ ಕೇಂದ್ರಗಳ ಕ್ರಮಸಂಖ್ಯೆಗನುಗುಣವಾಗಿ ಇದರ ಹಂಚಿಕೆ ನಡೆಯುತ್ತದೆ. ಉದಾ: ಮತದಾನ ಕೇಂದ್ರ 1ರ ಇವಿಎಂನ ಕಂಟ್ರೋಲ್ ಯುನಿಟ್ ಅನ್ನು ಟೇಬಲ್ ಸಂಖ್ಯೆ 1ಕ್ಕೆ ವಿತರಿಸಲಾಗುತ್ತದೆ. ಈ ರೀತಿ 14 ಅಥವಾ ಅದಕ್ಕಿಂತ ಹೆಚ್ಚು ಟೇಬಲ್‌ಗಳನ್ನು ಹಾಕಿರುತ್ತಾರೆ. ಎಲ್ಲ ಟೇಬಲ್‌ಗಳಲ್ಲಿನ ಮತ ಎಣಿಕೆ ಪೂರ್ಣಗೊಂಡ ನಂತರ ಒಂದು ಸುತ್ತು ಮತ ಎಣಿಕೆ ಪೂರ್ಣಗೊಳ್ಳಲಿದೆ.

ನಿಮಗೆ ಗೊತ್ತೇ, ಮತ ಎಣಿಕೆ ಸಂದರ್ಭದಲ್ಲಿ ನಿರ್ದಿಷ್ಟ ಮತಕೇಂದ್ರದಲ್ಲಿ ಬಳಸಿದ ಇವಿಎಂನ ಕಂಟ್ರೋಲ್ ಯೂನಿಟ್ ಮಾತ್ರ ಆ ಮತದಾನ ಕೇಂದ್ರದ ಮತದಾನ ಫಲಿತಾಂಶವನ್ನು ಪಡೆದುಕೊಳ್ಳುವುದಕ್ಕೆ ಅವಶ್ಯಕವಾಗಿರುತ್ತದೆ. ನೀವು ವೋಟ್‌ ಹಾಕಲು ಬಳಸಿದ ಬ್ಯಾಲೆಟ್ ಯೂನಿಟ್‌ ಅನ್ನು ಭದ್ರತಾ ಕೊಠಡಿಯಲ್ಲಿಯೇ ಇಟ್ಟಿರುತ್ತಾರೆ.

ಮತ ಎಣಿಕೆ ಹೇಗೆ?
ಮತ ಎಣಿಕೆ ಎಂದರೆ ಕಂಟ್ರೋಲ್‌ ಯೂನಿಟ್‌ನ ಹಿಂಭಾಗದಲ್ಲಿರುವ ಸ್ವಿಚ್‌ ಆನ್‌ ಮಾಡಲಾಗುತ್ತದೆ. ಆಗ ಕಂಟ್ರೋಲ್ ಯೂನಿಟ್‌ನ ಡಿಸ್‌ಪ್ಲೇ ಸೆಕ್ಷನ್‌ನಲ್ಲಿನ ʻON’ ದೀಪವು ಹಸಿರು ಬಣ್ಣದಲ್ಲಿ ಬೆಳಗುತ್ತದೆ. ಆ ನಂತರ, ʻರಿಸಲ್ಟ್ ಬಟನ್ʼ ಅನ್ನು ಒತ್ತಲಾಗುತ್ತದೆ. ʻರಿಸಲ್ಟ್ʼ ಬಟನ್‌ ಅನ್ನು ಒತ್ತಿದಾಗ ಆ ನಿರ್ದಿಷ್ಟ ಮತದಾನ ಕೇಂದ್ರದಲ್ಲಿ ಪ್ರತಿ ಅಭ್ಯರ್ಥಿಗೆ ಮತ್ತು ನೋಟಾಗೆ ದಾಖಲಾದ ಮತಗಳ ಒಟ್ಟು ಸಂಖ್ಯೆಯು ಕಂಟ್ರೋಲ್ ಯೂನಿಟ್‌ನ ಡಿಸ್‌ಪ್ಲೇ ಪ್ಯಾನೆಲ್‌ನಲ್ಲಿ ಸ್ವಯಂಚಾಲಿತವಾಗಿ ಪ್ರದರ್ಶನಗೊಳ್ಳುತ್ತವೆ.
ಆಗ ಅಭ್ಯರ್ಥಿವಾರು ಪ್ರದರ್ಶನಗೊಂಡಂಥ ಫಲಿತಾಂಶವನ್ನು ಎಣಿಕೆ ಮೇಲ್ವಿಚಾರಕರು ನಿಗದಿತ ನಮೂನೆಯ ಫಾರಂನಲ್ಲಿ ದಾಖಲಿಸಿಕೊಳ್ಳುತ್ತಾರೆ. ಈ ಪ್ರಕ್ರಿಯೆಯನ್ನು ಏಜೆಂಟರು ನೋಡುತ್ತಿರುತ್ತಾರೆ. ಅಗತ್ಯ ಇದ್ದವರು ದಾಖಲಿಸಿಕೊಳ್ಳಲೂ ಬಹುದು. ಮತ ಎಣಿಕೆ ಸಿಬ್ಬಂದಿ ಫಲಿತಾಂಶವನ್ನು ದಾಖಲಿಸಿಕೊಂಡ ನಂತರ, ಫಲಿತಾಂಶ ವಿಭಾಗದ ಕವರನ್ನು ಮುಚ್ಚಲಾಗುತ್ತದೆ ಮತ್ತು ಕಂಟ್ರೋಲ್‌ ಯೂನಿಟ್‌ ಅನ್ನು ಸ್ವಿಚ್ ಆಫ್ ಮಾಡಲಾಗುತ್ತದೆ. ಇಲ್ಲಿಗೆ ಮತ ಎಣಿಕೆ ಪೂರ್ಣಗೊಂಡಂತೆ.
ಒಂದು ಸುತ್ತಿನ ಮತ ಎಣಿಕೆ ಸಂದರ್ಭದಲ್ಲಿ ರ‍್ಯಾಂಡಮ್‌ ಆಗಿ ಒಂದು ಮತದಾನ ಕೇಂದ್ರದ ವಿವಿಪ್ಯಾಟ್ ಪೇಪರ್ ಸ್ಲಿಪ್‌ಗಳನ್ನು ಕಡ್ಡಾಯವಾಗಿ ಪರಿಶೀಲಿಸಿ, ಫಲಿತಾಂಶವನ್ನು ಖಚಿತಪಡಿಸಿಕೊಳ್ಳಲಾಗುತ್ತದೆ.

ಸೀಲ್‌ ನೋಡಿಯೇ ಮತ ಯಂತ್ರ ಓಪನ್‌

ಒಂದು ಇವಿಎಂನ ಯಾವುದೇ ಕಂಟ್ರೋಲ್ ಯೂನಿಟ್‌ನಲ್ಲಿ ದಾಖಲಾದ ಮತಗಳ ಎಣಿಕೆಯನ್ನು ಪ್ರಾರಂಭಿಸುವ ಮೊದಲು, ಆ ಕಂಟ್ರೋಲ್ ಯೂನಿಟ್‌ಗಳಿಗೆ ಹಾಕಿರುವ ಮೊಹರುಗಳನ್ನು ಪರಿಶೀಲಿಸಲಾಗುತ್ತದೆ. ಮತ ಎಣಿಕೆಯ ಟೇಬಲ್ ಬಳಿ ಇರುವ ಎಣಿಕೆಯ ಏಜೆಂಟರು, ಹೊರಗಿನ ಪೇಪರ್ ಸ್ಟ್ರಿಪ್‌ ಸೀಲ್, ವಿಶೇಷ ಟ್ಯಾಗ್, ಹಸಿರು ಕಾಗದದ ಮೊಹರುಗಳು, (ಗ್ರೀನ್ ಪೇಪರ್ ಸೀಲ್ಸ್) ಮತ್ತು ಸಾಗಣೆ ಪೆಟ್ಟಿಗೆಯ ಮೇಲೆ ಹಾಗೂ ಕಂಟ್ರೋಲ್ ಯೂನಿಟ್‌ನ ಮೇಲೆ ಅಂಟಿಸಲಾಗಿರವ ಇತರೆ ಅವಶ್ಯಕ ಮೊಹರುಗಳು ಸರಿಯಾಗಿವೆಯೆಂಬುದನ್ನು ಪರಿಶೀಲಿಸಲು ಮತ್ತು ಮೊಹರುಗಳು ಹಾನಿಗೊಳಗಾಗಿಲ್ಲ ಮತ್ತು ಕಂಟ್ರೋಲ್ ಯೂನಿಟ್‌ನ ಮೊಹರುಗಳು ವಿರೂಪಗೊಂಡಿಲ್ಲವೆಂಬುದನ್ನು ಖಚಿತ ಪಡಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ.

ಕಂಟ್ರೋಲ್‌ ಯುನಿಟ್‌

ಮತಯಂತ್ರವನ್ನು ದುರ್ಬಳಕೆ ಮಾಡಲಾಗಿದೆಯೆಂದು ಅಥವಾ ಆ ಮತಯಂತ್ರವು ಆ ಮತದಾನ ಕೇಂದ್ರದ ಬಳಕೆಗೆ ಪೂರೈಸಿದ ಮತಯಂತ್ರವಲ್ಲವೆಂದು ರಿಟರ್ನಿಂಗ್ ಅಧಿಕಾರಿಗೆ ಮನವರಿಕೆಯಾದರೆ, ಅಂತಹ ಯಂತ್ರವನ್ನು ಪ್ರತ್ಯೇಕವಾಗಿ ಇರಿಸಲಾಗುತ್ತದೆ ಮತ್ತು ಅದರಲ್ಲಿ ದಾಖಲಾದ ಮತಗಳನ್ನು ಎಣಿಕೆ ಮಾಡಲಾಗುವುದಿಲ್ಲ. ನಂತರ ಈ ಬಗ್ಗೆ ನಿರ್ದೇಶನಕ್ಕಾಗಿ ಆಯೋಗಕ್ಕೆ ವರದಿ ಮಾಡಲಾಗುತ್ತದೆ.

ಮರು ಎಣಿಕೆ ಹೇಗೆ?

ಸಾಮಾನ್ಯವಾಗಿ ಮತ ಯಂತ್ರಗಳಲ್ಲಿ ದಾಖಲಾದ ಮತಗಳ ಮರುಎಣಿಕೆ ಮಾಡುವ ಅಗತ್ಯ ಉದ್ಭವಿಸುವುದಿಲ್ಲ. ಇದರಲ್ಲಿ ದಾಖಲಾದ ಪ್ರತಿಯೊಂದು ಮತವೂ ಸಿಂಧುವಾಗಿದ್ದು, ಅದರ ಸಿಂಧುತ್ವ ಅಥವಾ ಇನ್ನಾವುದೇ ಅಂಶದ ಬಗ್ಗೆ ಯಾವುದೇ ವಿವಾದ ಉದ್ಭವಿಸುವುದಿಲ್ಲ. ಹೆಚ್ಚೆಂದರೆ ಕೆಲವು ಅಭ್ಯರ್ಥಿಗಳು ಅಥವಾ ಅವರ ಏಜೆಂಟರುಗಳು ಯಾವುದೇ ನಿರ್ದಿಷ್ಟ ಮತಕೇಂದ್ರದಲ್ಲಿ ಮತದಾನದ ಫಲಿತಾಂಶವನ್ನು ಕಂಟ್ರೋಲ್ ಯೂನಿಟ್ ಪ್ರಕಟಿಸುವ ವೇಳೆಯಲ್ಲಿ ಸರಿಯಾಗಿ ಬರೆದುಕೊಳ್ಳದೆ ಇರುವಂತಹ ಸಾಧ್ಯತೆ ಇರುತ್ತದೆ. ಮರುಪರಿಶೀಲನೆಯ ಅವಶ್ಯಕತೆ ಬಂದರೆ ಆ ಕಂಟ್ರೋಲ್‌ ಯುನಿಟ್‌ಗಳ ʻರಿಸಲ್ಟ್’ ಬಟನ್‌ ಅನ್ನು ಒತ್ತುವ ಮೂಲಕ ಫಲಿತಾಂಶದ ಮರುಪರಿಶೀಲನೆ ಮಾಡಬಹುದು. ಆಗ ಆ ಮತದಾನ ಕೇಂದ್ರದ ಫಲಿತಾಂಶವು ಆ ಯೂನಿಟ್‌ನ ಡಿಸ್‌ಪ್ಲೇ ಪ್ಯಾನಲ್‌ನಲ್ಲಿ ಪುನಃ ಪ್ರದರ್ಶನಗೊಳ್ಳುತ್ತದೆ. ಆಗ ಅದನ್ನು ನೋಡಿ ಖಚಿತಪಡಿಸಿಕೊಳ್ಳಬಹುದು.

ಮತ ಎಣಿಕೆಯ ಕುರಿತು ಮಾಹಿತಿ ಇಲ್ಲಿದೆ ನೋಡಿ

ಇದನ್ನೂ ಓದಿ : Karnataka Election: 73.19% ಮತದಾನ; ರಾಜ್ಯದ ಚುನಾವಣಾ ಇತಿಹಾಸದಲ್ಲೇ ಇದು ಮಹಾ ದಾಖಲೆ

Exit mobile version