ಕರ್ನಾಟಕ ಎಲೆಕ್ಷನ್
Karnataka Election 2023 : ವಿಧಾನಸಾಭಾ ಚುನಾವಣೆಯ ಮತ ಎಣಿಕೆ ಹೇಗೆ ಗೊತ್ತೇ?
ರಾಜ್ಯದ 36 ಮತ ಎಣಿಕೆ (Karnataka Election 2023) ಕೇಂದ್ರಗಳಲ್ಲಿ ಇನ್ನು ಕೆಲವೇ ಕ್ಷಣಗಳಲ್ಲಿ ಮತ ಎಣಿಕೆ ಆರಂಭವಾಗಲಿದೆ. ಮತಗಳನ್ನು ಹೇಗೆ ಎಣಿಸಲಾಗುತ್ತದೆ, ಈ ಪ್ರಕ್ರಿಯೆ ಹೇಗಿರುತ್ತದೆ? ಯಾರೆಲ್ಲಾ ಈ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಬೆಂಗಳೂರು: ರಾಜ್ಯ ವಿಧಾನಸಭಾ ಚನಾವಣೆಯ (Karnataka Election 2023) ಮತ ಎಣಿಕೆ ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದೆ. ಈಗ ಎಲ್ಲರ ಚಿತ್ತ ಮತ ಎಣಿಕೆ ಕೇಂದ್ರಗಳತ್ತ ನೆಟ್ಟಿವೆ. ಯಾರು ಗೆಲ್ಲಬಹುದು, ಯಾವ ಪಕ್ಷ ಅಧಿಕಾರ ಹಿಡಿಯಬಹುದು ಎಂಬುದನ್ನು ಇಡೀ ರಾಜ್ಯದ ಜನ ಕಾತುರದಿಂದ ಕಾಯುತ್ತಿದ್ದಾರೆ.
ಮತದಾನದಕ್ಕೆ ಇವಿಎಂಗಳ ಬಳಕೆ ಆರಂಭವಾದ ಮೇಲೆ ಮತ ಎಣಿಕೆ ಪ್ರಕ್ರಿಯೆಯು ಸರಳವಾಗಿದ್ದು, ಬೇಗನೆ ನಡೆಯಲಿದೆ. ಬೆಳಗ್ಗೆ 8 ಗಂಟೆಯಿಂದ ಎಣಿಕೆ ಕಾರ್ಯ ಆರಂಭವಾಗಲಿದ್ದು, ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ 14 ರಿಂದ 20 ಸುತ್ತುಗಳವರೆಗೆ ಮತ ಎಣಿಕೆ ನಡೆಯುವ ಸಾಧ್ಯತೆಳಿವೆ. ರಾಜ್ಯದ 224 ಕ್ಷೇತ್ರಗಳಲ್ಲಿನ ಮತಗಳ ಎಣಿಕೆಗೆ ಒಟ್ಟು 36 ಮತ ಎಣಿಕೆ ಕೇಂದ್ರಗಳನ್ನು ತೆರೆಯಲಾಗಿದೆ. ಇಲ್ಲಿ ಚುನಾವಣಾ ಕಣದಲ್ಲಿರುವ 2,615 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಾಗುತ್ತದೆ.
ರಾಜ್ಯದ 58,545 ಬೂತ್‌ಗಳಲ್ಲಿ ಮತದಾನ ನಡೆದಿತ್ತು. ಇದಕ್ಕಾಗಿ 62,988 ಬ್ಯಾಲೆಟ್ ಯೂನಿಟ್‌ಗಳನ್ನು ಮತ್ತು 58,545 ಕಂಟ್ರೋಲ್ ಯುನಿಟ್‌ಗಳನ್ನು ಮತದಾನಕ್ಕೆ ಬಳಸಿಕೊಳ್ಳಲಾಗಿತ್ತು. ಪ್ರತಿಯೊಬ್ಬ ಅಭ್ಯರ್ಥಿಗೂ ಎಣಿಕೆ ಸಂದರ್ಭದಲ್ಲಿ ಉಪಸ್ಥಿತರಿರಲು ಏಜೆಂಟ್ ರನ್ನು ನೇಮಿಸಲು ಅವಕಾಶ ನೀಡಲಾಗಿದೆ. ಅಲ್ಲದೆ, ಅಭ್ಯರ್ಥಿ ಕೂಡ ಮತ ಎಣಿಕೆ ಕೇಂದ್ರದಲ್ಲಿ ಉಪಸ್ಥಿತರಿರಬಹುದು. ಮತ ಎಣಿಕೆ ಕೇಂದ್ರಕ್ಕೆ ಅಗತ್ಯ ಸೌಕರ್ಯಗಳನ್ನು ಈಗಾಗಲೇ ಚುನಾವಣಾ ಆಯೋಗ ಒದಗಿಸಿದೆ.
ಹೇಗೆ ನಡೆಯಲಿದೆ ಮತ ಎಣಿಕೆ?
ಪ್ರತಿಯೊಂದು ಮತ ಎಣಿಕೆ ಕೇಂದ್ರದಲ್ಲಿಯೂ ಒಂದು ದೊಡ್ಡ ಸಭಾಂಗಣದಲ್ಲಿ ಮತ ಎಣಿಕೆಗೆ ವ್ಯವಸ್ಥೆ ಮಾಡಲಾಗಿರುತ್ತದೆ. ಇದರಲ್ಲಿ ಒಟ್ಟು 14 ಟೇಬಲ್‌ಗಳನ್ನು ಹಾಕಿರಲಾಗುತ್ತದೆ. ಒಂದು ಟೇಬಲ್‌ನಲ್ಲಿ ಮೂವರು ಸಿಬ್ಬಂದಿಯನ್ನು (ಒಬ್ಬ ಎಣಿಕೆಯ ಮೇಲ್ವಿಚಾರಕ, ಒಬ್ಬ ಎಣಿಕೆಯ ಸಹಾಯಕ, ಒಬ್ಬ ಹೆಚ್ಚುವರಿ ಸಿಬ್ಬಂದಿ) ನಿಯೋಜಿಸಲಾಗಿರುತ್ತದೆ. ಪ್ರತಿಯೊಂದು ಎಣಿಕೆ ಟೇಬಲ್‌ಗೆ ಬ್ಯಾರಿಕೇಡ್ ಅಥವಾ ತಂತಿ ಮೆಷ್ ಹಾಕಲಾಗಿರುತ್ತದೆ. ಇದರಿಂದ ಮತ ಎಣಿಕೆಯ ಏಜೆಂಟ್‌ಗಳು ಇವಿಎಂಗಳನ್ನು ಮುಟ್ಟಲಾಗುವುದಿಲ್ಲ. ಆದರೆ, ಮತ ಎಣಿಕೆಯ ಏಜೆಂಟರುಗಳಿಗೆ, ಎಣಿಕೆಯ ಸಮಗ್ರ ಪ್ರಕ್ರಿಯೆಯನ್ನು ನೋಡಲು ಮುಕ್ತ ಅವಕಾಶವನ್ನು ಕಲ್ಪಿಸಲಾಗಿರುತ್ತದೆ. ರಿಟರ್ನಿಂಗ್ ಅಧಿಕಾರಿಯ (ಆರ್‌ಓ) ಅಂದರೆ ಚುನಾವಣಾಧಿಕಾರಿಯ ನೇತೃತ್ವದಲ್ಲಿ ಮತ ಎಣಿಕೆ ಕಾರ್ಯನಡೆಯಲಿದೆ.
ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭಿಸಲಾಗುತ್ತದೆ. ಮೊದಲಿಗೆ ಅಂಚೆಯ ಮೂಲಕ ಬಂದ ಮತಪತ್ರಗಳನ್ನು ಎಣಿಕೆ ಮಾಡಲಾಗುತ್ತದೆ. ಇದಕ್ಕೆ 30 ನಿಮಿಷ ಕಾಲಾವಕಾಶ ನೀಡಲಾಗಿರುತ್ತದೆ. ಒಂದು ವೇಳೆ ಈ ಸಮಯದೊಳಗೆ ಅಂಚೆ ಮತಗಳ ಎಣಿಕೆ ಮುಗಿಯದಿದ್ದರೂ, ಈ ಸಮಯದ ನಂತರ ಇವಿಎಂಗಳ ಮತ ಎಣಿಕೆಯನ್ನು ಆರಂಭಿಸಬಹುದಾಗಿರುತ್ತದೆ. ಅಂಚೆ ಮತಪತ್ರಗಳ ಎಣಿಕೆಯನ್ನು ಅಂತಿಮಗೊಳಿಸುವ ಮೊದಲು ಇವಿಎಂನ ಎಲ್ಲಾ ಸುತ್ತುಗಳ ಎಣಿಕೆಯ ಫಲಿತಾಂಶವನ್ನು ಪ್ರಕಟಿಸುವಂತಿಲ್ಲ. ಅಂಚೆ ಮತಪತ್ರಗಳನ್ನು ರಿಟರ್ನಿಂಗ್ ಅಧಿಕಾರಿಯು ತನ್ನ ಟೇಬಲ್‌ನಲ್ಲಿ ಎಣಿಸಲಿದ್ದಾರೆ.
ಬ್ಯಾಲೆಟ್ ಯೂನಿಟ್ ಇರುವುದಿಲ್ಲ!
ಇವಿಎಂನ ಮೂಲಕ ಮತದಾನ ಕೇಂದ್ರಗಳಲ್ಲಿ ಚಲಾಯಿಸಲ್ಪಟ್ಟ ಮತಗಳ ಎಣಿಕೆಯನ್ನು, ಮತ ಎಣಿಕೆ ಸಭಾಂಗಣದಲ್ಲಿ ಒದಗಿಸಿದ ಟೇಬಲ್‌ಗಳಲ್ಲಿ ಸಹಾಯಕ ರಿಟರ್ನಿಂಗ್ ಅಧಿಕಾರಿ (ಎಆರ್‌ಓ) ನಡೆಸುತ್ತಾರೆ. ಆ ಉದ್ದೇಶಕ್ಕಾಗಿ ಮತಕೇಂದ್ರಗಳಿಂದ ತಂದ ಇವಿಎಂಗಳ ಕಂಟ್ರೋಲ್ ಯೂನಿಟ್‌ಗಳನ್ನು ವಿವಿಧ ಮತ ಎಣಿಕೆ ಟೇಬಲ್‌ಗಳಿಗೆ ವಿತರಿಸಲಾಗುತ್ತದೆ. ಮತದಾನ ಕೇಂದ್ರಗಳ ಕ್ರಮಸಂಖ್ಯೆಗನುಗುಣವಾಗಿ ಇದರ ಹಂಚಿಕೆ ನಡೆಯುತ್ತದೆ. ಉದಾ: ಮತದಾನ ಕೇಂದ್ರ 1ರ ಇವಿಎಂನ ಕಂಟ್ರೋಲ್ ಯುನಿಟ್ ಅನ್ನು ಟೇಬಲ್ ಸಂಖ್ಯೆ 1ಕ್ಕೆ ವಿತರಿಸಲಾಗುತ್ತದೆ. ಈ ರೀತಿ 14 ಅಥವಾ ಅದಕ್ಕಿಂತ ಹೆಚ್ಚು ಟೇಬಲ್‌ಗಳನ್ನು ಹಾಕಿರುತ್ತಾರೆ. ಎಲ್ಲ ಟೇಬಲ್‌ಗಳಲ್ಲಿನ ಮತ ಎಣಿಕೆ ಪೂರ್ಣಗೊಂಡ ನಂತರ ಒಂದು ಸುತ್ತು ಮತ ಎಣಿಕೆ ಪೂರ್ಣಗೊಳ್ಳಲಿದೆ.
ನಿಮಗೆ ಗೊತ್ತೇ, ಮತ ಎಣಿಕೆ ಸಂದರ್ಭದಲ್ಲಿ ನಿರ್ದಿಷ್ಟ ಮತಕೇಂದ್ರದಲ್ಲಿ ಬಳಸಿದ ಇವಿಎಂನ ಕಂಟ್ರೋಲ್ ಯೂನಿಟ್ ಮಾತ್ರ ಆ ಮತದಾನ ಕೇಂದ್ರದ ಮತದಾನ ಫಲಿತಾಂಶವನ್ನು ಪಡೆದುಕೊಳ್ಳುವುದಕ್ಕೆ ಅವಶ್ಯಕವಾಗಿರುತ್ತದೆ. ನೀವು ವೋಟ್ ಹಾಕಲು ಬಳಸಿದ ಬ್ಯಾಲೆಟ್ ಯೂನಿಟ್ ಅನ್ನು ಭದ್ರತಾ ಕೊಠಡಿಯಲ್ಲಿಯೇ ಇಟ್ಟಿರುತ್ತಾರೆ.
ಮತ ಎಣಿಕೆ ಹೇಗೆ?
ಮತ ಎಣಿಕೆ ಎಂದರೆ ಕಂಟ್ರೋಲ್ ಯೂನಿಟ್‌ನ ಹಿಂಭಾಗದಲ್ಲಿರುವ ಸ್ವಿಚ್ ಆನ್ ಮಾಡಲಾಗುತ್ತದೆ. ಆಗ ಕಂಟ್ರೋಲ್ ಯೂನಿಟ್‌ನ ಡಿಸ್‌ಪ್ಲೇ ಸೆಕ್ಷನ್‌ನಲ್ಲಿನ ʻON’ ದೀಪವು ಹಸಿರು ಬಣ್ಣದಲ್ಲಿ ಬೆಳಗುತ್ತದೆ. ಆ ನಂತರ, ʻರಿಸಲ್ಟ್ ಬಟನ್ʼ ಅನ್ನು ಒತ್ತಲಾಗುತ್ತದೆ. ʻರಿಸಲ್ಟ್ʼ ಬಟನ್ ಅನ್ನು ಒತ್ತಿದಾಗ ಆ ನಿರ್ದಿಷ್ಟ ಮತದಾನ ಕೇಂದ್ರದಲ್ಲಿ ಪ್ರತಿ ಅಭ್ಯರ್ಥಿಗೆ ಮತ್ತು ನೋಟಾಗೆ ದಾಖಲಾದ ಮತಗಳ ಒಟ್ಟು ಸಂಖ್ಯೆಯು ಕಂಟ್ರೋಲ್ ಯೂನಿಟ್‌ನ ಡಿಸ್‌ಪ್ಲೇ ಪ್ಯಾನೆಲ್‌ನಲ್ಲಿ ಸ್ವಯಂಚಾಲಿತವಾಗಿ ಪ್ರದರ್ಶನಗೊಳ್ಳುತ್ತವೆ.
ಆಗ ಅಭ್ಯರ್ಥಿವಾರು ಪ್ರದರ್ಶನಗೊಂಡಂಥ ಫಲಿತಾಂಶವನ್ನು ಎಣಿಕೆ ಮೇಲ್ವಿಚಾರಕರು ನಿಗದಿತ ನಮೂನೆಯ ಫಾರಂನಲ್ಲಿ ದಾಖಲಿಸಿಕೊಳ್ಳುತ್ತಾರೆ. ಈ ಪ್ರಕ್ರಿಯೆಯನ್ನು ಏಜೆಂಟರು ನೋಡುತ್ತಿರುತ್ತಾರೆ. ಅಗತ್ಯ ಇದ್ದವರು ದಾಖಲಿಸಿಕೊಳ್ಳಲೂ ಬಹುದು. ಮತ ಎಣಿಕೆ ಸಿಬ್ಬಂದಿ ಫಲಿತಾಂಶವನ್ನು ದಾಖಲಿಸಿಕೊಂಡ ನಂತರ, ಫಲಿತಾಂಶ ವಿಭಾಗದ ಕವರನ್ನು ಮುಚ್ಚಲಾಗುತ್ತದೆ ಮತ್ತು ಕಂಟ್ರೋಲ್ ಯೂನಿಟ್ ಅನ್ನು ಸ್ವಿಚ್ ಆಫ್ ಮಾಡಲಾಗುತ್ತದೆ. ಇಲ್ಲಿಗೆ ಮತ ಎಣಿಕೆ ಪೂರ್ಣಗೊಂಡಂತೆ.
ಒಂದು ಸುತ್ತಿನ ಮತ ಎಣಿಕೆ ಸಂದರ್ಭದಲ್ಲಿ ರ‍್ಯಾಂಡಮ್ ಆಗಿ ಒಂದು ಮತದಾನ ಕೇಂದ್ರದ ವಿವಿಪ್ಯಾಟ್ ಪೇಪರ್ ಸ್ಲಿಪ್‌ಗಳನ್ನು ಕಡ್ಡಾಯವಾಗಿ ಪರಿಶೀಲಿಸಿ, ಫಲಿತಾಂಶವನ್ನು ಖಚಿತಪಡಿಸಿಕೊಳ್ಳಲಾಗುತ್ತದೆ.
ಸೀಲ್ ನೋಡಿಯೇ ಮತ ಯಂತ್ರ ಓಪನ್
ಒಂದು ಇವಿಎಂನ ಯಾವುದೇ ಕಂಟ್ರೋಲ್ ಯೂನಿಟ್‌ನಲ್ಲಿ ದಾಖಲಾದ ಮತಗಳ ಎಣಿಕೆಯನ್ನು ಪ್ರಾರಂಭಿಸುವ ಮೊದಲು, ಆ ಕಂಟ್ರೋಲ್ ಯೂನಿಟ್‌ಗಳಿಗೆ ಹಾಕಿರುವ ಮೊಹರುಗಳನ್ನು ಪರಿಶೀಲಿಸಲಾಗುತ್ತದೆ. ಮತ ಎಣಿಕೆಯ ಟೇಬಲ್ ಬಳಿ ಇರುವ ಎಣಿಕೆಯ ಏಜೆಂಟರು, ಹೊರಗಿನ ಪೇಪರ್ ಸ್ಟ್ರಿಪ್ ಸೀಲ್, ವಿಶೇಷ ಟ್ಯಾಗ್, ಹಸಿರು ಕಾಗದದ ಮೊಹರುಗಳು, (ಗ್ರೀನ್ ಪೇಪರ್ ಸೀಲ್ಸ್) ಮತ್ತು ಸಾಗಣೆ ಪೆಟ್ಟಿಗೆಯ ಮೇಲೆ ಹಾಗೂ ಕಂಟ್ರೋಲ್ ಯೂನಿಟ್‌ನ ಮೇಲೆ ಅಂಟಿಸಲಾಗಿರವ ಇತರೆ ಅವಶ್ಯಕ ಮೊಹರುಗಳು ಸರಿಯಾಗಿವೆಯೆಂಬುದನ್ನು ಪರಿಶೀಲಿಸಲು ಮತ್ತು ಮೊಹರುಗಳು ಹಾನಿಗೊಳಗಾಗಿಲ್ಲ ಮತ್ತು ಕಂಟ್ರೋಲ್ ಯೂನಿಟ್‌ನ ಮೊಹರುಗಳು ವಿರೂಪಗೊಂಡಿಲ್ಲವೆಂಬುದನ್ನು ಖಚಿತ ಪಡಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ.
ಮತಯಂತ್ರವನ್ನು ದುರ್ಬಳಕೆ ಮಾಡಲಾಗಿದೆಯೆಂದು ಅಥವಾ ಆ ಮತಯಂತ್ರವು ಆ ಮತದಾನ ಕೇಂದ್ರದ ಬಳಕೆಗೆ ಪೂರೈಸಿದ ಮತಯಂತ್ರವಲ್ಲವೆಂದು ರಿಟರ್ನಿಂಗ್ ಅಧಿಕಾರಿಗೆ ಮನವರಿಕೆಯಾದರೆ, ಅಂತಹ ಯಂತ್ರವನ್ನು ಪ್ರತ್ಯೇಕವಾಗಿ ಇರಿಸಲಾಗುತ್ತದೆ ಮತ್ತು ಅದರಲ್ಲಿ ದಾಖಲಾದ ಮತಗಳನ್ನು ಎಣಿಕೆ ಮಾಡಲಾಗುವುದಿಲ್ಲ. ನಂತರ ಈ ಬಗ್ಗೆ ನಿರ್ದೇಶನಕ್ಕಾಗಿ ಆಯೋಗಕ್ಕೆ ವರದಿ ಮಾಡಲಾಗುತ್ತದೆ.
ಮರು ಎಣಿಕೆ ಹೇಗೆ?
ಸಾಮಾನ್ಯವಾಗಿ ಮತ ಯಂತ್ರಗಳಲ್ಲಿ ದಾಖಲಾದ ಮತಗಳ ಮರುಎಣಿಕೆ ಮಾಡುವ ಅಗತ್ಯ ಉದ್ಭವಿಸುವುದಿಲ್ಲ. ಇದರಲ್ಲಿ ದಾಖಲಾದ ಪ್ರತಿಯೊಂದು ಮತವೂ ಸಿಂಧುವಾಗಿದ್ದು, ಅದರ ಸಿಂಧುತ್ವ ಅಥವಾ ಇನ್ನಾವುದೇ ಅಂಶದ ಬಗ್ಗೆ ಯಾವುದೇ ವಿವಾದ ಉದ್ಭವಿಸುವುದಿಲ್ಲ. ಹೆಚ್ಚೆಂದರೆ ಕೆಲವು ಅಭ್ಯರ್ಥಿಗಳು ಅಥವಾ ಅವರ ಏಜೆಂಟರುಗಳು ಯಾವುದೇ ನಿರ್ದಿಷ್ಟ ಮತಕೇಂದ್ರದಲ್ಲಿ ಮತದಾನದ ಫಲಿತಾಂಶವನ್ನು ಕಂಟ್ರೋಲ್ ಯೂನಿಟ್ ಪ್ರಕಟಿಸುವ ವೇಳೆಯಲ್ಲಿ ಸರಿಯಾಗಿ ಬರೆದುಕೊಳ್ಳದೆ ಇರುವಂತಹ ಸಾಧ್ಯತೆ ಇರುತ್ತದೆ. ಮರುಪರಿಶೀಲನೆಯ ಅವಶ್ಯಕತೆ ಬಂದರೆ ಆ ಕಂಟ್ರೋಲ್ ಯುನಿಟ್‌ಗಳ ʻರಿಸಲ್ಟ್’ ಬಟನ್ ಅನ್ನು ಒತ್ತುವ ಮೂಲಕ ಫಲಿತಾಂಶದ ಮರುಪರಿಶೀಲನೆ ಮಾಡಬಹುದು. ಆಗ ಆ ಮತದಾನ ಕೇಂದ್ರದ ಫಲಿತಾಂಶವು ಆ ಯೂನಿಟ್‌ನ ಡಿಸ್‌ಪ್ಲೇ ಪ್ಯಾನಲ್‌ನಲ್ಲಿ ಪುನಃ ಪ್ರದರ್ಶನಗೊಳ್ಳುತ್ತದೆ. ಆಗ ಅದನ್ನು ನೋಡಿ ಖಚಿತಪಡಿಸಿಕೊಳ್ಳಬಹುದು.
ಇದನ್ನೂ ಓದಿ : Karnataka Election: 73.19% ಮತದಾನ; ರಾಜ್ಯದ ಚುನಾವಣಾ ಇತಿಹಾಸದಲ್ಲೇ ಇದು ಮಹಾ ದಾಖಲೆ
ಕರ್ನಾಟಕ
MLC Election: ಕಾಂಗ್ರೆಸ್ ಸರ್ಕಾರಕ್ಕೆ 3ನೇ ಸವಾಲು: 3 ಪರಿಷತ್ ಸ್ಥಾನಕ್ಕೆ 19 ಆಕಾಂಕ್ಷಿಗಳು, ನಾಲ್ಕೈದು ಬಣಗಳು!
ಸದ್ಯ 34 ಸಚಿವರ ಪೈಕಿ ಬೋಸರಾಜು ಅವರು ವಿಧಾನಸಭೆ ಸದಸ್ಯರೂ ಅಲ್ಲ, ವಿಧಾನ ಪರಿಷತ್ ಸದಸ್ಯರೂ ಅಲ್ಲ. ಹಾಗಾಗಿ ಅವರನ್ನು ಆರು ತಿಂಗಳೊಳಗೆ ಕೆಳಮನೆ ಅಥವಾ ಮೇಲ್ಮನೆ ಸದಸ್ಯರನ್ನಾಗಿಸಬೇಕು.
ಬೆಂಗಳೂರು: ಈಗಷ್ಟೆ ಸಂಪುಟ ಸರ್ಕಸ್ ಮುಗಿಸಿ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗಿರುವ ಕಾಂಗ್ರೆಸ್ ಸರ್ಕಾರಕ್ಕೆ ಮೂರನೇ ಸವಾಲು ಎದುರಾಗಿದೆ. ವಿಧಾನಸಭೆಯಿಂದ ಆಯ್ಕೆ ಮಾಡಬೇಕಾದ ಮೂರು ವಿಧಾನ ಪರಿಷತ್ ಸ್ಥಾನಗಳನ್ನು ಭರ್ತಿ ಮಾಡಬೇಕಿದ್ದು, ಉಪಚುನಾವಣೆಗೆ ಈಗಾಗಲೆ ಆಕಾಂಕ್ಷಿಗಳ ಸಂಖ್ಯೆ ಬೆಳೆಯುತ್ತಲೇ ಸಾಗಿದೆ.
ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿಯ ಅನೇಕ ವಿಧಾನ ಪರಿಷತ್ ಸದಸ್ಯರು ರಾಜೀನಾಮೆ ನೀಡಿದ್ದರು. ಇದರಲ್ಲಿ, ವಿಧಾನ ಸಭೆಯಿಂದ ಆಯ್ಕೆ ಮಾಡಲಾಗಿದ್ದ ಲಕ್ಷ್ಮಣ ಸವದಿ, ಆರ್ ಶಂಕರ್, ಬಾಬುರಾವ್ ಚಿಂಚನಸೂರು ರಾಜೀನಾಮೆ ನೀಡಿದ್ದರು. ಲಕ್ಷ್ಮಣ ಸವದಿ ಹಾಗೂ ಬಾಬುರಾವ್ ಚಿಂಚನಸೂರು ಕಾಂಗ್ರೆಸ್‌ನಿಂದ ಸ್ಪರ್ಧಿಸಿದರೆ ಶಂಕರ್ ಪಕ್ಷೇತರರಾಗಿದ್ದರು. ಲಕ್ಷ್ಮಣ ಸವದಿ ಹೊರತುಪಡಿಸಿ ಇಬ್ಬರೂ ಸೋಲುಂಡರು. ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಗಳಿಗೆ ಜೂನ್ 30ರಂದು ಚುನಾವಣೆ ನಡೆಸುವುದಾಗಿ ಚುನಾವಣಾ ಆಯೋಗ ಪ್ರಕಟಿಸಿದೆ.
ಮೂರೂ ಚುನಾವಣೆಗಳು ಒಟ್ಟಾಗಿ ನಡೆಯುತ್ತಿದೆಯಾದರೂ ಅವುಗಳು ಬೇರೆಬೇರೆ ಅವಧಿಯಲ್ಲಿ ಮುಕ್ತಾಯವಾಗುವ ಸ್ಥಾನಗಳಾದ್ಧರಿಂದ ಪ್ರತ್ಯೇಕ ಚುನಾವಣೆ ಎಂದೇ ಪರಿಗಣಿಸಲಾಗುತ್ತದೆ. ಹಾಗಾಗಿ ಮೂರಕ್ಕೆ ಮೂರೂ ಸ್ಥಾನಗಳು ಕಾಂಗ್ರೆಸ್‌ಗೇ ಸಿಗಲಿವೆ. ಈ ಮೂರು ಸ್ಥಾನಗಳಿಗೆ ಈಗಾಗಲೆ ಪೈಪೋಟಿ ಆರಂಭವಾಗಿದೆ. ಆದರೆ ಮೂರರಲ್ಲಿ ಒಂದು ಸ್ಥಾನ ಈಗಾಗಲೆ ನಿಗದಿಯಾಗಿರುವುದು ಮತ್ತಷ್ಟು ಒತ್ತಡ ಹೆಚ್ಚಿಸಿದೆ.
ಸದ್ಯ 34 ಸಚಿವರ ಪೈಕಿ ಬೋಸರಾಜು ಅವರು ವಿಧಾನಸಭೆ ಸದಸ್ಯರೂ ಅಲ್ಲ, ವಿಧಾನ ಪರಿಷತ್ ಸದಸ್ಯರೂ ಅಲ್ಲ. ಹಾಗಾಗಿ ಅವರನ್ನು ಆರು ತಿಂಗಳೊಳಗೆ ಕೆಳಮನೆ ಅಥವಾ ಮೇಲ್ಮನೆ ಸದಸ್ಯರನ್ನಾಗಿಸಬೇಕು. ಯಾವುದೇ ಸದಸ್ಯರನ್ನು ರಾಜೀನಾಮೆ ಕೊಡಿಸಿ ಉಪ ಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಬರುವ ಸವಾಲನ್ನು ಕಾಂಗ್ರೆಸ್ ಪಕ್ಷ ತೆಗೆದುಕೊಳ್ಳುವುದು ಬಹುತೇಕ ಅಸಾಧ್ಯ. ಹಾಗಾಗು ಪರಿಷತ್ ಸದಸ್ಯರನ್ನಾಗಿ ನೇಮಿಸಬೇಕಾಗಿದೆ.
ಇನ್ನು ಎರಡು ಸ್ಥಾನಗಳಿಗೆ ಅನೇಕರು ಪ್ರಯತ್ನ ನಡೆಸಿದ್ದಾರೆ. ಇದರಲ್ಲಿಯೂ ಸಿದ್ದರಾಮಯ್ಯ ಬಣ, ಡಿ.ಕೆ. ಶಿವಕುಮಾರ್ ಬಣ, ಇನ್ನಿತರರ ಬಣ ಹಾಗೂ ಹೈಕಮಾಂಡ್ ಕೋಟಾ ಹೆಸರುಗಳು ಕೇಳಿಬರುತ್ತಿವೆ.
ಆಕಾಂಕ್ಷಿಗಳು ಹಾಗೂ ಕೋಟ
ಜಗದೀಶ್ ಶೆಟ್ಟರ್ – ಹೈಕಮಾಂಡ್
ಬಾಬುರಾವ್ ಚಿಂಚನಸೂರ – ಮಲ್ಲಿಕಾರ್ಜುನ ಖರ್ಗೆ
ಬಿಎಲ್ ಶಂಕರ್ – ಡಿ.ಕೆ. ಶಿವಕುಮಾರ್
ವಿ.ಆರ್ ಸುದರ್ಶನ್ – ಸಿದ್ದರಾಮಯ್ಯ
ವಿಜಯ್ ಮುಳಗುಂದ್ – ಡಿ.ಕೆ. ಶಿವಕುಮಾರ್
ವಿಶ್ವನಾಥ್ ಕನಕಪುರ – ಡಿ.ಕೆ. ಶಿವಕುಮಾರ್
ಉಮಾಶ್ರೀ – ಸಿದ್ದರಾಮಯ್ಯ
ರಾಮಪ್ಪ – ಸಿದ್ದರಾಮಯ್ಯ
ಕವಿತಾರೆಡ್ಡಿ – ಸಿದ್ದರಾಮಯ್ಯ
ನಾಗಲಕ್ಷ್ಕೀ ಚೌಧರಿ – ಸಿದ್ದರಾಮಯ್ಯ/ಪರಮೇಶ್ವರ್
ಅನಿಲ್ ಕುಮಾರ್ – ಲಿಂಗಾಯತ – ಎಂಬಿ ಪಾಟೀಲ್, ಈಶ್ವರ ಖಂಡ್ರೆ
ಪುಷ್ಪಲತಾ ಅಮರನಾಥ – ಸಿದ್ದರಾಮಯ್ಯ
ನಟರಾಜ ಗೌಡ – ಡಿ.ಕೆ. ಶಿವಕುಮಾರ್
ಐವನ್ ಡಿಸೋಜ – ಸಿದ್ದರಾಮಯ್ಯ
ಮೈಸೂರು ಲಕ್ಷ್ಮಣ್ – ಸಿದ್ದರಾಮಯ್ಯ
ಗಾಯಿತ್ರಿ ಶಾಂತೇಗೌಡ – ಸಿದ್ದರಾಮಯ್ಯ
ಮಂಜುಳ ಮಾನಸ – ಸಿದ್ದರಾಮಯ್ಯ
ಸಾದುಕೋಕಿಲಾ – ಡಿ.ಕೆ. ಶಿವಕುಮಾರ್
ಇದನ್ನೂ ಓದಿ: Congress Guarantee: ಇದು ಸರ್ಕಾರ, ಸರ್ಕಾರ ನಡೆಸೋದು ನಾವು: ಗ್ಯಾರಂಟಿ ಕಂಡೀಷನ್ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಉತ್ತರ
ಕರ್ನಾಟಕ
Congress Guarantee: ವಿದ್ಯುತ್ ಬಳಕೆ ಸರಾಸರಿ ಮೀರಿದರೆ ಎಷ್ಟು ಕಟ್ಟಬೇಕು? ಇಲ್ಲಿದೆ ಸರ್ಕಾರದ ಹೊಸ ನಿಯಮ
200 ಯುನಿಟ್ ಒಳಗೆ ಇರುವವರಿಗೆ ಎಲ್ಲ ಸೌಲಭ್ಯ ಸಿಗುತ್ತದೆ. ಸರಾಸರಿ ಹಾಗೂ ಶೇ.10ರೊಳಗೆ ಬಂದರೆ ಹಣ ಪಾವತಿ ಮಾಡಬೇಕಿಲ್ಲ. ಆದರೆ ಸರಾಸರಿ ಮೀರಿದರೆ ಏನು ಎಂಬ ಗೊಂದಲ ಇತ್ತು.
ಬೆಂಗಳೂರು: ಮಾಸಿಕ 200 ಯುನಿಟ್‌ಗಿಂತ ಕಡಿಮೆ ವಿದ್ಯುತ್ ಬಳಸುವವರಿಗೆ ಉಚಿತವಾಗಿ ವಿದ್ಯುತ್ ನೀಡುವ ಯೋಜನೆಗೆ ರಾಜ್ಯ ಸರ್ಕಾರ ಚಾಲನೆ ನೀಡಿದೆ. ಸ್ವಂತ ಮನೆಯವರಿಗಷ್ಟೆ ಎಂಬಂತೆ ಇದ್ದ ಸರ್ಕಾರಿ ಆದೇಶದ ಕುರಿತು ಇಂಧನ ಸಚಿವ ಕೆ.ಜೆ. ಜಾರ್ಜ್ ಸ್ಪಷ್ಟನೆ ನೀಡಿದ್ದಾರೆ. ಬಾಡಿಗೆ ಮನೆಯವರಿಗೂ ಅನ್ವಯ ಆಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. (ಈ ಕುರಿತು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ).
ಆದರೆ 200 ಯುನಿಟ್ ಒಳಗೆ ಸರಾಸರಿ ಇರುವವರು ಸರಾಸರಿ ಮೀರಿದರೆ ಪೂರ್ಣ ವಿದ್ಯುತ್ ಬಿಲ್ ಪಾವತಿ ಮಾಡಬೇಕೆ ಬೇಡವೇ ಎಂಬ ಗೊಂದಲ ಇತ್ತು. ಈಗ ಈ ವಿಚಾರಕ್ಕೂ ಕೆ.ಜೆ. ಜಾರ್ಜ್ ತೆರೆ ಎಳೆದಿದ್ದಾರೆ.
200 ಯುನಿಟ್ ಒಳಗೆ ಇರುವವರಿಗೆ ಎಲ್ಲ ಸೌಲಭ್ಯ ಸಿಗುತ್ತದೆ. ಸರಾಸರಿ ಹಾಗೂ ಶೇ.10ರೊಳಗೆ ಬಂದರೆ ಹಣ ಪಾವತಿ ಮಾಡಬೇಕಿಲ್ಲ. ಆದರೆ 200 ಯುನಿಟ್ ಒಳಗೆ ಸರಾಸರಿಯನ್ನು ಮೀರಿ ಬಳಕೆ ಮಾಡಿದರೆ ಹೆಚ್ಚುವರಿ ವಿದ್ಯುತ್‌ಗೆ ಮಾತ್ರವೇ ಬಿಲ್ ಕಟ್ಟಬೇಕಾಗುತ್ತದೆ. ಆದರೆ ಇದು 200 ಯುನಿಟ್ ದಾಟಿದರೆ ಸಂಪೂರ್ಣ ವಿದ್ಯುತ್ ಬಳಕೆಗೆ ಪಾವತಿ ಮಾಡಬೇಕಾಗುತ್ತದೆ. ಯುನಿಟ್ ಬಿಲ್ ಜತೆಗೆ ಮಾಸಿಕ ಬಾಡಿಗೆ ದರವನ್ನೂ ಮಾಡಲಾಗುತ್ತದೆ. ಆದರೆ ನಿಗದಿತ ಸರಸರಿಗಿಂತ ಹೆಚ್ಚು ಬಳಸಿದ ವಿದ್ಯುತ್‌ಗೆ ಅದರ ಬಳಕೆ ಆಧಾರದಲ್ಲಿ ಬಾಡಿಗೆ ಅಥವಾ ತೆರಿಗೆ ಪಡೆಯಲಾಗುತ್ತದೆ ಎಂದು ತಿಳಿಸಿದರು.
ಇದು ಹೇಗೆ ಅನ್ವಯ?
200 ಯುನಿಟ್ ಒಳಗೆ ಬಳಸಿದರೆ ಹೆಚ್ಚುವರಿ ವಿದ್ಯುತ್ ಮಾತ್ರ ಬಿಲ್ ಪಾವತಿ ಮಾಡಬೇಕಾಗುತ್ತದೆ. ಉದಾಹರಣೆಗೆ ಒಂದು ಆರ್‌ಆರ್ ಸಂಖ್ಯೆಗೆ ವಾರ್ಷಿಕ 100 ಯುನಿಟ್ ಸರಾಸರಿ ಎಂದು ನಿಗದಿಯಾಗಿರುತ್ತದೆ. ಅದರ ಮೇಲೆ ಶೇ.10 ಅಂದರೆ 110 ಯುನಿಟ್ ವರೆಗೆ ಮಾಸಿಕ ಬಿಲ್ ಬಂದರೆ ಯಾವುದೇ ಪಾವತಿ ಮಾಡಬೇಕಿಲ್ಲ. ಆದರೆ ಈ ಮೊತ್ತ ಇದ್ದಕ್ಕಿದ್ದಂತೆ ಯಾವುದೋ ಒಂದು ತಿಂಗಳು 150 ಯುನಿಟ್ ಬಂದರೆ ಏನು ಮಾಡುವುದು? ಆ ತಿಂಗಳು ಹೆಚ್ಚುವರಿಯಾಗಿ ಬಳಕೆಯಾದ 40 ಯುನಿಟ್ (ಅಂದರೆ 150- 110= 40) ಯುನಿಟ್‌ಗೆ ಮಾತ್ರ ಬಿಲ್ ಪಾವತಿ ಮಾಡಬೇಕಾಗುತ್ತದೆ. ಈ ರೀತಿ 200 ಯುನಿಟ್‌ವರೆಗೂ ಬಳಸಬಹುದು. ಆಗ ಹೆಚ್ಚುವರಿ ಯುನಿಟ್‌ಗೆ ಮಾತ್ರ ಬಿಲ್ ಪಾವತಿಸಬೇಕು. ಆದರೆ ಈ ಬಳಕೆಯು 200 ಯುನಿಟ್ ದಾಟಿದರೆ ಸಂಪೂರ್ಣ ಬಳಕೆಗೆ ಬಿಲ್ ಪಾವತಿ ಮಾಡಬೇಕಾಗುತ್ತದೆ.
ಇದನ್ನೂ ಓದಿ: Free Electricity: ಹೊರಬಿತ್ತು ಗೃಹ ಜ್ಯೋತಿ ಮಾರ್ಗಸೂಚಿ; ಬಾಡಿಗೆದಾರನಿಗಿಲ್ಲ ಉಚಿತ ವಿದ್ಯುತ್?
ಕರ್ನಾಟಕ
Video Viral: ಉಚಿತ ಗ್ಯಾರಂಟಿ ಯೋಜನೆ ಚುನಾವಣೆಯ ಚೀಪ್ ಗಿಮಿಕ್ ಎಂದ ಕೃಷಿ ಸಚಿವ ಚಲುವರಾಯಸ್ವಾಮಿ!
N Chaluvarayaswamy: ಎನ್. ಚಲುವರಾಯಸ್ವಾಮಿ ಅವರು ಶಾಸಕ,ಸಚಿವರಾಗುವ ಮೊದಲು ಉಚಿತ ಗ್ಯಾರಂಟಿ ಯೋಜನೆ ಬಗ್ಗೆ ನೀಡಿದ್ದ ಹೇಳಿಕೆ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಎಲ್ಲವೂ ಫ್ರೀ ಫ್ರೀ ಅಂತ ಹೋದ್ರೆ ಎಲ್ಲಿ ಹೋಗಿ ನಿಲ್ಲುತ್ತದೆ ಎಂದು ಅವರು ಕಳವಳವನ್ನು ವ್ಯಕ್ತಪಡಿಸಿದ್ದರು. ಚುನಾವಣೆ ಗೆಲ್ಲಬೇಕು ಅಂದರೆ ಇಂತಹ ಚೀಪ್ ಗಿಮಿಕ್ ಅನಿವಾರ್ಯ ಆಗಿದೆ ಎಂದಿದ್ದ ಅವರು ನೀಡಿರುವ ಹೇಳಿಕೆ ಈಗ ವಿವಾದದ ಸ್ವರೂಪವನ್ನು ಪಡೆದುಕೊಂಡಿದೆ.
ಬೆಂಗಳೂರು: ಈ ಬಾರಿಯ ಚುನಾವಣೆಯಲ್ಲಿ ಘೋಷಣೆ ಮಾಡಲಾಗಿರುವ ಗ್ಯಾರಂಟಿ (Congress Guarantee) ಯೋಜನೆಗಳು ಚುನಾವಣೆ ಗಿಮಿಕ್ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ (N Chaluvarayaswamy) ಅವರು ಹೇಳಿರುವ ವಿಡಿಯೊವೊಂದು ವೈರಲ್ (Video Viral) ಆಗಿದೆ. ಚುನಾವಣೆ ವೇಳೆ ಅಧಿಕಾರವನ್ನು ಹಿಡಿಯುವುದೇ ಬಹುಮುಖ್ಯ ಆಗಿದ್ದರಿಂದ ನಮಗೆ ಇಷ್ಟ ಇದೆಯೋ ಇಲ್ಲವೋ, ಸಿದ್ದರಾಮಯ್ಯ (CM Siddaramaiah) ಅವರಿಗೆ ಇಷ್ಟ ಆಗುತ್ತದೆಯೋ ಇಲ್ಲವೋ ಇಂಥ ಚೀಪ್ ಗಿಮಿಕ್‌ಗಳನ್ನು ಮಾಡಬೇಕಾಗುತ್ತದೆ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ. ಇವರ ಈ ಹೇಳಿಕೆಯು ಸರ್ಕಾರಕ್ಕೆ ಮುಜುಗರವನ್ನು ತಂದಿದೆ.
ವಿಡಿಯೊದಲ್ಲಿ ಏನಿದೆ?
ಈ ಹಿಂದೆಯೂ ಸಹ ಹಲವಾರು ಉಚಿತ ಯೋಜನೆಗಳನ್ನು ನಾವೇ ವಿರೋಧ ಮಾಡಿಕೊಂಡು ಬಂದಿದ್ದೇವೆ. ಇದು ದೇಶದಲ್ಲಿಯೇ ಚರ್ಚೆ ಆಗಿರುವ ವಿಚಾರವಾಗಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ, ಮುಂದೆ ಫ್ರೀ.. ಫ್ರೀ.. ಎಂದು ಹೋದರೆ ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂದು ನಾವೂ ಚರ್ಚೆ ಮಾಡಿದ್ದೇವೆ. ಈಗ ನಾವುಗಳೂ ಅದೇ ಲೈನ್‌ನಲ್ಲಿ ಹೊರಟಿದ್ದೇವೆ. ಎಲ್ಲೋ ಒಂದು ಕಡೆ ಚುನಾವಣೆ, ರಿಸಲ್ಟ್ ಎಲ್ಲವೂ ಮುಖ್ಯವಾಗುತ್ತದೆ. ಸರ್ಕಾರ ಬಂದರೆ ತಾನೇ ನಾವೂ ಏನಾದರೂ ಮಾಡುವುದಕ್ಕೆ ಸಾಧ್ಯವಾಗುವುದು? ಅಧಿಕಾರ ಸಿಕ್ಕಿದರೆ ತಾನೇ ಕೆಲಸ ಮಾಡುವುದಕ್ಕೆ ಆಗುವುದು ಎನ್ನುವ ದೃಷ್ಟಿ ಬಂದಾಗ ಅಂದು ಫಲಿತಾಂಶವೇ ಅನಿವಾರ್ಯ ಆಗುತ್ತದೆ. ಹಾಗಾಗಿ ರಿಸಲ್ಟ್ ಬರಬೇಕು ಎಂದಾಗ ಈ ರೀತಿಯ (ಗ್ಯಾರಂಟಿ) ಚೀಪ್ ಪಾಪ್ಯುಲಾರಿಟಿ, ಇಲ್ಲದ್ದು ಪಲ್ಲದ್ದು ಎಲ್ಲವನ್ನೂ ಮಾಡುತ್ತೇವೆ. ಆದರೆ, ನಮ್ಮ ಮನಸ್ಸು ಒಪ್ಪುತ್ತದೆಯೋ ಇಲ್ಲವೋ? ನಮಗೆ, ಸಿದ್ದರಾಮಯ್ಯ ಅವರಿಗೆ ಇಷ್ಟವಾಗುತ್ತದೆಯೋ ಇಲ್ಲವೋ? ಕೆಲವನ್ನು ಮಾಡಿಕೊಂಡು ಹೋಗಬೇಕಾಗುತ್ತದೆ, ಕೆಲವನ್ನು ಒಪ್ಪಿಕೊಳ್ಳಬೇಕಾಗುತ್ತದೆ ಎಂದು ಹೇಳಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ಈಗ ಚರ್ಚೆಗೆ ಗ್ರಾಸವಾಗಿದೆ.
ಸಿದ್ದರಾಮಯ್ಯ ಅವರಿಗೂ ಇಷ್ಟ ಇರಲಿಲ್ಲವೇ?
ಇಲ್ಲಿ ಚಲುವರಾಯಸ್ವಾಮಿ ಅವರು ನೀಡಿರುವ ಹೇಳಿಕೆಯಲ್ಲಿ, “ನಮ್ಮ ಮನಸ್ಸು ಒಪ್ಪುತ್ತದೆಯೋ ಇಲ್ಲವೋ? ನಮಗೆ, ಸಿದ್ದರಾಮಯ್ಯ ಅವರಿಗೆ ಇಷ್ಟವಾಗುತ್ತದೆಯೋ ಇಲ್ಲವೋ? ಕೆಲವನ್ನು ಮಾಡಿಕೊಂಡು ಹೋಗಬೇಕಾಗುತ್ತದೆ, ಕೆಲವನ್ನು ಒಪ್ಪಿಕೊಳ್ಳಬೇಕಾಗುತ್ತದೆ ” ಎಂದು ಹೇಳಿರುವುದು ಸಹ ಈಗ ಚರ್ಚೆಯ ಭಾಗವಾಗಿದೆ. ಅಂದರೆ, ಈ ರೀತಿಯ ಉಚಿತ ಗ್ಯಾರಂಟಿ ಘೋಷಣೆಯು ಸಿದ್ದರಾಮಯ್ಯ ಅವರಿಗೂ ಇಷ್ಟ ಇರಲಿಲ್ಲವೇ? ಚುನಾವಣೆ ಗೆಲ್ಲುವುದಕ್ಕೋಸ್ಕರ ಅನಿವಾರ್ಯವಾಗಿ ಘೋಷಣೆ ಮಾಡಿದರೇ? ಅಥವಾ ಹೈಕಮಾಂಡ್ ನಿರ್ಧಾರಕ್ಕೆ ಅವರು ತಲೆ ಬಾಗಬೇಕಾಯಿತೇ? ಎಂಬ ಬಗ್ಗೆಯೂ ಈಗ ಚರ್ಚೆಗಳು ಹುಟ್ಟಿಕೊಂಡಿವೆ.
ಚೀಪ್ ಗಿಮಿಕ್ ಬಗ್ಗೆ ಚಲುವರಾಯಸ್ವಾಮಿ ನೀಡಿರುವ ಹೇಳಿಕೆಯ ವಿಡಿಯೊ ಇಲ್ಲಿದೆ
ಇದನ್ನೂ ಓದಿ: Text Book: ಹೊಸ ಪಠ್ಯಕ್ರಮ ರಚನೆಗೆ ಸಮಿತಿ; ಬಿಜೆಪಿ ಅವಧಿಯ ಅಧ್ಯಾಯಗಳಿಗೆ ಕೊಕ್?
ಚುನಾವಣಾ ಪೂರ್ವ ಹೇಳಿಕೆ?
ಇದು ಚುನಾವಣೆ ನಡೆಯುವುದಕ್ಕಿಂತ ಮೊದಲು ಮಾಡಿದ ವಿಡಿಯೊ ಇರಬಹುದು ಎಂದೂ ಹೇಳಲಾಗುತ್ತಿದ್ದು, ಈ ಬಗ್ಗೆ ಈಗಿನ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ.
ಕರ್ನಾಟಕ
JDS Karnataka: ದೇಶದಲ್ಲಿ ಬಿಜೆಪಿ ಜತೆ ಕೈಜೋಡಿಸದ ಪಕ್ಷ ಇದ್ದರೆ ತೋರಿಸಿ: ಬಿಜೆಪಿ ವಿರೋಧಿ ಕೂಟ ಸೇರದ ಬಗ್ಗೆ ಎಚ್.ಡಿ. ದೇವೇಗೌಡ ಸುಳಿವು
ಮುಂದೆ ನಮ್ಮ ಅನೇಕ ಚುನಾವಣೆಗಳಿವೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ತಾಲೂಕು, ಜಿಲ್ಲಾ ಪಂಚಾಯಿತಿ ಸೇರಿ ಹಲವಾರು ಚುನಾವಣೆಗಳಿವೆ. ಈ ಚುನಾವಣೆಗಳಿಗೆ ನಾವು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಎಚ್.ಡಿ. ದೇವೇಗೌಡ ಹೇಳಿದರು.
ಬೆಂಗಳೂರು: ಕರ್ನಾಟಕವೂ ಸೇರಿದಂತೆ ಅನೇಕ ರಾಜ್ಯಗಳಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕಾಂಗ್ರೆಸ್ ನಾಯಕರು ಬಿಜೆಪಿ ಜತೆ ಕೈ ಜೋಡಿಸಿರುವುದು ಎಲ್ಲರಿಗೂ ಗೊತ್ತಿರುವ ಸತ್ಯ ಅಲ್ಲವೇ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.
ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮೈತ್ರಿ ಆಗುವ ಸಾಧ್ಯತೆ ಇದೆಯೇ? ಹಾಗೂ ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ವಿರುದ್ಧ ಸಮಾನಮನಸ್ಕ ಪಕ್ಷಗಳು ಒಂದಾದರೆ, ಆ ಒಕ್ಕೂಟದ ನೇತೃತ್ವ ವಹಿಸುವಿರಾ? ಬಿಜೆಪಿ ವಿರುದ್ಧ ಒಕ್ಕೂಟ ರಚನೆಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪ್ರಯತ್ನ ನಡೆಸುತ್ತಿರುವ ಕುರಿತ ಪ್ರಶ್ನೆಗೆ ಉತ್ತರಿಸಿದರು.
ಈ ದೇಶದಲ್ಲಿ ಬಿಜೆಪಿ ಜತೆ ಸೇರಿ ರಾಜಕೀಯ ಮಾಡದೆ ಇರುವ ಯವುದರೂ ಪಕ್ಷವನ್ನು ತೋರಿಸಿ. ಮೊದಲು ನನ್ನ ಪ್ರಶ್ನೆಗೆ ಉತ್ತರ ನೀಡಿ. ಆಮೇಲೆ ನಿಮ್ಮ ಪ್ರಶ್ನೆಗೆ ಉತ್ತರ ಕೊಡುತ್ತೇನೆ ಎಂದರು. ಅನೇಕ ಪಕ್ಷಗಳು ವಿವಿಧ ರಾಜ್ಯಗಳಲ್ಲಿ ಪ್ರತ್ಯಕ್ಷ, ಪರೋಕ್ಷವಾಗಿ ಬಿಜೆಪಿ ಪಕ್ಷದ ಜತೆಗೆ ಕೈಜೋಡಿಸಿವೆ. ಕಾಂಗ್ರೆಸ್ ಪಕ್ಷದ ಅನೇಕರು ನಾಯಕರು ಬಿಜೆಪಿ ಜತೆ ಶಾಮೀಲಾಗಿದ್ದಾರೆ. ಕರ್ನಾಟಕದಲ್ಲಿಯೂ ಅದನ್ನು ಕಾಣಬಹುದು. ಇದರಲ್ಲಿ ಮುಚ್ಚುಮರೆ ಏನಿದೆ? ಎಂದು ಹೇಳಿದರು.
ಪಕ್ಷವನ್ನು ಸಂಘಟಿಸುತ್ತೇವೆ:
ಈ ಚುನಾವಣೆಯಲ್ಲಿ ನಾವು ಸೋತಿದ್ದೇವೆ. ಅದರಿಂದ ಕುಗ್ಗಬೇಕಿಲ್ಲ. ಅನೇಕ ಚುನಾವಣೆಗಳಲ್ಲಿ ನಾನು ಸೇರಿದಂತೆ ನಾವೆಲ್ಲರೂ ಗೆದಿದ್ದೇವೆ, ಸೋತಿದ್ದೇವೆ. ಆಮೇಲೆ ಫೀನಿಕ್ಸಿನಂತೆ ಮೇಲೆದ್ದು ಬಂದಿದ್ದೇವೆ. ಈಗಲೂ ಅಷ್ಟೇ, ಸೋತಿದ್ದೇವೆ ಎಂದು ಮನೆಯಲ್ಲಿ ಕೂರಲಾರೆ. ಪಕ್ಷಕ್ಕಾಗಿ ಎಷ್ಟು ಕೆಲಸ ಮಾಡಲಿಕ್ಕೂ ನಾನು ತಯಾರಿದ್ದೇನೆ.
ಮುಂದೆ ನಮ್ಮ ಅನೇಕ ಚುನಾವಣೆಗಳಿವೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ತಾಲೂಕು, ಜಿಲ್ಲಾ ಪಂಚಾಯಿತಿ ಸೇರಿ ಹಲವಾರು ಚುನಾವಣೆಗಳಿವೆ. ಈ ಚುನಾವಣೆಗಳಿಗೆ ನಾವು ಸಿದ್ಧತೆ ಮಾಡಿಕೊಳ್ಳಬೇಕು. ಆ ಬಗ್ಗೆ ಪಕ್ಷದಲ್ಲಿ ಸಮಾಲೋಚನೆ ನಡೆಸಲಾಗುತ್ತಿದೆ. ಸಂಘಟನೆ ಕಡೆ ಒತ್ತು ನೀಡಲಾಗುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಎಷ್ಟು ಕ್ಷೇತ್ರಗಳಲ್ಲಿ, ಯಾವ ಯಾವ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಬೇಕು ಎಂಬುದನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆಯೋ ಇಲ್ಲವೋ ಎಂಬುದನ್ನು ಪಕ್ಷ ತೀರ್ಮಾನ ಮಾಡುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇದನ್ನೂ ಓದಿ: Loksabha 2024: ಎಚ್.ಡಿ. ದೇವೇಗೌಡರ ಆಶೀರ್ವಾದ ಪಡೆದ ಪ್ರತಾಪ್ ಸಿಂಹ; ಲೋಕಸಭೆ ಚುನಾವಣಾ ಲೆಕ್ಕಾಚಾರವೆಂದ ನೆಟ್ಟಿಗರು!
-
ಸುವಚನ16 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ11 hours ago
EPF e-passbook : UMANG ಆ್ಯಪ್ನಲ್ಲಿ ನಿಮ್ಮ ಪಿಎಫ್ ಪಾಸ್ಬುಕ್ ಸುಲಭವಾಗಿ ಪರಿಶೀಲಿಸಿ
-
ಪ್ರಮುಖ ಸುದ್ದಿ13 hours ago
Apply for ration card : ಹೊಸ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸುವುದು ಹೇಗೆ?
-
ಅಂಕಣ24 hours ago
ವಿಧಾನಸೌಧ ರೌಂಡ್ಸ್: ರೌಂಡ್ ಟೇಬಲ್ ಸ್ನೇಹಿತರು ಮತ್ತು ವಿಧಾನಸೌಧದಲ್ಲಿ ಬದಲಾಗದ 40 % ಬ್ರಾಂಡ್!
-
ಉತ್ತರ ಕನ್ನಡ21 hours ago
Karwar News: ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ: ಇಬ್ಬರು ಅಧಿಕಾರಿಗಳಿಗೆ 2 ವರ್ಷ ಜೈಲು
-
ಪ್ರಮುಖ ಸುದ್ದಿ16 hours ago
Horoscope Today : ಈ ರಾಶಿಯವರಿಗೆ ಇಂದು ಪ್ರೀತಿ ಅಂಕುರವಾಗಲಿದೆಯಂತೆ!
-
ಉತ್ತರ ಕನ್ನಡ22 hours ago
Karwar Accident: ಬೈಕ್ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಸವಾರರ ಸಾವು
-
ಪ್ರಮುಖ ಸುದ್ದಿ23 hours ago
ವಿಸ್ತಾರ ಸಂಪಾದಕೀಯ: ಶಾಲಾ ಬಾಲಕಿಯರಿಗೆ ವಿಷ: ಅಫಘಾನಿಸ್ತಾನದಲ್ಲಿ ಮನುಷ್ಯತ್ವ ಮರುಕಳಿಸುವುದು ಯಾವಾಗ?