ವಿಸ್ತಾರ ನ್ಯೂಸ್, ಬೆಂಗಳೂರು
ಬೆಂಗಳೂರು: ಈ ಬಾರಿಯ ಚುನಾವಣಾ ಫಲಿತಾಂಶ (Karnataka Election 2023) ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಕ್ಕೆ ದೊಡ್ಡ ಅಘಾತ ನೀಡಿದ್ದು, ಪಕ್ಷದ ಮುಂದಿನ ಭವಿಷ್ಯದ ಕುರಿತು ಚಿಂತೆ ಶುರುವಾಗಿದೆ. ಈ ನಡುವೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ರಾಜಕೀಯದಿಂದಲೇ ನಿವೃತ್ತಿ ಹೊಂದುವ ಮಾತುಗಳನ್ನಾಡುತ್ತಿರುವುದು ಪಕ್ಷದ ನಾಯಕರಲ್ಲಿ ಆತಂಕ ಮೂಡಿಸಿದೆ.
ಪಕ್ಷದ ಕಳಪೆ ಸಾಧನೆಯಿಂದ ಹಾಗೂ ಕುಮಾರಸ್ವಾಮಿಯವರ ಮಾತುಗಳಿಂದ ಚಿಂತೆಗೀಡಾಗಿರುವ ಪಕ್ಷದ ನಾಯಕರನ್ನು ಮತ್ತು ಕಾರ್ಯಕರ್ತರನ್ನು ಹುರಿದುಂಬಿಸಲು ಮಾಜಿ ಪ್ರಧಾನಿನ ದೇವೇಗೌಡರೇ ಈಗ ಫೀಲ್ಡಿಗಿಳಿದಿದ್ದು, ʻʻಈ ಸೋಲಿನಿಂದ ಎದೆಗುಂದದೆ ನಾವೆಲ್ಲರೂ ಒಟ್ಟಾಗಿ ಸೇರಿ ಪಕ್ಷವನ್ನು ಸಂಘಟಿಸಿ, ವೃದ್ಧಿಸಿ, ಮುನ್ನಡೆಸೋಣʼʼ ಎಂದು ಜಾಹೀರಾತು ಮೂಲಕ ಕರೆ ನೀಡಿದ್ದಾರೆ.
ʻʻಈ ಬಾರಿ ಪಕ್ಷಕ್ಕೆ ಸಂಪೂರ್ಣ ಬಹುಮತ ನೀಡಿ, ಅಧಿಕಾರ ನೀಡದಿದ್ದರೆ ಮುಂದಿನ ಚುನಾವಣೆಯಲ್ಲಿ ನಾನು ಮತ ಕೇಳಲು ಬರುವುದಿಲ್ಲ. ಪಕ್ಷವನ್ನೇ ವಿಸರ್ಜನೆ ಮಾಡುತ್ತೇನೆʼʼ ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಚಾರದ ಸಂದರ್ಭದಲ್ಲಿ ಮತ್ತು ʻಪಂಚರತ್ನʼ ಯಾತ್ರೆಯ ಸಂದರ್ಭದಲ್ಲಿ ಹೇಳಿಕೋಂಡೇ ಬಂದಿದ್ದರು. ಪಕ್ಷ ಈ ಬಾರಿ ಅತ್ಯಂತ ಕಳಪೆ ಸಾಧನೆ ಮಾಡಿದೆ. ಕೇವಲ 19 ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲಲು ಸಾಧ್ಯವಾಗಿದೆ. ಮತ ಗಳಿಕೆಯ ಪ್ರಮಾಣ ಕೂಡ ಶೇ. 13.3ಕ್ಕೆ ಕುಸಿದಿದೆ.
ಬಹಳ ಮುಖ್ಯವಾಗಿ, ಕುಮಾರಸ್ವಾಮಿ ಮತ್ತು ಎಚ್. ಡಿ. ರೇವಣ್ಣ ಅವರ ಗೆಲುವಿನ ಅಂತರದಲ್ಲಿಯೂ ಭಾರಿ ಕುಸಿತವಾಗಿದೆ. ಅಲ್ಲದೆ ಪಕ್ಷದ ಭದ್ರಕೋಟೆಯಾಗಿದ್ದ ರಾಮನಗರದಲ್ಲಿಯೇ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಸೋತಿದ್ದಾರೆ. ಇದು ಎಚ್.ಡಿ. ಕುಮಾರಸ್ವಾಮಿಗೆ ಹೆಚ್ಚು ನೋವು ನೀಡಿದ್ದು, ʻಇನ್ನು ಈ ರಾಜಕೀಯ ಸಾಕುʼʼ ಎಂದು ತೀರ್ಮಾನಿಸಿದ್ದಾರೆ ಎನ್ನಲಾಗುತ್ತಿದೆ. ಅವರ ಅನಾರೋಗ್ಯ ಕೂಡ ಅವರ ಈ ತೀರ್ಮಾನಕ್ಕೆ ಮತ್ತೊಂದು ಬಲವಾದ ಕಾರಣವಾಗಿದೆ. ಹೀಗಾಗಿ ಮುಂದೇನು ಎಂಬ ಚಿಂತೆ ಪಕ್ಷದ ನಾಯಕರನ್ನು ಕಾಡುತ್ತಿದೆ.
ಇದನ್ನೂ ಓದಿ: Karnataka Election Results 2023 : ನಿಖಿಲ್ ಕುಮಾರಸ್ವಾಮಿಗೆ ಸೋಲು; ನಾಯಕರ ಗೆಲುವಿನ ಅಂತರದಲ್ಲೂ ಭಾರಿ ಕುಸಿತ
ಸೋಲಿನ ಬೇಸರದಿಂದ ಹೊರಬಂದ ನಂತರ ಮತ್ತೆ ಕುಮಾರಸ್ವಾಮಿ ಸಕ್ರಿಯ ರಾಜಕೀಯದಲ್ಲಿ ತೊಡಗಿಸಿಕೊಳ್ಳಬಹುದು ಎಂದು ಕಾರ್ಯಕರ್ತರು ಚರ್ಚಿಸುತ್ತಿದ್ದಾರೆ. ಆದರೆ ಪಕ್ಷದ ಉನ್ನತ ಮೂಲಗಳು ಮಾತ್ರ ಕುಮಾರಸ್ವಾಮಿಯವರು ಮರಳಿ ಈ ಹಿಂದಿನಂತೆಯೇ ರಾಜಕೀಯ ಚಟುವಟಿಕೆಗಳಲ್ಲಿ ತೊಡಗುವುದು ಕಷ್ಟ ಎನ್ನುತ್ತಿವೆ. ಕುಮಾರಸ್ವಾಮಿಯವರ ಈ ನಿರ್ಧಾರವನ್ನು ಪತ್ನಿ ಅನಿತಾ ಕುಮಾರಸ್ವಾಮಿ ಮತ್ತು ಮಗ ನಿಖಿಲ್ ಕುಮಾರಸ್ವಾಮಿ ಕೂಡ ಬೆಂಬಲಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ನಾಯಕತ್ವದ ಕುರಿತು ಚರ್ಚೆ ಶುರು
ಇತ್ತ ಕುಮಾರಸ್ವಾಮಿ ಸಕ್ರೀಯ ರಾಜಕಾರಣದ ಬಗ್ಗೆ ನಿರಾಸಕ್ತಿ ತೋರುತ್ತಿದ್ದಂತೆಯೇ ಪಕ್ಷದ ನೇತೃತ್ವವನ್ನು ಯಾರು ವಹಿಸಬೇಕೆಂಬ ಕುರಿತು ಪಕ್ಷದಲ್ಲಿ ಚರ್ಚೆ ಶುರುವಾಗಿದೆ. ಕುಮಾರಸ್ವಾಮಿ ಕುಟುಂಬದಲ್ಲಿ ಈಗ ಅವರೊಬ್ಬರೇ ಶಾಸಕರು. ಇತ್ತ ರೇವಣ್ಣ ಕುಟುಂಬದಲ್ಲಿ ರೇವಣ್ಣ ಶಾಸಕರಾಗಿದ್ದಾರೆ. ಒಬ್ಬ ಪುತ್ರ ಸಂಸದ ಮತ್ತೊಬ್ಬರು ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಹೀಗಾಗಿ ರೇವಣ್ಣ ಕುಟುಂಬದ ಯಾರಾದರೂ ನೇತೃತ್ವ ವಹಿಸಲಿ ಎಂಬ ವಾದಗಳೂ ಕೇಳಿ ಬರುತ್ತಿವೆ. ಹಾಸನದ ಪಕ್ಷದ ಕೆಲ ನಾಯಕರು ಭವಾನಿ ರೇವಣ್ಣ ಅವರು ಪಕ್ಷದ ಅಧ್ಯಕ್ಷರಾಗಲಿ ಎಂದು ಹೇಳಿಕೆ ನೀಡಲಾರಂಭಿಸಿದ್ದಾರೆ.
ಪಕ್ಷದ ಮುಂದಿರುವ 5 ಸವಾಲೇನು?
1. ಪಕ್ಷದ ಭದ್ರಕೋಟೆ ಎನಿಸಿದ ಜಿಲ್ಲೆ, ಕ್ಷೇತ್ರಗಳಲ್ಲಿ ದೊಡ್ಡ ಬಿರುಕು ಕಾಣಿಸಿಕೊಂಡಿದೆ. ಪಕ್ಷದ ಮತಗಳು ಕಾಂಗ್ರೆಸ್ ಮತ್ತು ಬಿಜೆಪಿಯತ್ತ ಹಂಚಿ ಹೋಗಿವೆ. ಈ ಜಿಲ್ಲೆಗಳಲ್ಲಿ ಪಕ್ಷವನ್ನು ಮತ್ತೆ ಬಲಪಡಿಸಬೇಕಾಗಿದೆ.
2. ಟಿಕೆಟ್ ಹಂಚಿಕೆಯ ಸಂದರ್ಭದಲ್ಲಿ ಟಿಕೆಟ್ ಸಿಕ್ಕಿಲ್ಲ ಎಂದು ಪಕ್ಷಕ್ಕೆ ಬರುವ ನಾಯಕರಿಂದ ಲಾಭವಾಗುವುದಿಲ್ಲ ಎಂಬುದನ್ನು ಈ ಚುನಾವಣೆ ತೋರಿಸಿದೆ. ಹೀಗಾಗಿ ಪಕ್ಷಕ್ಕಾಗಿ ದುಡಿದವರನ್ನು ಗೌರವಿಸುವ ಮತ್ತು ಹಿಡಿದಿಟ್ಟುಕೊಳ್ಳುವ ಕೆಲಸ ಮಾಡಬೇಕಾಗಿದೆ.
3. ಬೇರೆ ಬೇರೆ ಜಾತಿ ಮತ್ತು ಸಮುದಾಯಗಳ ನಾಯಕರನ್ನು ಆಕರ್ಷಿಸಿ, ಪಕ್ಷಕ್ಕೆ ಸೇರಿಸಿಕೊಂಡು ಪಕ್ಷದ ನೆಲೆಗಟ್ಟನ್ನು ವಿಸ್ತರಿಸಬೇಕಾಗಿದೆ. ಈ ಬಾರಿ ಉತ್ತರ ಕರ್ನಾಟಕದಲ್ಲಿ ಪಕ್ಷದಿಂದ ಗೆದ್ದವರು ಕೇವಲ ನಾಲ್ಕುಮಂದಿ (ದೇವರ ಹಿಪ್ಪರಗಿ, ಗುರುಮಠಕಲ್, ದೇವದುರ್ಗ, ಹಗರಿಬೊಮ್ಮನಹಳ್ಳಿ) ಮಾತ್ರ. ಈ ಭಾಗದಲ್ಲಿ ಪಕ್ಷವನ್ನು ಸಂಘಟಿಸುವ ಕೆಲಸ ಮಾಡಬೇಕಾಗಿದೆ.
4. ಒಂದು ಕಟುಂಬದ ರಾಜಕೀಯ ಪಕ್ಷ ಎಂಬ ಆರೋಪದಿಂದ ಮುಕ್ತವಾಗಲು ಅಧಿಕಾರವನ್ನು ಹಂಚುವ ಕೆಲಸ ಮೊದಲು ಮಾಡಬೇಕಾಗಿದೆ.
5. ಎಲ್ಲದಕ್ಕಿಂತ ಮುಖ್ಯವಾಗಿ ಪಕ್ಷಕ್ಕೆ ಸೈದ್ಧಾಂತಿಕ ಸ್ಪಷ್ಟತೆ ಅಗತ್ಯವಾಗಿದ್ದು, ಈ ಬಗ್ಗೆ ಚರ್ಚಿಸಿ, ಇದರ ತಳಹದಿಯಲ್ಲಿಯೇ ಪಕ್ಷವನ್ನು ಸಂಘಟಿಸಬೇಕಾಗಿದೆ.
ಕಡೂರಿನ ಯಗಟಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಪ್ರಜ್ವಲ್ ರೇವಣ್ಣ, ʻʻಭವಾನಿ ರೇವಣ್ಣ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಕುರಿತು ಪಕ್ಷದಲ್ಲಿ ಚರ್ಚೆ ಆಗಿಲ್ಲ. ನಾವು ಕುಟುಂಬದ, ಪಕ್ಷದ ನಿರ್ಣಯಕ್ಕೆ ಬದ್ಧವಾಗಿರುತ್ತೇವೆ. ಹಾಸನದಲ್ಲಿ ಪಕ್ಷ ಸೂಚಿಸಿದ ಅಭ್ಯರ್ಥಿಯನ್ನ ಗೆಲ್ಲಿಸಿದ್ದೇವೆ. ನನ್ನ ತಾಯಿ ಭವಾನಿ ಅವರಿಗೆ ಯಾವ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇವೆʼʼ ಎಂದು ಹೇಳಿದ್ದಾರೆ.
ಇತ್ತ ರೇವಣ್ಣ ಕೂಡ ಆ್ಯಕ್ಟೀವ್ ಆಗಿದ್ದಾರೆ. ಹಾಸನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಹಾಸನವನ್ನು ರಾಜ್ಯದಲ್ಲಿಯೇ ನಂ.1 ಜಿಲ್ಲೆಯಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದ್ದಾರೆ. ಮತ್ತೆ ಮಾಜಿ ಪ್ರಧಾನಿ ದೇವೇಗೌಡರನ್ನು ಚುನಾವಣೆಯಲ್ಲಿ ನಿಲ್ಲಿಸಿ, ಸಂಸತ್ತಿಗೆ ಕಳುಹಿಸಿಕೊಡುವುದಾಗಿ ಘೋಷಿಸಿದ್ದಾರೆ. ಹೀಗೆ ರೇವಣ್ಣ ಮಾತನಾಡಲು ಕೂಡ, ಕುಟುಂಬದಲ್ಲಿ ಅಧಿಕಾರ ಹಸ್ತಾಂತರದ ಕುರಿತು ಚರ್ಚೆ ನಡೆಯುತ್ತಿರುವುದೇ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ: Karnataka Election Results: ಕಾಂಗ್ರೆಸ್ ಬೆನ್ನಿಗೆ ನಿಂತು, ಜೆಡಿಎಸ್‌ಗೆ ಕೈಕೊಟ್ಟ ಮುಸ್ಲಿಂ ಮತದಾರರು!