ರಾಮನಗರ : ರಾಮನಗರ ವಿಧಾನಸಭಾ ಕ್ಷೇತ್ರದಿಂದ (Karnataka Election 2023) ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ರಾಜ್ಯ ಯುವ ಜಾತ್ಯತೀತ ಜನತಾದಳದ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರಸ್ವಾಮಿ ತಮ್ಮ ಮದುವೆಯ ವಾರ್ಷಿಕೋತ್ಸವದ ದಿನದಂದೇ ನಾಮಪತ್ರ ಸಲ್ಲಿಸಿದ್ದಾರೆ.
ಮೂರು ವರ್ಷಗಳ ಹಿಂದೆ ಏಪ್ರಿಲ್ 17 ರಂದು ನಿಖಿಲ್ ಕುಮಾರಸ್ವಾಮಿ ಮದುವೆಯಾಗಿದ್ದರು. ಇಂದು ತಾತ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಂದಲೇ ʻಬಿʼ ಫಾರಂ ಪಡೆದು, ಅವರ ಆಶೀರ್ವಾದದೊಂದಿಗೆ ಆಗಮಿಸಿದ ಅವರು ತಮ್ಮ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಬಂದು ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ತಾಯಿ ಅನಿತಾ ಕುಮಾರಸ್ವಾಮಿ ಮತ್ತಿತರ ನಾಯಕರು ಉಪಸ್ಥಿತರಿದ್ದರು.
ನಾಮಪತ್ರ ಸಲ್ಲಿಸಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, 1952 ರಲ್ಲಿ ಕೆಂಗಲ್ ಹನುಮಂತಯ್ಯ ಈ ಕ್ಷೇತ್ರದಿಂದ ಸ್ಪರ್ಧಿಸಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. 1994ರಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಇಲ್ಲಿಂದಲೇ ಶಾಸಕರಾಗಿ ಮುಖ್ಯಮಂತ್ರಿಯಾಗಿದ್ದರು. 2004ರಲ್ಲಿ ಕುಮಾರಸ್ವಾಮಿ ಕೂಡ ಈ ಕ್ಷೇತ್ರದಿಂದಲೇ ಆಯ್ಕೆಯಾಗಿ ಮುಖ್ಯಮಂತ್ರಿ ಯಾಗಿದ್ದರು. ಈ ಬಾರಿ ಈ ಕ್ಷೇತ್ರದಿಂದ ಸ್ಪರ್ಧಿಸುವ ಅದೃಷ್ಟ ನನ್ನದಾಗಿದೆ ಎಂದು ಹೇಳಿದರು.
ಎಲ್ಲಾ ಸಮುದಾಯದ ಜನರು ವಾಸ ಮಾಡುತ್ತಿರುವ ಶಾಂತಿಯುತವಾದ ಕ್ಷೇತ್ರ ಇದು. ಈ ಕ್ಷೇತ್ರದಲ್ಲಿ ಯಾವುದೇ ಸಂಘರ್ಷ ಆಗದ ರೀತಿಯಲ್ಲಿ ಕುಮಾರಸ್ವಾಮಿ ನೋಡಿಕೊಂಡಿದ್ದಾರೆ. ಅದೇ ರೀತಿ ಯುವಕನಾಗಿ ಎಲ್ಲಾ ಸಮಾಜವನ್ನು ಒಗ್ಗೂಡಿಸಿಕೊಂಡು ನಾನೂ ಹೋಗುತ್ತೇನೆ ಎಂದು ಹೇಳಿದ ನಿಖಿಲ್ ಕುಮಾರಸ್ವಾಮಿ, ರಾಮನಗರ ಕ್ಷೇತ್ರ ಎಂದ ಕೂಡಲೇ ಭಾವುಕನಾಗುತ್ತೇನೆ. ಇಂದು ದೇವೇಗೌಡರಿಂದ ಬಿ ಫಾರಂ ಪಡೆಯುವಾಗಲೂ ಇದೇ ರೀತಿಯಾಗಿ ಭಾವುಕನಾಗಿದ್ದೆ ಎಂದು ನಿಖಿಲ್ ಹೇಳಿದರು.
ಡಿಕೆ…ಡಿಕೆ… ಘೋಷಣೆ! : ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಲು ತಾಯಿ ಅನಿತಾ ಕುಮಾರಸ್ವಾಮಿಯವರೊಂದಿಗೆ ರಾಮನಗರ ತಾಲ್ಲೂಕು ಕಚೇರಿಗೆ ಆಗಮಿಸಿದ ವೇಳೆ ಅಲ್ಲಿ ನೆರದಿದ್ದ ಕಾಂಗ್ರೆಸ್ ಕಾರ್ಯಕರ್ತರು ʻʻಡಿಕೆ….ಡಿಕೆ… ʼʼ ಎಂದು ಘೋಷಣೆ ಕೂಗಿದರು. ಇದರಿಂದ ಇವರಿಬ್ಬರೂ ಕೆಲ ಹೊತ್ತು ಮುಜುಗರಪಡುವಂತಾಯಿತು.
ಬೃಹತ್ ರೋಡ್ ಶೋ
ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸುವುದಕ್ಕೂ ಮೊದಲು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ರಾಮನಗರದ ಬೀದಿಯಲ್ಲಿ ಬೃಹತ್ ರೋಡ್ ಶೋ ನಡೆಸಿ, ಮಗ ನಿಖಿಲ್ ಕುಮಾರಸ್ವಾಮಿಯವರ ಪರವಾಗಿ ಮತ ಯಾಚಿಸಿದರು. ಈ ಸಂದರ್ಭದಲ್ಲಿ ಪಕ್ಷದ ಜಿಲ್ಲೆಯ ನಾಯಕರು ಉಪಸ್ಥಿತರಿದ್ದರು.
ರೋಡ್ ಶೋ ನಡೆಸಿ ಮಾತನಾಡಿದ ಕುಮಾರಸ್ವಾಮಿ, ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಪಾನ್‌ಕಾರ್ಡ್, ಆಧಾರ್ ಕಾಡ್ಡ್ ಲಿಂಕ್‌ನ ಸಮಸ್ಯೆಯನ್ನು ಪ್ರಸ್ತಾಪಿಸಿ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ, ಈ ತೊಂದರೆ ನಿವಾರಿಸುವುದಾಗಿ ಹೇಳಿದರು. ಕಾಂಗ್ರೆಸ್ ಪಕ್ಷದ ನಾಯಕರು ಗ್ಯಾರಂಟಿ ಕಾರ್ಡ್ ಹಿಡಿದುಕೊಂಡು ಎಲ್ಲ ಕಡೆ ಹೋಗುತ್ತಿದ್ದಾರೆ. ಆದರೆ ಅದು ಡೂಪ್ಲಿಕೇಟ್ ಕಾರ್ಡ್. ಅವರ 2ಸಾವಿರದ ಭರವಸೆಗೆ ಮರುಳಾಗಬೇಡಿ. ಕೇವಲ ಇನ್ನೂ ಕೆಲವೇ ದಿನಗಳಷ್ಟೇ ಇವರ ಆಟ. ಮುಂದೆ ಜೆಡಿಎಸ್ ಸುಭದ್ರ ಸರ್ಕಾರ ಬರಲಿದೆ ಎಂದರು.
ಕಣ್ಣೀರಿಟ್ಟ ನಿಖಿಲ್ ಕುಮಾರಸ್ವಾಮಿ
ಸೋಮವಾರ ಬೆಳಗ್ಗೆ ಬೆಂಗಳೂರಿನಲ್ಲಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮನೆಯಲ್ಲಿ ಭಾವುಕ ವಾತಾವರಣ ನಿರ್ಮಾಣವಾಗಿತ್ತು. ನಿಖಿಲ್ ಕುಮಾರಸ್ವಾಮಿ ತಾತಾ ಎಚ್.ಡಿ. ದೇವೇಗೌಡರಿಂದಲೇ ʻಬಿ ಫಾರಂʼ ಪಡೆದುಕೊಂಡರು. ದೇವೇಗೌಡರು ಬಿ ಫಾರ್ ನೀಡುವಾಗ ನಿಖಿಲ್ ಕುಮಾರಸ್ವಾಮಿ ಭಾವುಕರಾಗಿ ಕಣ್ಣೀರಿಟ್ಟರು.
ನಂತರ ಸುಧಾರಿಸಿಕೊಂಡು ಬಿ ಫಾರಂ ಪಡೆದುಕೊಂಡರಲ್ಲದೆ, ದೇವೇಗೌಡರ ಮತ್ತು ಅವರ ಪತ್ನಿ ಚನ್ನಮ್ಮರ (ಅಜ್ಜಿ) ಕಾಲಿಗೆ ನಮಸ್ಕರಿಸಿ ಅವರ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ನಿಖಿಲ್ ಕುಮಾರಸ್ವಾಮಿಯವರ ಪತ್ನಿ ರೇವತಿ, ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ಕೂಡ ಇದ್ದರು.
ಬಿ ಫಾರಂ ಪಡೆಯುವ ವೇಳೆ ನಿಖಿಲ್ ಭಾವುಕ ವಿಚಾರದ ಕುರಿತು ರಾಮನಗರದಲ್ಲಿ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಭಾವುಕರಾಗುವುದು ನಮ್ಮ ಕುಟುಂಬಕ್ಕೆ ರಕ್ತಗತವಾಗಿ ಬಂದಿದೆ. ನಮ್ಮ ಕುಟುಂಬದ ಎಲ್ಲರಿಗೂ ತಾಯಿ ಹೃದಯ ಇದೆ. ಇದು ಎಲ್ಲರಿಗೂ ಬರಲ್ಲ, ನಾಟಕೀಯವಾಗಿಯೂ ಬರಲ್ಲ. ನಮ್ಮ ಕುಟುಂಬದಲ್ಲಿ ನನ್ನ ನಡವಳಿಕೆಯನ್ನ ನಿಖಿಲ್ ನೋಡಿದ್ದಾನೆ. ಜನರ ಕಷ್ಟಕ್ಕೆ ಸ್ಪಂದಿಸುವ ಗುಣ ಬೆಳೆಸಿಕೊಂಡಿದ್ದಾನೆ ಎಂದರು.
ಇದನ್ನೂ ಓದಿ: Karnataka Elections : ಬಸವಣ್ಣರ ಮಾತು ಮೀರಿ ದುರ್ಜನರ ಸಂಗ ಮಾಡಿದ ಶೆಟ್ಟರ್; ರಾಜೀನಾಮೆಯಿಂದ ಸಮಸ್ಯೆ ಇಲ್ಲ ಎಂದ ಸಿಎಂ