ರಾಮಸ್ವಾಮಿ ಹುಲಕೋಡು ಬೆಂಗಳೂರು
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ (Karnataka Election 2023) ಎಂದ ಕೂಡಲೇ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಈ ಮೂರು ಪಕ್ಷಗಳ ನಡುವಿನ ತೀವ್ರ ಸ್ಪರ್ಧೆಯದ್ದೇ ಸುದ್ದಿ. ಈ ಪಕ್ಷಗಳ ಅಭ್ಯರ್ಥಿಗಳು ಮತ್ತು ನಾಯಕರ ಸುತ್ತವೇ ಹೆಚ್ಚು ಚರ್ಚೆ ನಡೆಯುತ್ತಿರುತ್ತದೆ. ಆಗಾಗ ಬಿಎಸ್‌ಪಿ, ಆಪ್, ಕೆಆರ್‌ಎಸ್, ಸರ್ವೋದಯ ಪಕ್ಷ, ಉತ್ತಮ ಪ್ರಜಾಕೀಯ ಪಕ್ಷ, ಎಸ್‌ಪಿ, ಎನ್‌ಸಿಪಿ… ಹೀಗೆ ಕೆಲವು ಪಕ್ಷಗಳ ಹೆಸರೂ ಕೇಳಿ ಬರುವುದುಂಟು. ಆದರೆ ನಿಮಗೆ ಗೊತ್ತೇ? ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಏನಿಲ್ಲವೆಂದರೂ 80ಕ್ಕೂ ಹೆಚ್ಚು ಪಕ್ಷಗಳು ಕಣದಲ್ಲಿವೆ!
ಹೌದು. ಐದು ರಾಷ್ಟ್ರೀಯ ಪಕ್ಷ, ರಾಜ್ಯದ ಒಂದು ಪ್ರಾದೇಶಿಕ ಮತ್ತು ಇತರ ರಾಜ್ಯಗಳ ಐದಾರು ಪ್ರಾದೇಶಿಕ ಪಕ್ಷಗಳಲ್ಲದೆ, ಸುಮಾರು 65ಕ್ಕೂ ಹೆಚ್ಚು ನೋಂದಾಯಿತ ರಾಜಕೀಯ ಪಕ್ಷಗಳು ಈ ಬಾರಿ ಕಣದಲ್ಲಿವೆ. ಸದ್ದಿಲ್ಲದೆ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಈ ಪಕ್ಷಗಳು, ಪ್ರಚಾರದಲ್ಲಿ ತೊಡಗಿಸಿಕೊಂಡಿವೆ. ಇವುಗಳಲ್ಲಿ ಹನ್ನೊಂದು ಪಕ್ಷಗಳು ತಾರಾ ಪ್ರಚಾರಕರ ಪಟ್ಟಿಯನ್ನೂ ಚುನಾವಣಾ ಆಯೋಗಕ್ಕೆ ಸಲ್ಲಿಸಿ, ಆ ಬಳಿಕ ಪಾಸ್ ಪಡೆದುಕೊಂಡಿವೆ! ಈ ರೀತಿ ತಾರಾ ಪ್ರಚಾರಕರನ್ನು ಹೊಂದಿರುವ ಸಣ್ಣ ಪಕ್ಷಗಳೆಂದರೆ ಬಹುಜನ್ ಭಾರತ್ ಪಾರ್ಟಿ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ, ಕರ್ನಾಟಕ ಕಾರ್ಮಿಕರ ಪಕ್ಷ, ಕರ್ನಾಟಕ ರಾಷ್ಟ್ರ ಸಮಿತಿ ಪಾರ್ಟಿ, ರಾಷ್ಟ್ರೀಯ ಜನತಾ ಪಾರ್ಟಿ, ಸ್ವಯಂ ಕೃಷಿ ಪಾರ್ಟಿ, ಎಹರಾ ನ್ಯಾಷನಲ್ ಪಾರ್ಟಿ, ಕಂಟ್ರಿ ಸಿಟಿಜನ್ ಪಾರ್ಟಿ, ಕನ್ನಡ ದೇಶ ಪಕ್ಷ, ಕನ್ನಡ ಪ್ರಜ್ಞಾವಂತರ ಜನತಾ ಪಾರ್ಟಿ ಮತ್ತು ಕರ್ನಾಟಕ ರಾಜ್ಯ ರೈತ ಸಂಘ.
ನಾಯಕರಿಗೇ ಸವಾಲು!
ಈ ಸಣ್ಣ ಪಕ್ಷಗಳ ಅಭ್ಯರ್ಥಿಗಳು ದೊಡ್ಡ ಪಕ್ಷಗಳ ನಾಯಕರು ಸ್ಪರ್ಧಿಸಿರುವ ಕಣದಲ್ಲಿ ಕೂಡ ಸ್ಪರ್ಧಿಸಿದ್ದು, ದೊಡ್ಡವರಿಗೇ ಸವಾಲೊಡ್ಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸುತ್ತಿರುವ ವರುಣ ವಿಧಾನಸಭಾ ಕ್ಷೇತ್ರದಲ್ಲಿ ʻಕನ್ನಡ ದೇಶ ಪಕ್ಷʼದ ಮುಖ್ಯಸ್ಥ ಅರುಣ್‌ಲಿಂಗ ಕನ್ನಡ ಚಕ್ರವರ್ತಿ ಕಣಕ್ಕಿಳಿದಿದ್ದಾರೆ. ಕನ್ನಡ, ಕನ್ನಡಿಗರ ಮತ್ತು ಕರ್ನಾಟಕ ಏಳಿಗೆಯೇ ನಮ್ಮ ಪರಮ ಗುರಿ. ಕನ್ನಡಿಗರಿಗೆ ಶಿಕ್ಷಣ, ಉದ್ಯೋಗ, ಸಾಮಾಜಿಕ ನ್ಯಾಯ, ಆರೋಗ್ಯ ಒದಗಿಸುವ ಭರವಸೆಯೊಂದಿಗೆ ನಾನು ಕಣದಲ್ಲಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ. ಮೈಸೂರಿನಲ್ಲಿಯೇ ಕೇಂದ್ರ ಕಚೇರಿ ಹೊಂದಿರುವ ʻಕರ್ನಾಟಕ ಪ್ರಜಾ ಪಾರ್ಟಿ (ರೈತಪರ್ವ)ʼ ಶಿವ ಇ. ಎಂಬ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಸಮಾಜವಾದಿ ಜನತಾ ಪಾರ್ಟಿ(ಕರ್ನಾಟಕ)ಯಿಂದ ಕೆ. ನಾಗೇಶ್ ನಾಯ್ಕ್ ಸ್ಪರ್ಧಿಸಿದ್ದರೆ, ಹಿಂದೆ ಯಡಿಯೂರಪ್ಪ ನೇತೃತ್ವ ವಹಿಸಿದ್ದ ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿ ಕೂಡ ಕಣದಲ್ಲಿದ್ದಾರೆ!
ಇನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪರ್ಧಿಸುತ್ತಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಯಂಗ್‌ಸ್ಟಾರ್‌ಎಂಪವರ್‌ಮೆಂಟ್ ಪಾರ್ಟಿಯ ಸಿ.ಎಂ. ಶಹಬಾಜ್‌ಖಾನ್ ಕಣದಲ್ಲಿದ್ದಾರೆ. ಎಲ್ಲರಿಗೂ ಉದ್ಯೋಗ ನೀಡಬೇಕು, ಉಚಿತವಾಗಿ ಶಿಕ್ಷಣ ದೊರೆಯುವಂತಾಗಬೇಕು, ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ಸಿಗಬೇಕು ಎಂದು ತಾವು ಸ್ಪರ್ಧಿಸುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಇಂಡಿಯನ್ ಮೂವ್‌ಮೆಂಟ್ ಪಾರ್ಟಿಯ ಸೈಯದ್ ಜಾವೇದ್ ಕೂಡ ಕಣದಲ್ಲಿದ್ದಾರೆ. ಈ ಕ್ಷೇತ್ರದಿಂದ ಆಂಧ್ರದ ಸ್ವಯಂ ಘೋಷಿತ ದೇವಮಾನವ ಬಾಬಾ ಅನಂತ ವಿಷ್ಣು ಪ್ರಭು ಸ್ಥಾಪಿಸಿರುವ ʻಜೈ ಮಹಾ ಭಾರತ್ ಪಾರ್ಟಿʼಯ ಲೋಕೇಶ್ ಕೆ.ಎಚ್. ನಾಮಪತ್ರ ಸಲ್ಲಿಸಿದ್ದರಾದರೂ ನಂತರ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ! ಈ ಪಕ್ಷದ ಅಭ್ಯರ್ಥಿ ದಿಲೀಪ್ ಎಂ. ಬೆಂಗಳೂರಿನ ಬಸವನಗುಡಿ, ದೊಡ್ಡಬಳ್ಳಾಪುರ ಮತ್ತಿತರ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದಾರೆ!!
ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಸಚಿವ ಆರ್. ಅಶೋಕ್ ಸೆಣಸುತ್ತಿರುವ ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ʻನವಭಾರತ್ ಸೇನೆʼ ಎಂಬ ಪಕ್ಷ ಕೆಂಪೆಗೌಡ ಎಂಬ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಎ)ದ ಶ್ರೀಧರ್ ಕೆ.ಆರ್. ಕೂಡ ಕಣದಲ್ಲಿದ್ದಾರೆ.
ಹೊರ ರಾಜ್ಯಗಳ ಪಕ್ಷಗಳೂ ಇವೆ!
ಕೇವಲ ನಮ್ಮ ರಾಜ್ಯದ ಪಕ್ಷಗಳಲ್ಲ, ಹೊರ ರಾಜ್ಯದಲ್ಲಿರುವ ಸಣ್ಣ ಪುಟ್ಟ ಪಕ್ಷಗಳು ಕೂಡ ತಮ್ಮ ಅಭ್ಯರ್ಥಿಗಳನ್ನು ಈ ಚುನಾವಣೆಯಲ್ಲಿ ಕಣಕ್ಕಿಳಿಸಿವೆ. ಉದಾಹರಣೆಗೆ ಆಜಾದ್ ಮಜ್ದೂರ್ ಕಿಸಾನ್ ಪಾರ್ಟಿ ಅಥಣಿಯಲ್ಲಿ ಸಂಜೀವ್ ಹರಿಶ್ಚಂದ್ರ ಕಾಂಬ್ಳೆ ಎಂಬ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರೆ, ಮಹಾರಾಷ್ಟ್ರದ ʻರಾಷ್ಟ್ರೀಯ ಮರಾಠ ಪಾರ್ಟಿʼಯು ಔರಾದ್‌ನಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.
ಆದರ್ಶವೇ ಮುಖ್ಯ
ದೊಡ್ಡ ದೊಡ್ಡ ಪಕ್ಷಗಳ ನಡುವೆ ಈ ಸಣ್ಣ ಪಕ್ಷಗಳು ಏನು ಮಾಡಿಯಾವು ಎಂದು ನೀವು ಮೂಗು ಮುರಿಯಬಹುದು. ಆದರೆ ಬಹುತೇಕವಾಗಿ ಈ ಸಣ್ಣ ಪಕ್ಷಗಳ ಹುಟ್ಟಿಗೆ, ಚುನಾವಣೆಯಲ್ಲಿನ ಸ್ಪರ್ಧೆಗೆ ಅವರದ್ದೇ ಆದ ಕಾರಣಗಳಿವೆ. ಈ ಕಾರಣಗಳು ಸಮಾಜಮುಖಿಯಾದವು ಎಂಬುದನ್ನು ನಾವಿಲ್ಲಿ ಗಮನಿಸಲೇಬೇಕು. ಈ ಬಾರಿಯ ಚುನಾವಣೆಯಲ್ಲಿ ʻಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷʼ ಎಂಬ ರಾಜ್ಯಮೂಲದ ರಾಷ್ಟ್ರೀಯ ಪಕ್ಷವೊಂದು ಏಳು ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಈ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಮಚಂದ್ರ ಎಸ್. ಕುಲಕರ್ಣಿ ಗ್ರಾಮಗಳ ಅಭಿವೃದ್ಧಿಯ ಮೂಲಕ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ನಂಬಿದವರು. ಇದಕ್ಕಾಗಿಯೇ ಪಕ್ಷ ಸ್ಥಾಪಿಸಿ, ಸಮಾನ ಮನಸ್ಕರನ್ನು ಕಣಕ್ಕಿಳಿಸುತ್ತಿರುವುದಾಗಿ ಅವರು ಹೇಳಿದ್ದಾರೆ.
ಇದೇ ರೀತಿಯಾಗಿ ದೇಶದಲ್ಲಿನ ಭಷ್ಟ್ರಾಚಾರ, ರಾಜಕಾರಣಿಗಳ ಅಧಿಕಾರ ದಾಹವನ್ನು ನೋಡಿ ಬೇಸತ್ತ ಭಾರತೀಯ ಸೇನೆಯ ನಿವೃತ್ತ ಬ್ರಿಗೇಡಿಯರ್ ರವಿ ಮುನಿಸ್ವಾಮಿ ಎಂಬುವರು ʻಸಾರ್ವಜನಿಕರ ಆದರ್ಶ ಸೇನಾ ಪಾರ್ಟಿʼ ಎಂಬ ಪಕ್ಷವೊಂದನ್ನು ಸ್ಥಾಪಿಸಿದ್ದು, ಈ ಬಾರಿಯ ಚುನಾವಣೆಯಲ್ಲಿ ಹತ್ತು ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ದೇಶದ ಆಂತರಿಕ ಶತ್ರುಗಳಾದ ಭ್ರಷ್ಟಾಚಾರಿಗಳ ವಿರುದ್ಧ ಹೋರಾಡಲು ತಮ್ಮ ಪಕ್ಷ ಚುನಾವಣಾ ಕಣಕ್ಕೆ ಧುಮಕಿದ್ದು, ಜನರ ಬೆಂಬಲ ನೀಡಬೇಕೆಂದು ಅವರು ಕೋರಿದ್ದಾರೆ.
ನಿಮಗೆ ಆನಂದ ಮಾರ್ಗದ ಸಂಸ್ಥಾಪಕರಾದ ಶ್ರೀ ಶ್ರೀ ಆನಂದಮೂರ್ತಿ (ಪ್ರಭಾತ್ ರಂಜನ್ ಸರ್ಕಾರ್) ಅವರ ಬಗ್ಗೆ ಗೊತ್ತಿರಬಹುದು. ಅವರು ಪ್ರೌಟ್ (PROUT ) ಎಂಬ ಆರ್ಥಿಕ ಮತ್ತು ರಾಜಕೀಯ ಸಿದ್ಧಾಂತವನ್ನು ಮಂಡಿಸಿದ್ದರು. ಈ ಸಿದ್ಧಾಂತವನ್ನು ಪ್ರಚಾರ ಮಾಡಲೆಂದೇ ʻಪ್ರೌಟಿಸ್ಟ್ ಸರ್ವ ಸಮಾಜ ಪಕ್ಷʼ ಎಂಬ ರಾಷ್ಟ್ರೀಯ ಪಕ್ಷವನ್ನು ಸ್ಥಾಪಿಸಲಾಗಿದೆ. ಇದರ ಖಚಾಂಚಿ ಎಂ. ಕೆ. ದಯಾನಂದ ಶೃಂಗೇರಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.
ಜನತಾ ಪ್ರಜಾಪ್ರಭುತ್ವವನ್ನು ಸ್ಥಾಪಿಸುವ ಮೂಲ ಉದ್ದೇಶದಿಂದ ಜನಪರ ರಾಜಕಾರಣಕ್ಕಾಗಿಯೇ ಸ್ಥಾಪಿಸಲ್ಪಟ್ಟಿರುವ ಸ್ವಯಂ ಕೃಷಿ ಪಾರ್ಟಿ ಒಟ್ಟು ಎಂಟು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ರೈತರ ಮತ್ತು ಯೋಧರ ಹಿತ ಕಾಯಲೆಂದೇ ಈ ಪಕ್ಷವನ್ನು ಸ್ಥಾಪಿಸಲಾಗಿದೆ ಎನ್ನುತ್ತಾರೆ ಪಕ್ಷದ ಅಧ್ಯಕ್ಷ ಮಂಜುನಾಥ್ ಎನ್.
ತುಳುನಾಡು ಸ್ಥಾಪನೆಯನ್ನೇ ಗುರಿಯಾಗಿಸಿಕೊಂಡ ʻತುಳವರ ಪಕ್ಷʼದ ನಾಯಕ ಶೈಲೇಶ್ ಆರ್. ಜೆ. ಬೆಳ್ತಂಗಡಿ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದರೆ, ಸರ್ವ ಧರ್ಮ ಸಮನ್ವಯತೆಯನ್ನು ಸಾರುವ ಉದ್ದೇಶದಿಂದ ಸ್ಥಾಪನೆಗೊಂಡಿರುವ ʻಭಾರತೀಯ ಬೆಳಕು ಪಾರ್ಟಿʼ ಐದು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇದೇ ರೀತಿ ಪ್ರತಿಯೊಂದು ಪಕ್ಷವೂ ತನ್ನದೇ ಆದ ಉದ್ದೇಶ, ಆದರ್ಶಗಳನ್ನು ಇಟ್ಟುಕೊಂಡು ಚುನಾವಣಾ ಕಣದಲ್ಲಿವೆ. ಪ್ರಜಾಪ್ರಭುತ್ವದ ಮಹತ್ವವನ್ನು ಎತ್ತಿ ಸಾರುತ್ತಿವೆ.
ಯಾವೆಲ್ಲಾ ಹೆಸರಿನ ಪಾರ್ಟಿಗಳಿವೆ ನೋಡಿ!
ಈ ಬಾರಿ ಕಣದಲ್ಲಿರುವ ಇತರ ಪಕ್ಷಗಳೆಂದರೆ, ರಾಷ್ಟ್ರೀಯ ಸಮಾಜ ಪಕ್ಷ, ಕರ್ನಾಟಕ ರಾಷ್ಟ್ರ ಸಮಿತಿ, ಕರ್ನಾಟಕ ಜನಸೇವಾ ಪಾರ್ಟಿ, ಸರ್ವ ಜನತಾ ಪಾರ್ಟಿ, ಕರ್ನಾಟಕ ಪ್ರಜ್ಞಾವಂತರ ಜನತಾ ಪಾರ್ಟಿ, ಬಹುಜನ್ ಭಾರತ್ ಪಾರ್ಟಿ, ಕರ್ನಾಟಕ ಕಾರ್ಮಿಕರ ಪಕ್ಷ, ರಾಷ್ಟ್ರೀಯ ಜನ ಹಿತ ಪಕ್ಷ, ಕಂಟ್ರಿ ಸಿಟಿಜನ್ ಪಾರ್ಟಿ, ಟಿಪ್ಪು ಸುಲ್ತಾನ್ ಪಾರ್ಟಿ, ರಾಣಿ ಚೆನ್ನಮ್ಮ ಪಾರ್ಟಿ, ಜನಹಿತ ಪಕ್ಷ, ರೈತ ಭಾರತ್ ಪಾರ್ಟಿ, ರಾಷ್ಟ್ರ ನಿರ್ಮಾಣ್ ಪಾರ್ಟಿ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ, ದೇಶ್‌ಪ್ರೇಮ್ ಪಾರ್ಟಿ, ತುಳುವರ ಪಕ್ಷ, ಸಾರ್ವಜನಿಕ ಆದರ್ಶ ಸೇನೆ, ನವಭಾರತ್ ಸೇನೆ, ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷ, ನವರಂಗ್ ಕಾಂಗ್ರೆಸ್, ಸಾರ್ವಜನಿಕ ಆದರ್ಶ ಸೇನೆ, ಕರ್ನಾಟಕ ಪ್ರಜಾ ಪಾರ್ಟಿ (ರೈತಪರ್ವ), ಸಂಪೂರ್ಣ ಭಾರತ್ ಕ್ರಾಂತಿ ಪಾರ್ಟಿ. ವಿಚಾರ ಜಾಗೃತಿ ಕಾಂಗ್ರೆಸ್ ಪಕ್ಷ, ಅಖಿಲ ಭಾರತ್ ಹಿಂದೂ ಮಹಾಸಭಾ, ಕರ್ನಾಟಕ ಮಕ್ಕಳ ಪಕ್ಷ, ಹಿಂದೂಸ್ತಾನ್ ಜನತಾ ಪಾರ್ಟಿ ಸೆಕ್ಯುಲರ್, ರಾಷ್ಟ್ರೀಯ ಜನಸಂಭಾವನಾ ಪಾರ್ಟಿ, ಕರುನಾಡು ಪಾರ್ಟಿ, ಕರ್ನಾಟಕ ಜನಸೇವಾ ಪಾರ್ಟಿ, ಕರ್ನಾಟಕ ಸ್ವಾಭಿಮಾನಿ ರೈತರ ಕಾರ್ಮಿಕರ ಪಕ್ಷ, ಪರಿಸರ ಬಂಧು ಪಾರ್ಟಿ.
ಹಳೆಯ ಪಾರ್ಟಿಗಳೂ ಕಣದಲ್ಲಿ…
ಹಿಂದೆ ರಾಷ್ಟ್ರ ಮತ್ತು ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡಿದ್ದ ಪಕ್ಷಗಳ ಹೆಸರಿನಲ್ಲಿ ಈಗಲೂ ಸ್ಪರ್ಧೆ ಮಾಡುವವರಿದ್ದಾರೆ. ಜನತಾ ಪರಿವಾರ ಹರಿದು ಹಂಚಿಹೋದಾಗ ಹುಟ್ಟಿಕೊಂಡಿದ್ದ ಲೋಕಶಕ್ತಿ ಪಾರ್ಟಿಯ ಅಭ್ಯರ್ಥಿ ಈಗ ಅರಿಸಿಕೆರೆ ಕ್ಷೇತ್ರದಲ್ಲಿ ಕಣದಲ್ಲಿದ್ದಾರೆ. ಕರ್ನಾಟಕ ಜನತಾ ಪಕ್ಷ (ಕೆಜೆಪಿ), ರಾಷ್ಟ್ರೀಯ ಸಮಾಜ ದಳ್, ಜನತಾ ಪಕ್ಷ, ರಿಪಬ್ಲಿಕನ್ ಪಾರ್ಟ್ ಆಫ್ ಇಂಡಿಯಾ, ಭಾರತೀಯ ಬಹುಜನ್ ಕ್ರಾಂತಿ ದಳ್, ಸಮಾಜವಾದಿ ಜನತಾ ಪಾರ್ಟಿ (ಕರ್ನಾಟಕ) ಹೀಗೆ ಹಲವು ಹಳೆಯ ಪಾರ್ಟಿಗಳ ಹೆಸರಿನಲ್ಲಿ ಈಗಲೂ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.
ಇದನ್ನೂ ಓದಿ : D ಕೋಡ್ ಅಂಕಣ: ಜೆಡಿಎಸ್‌ಗೆ 2023ರ ವಿಧಾನಸಭೆ ಚುನಾವಣೆ ‘Final Match’ ಏಕೆಂದರೆ…