Site icon Vistara News

Karnataka Election 2023 : ಪುಷ್ಪಗಳ ಹಾಸಿನ ಮೇಲೆ ಮೋದಿ ರೋಡ್‌ ಶೋ ; ಅರಳೀತೆ ಕಮಲ?

Karnataka Election 2023 PM Narendra Modi's roadshow ends at Trinity Circle

#image_title

ಬೆಂಗಳೂರು: ಪ್ರಧಾನಿ ಮೋದಿ ಅವರ ಮೂರನೇ ರೋಡ್‌ ಶೋ ಅಂತ್ಯಗೊಂಡಿದೆ. ಈ ಬಾರಿಯ ಚುನಾವಣೆಯಲ್ಲಿ (Karnataka Election 2023) ರಾಜಧಾನಿ ಬೆಂಗಳೂರಿನಲ್ಲಿ ಬಿಜೆಪಿಯ ಅಲೆ ಎಬ್ಬಿಸುವ ಉದ್ದೇಶದಿಂದ ನಗರ ಮೂರು ದಿಕ್ಕುಗಳಲ್ಲಿ ಅವರು ರೋಡ್‌ ಶೋ (Narendra Modi Road show) ನಡೆಸಿದ್ದು, ಭಾನುವಾರ ರೋಡ್‌ ಶೋನಲ್ಲಿ 6.5 ಕಿ.ಮೀ. ಸಾಗಿದ ಪ್ರಧಾನಿ ಮೋದಿ (Modi in Karnataka) ಬಿಜೆಪಿ ಅಭಿಮಾನಿಗಳಲ್ಲಿ ಹುರುಪು ಮೂಡಿಸಿದರು.

ನ್ಯೂ ತಿಪ್ಪಸಂದ್ರದ ಕೆಂಪೇಗೌಡ ವೃತ್ತದಿಂದ ರೋಡ್ ಶೋ ಆರಂಭಗೊಂಡಿತು. ಕೆಂಪೇಗೌಡರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ತೆರದ ವಾಹನ ಏರಿದ ಮೋದಿ ಟ್ರಿನಿಟಿ ಸರ್ಕಲ್‌ನಲ್ಲಿ ತಮ್ಮ ರೋಡ್‌ ಶೋ ಅಂತ್ಯಗೊಳಿಸಿದರು. ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌, ಸಂಸದ ಪಿ.ಸಿ. ಮೋಹನ್‌ ಮೋದಿಯವರೊಂದಿಗೆ ವಾಹನದಲ್ಲಿದ್ದರು.

ಮೋದಿ ರೋಡ್‌ ಶೋ ಇಲ್ಲಿ ನೋಡಿ

ರೋಡ್‌ ಶೋ ಅಂತ್ಯಗೊಳಿಸಿ ವಾಹನದಿಂದ ಇಳಿಯುವ ವೇಳೆ ಸುತ್ತಲೂ ನಿಂತಿದ್ದ ಜನರಿಗೆ ನಾಲ್ಕು ದಿಕ್ಕುಗಳಿಗೆ ತಿರುಗಿ ಬಾಗಿ ನಮಸ್ಕರಿಸಿ ವಾಹನದಿಂದ ಕೆಳಗಿಳಿದಿದ್ದು ಎಲ್ಲರ ಗಮನ ಸೆಳೆಯಿತು. ಜತೆಗೆ ಬಂದಿದ್ದ ರಾಜೀವ್‌ ಚಂದ್ರಶೇಖರ್‌ ಮತ್ತು ಪಿ ಸಿ ಮೋಹನ್‌ ಅವರ ಬೆನ್ನು ತಟ್ಟಿ ಕೃತಜ್ಞತೆ ಸಲ್ಲಿಸಲು ಮೋದಿ ಮರೆಯಲಿಲ್ಲ. ಇಲ್ಲಿಗೆ ಈ ಚುನಾವಣೆಯಲ್ಲಿ ಪ್ರಧಾನಿ ಮೋದಿ ಬೆಂಗಳೂರಿನಲ್ಲಿ ಮೂರು ರೋಡ್‌ ಶೋ ನಡೆಸಿದಂತಾಗಿದೆ. ಇದಲ್ಲದೆ ಕಲಬುರಗಿ, ಮೈಸೂರು, ತುಮಕೂರಿನಲ್ಲಿಯೂ ಮೋದಿ ರೋಡ್‌ ಶೋ ನಡೆಸಿದ್ದಾರೆ.

ಮೋದಿಗೆ ತಲೆಬಾಗಿದ ವರುಣ!

ಭಾನುವಾರ ಬೆಳಗ್ಗೆ ನಗರದಲ್ಲಿ ಮೋಡ ಕವಿದ ವಾತಾವರಣವಿತ್ತಾದರೂ ಮೋದಿಯ ರೋಡ್‌ ಶೋ ಆರಂಭವಾಗುವ ವೇಳೆಗೆ ಸಣ್ಣಗೆ ಸುರಿದ ಮಳೆ ರಸ್ತೆಯನ್ನು ತೊಳೆದು, ರೋಡ್ ಶೋಗೆ ದಾರಿ ಸುಗಮ ಮಾಡಿಕೊಟ್ಟಿತ್ತು. ಸೂರ್ಯ ಕೂಡ ರೋಡ್‌ ಶೋಗೆ ಸಾಕ್ಷಿಯಾಗಿ ಹರುಪು ಮೂಡಿಸಿದ್ದ. ಹೀಗಾಗಿ ಮಳೆ ಸುರಿಯುವ ಯಾವುದೇ ಆತಂಕವಿಲ್ಲದೆ ಈ ರೋಡ್‌ ಶೋ ನಡೆಯಿತು.

ಎಂದಿನಂತೆ ಮೋದಿ ಸಾಗಿ ಬರುತ್ತಿದ್ದಂತೆಯೇ ರಸ್ತೆಯ ಎರಡೂ ಬದಿಯಲ್ಲಿ ಕಿಕ್ಕಿರಿದು ನೆರೆದಿದ್ದ ಅಭಿಮಾನಿಗಳು ʼಮೋದಿ… ಮೋದಿ…ʼ ಎಂದು ಘೋಷಣೆ ಕೂಗುತ್ತಾ ಸ್ವಾಗತಿಸಿದರು. ಮೋದಿಯವರ ಮೇಲೆ ಹೂವಿನ ಮಳೆ ಸುರಿಸಿದರು. ಕೆಲವು ಕಡೆ ಮೋದಿಯವರೂ ಕೂಡ ತಮಗೆ ಎರಚ್ಚಿದ್ದ ಪುಷ್ಪಗಳ ದಳಗಳನ್ನು ಸಂಗ್ರಹಿಸಿದ ಜನರ ಮೇಲೆ ಎಸೆದು ಖುಷಿ ಪಟ್ಟರು. ಬಿಜೆಪಿ ಕಾರ್ಯಕರ್ತರು ಮೋದಲೇ ಜನರಿಗೆ ಹೂವನ್ನು ವಿತರಿಸಿದ್ದರು.

ಜನರಿಗೆ ಹೂವು ವಿತರಿಸುತ್ತಿರುವ ಬಿಜೆಪಿ ಕಾರ್ಯಕರ್ತರು.

ಕೆಲವು ಕಡೆ ಕಲಾತಂಡಗಳೂ ರೋಡ್‌ ಶೋನಲ್ಲಿ ಭಾಗವಹಿಸಿ ಜನರ ಸಂಭ್ರಮ ಹೆಚ್ಚಿಸಿದ್ದವು. ಮುಖ್ಯವಾಗಿ ಇಂದಿರಾನಗರ ಮೆಟ್ರೊ ಸ್ಟೇಷನ್ ಬಳಿ ವೀರಗಾಸೆ, ಯಕ್ಷಗಾನ, ಕಂಗೀಲು, ಕೀಲುಕುದುರೆ, ತಮಟೆ ತಂಡ, ಡೊಳ್ಳಿನ ತಂಡ ಸೇರಿದಂತೆ ಅನೇಕ ಕಲಾತಂಡಗಳು ರೋಡ್‌ ಶೋಗೆ ಹೊಸ ಮೆರಗು ನೀಡಿದವು. ಶನಿವಾರ ನಡೆದ ರೋಡ್‌ ಶೋನಂತೆ ಭಾನುವಾರ ಭಜರಂಗಿಗಳ ಘೋಷಣೆ ಹೆಚ್ಚಾಗಿ ಕೇಳಿ ಬರಲಿಲ್ಲ.

ಮಹಿಳೆಯರ ಸಂಭ್ರಮ ಹೆಚ್ಚು

ಇಂದಿನ ರೋಡ್‌ ಶೋನಲ್ಲಿ ಕೂಡ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಮೋದಿ ಆಗಮಿಸುತ್ತಿದ್ದಂತೆಯೇ ಮೋದಿಗೆ ಜೈ, ಹರ ಹರ ಮೋದಿ ಎಂದು ಘೋಷಣೆ ಕೂಗುತ್ತಿದ್ದರು.

ಮೋದಿ ರೋಡ್‌ ಶೋನಲ್ಲಿ ಖುಷಿಪಟ್ಟ ಮಹಿಳೆಯರು.

ಭಾನುವಾರ ನಡೆದ ರೋಡ್‌ ಶೋನಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ಇತರ ಭಾಷಿಗರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಮೋದಿಯವರನ್ನು ಹತ್ತಿರದಿಂದ ನೋಡಿ ಖುಷಿಪಟ್ಟರು. ರೋಡ್‌ ಶೋ ನೋಡಲು ನಿವೃತ್ತ ಸೈನಿಕರು ಆಗಮಿಸಿದ್ದನ್ನು ಗಮನಿಸಿದ ಪ್ರಧಾನಿ ಮೋದಿ ಅವರಿಗೆ ಸೆಲ್ಯೂಟ್‌ ಹೊಡೆದು ಗೌರವ ಸಲ್ಲಿಸಿದರು.

ಮೋದಿ ರೋಡ್‌ ಶೋ ನೋಡಲು ಬಂದವರು ಏನು ಹೇಳುತ್ತಿದ್ದಾರೆ ನೋಡಿ

ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಪರಿಣಾಮ

ಶನಿವಾರ ನಡೆದ ರೋಡ್‌ ಶೋನಲ್ಲಿ ಒಟ್ಟು 13 ಕ್ಷೇತ್ರಗಳಲ್ಲಿ ಹಾದು ಹೋಗಿದ್ದರೆ ಭಾನುವಾರ ನಡೆದ ರೋಡ್‌ ಶೋ ಸಿ.ವಿ. ರಾಮನ್ ನಗರ ವಿಧಾನಸಭಾ ಕ್ಷೇತ್ರ, ಕೆ.ಆರ್ ಪುರಂ ವಿಧಾನಸಭಾ ಕ್ಷೇತ್ರ, ಶಿವಾಜಿನಗರ ವಿಧಾನಸಭಾ ಕ್ಷೇತ್ರ, ಶಾಂತಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಹಾದು ಹೋಯಿತು. ಈ ಕ್ಷೇತ್ರಗಳ ಮತದಾರರ ಮಾತ್ರವಲ್ಲದೆ ನಗರದ ಮತದಾರರ ಗಮನ ಸೆಳೆಯುವಲ್ಲಿ ಪ್ರಧಾನಿ ಮೋದಿ ಯಶಸ್ವಿಯಾಗಿದ್ದಾರೆ. ಇದರಿಂದ ನಗರದ ಎಷ್ಟು ಕ್ಷೇತ್ರಗಳಲ್ಲಿ ಕಮಲ ಅರಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಇದನ್ನೂ ಓದಿ : Modi in Karnataka : ಬೆಂಗಳೂರಿನಲ್ಲಿ ಮೋದಿ ರೋಡ್‌ ಶೋ; ಜನರ ಸಂಭ್ರಮದ ಕಲರ್‌ಫುಲ್‌ ಚಿತ್ರಗಳು ಇಲ್ಲಿವೆ

Exit mobile version