ಕೋಲಾರ: ಬಿಬಿಎಂಪಿ ಗುತ್ತಿಗೆದಾರನಿಗೆ ಲಂಚ ಕೇಳಿದ್ದಲ್ಲದೇ ಜಾತಿ ನಿಂದನೆ ಹಾಗೂ ಜೀವಬೆದರಿಕೆ ಹಾಕಿದ್ದಕ್ಕೆ ಬೆಂಗಳೂರಿನಲ್ಲಿ ಶಾಸಕ ಮುನಿರತ್ನ ವಿರುದ್ಧ (MLA Muniratna) ದೂರು ದಾಖಲಾಗಿತ್ತು. ಇತ್ತ ದೂರು ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಶಾಸಕ ಮುನಿರತ್ನರನ್ನು ಕೋಲಾರ ಜಿಲ್ಲೆಯ ನಂಗಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ತವರು ಜಿಲ್ಲೆಯಾದ ಆಂಧ್ರಪ್ರದೇಶದ ಚಿತ್ತೂರಿಗೆ ಪಲಾಯಾನ ಮಾಡುವ ವೇಳೆ ಮುನಿರತ್ನರನ್ನು ಅರೆಸ್ಟ್ ಮಾಡಲಾಗಿದೆ. ಗುತ್ತಿಗೆದಾರ ಚೆಲುವರಾಜು ಸಿಎಂ ಸಿದ್ದರಾಮಯ್ಯಗೆ ಮನವಿ ಕೊಟ್ಟ ಒಂದೇ ಗಂಟೆಯಲ್ಲಿ ಪೊಲೀಸರು ಮುನಿರತ್ನರನ್ನು ವಶಕ್ಕೆ ಪಡೆದಿದ್ದಾರೆ.
ಕೋಲಾರ ಪೊಲೀಸರ ನೆರವಿನೊಂದಿಗೆ ಮುಳಬಾಗಲು ತಾಲ್ಲೂಕಿನ ನಂಗಲಿ ಬಳಿ ವಶಕ್ಕೆ ಪಡೆಯಲಾಗಿದೆ. ಕೋಲಾರ ಮಾರ್ಗವಾಗಿ ಆಂದ್ರಪ್ರದೇಶಕ್ಕೆ ತೆರಳುತ್ತಿದ್ದ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಮುನಿರತ್ನರನ್ನು ವಶಕ್ಕೆ ಪಡೆದು ಕೋಲಾರ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದಾರೆ.
ರೇಣುಕಾಸ್ವಾಮಿಗೆ ಆದ ಗತಿ ನಿನಗೂ ಆಗುತ್ತೆ ಎಂದು ಬೆದರಿಕೆ
ಬಿಬಿಎಂಪಿ ಗುತ್ತಿಗೆದಾರ ಚೆಲುವರಾಜ್ ಈ ಕುರಿತು ಮಾತನಾಡಿದ್ದು, ನನ್ನ ಕರೆಸಿ ಬೆದರಿಕೆ ಹಾಕಿ 20 ಲಕ್ಷ ರೂ. ಹಣ ಕೇಳಿದ್ದಾರೆ. ನಾನು ಆತ್ಮಹತ್ಯೆಗೂ ಯತ್ನಿಸಿದ್ದೆ, ಆದರೆ ನನ್ನ ಕುಟುಂಬದ ಸಲುವಾಗಿ ಉಳಿದುಕೊಂಡಿದ್ದೇನೆ. ರೇಣುಕಾಸ್ವಾಮಿಗೆ ಆದ ಗತಿ ನಿನಗೂ ಆಗುತ್ತೆ ನೋಡು.. ರೇಣುಕಾಸ್ವಾಮಿಗೆ ಗತಿ ಕಾಣಿಸಿದ್ದು ನಮ್ಮ ಅಕ್ಕನ ಮಗ ಎಂದು ಬೆದರಿಕೆ ಹಾಕಿದ್ದರಂತೆ. ನನ್ನ ಬಳಿ ನಿನ್ನನ್ನು ಮುಗಿಸಲು ನೂರು ಪ್ಲ್ಯಾನ್ ಇದೆ ಎಂದು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾರೆ.
ಶಾಸಕ ಮುನಿರತ್ನ ಆಪ್ತನಾಗಿರುವ ವಸಂತ್ ಕುಮಾರ್ ಕೂಡ ಚೆಲುವರಾಜುಗೆ ಬೆದರಿಕೆ ಹಾಕಿದ್ದನಂತೆ. ರೇಣುಕಾಸ್ವಾಮಿಯನ್ನು ಕೊಂದ ಹಾಗೇ ನಿನ್ನನ್ನು ಕೊಂದು ಹಾಕುತ್ತಾರೆ. ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ್ಯಾರು ಗೊತ್ತಾ? ಮುನಿರತ್ನ ಅವರ ತಂಗಿ ಮಗಾನೇ. ಸುಮ್ಮನೆ ಅವರು ಹೇಳಿದ್ದಂತೆ ಕೇಳು ಎಂದು ಚೆಲುವರಾಜುಗೆ ವಸಂತ್ ಕುಮಾರ್ ಮುಖಾಂತರ ಸೂಚನೆ ನೀಡಿ ಬೆದರಿಕೆ ಹಾಕಿಸಿದ್ದರಂತೆ.
ಅವಾಚ್ಯ ಶಬ್ಧಗಳಿಂದ ನಿಂದನೆ
ಶಾಸಕ ಮುನಿರತ್ನ ವಿರುದ್ಧ ಲಂಚ ಬೇಡಿಕೆ ಆರೋಪ ಕೇಳಿ ಬಂದಿದೆ. ಬಿಬಿಎಂಪಿ ವಾರ್ಡ್ ನಂ 42 ಲಕ್ಷ್ಮಿದೇವಿನಗರ ವಾರ್ಡ್‌ನಲ್ಲಿ ಘನ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ನಿರ್ವಹಣೆ ಸಂಬಂಧಿಸಿದಂತೆ ಗುತ್ತಿಗೆದಾರ ಚೆಲುವರಾಜುಗೆ ಲಂಚ ನೀಡುವಂತೆ ತೊಂದರೆ ಹಾಗೂ ಜೀವಬೆದರಿಕೆ ನೀಡಿದ್ದರಂತೆ. ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಗುತ್ತಿಗೆದಾರ ಚೆಲುವರಾಜು ಆರೋಪಿಸಿದ್ದರು. ಮೆ. ಗಂಗಾ ಎಂಟರ್ ಪ್ರೈಸಸ್ ಎಂಬ ಕಂಪನಿ ಹೆಸರಿನಲ್ಲಿ ಚೆಲುವರಾಜು ಗುತ್ತಿಗೆ ಕೆಲಸ ಮಾಡುತ್ತಿದ್ದಾರೆ. ಲಕ್ಷ್ಮೀದೇವಿ ನಗರ ವಾರ್ಡ್ ನ ಡಿ. ದೇವರಾಜು ಅರಸು ಟ್ರಕ್ ಟರ್ಮಿನಲ್ ಪ್ರದೇಶದಲ್ಲಿ ಚೆಲುವರಾಜು ಕಸ ಸಂಗ್ರಹದ ಗುತ್ತಿಗೆ ಪಡೆದಿದ್ದಾರೆ. ಆದರೆ ಮುನಿರತ್ನ ಚೆಲುವರಾಜುಗೆ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರಂತೆ. ಜತೆಗೆ ಜೀವ ಬೆದರಿಕೆ ಹಾಕುತ್ತಿದ್ದರಂತೆ.
ನಾನು ಮಾಗಡಿ ತಾಲೂಕಿನವನು. ಬಿಬಿಎಂಪಿ ಪೌರ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದೆ. ನಂತರ ಟ್ರಕ್ ಡ್ರೈವರ್ ಆಗಿ ಬಳಿಕ ಕಸ ಸಂಗ್ರಹದ ಗುತ್ತಿಗೆದಾರನಾದೆ. ಒಂದು ದಿನ ಎಂಎಲ್‌ಎ ಗನ್ ಮ್ಯಾನ್ ವಿಜಯ್ ನನಗೆ ಕರೆ ಮಾಡಿದ್ದರು. ವೈಯ್ಯಾಲಿಕಾವಲ್‌ನಲ್ಲಿರುವ ಅವರ ಮನೆಗೆ ಹೋಗಿ ಮುನಿರತ್ನ ಅವರನ್ನು ಭೇಟಿಯಾದೆ. ನಿನಗೆ 10 ಆಟೋ ಕೊಡಿಸುತ್ತೀನಿ, 20 ಲಕ್ಷ ಕೊಡು ಎಂದು ಹೇಳಿದರು. ನಾನು 20 ಲಕ್ಷ ಕೊಟ್ಟೆ, ಆದರೆ ಆಟೋ ಕೊಡಿಸಿಲ್ಲ ಕೇವಲ ಶಿಫಾರಸು ಪತ್ರ ಕೊಟ್ಟು ಸುಮ್ಮನಾದರು.
ಜೂನ್ ತಿಂಗಳಲ್ಲಿ ಮತ್ತೆ ಎಂ ಎಲ್ ಎ ಮುನಿರತ್ನ ನನಗೆ ಕರೆ ಮಾಡಿ, ಮನೆಗೆ ಬಾ ಅಂತಾ ಕರೆದರು. ಆದರೆ ನಾನು ಹೋಗಲಿಲ್ಲ. ನಂತರ ಅಧಿಕೃತವಾಗಿ ಎಂಎಲ್‌ಎ ಪಿಎಸ್ ಪತ್ರ ಬರೆದು ಸಭೆಗೆ ಕರೆದರು. ಸಭೆಗೆ ಹೋದಾಗ ಬಾಯಿಗೆ ಬಂದಹಾಗೇ ಅವಾಚ್ಯ ಶಬ್ಧಗಳಿಂದ ಬೈದರು. ನನ್ನ ಟೆಂಡರ್ ರದ್ದು ಮಾಡಲು ಆಯುಕ್ತರಿಗೆ ಎಂಎಲ್‌ಎ ಪತ್ರ ಬರೆದರು. ನಂತರ ಮತ್ತೆ 30 ಲಕ್ಷ ದುಡ್ಡು ಕೊಡು ಎಂದರು. ಹಣ ಕೊಡದೆ ಇದ್ದಾಗ ಮತ್ತೆ ಆಯುಕ್ತರಿಗೆ ನನ್ನ ಟೆಂಡರ್ ರದ್ದು ಮಾಡುವಂತೆ ಪತ್ರ ಬರೆದರು. ಅವರ ಮನೆಗೆ ಹೋದಾಗಲೆಲ್ಲ ಬಾಯಿಗೆ ಬಂದ ಹಾಗೇ ಬೈದು ಸಾಯಿಸುತ್ತೇನೆ ಎಂದು ಅವಾಜ್ ಹಾಕಿದ್ದರಂತೆ.
ನನ್ನಗೆ 11 ಕೋಟಿ ಅರಿಯರ್ಸ್ ಬಂದಾಗ, ಅದರಲ್ಲೂ ದುಡ್ಡು ಕೊಡು ಎಂದು ಕಿರುಕುಳ ಕೊಟ್ಟರು. ಬೇರೆ ಗುತ್ತಿಗೆದಾರರ ಮುಖಾಂತರ ಹಣ ನೀಡುವಂತೆ ಕಿರುಕುಳ ನೀಡಲು ಶುರುಮಾಡಿದರು. ಸೆ. 9ರಂದು ಮತ್ತೆ ಜೀವ ಬೆದರಿಕೆ ಹಾಕಿ, ರೇಣುಕಾಸ್ವಾಮಿ ಮಾದರಿಯಲ್ಲೇ ಕೊಲೆ ಮಾಡ್ತೇವೆ ಎಂದು ಮುನಿರತ್ನ ಆಪ್ತ ವಸಂತಕುಮಾರ್ ಬೆದರಿಕೆ ಹಾಕಿದ್ದಾನೆ. ಮೇ 18ರಂದು ನಿನ್ನ ಹೆಂಡತಿ ಚೆನ್ನಾಗಿದ್ದರೆ ಫೋಟೊ ತೋರಿಸೋ ಎಂದು
ಹೆಂಡತಿ ಬಗ್ಗೆ ಅವಾಚ್ಯ ಶಬ್ಧದಿಂದ ನಿಂದಿಸಿದ್ದಾರೆ.
ಮುನಿರತ್ನ ಫೋನ್ ಸ್ವಿಚ್ಡ್ ಆಫ್
ಶಾಸಕ ಮುನಿರತ್ನ ವಿರುದ್ಧ ವೈಯಾಲಿಕಾವಲ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿದ್ದರು. ವೈಯ್ಯಾಲಿಕಾವಲ್ ಪೊಲೀಸರಿಂದ ಮುನಿರತ್ನಗಾಗಿ ಹುಡುಕಾಟ ನಡೆಸಿದ್ದರು. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆ ಆಗಿದ್ದರು. ಮುನ್ನೆಚ್ಚರಿಕಾ ಕ್ರಮವಾಗಿ ಮುನಿರತ್ನ ಮನೆ ಬಳಿ ಪೊಲೀಸ್ ಭದ್ರತೆ ನೀಡಲಾಗಿತ್ತು. ಪ್ರತಿಭಟನೆ ಕೂಡ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲೂ ಒಂದು ಕೆಎಸ್ಆರ್ಪಿಸಿ ತುಕಡಿ ನಿಯೋಜನೆ ಮಾಡಲಾಗಿತ್ತು.