ಬೆಂಗಳೂರು: ಬಿಬಿಎಂಪಿ ಗುತ್ತಿಗೆದಾರನಿಗೆ ಜಾತಿ ನಿಂದನೆ, ಕೊಲೆ ಬೆದರಿಕೆ ಹಾಗೂ ಮಹಿಳೆ ಮೇಲೆ ಅತ್ಯಾಚಾರದೊಂದಿಗೆ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಮುನಿರತ್ನ (MLA Muniratna) ವಿರುದ್ಧ ಸಾಲು ಸಾಲು ದೂರುಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಸಮಗ್ರ ತನಿಖೆಗಾಗಿ ಸಿಐಡಿಯ ವಿಶೇಷ ತನಿಖಾ ಸಂಸ್ಥೆ (SIT) ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿದೆ.
ಹಿರಿಯ ಐಪಿಎಸ್ ಅಧಿಕಾರಿ ಬಿ.ಕೆ ಸಿಂಗ್ ನೇತೃತ್ವದಲ್ಲಿ ತನಿಖೆಗೆ ಆದೇಶ ಮಾಡಿದೆ. ಮುನಿರತ್ನ ಪ್ರಕರಣವನ್ನು SIT ತನಿಖೆ ನಡೆಸಬೇಕು ಎಂದು ಒಕ್ಕಲಿಗ ಕಾಂಗ್ರೆಸ್ ಮುಖಂಡರು ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಒಕ್ಕಲಿಗ ಕಾಂಗ್ರೆಸ್ ಜನಪ್ರತಿನಿಧಿಗಳ ಮನವಿ ಮೇರಿಗೆ SIT ತನಿಖೆಗೆ ಸಿಎಂ ಸಿದ್ದರಾಮಯ್ಯ ಆದೇಶಿಸಿದ್ದಾರೆ.
ಅಕ್ಟೋಬರ್ 5ರ ವರೆಗೆ ಶಾಸಕ ಮುನಿರತ್ನಗೆ ನ್ಯಾಯಾಂಗ ಬಂಧನ
ಬೆಂಗಳೂರು: ಅತ್ಯಾಚಾರ ಹಾಗೂ ಹನಿಟ್ರ್ಯಾಪ್ ಪ್ರಕರಣದಲ್ಲಿ ಶಾಸಕ ಮುನಿರತ್ನ (MLA Muniratna) ಬಂಧನವಾಗಿದ್ದು, ಕಗ್ಗಲೀಪುರ ಪೊಲೀಸರು ಶನಿವಾರ 42ನೇ ಎಸಿಎಂಎಂ ವಿಶೇಷ ಜನಪ್ರತಿನಿಧಿಗಳ ಕೋರ್ಟ್‌ಗೆ ಹಾಜರು ಪಡಿಸಿದರು. ವಾದ ಆಲಿಸಿದ 42ನೇ ಎಸಿಎಂಎಂ ಕೋರ್ಟ್‌ನ ನ್ಯಾಯಾಧೀಶ ಶಿವಕುಮಾರ್ ಅವರು ಅಕ್ಟೋಬರ್ 5ರ ವರೆಗೆ ಶಾಸಕ ಮುನಿರತ್ನಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದರು.
ಇದಕ್ಕೂ ಮೊದಲು ಮುನಿರತ್ನ ಪರ ವಕೀಲರಿಂದ ಜಾಮೀನು ಅರ್ಜಿಗೆ ಸಲ್ಲಿಸಿದರು. ಈ ವೇಳೆ ಯಾವಾಗ, ಎಲ್ಲಿ ಬಂಧಿಸಿದರು ಎಂದು ಮುನಿರತ್ನರನ್ನು ನ್ಯಾಯಾಧೀಶರು ಪ್ರಶ್ನಿಸಿದರು. ಈ ವೇಳೆ ಜೈಲಿನಿಂದ ಬೇಲ್ ಮೇಲೆ ಹೊರ ಬಂದಾಗ ಪೊಲೀಸರು ಬಂಧಿಸಿದರು ಸ್ವಾಮಿ ಎಂದು ಉತ್ತರಿಸಿದರು. ಅರೆಸ್ಟ್ ಮೆಮೋ ಪ್ರಕ್ರಿಯೆಗಳನ್ನು ನಿಯಮಾನುಸಾರ ಪಾಲಿಸಿಲ್ಲ ಎಂದು ತನಿಖಾಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ಬಳಿಕ ವಾದ ಶುರು ಮಾಡಿದ ಮುನಿರತ್ನ ಪರ ವಕೀಲ ಶಾಸಕ ಮುನಿರತ್ನ ಅವರನ್ನು ದುರುದ್ದೇಶದಿಂದ ಬಂಧಿಸಿದ್ದಾರೆ. ಜಾತಿ ನಿಂದನೆ ಪ್ರಕರಣದಲ್ಲಿ ಜಾಮೀನು ಪಡೆದು ಹೊರ ಬಂದ ಕೂಡಲೇ ಪೊಲೀಸರು ಬಂಧಿಸಿದ್ದಾರೆ. ಇಲ್ಲಿ ಸಂತ್ರಸ್ತೆ ನೇರವಾಗಿ ದೂರು ನೀಡಿಲ್ಲ. ಎಸ್‌ಪಿ ಕಚೇರಿಯಿಂದ ಬಂದ ಟಪಾಲ್ ಆಧಾರದ ಮೇಲೆ ಎಫ್ಐಆರ್ ದಾಖಲು ಮಾಡಿದ್ದಾರೆ.
ದೂರುದಾರರು ನೇರವಾಗಿ ಬಂದಿಲ್ಲ, ಹಾಗಾದರೆ ಎಫ್ಐಆರ್‌ನಲ್ಲಿ ಸಹಿ ಹೇಗೆ ಬಂತು? ಇನ್ನು ಕೇಸ್‌ಗಳು ದಾಖಲಾದರೂ ಆಶ್ಚರ್ಯ ಇಲ್ಲ. ನಿನ್ನೆ ಶುಕ್ರವಾರ ಬೆಳಗ್ಗೆ 9 ಗಂಟೆಗೆ ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಮಾಧ್ಯಮಗಳಲ್ಲಿ ಬೆಳಗ್ಗೆಯಿಂದಲೇ ಬಂಧನ ಎಂಬ ಸುದ್ದಿ ಪ್ರಸಾರ ಮಾಡಿದ್ದಾರೆ. ಪೊಲೀಸರು ತನಿಖೆಯ ಮಾಹಿತಿ ಸೋರಿಕೆ ಮಾಡುತ್ತಿದ್ದಾರೆ. ಮುನಿರತ್ನರನ್ನು ದುರುದ್ದೇಶದಿಂದ ಬಂಧಿಸಿದ್ದಾರೆ ಎಂದು ಮುನಿರತ್ನ ಪರ ವಕೀಲರು ವಾದ ಮಂಡಿಸಿದ್ದರು.
ಇದನ್ನೂ ಓದಿ: MLA Muniratna: ಬಿಜೆಪಿ ಪಕ್ಷದ ಒಬ್ಬೊಬ್ಬ ನಾಯಕನೂ ಮುನಿರತ್ನನಂತಹ ಮುತ್ತು ರತ್ನಗಳೇ! ಕಾಂಗ್ರೆಸ್ ಟೀಕೆ
ನನ್ನ ಜತೆಗೆ ಇದ್ದವರಿಂದಲೇ ದೂರು ದಾಖಲು
ಇದೇ ವೇಳೆ ಎರಡು ನಿಮಿಷ ಮಾತನಾಡಲು ಅವಕಾಶ ಮಾಡಿಕೊಡಬೇಕೆಂದು ಶಾಸಕ ಮುನಿರತ್ನ ನ್ಯಾಯಾಧೀಶರ ಬಳಿ ಕೇಳಿಕೊಂಡರು. ನ್ಯಾಯಾಧೀಶರ ಸಮ್ಮತಿ ಪಡೆದು ಮಾತನಾಡಿದ ಶಾಸಕ ಮುನಿರತ್ನ, ಕಳೆದ ಐದು ವರ್ಷದಿಂದ ನನ್ನ ಜತೆ ಇದ್ದವರೇ ನನ್ನ ವಿರುದ್ಧ ದೂರುಗಳನ್ನು ನೀಡುತ್ತಿದ್ದಾರೆ. ಚುನಾವಣಾ ಸಂದರ್ಭದಲ್ಲಿ ನಡೆದ ಮನಸ್ತಾಪಗಳನ್ನು ಮುಂದಿಟ್ಟುಕೊಂಡು ದಿನೆದಿನೇ ಹೊಸ ಕೇಸ್‌ಗಳನ್ನು ದಾಖಲಿಸುತ್ತಿದ್ದಾರೆ.
ನಾನು ನಾಲ್ಕು ಬಾರಿ ಎಂಎಲ್‌ಎ ಆಗಿದ್ದೇನೆ. ಎಂಎಲ್‌ಎ ಸ್ಥಾನಕ್ಕಾಗಿಯೆ ಪ್ರತಿದಿನ ಕಿರುಕುಳ ನೀಡುತ್ತಿದ್ದಾರೆ. ಈ ಕಿರುಕುಳಕ್ಕಿಂತ ಈಗಲೇ ನಾನು ನನ್ನ ಶಾಸಕ ಸ್ಥಾನಕ್ಕೆ ಬೇಕಾದರೆ ರಾಜೀನಾಮೆ ನೀಡುತ್ತೇನೆ ಸ್ವಾಮಿ. ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿ ನಾನು, ವಿನಾ ಕಾರಣ ನನ್ನ ತೇಜೋವಧೆ ಮಾಡುವಂತಹ ಕೆಲಸ ಮಾಡುತ್ತಿದ್ದಾರೆ. ಐದು ವರ್ಷದ ಹಿಂದೆ ಅತ್ಯಾಚಾರವೆಸಗಿದ್ದರೆ ಆಗಲೇ ಕೇಸ್ ದಾಖಲಿಸಬಹುದಿತ್ತು. ಎಲ್ಲ ಪೊಲೀಸ್ ಠಾಣೆಗಳು ತೆರೆದಿದ್ದವು ಎಂದು ಅಳಲು ತೋಡಿಕೊಂಡರು. ವಾದ ಆಲಿಸಿದ ನ್ಯಾಯಾಧೀಶರು ಶಾಸಕ ಮುನಿರತ್ನರಿಗೆ ಅ.5ರ ವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ