ಮೈಸೂರು: ಪ್ರತಿಪಕ್ಷಗಳು ನೇಹಾ ಕುಲಕರ್ಣಿ ಅವರ ಕೊಲೆ ಪ್ರಕರಣವನ್ನು (Neha Murder Case) ರಾಜಕೀಯಕ್ಕೆ ಬಳಸುತ್ತಿದ್ದಾರೆ. ಆಕೆಯನ್ನು ಕೊಂದವನಿಗೆ ಉಗ್ರ ಶಿಕ್ಷೆಯನ್ನು ಕೊಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಶನಿವಾರ ಮೈಸೂರಿನ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ನೇಹಾ ಕುಲಕರ್ಣಿ ಕೊಲೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಕೊಲೆಗಾರನನ್ನು ಕೂಡಲೇ ಬಂಧಿಸಲಾಗಿದೆ. ಇದು ಲವ್ ಜಿಹಾದ್ ಪ್ರಕರಣವಲ್ಲ. ಸರ್ಕಾರ ತನಿಖೆಯನ್ನು ಗಂಭೀರವಾಗಿ ಕೈಗೊಂಡಿದ್ದು, ಕೊಲೆಗಾರನಿಗೆ ಉಗ್ರ ಶಿಕ್ಷೆ ನೀಡಲು ಪ್ರಯತ್ನ ಮಾಡಲಾಗುವುದು ಎಂದರು.
ರಾಜಕೀಯಕ್ಕಾಗಿ ಒಬ್ಬರ ಸಾವನ್ನು ಬಳಸಿಕೊಳ್ಳುವುದು ದುರ್ದೈವ
ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಬಗ್ಗೆ ಪ್ರತಿಪಕ್ಷಗಳ ಆರೋಪದ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಎಲ್ಲ ಕಾಲದಲ್ಲಿಯೂ ಕೊಲೆಗಳಾಗಿವೆ. ಹಾಗೆಂದು ಕಾನೂನು ಸುವ್ಯವಸ್ಥೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದಲ್ಲ. ಕರ್ನಾಟಕದಲ್ಲಿ ಇರುವಷ್ಟು ಶಾಂತಿ ಸುವ್ಯವಸ್ಥೆ ಬೇರೆ ರಾಜ್ಯಗಳಲ್ಲಿಲ್ಲ. ನಾವು ಯಾವುದೇ ಕೃತ್ಯ ನಡೆದರೂ, ಅದನ್ನು ತೀವ್ರವಾಗಿ ಖಂಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ರಾಜಕೀಯಕ್ಕಾಗಿ ಒಬ್ಬರ ಸಾವನ್ನು ಬಳಸಿಕೊಳ್ಳುವುದು ದುರ್ದೈವ ಹಾಗೂ ಖಂಡನೀಯ ಎಂದು ಹೇಳಿದರು. ಇನ್ನು ರಾಜ್ಯಾದ್ಯಂತ ಪ್ರತಿಭಟನೆಗಳಾಗುತ್ತಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಇದರ ಪರಿಣಾಮ ಸರ್ಕಾರದ ಮೇಲೆ ಆಗುವುದಿಲ್ಲ ಎಂದು ಹೇಳಿದರು.
ದೇಶದಲ್ಲಿ ಅಥವಾ ಕರ್ನಾಟಕದಲ್ಲಿ ಮೋದಿ ಅಲೆ ಇಲ್ಲ
ರಾಜ್ಯದಲ್ಲಿ ಚುನಾವಣಾ ವಾತಾವರಣ ಉತ್ತಮವಾಗಿದ್ದು ದೇಶದಲ್ಲಿ ಅಥವಾ ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆ ಇಲ್ಲ. ಬಿಜೆಪಿ ಅಭ್ಯರ್ಥಿಗಳು ಮೋದಿ ಹೆಸರಿನಲ್ಲಿ ಮತ ಯಾಚಿಸುತ್ತಿದ್ದಾರೆ. ಮೋದಿಯವರ ಮೇಲೆ ಅವಲಂಬನೆಯಾಗಿದ್ದು, ಜನ ಮೋದಿ ಸರ್ಕಾರದ ವಿರುದ್ಧವಾಗಿದ್ದಾರೆ. ದೇಶದಲ್ಲಿ ಇಂಡಿಯಾ ಪರವಾದ ವಾತಾವರಣವಿದೆ ಎಂದರು.
ಬಿಜೆಪಿ ಸರ್ಕಾರ ಜನರಿಗೆ ಖಾಲಿ ಚೆಂಬು ಕೊಟ್ಟಿದೆ
ಕಾಂಗ್ರೆಸ್‌ನ ಚೆಂಬು ಜಾಹೀರಾತನ್ನು ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿರುವುದರ ಚಿಹ್ನೆ ಎಂಬ ಬಿಜೆಪಿ ಟೀಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ನಿನ್ನೆ ಕೊಟ್ಟಿರುವ ಜಾಹೀರಾತು ಈ ದೇಶದ ಜನರಿಗೆ ಬಿಜೆಪಿ ಸರ್ಕಾರ ಖಾಲಿ ಚೆಂಬು ಕೊಟ್ಟಿದೆ ಎಂದು ತಿಳಿಸಲು. ದೇಶದ ಜನರಿಗೆ 15 ಲಕ್ಷ ರೂಪಾಯಿ ಕೊಟ್ಟರೇ? 2 ಕೋಟಿ ಉದ್ಯೋಗ ಸೃಷ್ಟಿ ಆಯಿತೇ? ರೈತರ ಆದಾಯ ದುಪ್ಪಟ್ಟು ಆಯಿತೇ? ಅಚ್ಚೇ ದಿನ್ ಬಂದಿದೆಯೇ? ಅದಕ್ಕೆ ಚೆಂಬು ಕೊಟ್ಟಿದ್ದಾರೆ ಎಂದು ಜಾಹೀರಾತು ನೀಡಲಾಗಿದೆ ಎಂದು ಪ್ರತಿಕ್ರಿಯೆ ನೀಡಿದರು.
ನರೇಂದ್ರ ಮೋದಿ ರಾಜ್ಯಕ್ಕೆ ಬರುತ್ತಿದ್ದು, 11 ತಿಂಗಳಲ್ಲಿ ಬೊಕ್ಕಸ ಖಾಲಿಯಾಗಿದೆ ನಮಗೆ ಭಿಕ್ಷೆ ಕೊಡಿ ಎಂಬ ಅರ್ಥದಲ್ಲಿ ಜಾಹೀರಾತು ನೀಡಿದೆ ಎಂದು ಬಿಜೆಪಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ಕೊಟ್ಟಿರುವ ಆಶ್ವಾಸನೆಗಳಲ್ಲಿ ಒಂದನ್ನೂ ಈಡೇರಿಸಿಲ್ಲ. ದೇಶದ ಜನರಿಗೆ ಖಾಲಿ ಚೆಂಬು ನೀಡಿದ್ದಾರೆ ಎಂದು ಜಾಹೀರಾತು ನೀಡಿದ್ದೇವೆ. ಅವರು ಏನಾದರೂ ಹೇಳಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬೊಕ್ಕಸ ಖಾಲಿಯಾಗಿಲ್ಲ. ಎಲ್ಲ ಗ್ಯಾರಂಟಿಗಳನ್ನು ಜಾರಿ ಮಾಡಿ ಅಭಿವೃದ್ಧಿ ಕೆಲಸವನ್ನೂ ಮಾಡಿದ್ದೇವೆ ಎಂದರು.
ಭಯವಿರುವುದರಿಂದ ಬಿಜೆಪಿ ಜತೆಗೆ ಜೆಡಿಎಸ್ ಮೈತ್ರಿ
ಏಣಿ ಹತ್ತಿಸಿ ನಂತರ ಸರ್ವನಾಶ ಮಾಡುತ್ತಾರೆ ಎಂಬ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿ ಅವರು ಕೋಮುವಾದಿಗಳಾಗಿದ್ದು, ಜನತಾ ದಳ (ಎಸ್) ಪಕ್ಷವನ್ನು ರದ್ದು ಮಾಡಬೇಕು. ನನಗೆ ಅವರ ಬಗ್ಗೆ ಭಯವಿದ್ದರೆ ಇವರಿಬ್ಬರ ವಿರುದ್ಧ ಹೋರಾಟ ಮಾಡುತ್ತಿರಲಿಲ್ಲ. ಅವರಿಗೆ ಭಯವಿರುವುದರಿಂದ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: CET 2024 exam: ಸಿಇಟಿಯಲ್ಲಿ 50 ಔಟ್ ಆಫ್ ಸಿಲೆಬಸ್ ಪ್ರಶ್ನೆ; ಮರು ಪರೀಕ್ಷೆ ಅಥವಾ ಗ್ರೇಸ್ ಮಾರ್ಕ್ಸ್? ಇಂದು ನಿರ್ಧಾರ
ಏನಿದು ಪ್ರಕರಣ?
ಪ್ರೀತಿಸಲು ನಿರಾಕರಿಸಿದಳು (Refusal to love) ಎಂಬ ಕಾರಣಕ್ಕಾಗಿ ಪಾಗಲ್ ಪ್ರೇಮಿ ಫಯಾಜ್, ಕಾರ್ಪೋರೇಟರ್ ಮಗಳನ್ನು ಭೀಕರವಾಗಿ ಕೊಲೆ (Stab wound) ಮಾಡಿದ್ದ. ಚಾಕುವಿನಿಂದ 9 ಬಾರಿ ಇರಿದು (Murder Case) ಕೊಂದಿದ್ದಾನೆ. ಹುಬ್ಬಳ್ಳಿಯ ಬಿವಿಬಿ ಕಾಲೇಜು (Hubballi BVB College) ಆವರಣದಲ್ಲಿ ಕೊಲೆ ನಡೆದಿದೆ. ನೇಹಾ ಹಿರೇಮಠ ಕೊಲೆಯಾದ ಯುವತಿ. ನೇಹಾ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಮಗಳಾಗಿದ್ದಾಳೆ.
ಪ್ರೀತಿಸಲು ನಿರಾಕರಿಸಿದ್ದಕ್ಕೆ ಕೊಲೆ
ನೇಹಾ ಹಿರೇಮಠ ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಓದುತ್ತಿದ್ದಾಳೆ. ಈ ವೇಳೆ ಆರೋಪಿ ಪ್ರೀತಿಸುವಂತೆ ಹಿಂದೆ ಬಿದ್ದಿದ್ದ. ಆದರೆ, ನೇಹಾ ನಿರಾಕರಣೆ ಮಾಡುತ್ತಲೇ ಬಂದಿದ್ದಾಳೆ. ಇದರಿಂದ ರೊಚ್ಚಿಗೆದ್ದ ಆತ ಗುರುವಾರ ಕಾಲೇಜು ಕ್ಯಾಂಪಸ್‌ಗೆ ಬಂದಿದ್ದಾನೆ. ಪುನಃ ಆಕೆ ಬಳಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ. ಆದರೆ, ನೇಹಾ ಪ್ರೀತಿಸಲು ನಿರಾಕರಿಸಿದ್ದಾಳೆ. ಹೀಗಾಗಿ ಮೊದಲೇ ನಿರ್ಧರಿಸಿ ಬಂದಿದ್ದ ಆರೋಪಿಯು ನೇಹಾಳಿಗೆ ಕಾಲೇಜು ಕ್ಯಾಂಟೀನ್‌ನಲ್ಲಿಯೇ ಚಾಕುವಿನಿಂದ ಇರಿದಿದ್ದಾನೆ. ಯುವತಿಗೆ ಮನಬಂದಂತೆ ಚಾಕುವಿನಿಂದ ಇರಿದಿದ್ದಾನೆ. ಒಟ್ಟು ಒಂಭತ್ತು ಬಾರಿ ಚಾಕುವಿನಿಂದ ಚುಚ್ಚಿದ್ದು, ನೇಹಾಳಿಗೆ ತೀವ್ರ ರಕ್ತಸ್ರಾವವಾಗಿದೆ. ಸ್ಥಳೀಯರು ತಕ್ಷಣವೇ ಕಿಮ್ಸ್ ಆಸ್ಪತ್ರೆಗೆ ಆಕೆಯನ್ನು ರವಾನೆ ಮಾಡಿದ್ದಾರೆ. ಆದರೆ, ಅಷ್ಟರಲ್ಲಾಗಲೇ ನೇಹಾ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ.