Site icon Vistara News

PSI Scam | 18 ದಿನ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ದಿವ್ಯಾ ಹಾಗರಗಿ ಅರೆಸ್ಟ್‌: ಒಟ್ಟು 18 ಆರೋಪಿಗಳ ಬಂಧನ

ಬೆಂಗಳೂರು: ರಾಜ್ಯಾದ್ಯಂತ ಅನೇಕ ದಿನಗಳಿಂದ ಚರ್ಚೆಯಾಗುತ್ತಿರುವ ಪಿಎಸ್‌ಐ ಪರೀಕ್ಷೆ ಹರಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಕೊನೆಗೂ ಬಂಧನವಾಗಿದ್ದಾರೆ. ಸ್ಥಳೀಯ ಬಿಜೆಪಿ ಪ್ರಮುಖ ನಾಯಕಿ ಹಾಗೂ ಉದ್ಯಮಿಯಾಗಿದ್ದ ಹಾಗರಗಿ ಕಳೆದ 18 ದಿನಗಳಿಂದ ತಲೆಮರೆಸಿಕೊಂಡಿದ್ದರು. ಹಾಗರಗಿ ಮತ್ತು ಐವರನ್ನು ಮಹಾರಾಷ್ಟ್ರದ ಪುಣೆಯಿಂದ ಪೊಲೀಸರು ತಡರಾತ್ರಿ ಬಂಧಿಸಿದ್ದಾರೆ. ಈ ಮೂಲಕ ಹಗರಣದಲ್ಲಿ 17 ಜನರ ಬಂಧನವಾಗಿದೆ.

ದಿವ್ಯಾ ಜತೆಗೆ, ಪರೀಕ್ಷಾ ಮೇಲ್ವಿಚಾರಕಿ ಅರ್ಚನಾ, ಜ್ಞಾನ ಜ್ಯೋತಿ ಇಂಗ್ಲಿಷ್‌ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕ ಕಾಶೀನಾಥ, ಶಿಕ್ಷಕಿ ಸುನಂದಾ ಹಾಗೂ ಅಭ್ಯರ್ಥಿ ಶಾಂತಿಬಾಯಿ ಸಿಐಡಿ ಬಂಧನಕ್ಕೆ ಒಳಗಾಗಿದ್ದಾರೆ.

545 ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ (ಪಿಎಸ್‌ಐ) ಹುದ್ದೆಗೆ 2021ರ ಆಗಸ್ಟ್‌ 3ರಂದು ರಾಜ್ಯಾದ್ಯಂತ ಪರೀಕ್ಷೆಗಳು ನಡೆದಿದ್ದವು. 2022ರ ಜನವರಿ 19 ರಂದು ಹೊರಬಂದಿದ್ದ ತಾತ್ಕಾಲಿಕ ಆಯ್ಕೆ ಪಟ್ಟಿಯ ನಂತರ ವಿವಾದ ಭುಗಿಲೆದ್ದಿತ್ತು. ಪರೀಕ್ಷೆಯಲ್ಲಿ ಗೋಲ್‌ಮಾಲ್‌ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಈ ರೀತಿ ಅನೇಕ ಅಭ್ಯರ್ಥಿಗಳು ದೂರು ನೀಡಿದ್ದರಿಂದ ಪ್ರಕರಣದ ವಿಚಾರಣೆಯನ್ನು ಸಿಐಡಿಗೆ ಗೃಹ ಇಲಾಖೆ ವಹಿಸಿತ್ತು. ಹಗರಣಕ್ಕೆ ಉದಾಹರಣೆಯಾಗಿ ಹೇಳುವುದಾದರೆ, ವೀರೇಶ್‌ ಎಂಬ ಅಭ್ಯರ್ಥಿ ಪರೀಕ್ಷೆಯಲ್ಲಿ 21 ಪ್ರಶ್ನೆಗಳಿಗೆ ಮಾತ್ರ ಉತ್ತರ ನೀಡಿದ್ದ. ಆದರೆ ಈತನಿಗೆ ಪರೀಕ್ಷೆಯಲ್ಲಿ 121 ಅಂಕ ಲಭಿಸಿತ್ತು. ಅಂದರೆ ಈತ ಪರೀಕ್ಷೆ ಬರೆದ ನಂತರ ಈತನ ಉತ್ತರ ಪತ್ರಿಕೆಯನ್ನು ಯಾರೋ ತಿದ್ದಿ ಸರಿಯುತ್ತರ ಬರೆದಿದ್ದರು. ಈತ ಪರೀಕ್ಷೆ ಬರೆದ ಶಹಬಜಾರ್‌ ಬಿಡಿಎ ಲೇಔಟ್‌ನಲ್ಲಿರುವ ಜ್ಞಾನಜ್ಯೋತಿ ಇಂಗ್ಲಿಷ್‌ ಮಾಧ್ಯಮ ಶಾಲೆಯ ಪರೀಕ್ಷಾ ಕೊಠಡಿ ಮೇಲ್ವಿಚಾರಕಿಯೇ ಉತ್ತರ ಪತ್ರಿಕೆಯನ್ನು ತಿದ್ದಿದ್ದರು ಎನ್ನಲಾಗಿತ್ತು.

ಜ್ಞಾನಜ್ಯೋತಿ ಇಂಗ್ಲಿಷ್‌ ಮಾಧ್ಯಮ ಶಾಲೆಯು ಬಿಜೆಪಿ ಸ್ಥಳೀಯ ನಾಯಕಿ ದಿವ್ಯಾ ಹಾಗರಗಿ ಅವರ ಒಡೆತನದಲ್ಲಿದೆ. ಈ ಶಾಲೆಯಲ್ಲಿ ಪರೀಕ್ಷೆ ಬರೆದವರ ಪೈಕಿ 10 ಅಭ್ಯರ್ಥಿಗಳು ಪಿಎಸ್‌ಐ ಆಗಿ ಆಯ್ಕೆಯಾಗಿದ್ದರು. ಪರೀಕ್ಷೆ ಬರೆದ ಅಭ್ಯರ್ಥಿಗಳು ಖಾಲಿ ಬಿಟ್ಟಿರುವ ಉತ್ತರಗಳನ್ನು ತಿದ್ದುವಂತೆ ಸಿಬ್ಬಂದಿಗೆ ದಿವ್ಯಾ ಹಾಗರಗಿ ಅವರೇ ಒತ್ತಡ ಹೇರಿದ್ದರು ಎಂಬ ಆರೋಪ ಕೇಳಿಬಂದಿತ್ತು. ಜಿಲ್ಲೆಯಲ್ಲಿ ಪ್ರಭಾವಿ ರಾಜಕಾರಣೀಯೂ ಆಗಿದ್ದ ದಿವ್ಯಾ, ದಿಶಾ ಸಮಿತಿಯ ಸದಸ್ಯೆಯೂ ಆಗಿದ್ದರು. ಕಳೆದ ಫೆಬ್ರವರಿಯಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರ ಅವರು ದಿವ್ಯಾ ಅವರ ಮನೆಗೆ ಭೇಟಿ ನೀಡಿದ್ದರು.

ಪತ್ತೆ ಆಗಿದ್ದು ಹೇಗೆ?

ಅನೇಕ ದಿನಗಳಿಂದ ಹುಡುಕಾಡುತ್ತಿದ್ದರೂ ದಿವಾ ಹಾಗರಗಿ ಸಿಗದಿದ್ದದ್ದು ಸರ್ಕಾರಕ್ಕೆ ಹಾಗೂ ಪೊಲೀಸರಿಗೆ ತಲೆನೋವಾಗಿತ್ತು. ಹೋದಲ್ಲಿ ಬಂದಲ್ಲೆಲ್ಲ ಮುಖ್ಯಮಂತ್ರಿಗೂ ಇದೇ ಪ್ರಶ್ನೆಗಳು ಏಳುತ್ತಲೇ ಇದ್ದವು. ಪ್ರರಕಣದಲ್ಲಿ ಆರೋಪಿಯಾಗಿದ್ದ ಜ್ಯೋತಿ ಪಾಟೀಲ್‌ ಗುರುವಾರ ಬಂಧನಕ್ಕೊಳಗಾಗಿದ್ದರು. ಇದೀಗ ಬಂಧಿಯಾಗಿರುವ ಶಾಂತಿಬಾಯಿ ಎಂಬ ಅಭ್ಯರ್ಥಿಗೆ ಬ್ಲೂಟೂತ್‌ ಮೂಲಕ ಉತ್ತರ ಹೇಳಿಕೊಟ್ಟ ಆರೋಪ ಜ್ಯೋತಿ ಮೇಲಿತ್ತು.

ಜ್ಯೋತಿ ಪಾಟೀಲ್‌ ಮೊಬೈಲನ್ನು ವಶಕ್ಕೆ ಪಡೆದ ಪೊಲೀಸರು, ಒಳಬಂದ ಹಾಗೂ ಹೊರಹೋದ ಕರೆಗಳ ವಿವರಗಳನ್ನು ಪರಿಶೀಲಿಸಿದರು. ಇದರಲ್ಲಿ ಸಿಕ್ಕ ಸುಳಿವಿನ ಮೇರೆಗೆ ಮಹಾರಾಷ್ಟ್ರ ಪೊಲೀಸರ ನೆರವನ್ನು ಪಡೆದು ಪುಣೆಗೆ ಸಿಐಡಿ ಪೊಲೀಸರು ತಲುಪಿದ್ದಾರೆ. ಶುಕ್ರವಾರ ದಿನವಿಡೀ ಪುಣೆಯಲ್ಲಿದ್ದು ಸ್ಥಳವನ್ನು ಖಾತ್ರಿಪಡಿಸಿಕೊಳ್ಳುವುದರ ಜತೆಗೆ ಆರೋಪಿಗಳು ನಗರವನ್ನು ಬಿಟ್ಟು ತೆರಳದಂತೆ ಬಂದೋಬಸ್ತ್‌ ಮಾಡಿಕೊಂಡಿದ್ದಾರೆ. ಎಲ್ಲ ವಿಚಾರವೂ ಖಾತ್ರಿಯಾದ ನಂತರ ತಡರಾತ್ರಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ | ಖಡಕ್‌ CM ಅಂದರೆ ಏನು?: ಪ್ರತಿಪಕ್ಷಗಳಿಗೆ ಬಸವರಾಜ ಬೊಮ್ಮಾಯಿ ಪ್ರಶ್ನೆ

ಎಚ್ಚರಿಕೆ ನೀಡಿದ್ದ ಗೃಹಸಚಿವ

ಆರೋಪಿ ದಿವ್ಯಾ ಹಾಗರಗಿ ಬಂಧನವಾಗದಿರುವ ಒತ್ತಡ ಗೃಹಸಚಿವರನ್ನೂ ಕಾಡುತ್ತಿತ್ತು. ಈ ಕುರಿತು ಗುರುವಾರ ಪ್ರತಿಕ್ರಿಯೆ ನೀಡಿದ್ದ ಆರಗ ಜ್ಞಾನೇಂದ್ರ, ಈಗಾಗಲೆ ಅವರ ಮೇಲೆ ಬಂಧನ ವಾರಂಟ್‌ ಇದೆ. ಅವರು ದೇಶಬಿಟ್ಟು ಹೋಗದಂತೆ ತಡೆಯಲು ಪಾಸ್‌ಪೋರ್ಟ್‌ ಮುಟ್ಟುಗೋಲಿನಂತಹ ಕ್ರಮಕ್ಕೂ ಮುಂದಾಗಿದ್ದೇವೆ. ಗೌರವದಿಂದ ಸರೆಂಡರ್‌ ಆಗಬೇಕು. ಇಲ್ಲದಿದ್ದರೆ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.

ಇದನ್ನೂ ಓದಿ | ಏರ್‌ ಏಷ್ಯಾವನ್ನೂ ಖರೀದಿಸಲು ಮುಂದಾದ TATA: ಪೂರ್ಣ ಮಾಲೀಕತ್ವ ಕುರಿತು ಪ್ರಸ್ತಾಪ

Exit mobile version