Site icon Vistara News

Sedition Case: ಪಾಕ್‌ ಪರ ಘೋಷಣೆ ವಿವಾದ; FSL ವರದಿಯೇ ಅಂತಿಮ, ಬಳಿಕವೇ ಕ್ರಮೆವೆಂದ ಪರಮೇಶ್ವರ್‌

Sedition Case Pro Pakistan sloganeering controversy FSL report will be final Parameshwara

ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ (Rajyasabha Election) ಜಯ ಸಾಧಿಸಿದ ಮೂವರು ಕಾಂಗ್ರೆಸ್‌ ಅಭ್ಯರ್ಥಿಗಳ ಸಂಭ್ರಮಾಚರಣೆ ವೇಳೆ ವಿಧಾನಸೌಧದ ಆವರಣದಲ್ಲಿ ವಿಜೇತ ಅಭ್ಯರ್ಥಿ ನಾಸಿರ್‌ ಹುಸೇನ್‌ (Nasir Husein) ಅವರ ಅಭಿಮಾನಿಗಳು ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ (Sedition Case) ಕೂಗಿದ್ದಾರೆ ಎಂಬ ಆರೋಪ ಸಾಬೀತಾಗಬೇಕು. ಇದಕ್ಕಾಗಿ ವಿಡಿಯೊವನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. ಅಲ್ಲಿಂದ ವರದಿ ಬಂದ ಬಳಿಕ ಕ್ರಮೆವನ್ನು ತೆಗೆದುಕೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ತಿಳಿಸಿದ್ದಾರೆ.

ಈ ಬಗ್ಗೆ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಾದ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್‌, ವಿಧಾನಸೌಧದ ಆವರಣದಲ್ಲಿ ನಿನ್ನೆ ನಡೆದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ‌ ಕೈಗೊಂಡಿದ್ದಾರೆ. ಸತ್ಯಾತ್ಯತೆ ತಿಳಿಯಲು ಎಫ್‌ಎಸ್‌ಎಲ್‌ನವರು ವೀಡಿಯೋಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ವೈಜ್ಞಾನಿಕವಾಗಿ ಖಚಿತವಾದರೆ, ತಪ್ಪಿತಸ್ಥರ ವಿರುದ್ಧ ಕಾನೂನು ರೀತ್ಯ ಕ್ರಮ‌ ಕೈಗೊಳ್ಳಲಾಗುವುದು ಎಂದು ಹೇಳಿದರು.

ಎಫ್‌ಎಸ್‌ಎಲ್‌ಗೆ ಮೂರು ವಿಡಿಯೊ ಸಲ್ಲಿಕೆ

ಈಗಾಗಲೇ ವಿಧಾನಸೌಧದಲ್ಲಿ ಪಾಕ್‌ ಪರ ಘೋಷಣೆ ಕೂಗಲಾಗಿದೆ ಎನ್ನಲಾದ ವಿಡಿಯೊವನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. ಈ ಸಂಬಂಧ ಒಟ್ಟು ಮೂರು ವಿಡಿಯೊವನ್ನು ಕಳುಹಿಸಲಾಗಿದೆ ಎಂದು ಹೇಳಲಾಗಿದೆ.

ಕೂಗಿದ್ದು ಸಾಬೀತಾದರೆ ಕಠಿಣ ಕ್ರಮವೆಂದ ಸಿಎಂ ಸಿದ್ದರಾಮಯ್ಯ

ಪಾಕಿಸ್ತಾನ್‌ ಜಿಂದಾಬಾದ್‌ ಎಂಬ ಘೋಷಣೆ ಕೂಗಿದ್ದಾರೋ ಇಲ್ಲವೋ ಎಂಬುದನ್ನು ಮೊದಲು ತಿಳಿದುಕೊಳ್ಳುತ್ತೇವೆ. ಒಂದು ವೇಳೆ ಘೋಷಣೆ ಕೂಗಿದ್ದರೆ ಗಂಭೀರ ಕ್ರಮವನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಈ ಬಗ್ಗೆ ವಿಧಾನಸೌಧದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಈಗಾಗಲೇ ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಘೋಷಣೆ ಕೂಗಲಾಗಿದೆ ಎನ್ನಲಾದ ವಿಡಿಯೊವನ್ನು ಈಗಾಗಲೇ ಎಫ್‌ಎಸ್ಎಲ್‌ಗೆ ಕಳುಹಿಸಲಾಗಿದೆ. ಪಾಕಿಸ್ತಾನ ಅಂತ ಕೂಗಿದ್ದಾನಾ? ಇಲ್ಲವಾ? ಎಂದು ವರದಿ ಕೊಡಿ ಎಂದು ಹೇಳಿದ್ದೇವೆ. ಒಂದು ವೇಳೆ ಕೂಗಿದ್ದರೆ, ಯಾರೇ ಆದರೂ ಅವರ ವಿರುದ್ಧ ಕ್ರಮವನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಯಾರೇ ಆದರೂ ರಾಷ್ಟ್ರ ವಿರೋಧ ಕೆಲಸ ಮಾಡಿದರೆ ಕ್ರಮ ತೆಗೆದುಕೊಳ್ಳುತ್ತೇವೆ. ಕೂಗುವವರಿಗೆ ಇಲ್ಲಿ ಆದರೇನು, ಎಲ್ಲಿ ಆದರೇನು? ಇವತ್ತು ವರದಿ ಬಂದ ಮೇಲೆ ಗಂಭೀರ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಸಚಿವ ಪ್ರಿಯಾಂಕ್‌ ಖರ್ಗೆ ಅವರ ವಾದವೇನು?

ಈ ಬಗ್ಗೆ ಹಿರಿಯ ಕಾಂಗ್ರೆಸ್‌ ನಾಯಕ, ರಾಜ್ಯದ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಟ್ವೀಟ್‌ ಪೋಸ್ಟ್‌ ಮಾಡಿ ಅಲ್ಲಿ ತಮ್ಮ ವಾದದ ವಿಚಾರವನ್ನು ಮುಂದಿಟ್ಟಿದ್ದಾರೆ. ಇದೊಂದು ವ್ಯವಸ್ಥಿತವಾದ ಷಡ್ಯಂತ್ರ ಎಂದಿದ್ದಾರೆ. ಮಾಧ್ಯಮಗಳಿಗೂ ಹಲವು ಪ್ರಶ್ನೆ ಕೇಳಿದ್ದಾರೆ. ಅಂತಿಮವಾಗಿ ಅಲ್ಲಿ ಏನೂ ನಡೆದಿಲ್ಲ. ಏನೋ ನಡೆದಿದೆ ಎಂಬಂತೆ ಬಿಂಬಿಸಲಾಗಿದೆ ಎಂದು ಅವರು ಹೇಳಿದ್ದಾರೆ.

  1. ದೇಶದಲ್ಲಿ ಬಿಜೆಪಿ ಸವಾಲುಗಳನ್ನು ಎದುರಿಸುವ ಸಂದರ್ಭ ಬಂದಾಗಲೆಲ್ಲ ಈ “ಪಾಕಿಸ್ತಾನ್ ಜಿಂದಾಬಾದ್” ಎನ್ನುವ ಶಬ್ದ ಸದ್ದು ಮಾಡುತ್ತದೆ!
  2. ಮಾಧ್ಯಮ ಸ್ನೇಹಿತರಲ್ಲಿ ಕೇಳಬೇಕು ಎನಿಸುವ ಒಂದಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ,
    -ವಿಜಯೋತ್ಸವ ಆಚರಣೆಯ ವೇಳೆ ಅಲ್ಲಿ ಉಪಸ್ಥಿತರಿದ್ದ ಒಂದಷ್ಟು ಮಾಧ್ಯಮ ಸ್ನೇಹಿತರು ಅಲ್ಲಿ “ನಾಸಿರ್ ಸಾಬ್ ಜಿಂದಾಬಾದ್” ಎಂದು ಕೂಗಿರುವುದಾಗಿ ಹೇಳಿದ್ದಾರೆ.
    -ಅಕಸ್ಮಾತ್ ಅಲ್ಲಿ “ಪಾಕಿಸ್ತಾನ್” ಎಂದೇ ಕೂಗಿದ್ದರೆ ಎಲ್ಲರಿಗೂ ಒಂದೇ ರೀತಿ ಕೇಳಿಸಿರಬೇಕಲ್ಲವೇ?
    – ಅಕಸ್ಮಾತ್ ಆತ ನಿಜಕ್ಕೂ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದರೆ ಸಹಜವಾಗಿ ಪತ್ರಕರ್ತರ ಪ್ರಜ್ಞೆ ಜಾಗೃತವಾಗಿ ಆತನತ್ತ ಗಮನ ಹರಿಸುತ್ತಿದ್ದರು, ಆತನತ್ತ ಕ್ಯಾಮರಾ ತಿರುಗಿಸುತ್ತಿದ್ದರು, ಆತನ ಮೇಲೆ ಮುಗಿಬೀಳುತ್ತಿದ್ದರು, ಆದರೆ ಇಲ್ಲಿ ಪತ್ರಕರ್ತರು ಆತನತ್ತ ಕಿಂಚಿತ್ತೂ ಗಮನಿಸುವುದಿಲ್ಲ,
    -ಆತ ಹಾಗೆ ಕೂಗಿದ್ದೇ ಆಗಿದ್ದರೆ ಅಲ್ಲಿ ನೆರೆದಿದ್ದವರು ಖಂಡಿತಾ ಸುಮ್ಮನಿರುತ್ತಿರಲಿಲ್ಲ, ಕೂಡಲೇ ಆ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸುತ್ತಿದ್ದರು.
    – ಪತ್ರಕರ್ತರೂ ಸೇರಿದಂತೆ ಅಲ್ಲಿ ನೆರೆದಿದ್ದವರ ಮ್ಯಾನರಿಸಂನಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ,
    – ಅಕಸ್ಮಾತ್ ಆ ವ್ಯಕ್ತಿ ಹಾಗೆ ಘೋಷಣೆ ಕೂಗಿದ್ದಿದ್ದರೆ ಅಲ್ಲಿನ ಪತ್ರಕರ್ತರ “ದೇಶಭಕ್ತಿ“ ಜಾಗೃತವಾಗದೆ ಸಹಜವಾಗಿದ್ದಿದ್ದೇಕೆ? ಏನೂ ನಡೆದೇ ಇಲ್ಲ ಎನ್ನುವಂತೆ ನಡೆದುಕೊಂಡಿದ್ದೇಕೆ? ಪತ್ರಕರ್ತ ಸ್ನೇಹಿತರೇ ಉತ್ತರಿಸಬೇಕು.
    ಮಾಧ್ಯಮ ಜಾಗೃತವಾಗಲಿ. ಜಾಗೃತ ಮಾಧ್ಯಮ ಜನಕಲ್ಯಾಣಕ್ಕೆ ಕಾರಣವಾಗಲಿ. ಈ ರೀತಿ ಭಜನೆಗಲ್ಲಾ.- ಎಂದಿದ್ದಾರೆ ಪ್ರಿಯಾಂಕ್‌ ಖರ್ಗೆ.
  3. ಇದರ ಜತೆಗೆ ಪ್ರಿಯಾಂಕ್‌ ಖರ್ಗೆ ಅವರು ಕೆಲವೊಂದು ಮಾಧ್ಯಮದ ತುಣುಕುಗಳನ್ನು ಟ್ಯಾಗ್‌ ಮಾಡಿದ್ದಾರೆ.

ಇದನ್ನೂ ಓದಿ : Sedition Case: ಪಾಕ್‌ ಪರ ಘೋಷಣೆಗೆ ಆಕ್ರೋಶ; ರಾಜ್ಯದ ವಿವಿಧೆಡೆ ಬಿಜೆಪಿ, ಹಿಂದು ಪರ ಕಾರ್ಯಕರ್ತರ ಪ್ರತಿಭಟನೆ

sedition Case : ಮೊಹಮ್ಮದ್‌ ಜುಬೇರ್‌ ಫ್ಯಾಕ್ಟ್‌ ಚೆಕ್‌ ಹೇಳೋದೇನು?

ಈ ನಡುವೆ, ವಿವಾದಿತ ಫ್ಯಾಕ್ಟ್‌ ಚೆಕರ್‌ ಮೊಹಮ್ಮದ್‌ ಜುಬೇರ್‌ ವಿಡಿಯೊದಲ್ಲಿರುವುದು ಪಾಕಿಸ್ತಾನ್‌ ಜಿಂದಾಬಾದ್‌ ಅಲ್ಲ, ನಾಸಿರ್‌ ಜಿಂದಾಬಾದ್‌ ಎಂದು- ಎಂದಿದ್ದಾರೆ. ಕಾಂಗ್ರೆಸ್‌ ನಾಯಕರು ಮತ್ತು ಬೆಂಬಲಿಗರು ತಮ್ಮ ವಾದಕ್ಕೆ ಪೂರಕವಾಗಿ ಈ ಟ್ವೀಟನ್ನು ಬಳಸಿಕೊಳ್ಳುತ್ತಿದ್ದಾರೆ.

ಈ ನಡುವೆ ರಾಜ್ಯಸಭಾ ಚುನಾವಣೆಯಲ್ಲಿ ಗೆದ್ದಿರುವ ನಾಸಿರ್‌ ಹುಸೇನ್‌ ಅವರು ಕೂಡಾ ಸ್ಪಷ್ಟನೆ ನೀಡಿದ್ದು, ಅಲ್ಲಿ ಯಾರೂ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಕೂಗಿಲ್ಲ. ಒಂದು ವೇಳೆ ಕೂಗಿದ್ದೇ ಹೌದಾದರೆ ತನಿಖೆ ನಡೆಸಿ ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದಿದ್ದಾರೆ.

Exit mobile version