ಕೊಲಂಬೊ: ತೀವ್ರ ಆರ್ಥಿಕ ಸಂಕಷ್ಟ ಮತ್ತು ಅರಾಜಕತೆಯಿಂದ ತತ್ತರಿಸುತ್ತಿರುವ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಜನಾಕ್ರೋಶ ಭುಗಿಲೆದ್ದಿದೆ. ಶನಿವಾರ ಕೊಲಂಬೋದಲ್ಲಿ ಅಧ್ಯಕ್ಷ ಗೋತಬಯ ರಾಜಪಕ್ಸ ಅವರ ರಾಜೀನಾಮೆ ಒತ್ತಾಯಿಸಿ ಬೃಹತ್ ಪ್ರತಿಭಟನೆ ನಡೆದಿದೆ. ಈ ವೇಳೆ ಪ್ರತಿಭಟನಾಕಾರರು ರಾಷ್ಟ್ರಪತಿಗಳ ನಿವಾಸವನ್ನು ಸುತ್ತುವರೆದು ಮುತ್ತಿಗೆ ಹಾಕಲು ಸಜ್ಜಾಗುತ್ತಿದ್ದಂತೆಯೇ ರಾಜಪಕ್ಸ ಅವರು ಅಲ್ಲಿಂದ ಪರಾರಿಯಾಗಿದ್ದಾರೆ ಎಂಬ ಸುದ್ದಿ ಹರಡಿದೆ.
ಸಾಲದಲ್ಲಿ ಮುಳುಗಿರುವ, ವಿದೇಶಿ ವಿನಿಮಯ ಸಂಗ್ರಹವನ್ನೆಲ್ಲ ಮುಗಿಸಿಕೊಂಡಿರುವ ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಜನ ಜೀವನಾವಶ್ಯಕ ವಸ್ತುಗಳಿಗಾಗಿ ಪರದಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶವನ್ನು ಆಳುತ್ತಿರುವ ರಾಜಪಕ್ಸ ಕುಟುಂಬದ ಮೇಲೆ ಜನತೆಯ ಆಕ್ರೋಶ ಭುಗಿಲೆದ್ದಿದೆ.
ಶ್ರೀಲಂಕಾ ೨.೨ ಕೋಟಿ ಜನರು ಭಾರಿ ಸಂಕಷ್ಟದಲ್ಲಿದ್ದು, ಇಂಧನ, ಆಹಾರ, ಔಷಧಗಳು ಕೂಡಾ ಸಿಗದೆ ಪರದಾಡುತ್ತಿದ್ದಾರೆ. ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಅಧ್ಯಕ್ಷ ಗೋತಬಯ ರಾಜಪಕ್ಸ ಅವರು ವಿಫಲರಾಗಿದ್ದಾರೆ ಎಂದು ಆರೋಪಿಸಿ ಜನ ಸಿಟ್ಟಿಗೆದ್ದಿದ್ದಾರೆ. ಶುಕ್ರವಾರದಿಂದ ಕೊಲಂಬೊದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಯುತ್ತಿದೆ. ಈ ಪ್ರತಿಭಟನೆ ಶನಿವಾರ ತೀವ್ರ ಸ್ವರೂಪ ಪಡೆಯಲಿದೆ ಎಂದು ವರದಿಗಳು ಹೇಳಿದ್ದವು.
ಶುಕ್ರವಾರ ರಾತ್ರಿಯೇ ಪಲಾಯನ
ಶನಿವಾರ ಪ್ರತಿಭಟನಾಕಾರರು ರಾಷ್ಟ್ರಪತಿ ಭವನನಕ್ಕೆ ಮುತ್ತಿಗೆ ಹಾಕಲಿದ್ದಾರೆ ಎಂಬ ವರದಿಗಳಿದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳು ಶುಕ್ರವಾರವೇ ರಾಜಪಕ್ಸ ಅವರನ್ನು ಬೇರೆಡೆಗೆ ಸ್ಥಳಾಂತರಗೊಳ್ಳಲು ಸೂಚಿಸಿದ್ದರು. ಇದರಂತೆ, ರಾಜಪಕ್ಸ ಅವರು ಶುಕ್ರವಾರ ರಾತ್ರಿಯೇ ಅಲ್ಲಿಂದ ಪಲಾಯನ ಮಾಡಿದ್ದಾರೆ ಎನ್ನಲಾಗಿದೆ.
ಅಧ್ಯಕ್ಷರ ನಿವಾಸಕ್ಕೆ ನುಗ್ಗಿದ ಜನರು
ಶನಿವಾರ ಪ್ರತಿಭಟನಾಕಾರರು ಶ್ರೀಲಂಕಾದ ಧ್ವಜಗಳನ್ನು ಹಿಡಿದು ರಾಷ್ಟ್ರಪತಿ ಭವನದತ್ತ ಜಾಥಾ ನಡೆಸಿದರು. ಗೋತಾ ಗೋ ಹೋಮ್- ಎಂಬ ಘೋಷಣೆಗಳೊಂದಿಗೆ ಜನಸಾಗರವೇ ಮುನ್ನಡೆದಿತ್ತು. ಈ ವೇಳೆ ಪೊಲೀಸರು ಅವರನ್ನು ತಡೆಯಲು ಪ್ರಯತ್ನಿಸಿದರು. ಆದರೆ, ಪ್ರತಿಭಟನಾಕಾರರು ತಡೆಗೇಟುಗಳನ್ನು ಮುರಿದು ಮುನ್ನುಗ್ಗಿದರು. ಯಾವ ಅಸ್ತ್ರವಾಯು, ಜಲಫಿರಂಗಿಗಳೂ ಅವರನ್ನು ತಡೆಯಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ| Explainer: ಶ್ರೀಲಂಕಾದಲ್ಲಿ ಮತ್ತೆ ಎಮರ್ಜೆನ್ಸಿ, ಹಸಿವು, ಪ್ರತಿಭಟನೆ, ಹಾಹಾಕಾರ