Site icon Vistara News

Sumalatha Ambarish : ಪ್ರತಾಪ್‌ ಸಿಂಹಗೆ ಟಿಕೆಟ್‌ ಮಿಸ್‌ ಆಗಿದ್ದು ಈಗಲ್ಲ, 3 ತಿಂಗಳ ಹಿಂದೆಯೇ ಡಿಸೈಡ್‌ ಆಗಿತ್ತು!

Sumalatha Ambarish Pratapsimha

ಬೆಂಗಳೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ (Parliament Election) ಹಾಲಿ ಸಂಸದ ಪ್ರತಾಪ್‌ ಸಿಂಹ (MP Pratap Simha) ಅವರಿಗೆ ಈ ಬಾರಿ ಟಿಕೆಟ್‌ ಮಿಸ್‌ (Ticket Miss) ಆಗೋದು ಗ್ಯಾರಂಟಿ ಆಗಿದೆ. ಆದರೆ, ಇದು ಈಗ ನಿರ್ಧಾರವಾಗಿದ್ದಲ್ಲ. ಮೂರು ತಿಂಗಳ ಮೊದಲೇ ಡಿಸೈಡ್‌ ಆಗಿತ್ತು ಎಂಬ ಮಹತ್ವದ ಅಂಶ ಬೆಳಕಿಗೆ ಬಂದಿದೆ. ಅಚ್ಚರಿ ಎಂದರೆ ಇದರ ಬಗ್ಗೆ ಮೊದಲ ಕ್ಲೂ ಕೊಟ್ಟಿರುವುದು ಮಂಡ್ಯದ ಪಕ್ಷೇತರ ಸಂಸದೆ ಮತ್ತು ಈಗ ಬಿಜೆಪಿ ಟಿಕೆಟ್‌ಗಾಗಿ ಶತಾಯ ಗತಾಯ ಪ್ರಯತ್ನ ಮಾಡುತ್ತಿರುವ ಸುಮಲತಾ ಅಂಬರೀಷ್‌ (Sumalatha Ambarish) ಅವರು!

ವಿಸ್ತಾರ ನ್ಯೂಸ್‌ ಅಸಿಸ್ಟೆಂಟ್‌ ಎಡಿಟರ್‌ ಚಂದನ್‌ ಶರ್ಮಾ (Chandan Sharma) ಅವರು ಸಂಸದರಾದ ಸುಮಲತಾ ಅಂಬರೀಷ್‌ ಅವರ ಜತೆ ನಡೆಸಿದ ಎಕ್ಸ್‌ಕ್ಲೂಸಿವ್ ಮಾತುಕತೆಯಲ್ಲಿ ಈ ಅಂಶ ಬಯಲಾಗಿದೆ.

ಮೂರು ತಿಂಗಳ ಮೊದಲೇ ಸುಮಲತಾಗೆ ಮೈಸೂರು ಟಿಕೆಟ್‌ ಆಫರ್‌ ಮಾಡಲಾಗಿತ್ತು!

ಸುಮಲತಾ ಅವರು ಮಂಡ್ಯದ ಟಿಕೆಟ್‌ಗಾಗಿ ತೀವ್ರ ಹೋರಾಟ ನಡೆಸುತ್ತಿದ್ದಾರೆ. ಆದರೆ, ಬಿಜೆಪಿ ಹೈಕಮಾಂಡ್‌ ಮೂರು ತಿಂಗಳ ಹಿಂದೆ ಅವರ ಮುಂದೆ ಮಂಡ್ಯ ಹೊರತಾದ ಇನ್ನೂ ಎರಡು ಆಯ್ಕೆಗಳನ್ನು ಇಟ್ಟಿತ್ತು. ʻʻನನ್ನ ಮುಂದೆ ಬಿಜೆಪಿ ಹೈಕಮಾಂಡ್‌ ಎರಡು ಆಯ್ಕೆಗಳನ್ನು ಇಟ್ಟಿತ್ತು. ಒಂದು ಮೈಸೂರು ಮತ್ತೊಂದು ಬೆಂಗಳೂರು ಉತ್ತರ. ಆದರೆ, ನಾನು ಇವೆರಡೂ ನನಗೆ ಬೇಡ ಎಂದು ಹೇಳಿದೆ. ನಾನು ಮಂಡ್ಯದಲ್ಲೇ ಹೋರಾಟ ನಡೆಸುತ್ತೇನೆ ಎಂದು ಸ್ಪಷ್ಟವಾಗಿ ಹೇಳಿದೆʼʼ ಎಂದು ಮೂರು ತಿಂಗಳ ಹಿಂದೆ ನಡೆದ ಚರ್ಚೆಯ ಬಗ್ಗೆ ವಿವರ ನೀಡಿದ್ದಾರೆ.

ಅಂದರೆ, ಪ್ರತಾಪ್‌ ಸಿಂಹ ಅವರಿಗೆ ಟಿಕೆಟ್‌ ಕೈ ತಪ್ಪುತ್ತಿರುವುದು ಆಕಸ್ಮಿಕವಲ್ಲ. ಮೂರು ತಿಂಗಳ ಹಿಂದೆಯೇ ಹೈಕಮಾಂಡ್ ಮೈಸೂರಿಗೆ ಬೇರೊಬ್ಬರನ್ನು ತರುವ ಬಗ್ಗೆ ಯೋಚನೆ ಮಾಡಿತ್ತು ಎನ್ನುವುದು ಸುಮಲತಾ ಅವರ ಮಾತಿನಿಂದ ಸ್ಪಷ್ಟವಾಗುತ್ತಿದೆ. ಸುಮಲತಾ ಅವರಿಗೆ ಮೊದಲ ಆಫರ್‌ ಆಗಿಯೇ ಮೈಸೂರನ್ನು ನೀಡಲಾಗಿತ್ತು. ಬೆಂಗಳೂರು ಉತ್ತರ ಎರಡನೇ ಆಫರ್‌ ಆಗಿತ್ತು!

ಇದನ್ನೂ ಓದಿ : MP Pratapsimha : ಯದುವೀರ್‌ಗೇ ಟಿಕೆಟ್‌ ಪಕ್ಕಾ; ಉಗ್ರಪ್ರತಾಪಿಯಂತೆ ಸಿಡಿದೆದ್ದ ಪ್ರತಾಪ್‌ಸಿಂಹ

ಹಾಗಿದ್ದರೆ ಹೈಕಮಾಂಡ್‌ ಪ್ರತಾಪ್‌ ಸಿಂಹ ಅವರಿಗೆ ಟಿಕೆಟ್‌ ನೀಡದಿರಲು ಹಿಂದೆಯೇ ನಿರ್ಧಾರ ಮಾಡಿತ್ತು. ಮತ್ತು ಮೈಸೂರಿಗೆ ಸೂಕ್ತವಾದ ಅಭ್ಯರ್ಥಿಯ ಹುಡುಕಾಟದಲ್ಲಿ ತೊಡಗಿತ್ತು. ಮೊದಲು ಸುಮಲತಾ ಅವರನ್ನು ಕೇಳಿ ಬಳಿಕ ಬೇರೆ ಆಯ್ಕೆಗಳನ್ನು ನೋಡಿ ಇದೀಗ ಮೈಸೂರಿನ ಯದುವೀರ್‌ ಒಡೆಯರ್‌ ಅವರನ್ನು ಬಹುತೇಕ ಫೈನಲ್‌ ಮಾಡಿಧೆ ಎನ್ನುವುದು ಸ್ಪಷ್ಟ.

ಮಂಡ್ಯದ ಟಿಕೆಟ್‌ ಬಗ್ಗೆ ಖುದ್ದು ಪ್ರಧಾನಿ ಮೋದಿಯೇ ಭರವಸೆ ನೀಡಿದ್ದರೇ?

ವಿಸ್ತಾರ ನ್ಯೂಸ್‌ ಜತೆಗಿನ ಮಾತುಕತೆಯಲ್ಲಿ ಇನ್ನೊಂದು ಮಹತ್ವದ ಅಂಶವನ್ನು ಅವರು ಬಿಚ್ಚಿಟ್ಟಿದ್ದಾರೆ. ಅದೇನೆಂದರೆ, ಮಂಡ್ಯ ಕ್ಷೇತ್ರದ ಟಿಕೆಟ್‌ ಬಗ್ಗೆ ಖುದ್ದು ಪ್ರಧಾನಿ ಮೋದಿಯೇ ಭರವಸೆ ನೀಡಿದ್ದಾರೆ ಎನ್ನುವುದು.

ʻʻನಾನು ಟಿಕೆಟ್‌ ಬಗೆಗಿನ ಮಾತುಕತೆಗಾಗಿ ನೇರವಾಗಿ ಪ್ರಧಾನಿ ಅವರನ್ನೇ ಭೇಟಿಯಾಗಿದ್ದೆ. ಆಗ ಮೋದಿಯವರು ನನ್ನನ್ನು ನೋಡಿದ ಕೂಡಲೇ ನಾನು ಆಗಲೇ ಅಮಿತ್‌ ಶಾ ಅವರ ಜತೆ ಮಾತನಾಡಿದ್ದೇನೆ. ನಿಮಗೆ ಟಿಕೆಟ್‌ ಪಕ್ಕಾ ಎಂದು ಭರವಸೆ ನೀಡಿದ್ದರು. ಆ ಭರವಸೆಯನ್ನು ಈಗಲೂ ನಂಬಿದ್ದೇನೆ. ಹೈಕಮಾಂಡ್‌ ಮೇಲೆ ನನಗೆ ನಂಬಿಕೆ ಇದೆ. ನನಗೆ ಟಿಕೆಟ್‌ ದೊರೆಯುತ್ತದೆʼʼ ಎಂದು ಹೇಳಿದರು ಸುಮಲತಾ.

ಆದರೆ, ರಾಜ್ಯದಲ್ಲೂ ಎನ್‌ಡಿಎ ಮೈತ್ರಿಕೂಟವನ್ನು ರಚಿಸಿಕೊಂಡಿರುವ ಬಿಜೆಪಿ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಬಹುದು ಎಂಬ ಮಾತುಗಳು ಜೋರಾಗಿವೆ. ಹೀಗಾಗಿ ಸುಮಲತಾ ಅವರ ನಂಬಿಕೆ ನಿಜವಾಗುತ್ತಾ ಎನ್ನುವ ಕುತೂಹಲವೂ ಇದೆ.

Exit mobile version