Site icon Vistara News

Karnataka Election 2023 | ರಾಜ್ಯದಲ್ಲಿ ಎಸ್‌ಸಿ- ಎಸ್‌ಟಿ ಮತಗಳನ್ನು ಸೆಳೆಯಲು ಮೂರೂ ಪಕ್ಷಗಳ ಕಸರತ್ತು

sc st votes karnataka election

ಬೆಂಗಳೂರು: 2023ರ ವಿಧಾನಸಭೆ ಚುನಾವಣೆಗೆ ಸಂಬಂಧಿಸಿ ಮೂರೂ ಪಕ್ಷಗಳ ಕಣ್ಣು ಇದೀಗ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮತಗಳ ಮೇಲೆ ಬಿದ್ದಿವೆ. ಸಮುದಾಯಗಳನ್ನು ಸೆಳೆಯಲು ಮೂರೂ ಪಕ್ಷಗಳ ನಾಯಕರು ವಿಭಿನ್ನ ತಂತ್ರಗಳನ್ನು ರೂಪಿಸುತ್ತಿದ್ದಾರೆ.

ಲಿಂಗಾಯತ ಸಮುದಾಯದ ಬಹುತೇಕ ಮತಗಳು ಬಿಜೆಪಿ, ಒಕ್ಕಲಿಗ ಸಮುದಾಯದ ಶೇಕಡಾ 70 ಮತಗಳು ಜೆಡಿಎಸ್, ಮುಸ್ಲಿಮರ 70% ಮತ್ತು ಕುರುಬ ಸಮುದಾಯದ 60%ರಷ್ಟು ಮತಗಳು ಕಾಂಗ್ರೆಸ್ ಪರವಾಗಿವೆ ಎಂದು ಲೆಕ್ಕಾಚಾರ ಹಾಕಲಾಗಿದೆ. ಹೀಗಾಗಿ 224 ವಿಧಾನಸಭಾ ಕ್ಷೇತ್ರಗಳಲ್ಲೂ ಎಸ್ಸಿ ಎಸ್ಟಿ ಮತಗಳು ನಿರ್ಣಾಯಕ ಆಗಿವೆ.

ಎಸ್ಟಿ ಮತಗಳು ಪ್ರಬಲವಾಗಿರುವ ಬಳ್ಳಾರಿಯಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶ ಮಾಡಿದೆ. ಕಾಂಗ್ರೆಸ್ ಸಮಾವೇಶ ಮಾಡಿದ್ದ ಸ್ಥಳದಲ್ಲಿಯೇ ಬಿಜೆಪಿಯೂ ಬೃಹತ್ ಸಮಾವೇಶ ಮಾಡಿದೆ. ಈಗ ಮತ್ತೊಂದು ಬೃಹತ್‌ ಸಮಾವೇಶಕ್ಕೆ ಬಿಜೆಪಿ ಸಿದ್ಧತೆ ನಡೆಸುತ್ತಿದೆ. ಮೈಸೂರಿನಲ್ಲಿ ಎಸ್ಟಿ ಸಮುದಾಯ ಸೆಳೆಯಲು ಡಿಸೆಂಬರ್ ಎರಡನೇ ವಾರದಲ್ಲಿ ಬೃಹತ್ ಸಮಾವೇಶ ಮಾಡಲು ಬಿಜೆಪಿ ಯೋಜನೆ ಮಾಡುತ್ತಿದೆ. ಸುಮಾರು ಹತ್ತು ಲಕ್ಷ ಜನ ಸೇರಿಸುವ ಲೆಕ್ಕಾಚಾರದಲ್ಲಿ ಬಿಜೆಪಿಯಲ್ಲಿದೆ. ಬಿಜೆಪಿ ವರಿಷ್ಠರನ್ನು ಕರೆಸಿ ಕಾರ್ಯಕ್ರಮ ಯಶಸ್ವಿ ಮಾಡಲು ಪ್ಲಾನ್ ಮಾಡಿಕೊಂಡಿದೆ. ಕೆಂಪೇಗೌಡ ಪ್ರತಿಮೆ ಅನಾವರಣಕ್ಕೆ ನರೇಂದ್ರ ಮೋದಿ, ಎಸ್ಟಿ ಸಮಾವೇಶಕ್ಕೆ ಜೆಪಿ ನಡ್ಡಾರನ್ನು ಕರೆಸಿ ಯಶಸ್ವಿ ಮಾಡಿದ್ದ ಬಿಜೆಪಿ, ಮೈಸೂರು ಎಸ್ಸಿ ಸಮಾವೇಶಕ್ಕೆ ಅಮಿತ್ ಶಾ ಅವರನ್ನು ಕರೆಸುವ ಬಗ್ಗೆ ಚರ್ಚೆ ನಡೆಸಿದೆ.

ಬಿಜೆಪಿ ಮಾಡುತ್ತಿರುವ ಎಸ್ಸಿ, ಎಸ್ಟಿ ಸಮಾವೇಶಕ್ಕೆ ತಿರುಗೇಟು ಕೊಡಲು ಕಾಂಗ್ರೆಸ್ ಯೋಜಿಸಿದೆ. ಚಿತ್ರದುರ್ಗದಲ್ಲಿ ಎಸ್‌ಸಿ, ಎಸ್‌ಟಿ ಬೃಹತ್ ಸಮಾವೇಶ ಮಾಡಲು ಕಾಂಗ್ರೆಸ್ ತಯಾರಿ ಮಾಡಿಕೊಳ್ಳುತ್ತಿದೆ. ಇದೂ ಡಿಸೆಂಬರ್ ತಿಂಗಳಲ್ಲಿ ನಡೆಯಲಿದೆ. ಆ ಮೂಲಕ ಸಮುದಾಯಗಳ ಮತಗಳ ಕ್ರೋಡೀಕರಣಕ್ಕೆ ಕಾಂಗ್ರೆಸ್‌ ಮುಂದಾಗಿದೆ.

ಇತ್ತ ಜೆಡಿಎಸ್ ವರಿಷ್ಠ ಕುಮಾರಸ್ವಾಮಿ ಅವರು ಸಹ, ಜೆಡಿಎಸ್‌ ಗೆದ್ದರೆ ಡಿಸಿಎಂ ಪೋಸ್ಟ್ ಕೊಡುತ್ತೇವೆ ಎಂದು ವಾಗ್ದಾನ ಮಾಡುವ ಮೂಲಕ ಸಮುದಾಯಗಳನ್ನು ಒಲಿಸಲು ಮುಂದಾಗಿದ್ದಾರೆ.

ಇದನ್ನೂ ಓದಿ | Karnataka Election 2023 | ಸುಮಲತಾ ಬೆಂಬಲಿಗ 28ರಂದು ಬಿಜೆಪಿಗೆ; ಅಂಬರೀಷ್‌ ಪತ್ನಿಯ ಬಿಜೆಪಿ ಸೇರ್ಪಡೆಗೆ ಇದು ಮುನ್ನುಡಿ?

Exit mobile version