ಬೆಳಗಾವಿ: ಹಠಾತ್ ನಿಧನವಾದ ಸಚಿವ ಉಮೇಶ್ ಕತ್ತಿ ಅವರನ್ನು ಎಂಟು ಅವಧಿಯಿಂದಲೂ ಗೆಲ್ಲಿಸಿಕೊಂಡು ಬಂದ ಬೆಳಗಾವಿ ಜಿಲ್ಲೆಯ, ವಿಶೇಷವಾಗಿ ಹುಕ್ಕೇರಿ ವಿಧಾನಸಭಾ ಕ್ಷೇತ್ರದ ಜನರ ಆಕ್ರಂದನ ಮುಗಿಲುಮುಟ್ಟಿತ್ತು. ಉಮೇಶ್ ಕತ್ತಿ ಅವರ ಪತ್ನಿ ಶೀಲಾ, ಪುತ್ರಿ, ಪುತ್ರನ ಜತೆಗೆ ಸಹೋದರ ರಮೇಶ್ ಕತ್ತಿ ಕಂಬನಿ ಮಿಡಿದರು.
ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಲು ಸಿಎಂ ಬಸವರಾಜ ಬೊಮ್ಮಾಯಿ ಬೆಳಗಾವಿಗೆ ಆಗಮಿಸಿದ್ದು, ಪಕ್ಷಭೇದ ಮರೆದು ಕಾಂಗ್ರೆಸ್ ನಾಯಕರೂ ಭಾಗವಹಿಸುತ್ತಿದ್ದಾರೆ.
ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಕೊಂಡೊಯ್ಯಲಾದ ಉಮೇಶ್ ಕತ್ತಿ ಅವರ ಪಾರ್ಥಿವ ಶರೀರವನ್ನು ಬೆಳವಾಗಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ಕತ್ತಿ ಅವರ ಹುಟ್ಟೂರು ಬೆಲ್ಲದ ಬಾಗೇವಾಡಿಯವರೆಗೆ ವಾಹನದ ಮೂಲಕ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.
ದಾರಿಯುದ್ದಕ್ಕೂ ನಿಂತ ಸಾರ್ವಜನಿಕರು ಅಗಲಿದ ನಾಯಕನಿಗೆ ಅಶ್ರುತರ್ಪಣ ಸಲ್ಲಿಸಿದರು. ಉಮೇಶ್ ಕತ್ತಿ ಹಾಗೂ ರಮೇಶ್ ಕತ್ತಿಯವರು ಬೆಲ್ಲದ ಬಾಗೇವಾಡಿಯಲ್ಲಿ ರಾಮ ಲಕ್ಷ್ಮಣರೆಂದೇ ಪ್ರಸಿದ್ಧರು. ರಮೇಶ್ ಕತ್ತಿಯವರು, ಅಣ್ಣನ ಮೇಲಿನ ಪ್ರೀತಿಗಾಗಿ ತಮ್ಮ ಸ್ವಂತ ಮನೆಗೆ ʼಅಣ್ಣಾʼ ಎಂದೇ ನಾಮಕರಣ ಮಾಡಿದ್ದಾರೆ. ವಾಹನದಲ್ಲಿ ಅಣ್ಣನ ಶರೀರದ ಪಕ್ಕ ಕುಳಿತು ಬಿಕ್ಕಿ ಬಿಕ್ಕಿ ರಮೇಶ್ ಕತ್ತಿ ಅಳುತ್ತಿರುವ ದೃಶ್ಯ ಎಂಥವರ ಮನಸ್ಸನ್ನು ಕಲಕುವಂತಿತ್ತು.
ದಾರಿಯುದ್ದಕ್ಕೂ ಸಾರ್ವಜನಿಕರು ವಾಹನವನ್ನು ತಡೆದು ಅಂತಿಮ ದರ್ಶನಕ್ಕೆ ಒತ್ತಾಯಿಸಿದರು. ಕಣ್ಣೀರಿಡುತ್ತಲೇ ಜನರತ್ತ ಕೈಮುಗಿದ ರಮೇಶ್ ಕತ್ತಿ, ಅಂತಿಮ ಸಂಸ್ಕಾರಕ್ಕೆ ತಡವಾಗುತ್ತದೆ, ತೆರಳಲು ಬಿಡಿ ಎಂದು ಮನವಿ ಮಾಡಿದರು.
ಕತ್ತಿ ಅವರ ಸ್ವಗ್ರಾಮದಲ್ಲಿ ಯುವಕರು ವಿಶೇಷ ನಮನ ಸಲ್ಲಿಸಿದರು. ಗ್ರಾಮದಲ್ಲಿ ಇಂಗ್ಲಿಷ್‌ನ UK ಅಕ್ಷರದ ರೀತಿಯಲ್ಲಿ ಸಾಲಾಗಿ ನಿಂತು ತಮ್ಮ ಆತ್ಮೀಯ ನಾಯಕನನ್ನು ನೆನೆದರು.
ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ಉಮೇಶ್ ಕತ್ತಿಯವರಿಗೆ ಸೇರಿದ ಕಬ್ಬಿನ ಹೊಲವಿದ್ದು, ಉಮೇಶ್ ಕತ್ತಿಯವರ ತಂದೆ ವಿಶ್ವನಾಥ ಮಲ್ಲಪ್ಪಾ ಕತ್ತಿ ಮತ್ತು ತಾಯಿ ರಾಜೇಶ್ವರಿಯ ಸಮಾಧಿ ಪಕ್ಕದಲ್ಲಿಯೇ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸಲಾಗಿದೆ. ವೀರಶೈವ ಲಿಂಗಾಯತ ಧರ್ಮದ ನಿಯಮದ ಪ್ರಕಾರ ಅಂತಿಮ ವಿಧಿ ವಿಧಾನಗಳು ನಡೆಯಲಿವೆ.
ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ಸರ್ಕಾರದ ಹಿರಿಯ ಸಚಿವರುಗಳೆಲ್ಲರೂ ಭಾಗವಹಿಸಿದ್ದಾರೆ. ಕಾಂಗ್ರೆಸ್‌ನಿಂದ ಮಾಜಿ ಸಿಎಂ ಸಿದ್ದರಾಮಯ್ಯ, ಎಂ.ಬಿ. ಪಾಟೀಲ್ ಸೇರಿ ಅನೇಕರು ಭಾಗವಹಿಸಿದ್ದಾರೆ. ಜೆಡಿಎಸ್‌ನಿಂದ ಎಚ್.ಡಿ. ರೇವಣ್ಣ ಅಂತಿಮ ಭಾಗವಹಿಸಿದ್ದಾರೆ.
ಇದನ್ನೂ ಓದಿ | Umesh Katti | ಉಮೇಶ್ ಕತ್ತಿ ಪತ್ನಿ ಶೀಲಾ ಕತ್ತಿಗೆ ಪ್ರಧಾನಿ ಮೋದಿ ಪತ್ರ, ಭಾವನಾತ್ಮಕ ನುಡಿಗಳ ಮೂಲಕ ಸಾಂತ್ವನ!