ಬೆಂಗಳೂರು: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪುತ್ರ, ಈಗಾಗಲೆ ಅನೇಕ ಉಪಚುನಾವಣೆಗಳನ್ನು ಗೆದ್ದವರು, ಸಂಘಟನಾತ್ಮಕ ಹೊಣೆಯನ್ನು ನಿಭಾಯಿಸಬಲ್ಲವರು ಎಂಬೆಲ್ಲ ವಿಚಾರಗಳ ನಡುವೆಯೇ ಬಿ.ವೈ. ವಿಜಯೇಂದ್ರ ಅವರಿಗೆ ವಿಧಾನ ಪರಿಷತ್ ಟಿಕೆಟ್ ಖಚಿತ ಎನ್ನಲಾಗಿತ್ತು. ವಿಧಾನ ಪರಿಷತ್ ಅಷ್ಟೆ ಅಲ್ಲ, ಸಚಿವರೂ ಆದರು ಎಂಬ ಲೆಕ್ಕಾಚಾರಗಳ ನಡೆದಿರುವಾಗಲೇ ವಿಧಾನ ಪರಿಷತ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಹೆಸರು ಬಿಡಲಾಗಿದೆ.
2018ರ ಚುನಾವಣೆಗೂ ಮೊದಲು ವಿಧಾನಸಭೆ ಪ್ರವೇಶಿಸಲು ಹೋಗಿ ನಿರಾಸೆ ಅನುಭವಿಸಿದ್ದ ವಿಜಯೇಂದ್ರ ಈ ಬಾರಿ ಟಿಕೆಟ್ ಕೈತಪ್ಪಿದ್ದಕ್ಕೆ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ. ತಮಗೆ ಟಿಕೆಟ್ ಕೈತಪ್ಪಿದ್ದಕ್ಕೆ ನಿರಾಸೆಪಟ್ಟುಕೊಂಡು ಯಾರೂ ಪಕ್ಷದ ವಿರುದ್ಧ ಟೀಕೆ ಟಿಪ್ಪಣಿ ಮಾಡಬಾರದು ಎಂದು ವಿನಂತಿಸುತ್ತಿರುವಂತೆ ಮೇಲ್ನೋಟಕ್ಕೆ ಈ ಪತ್ರ ಕಾಣುತ್ತದೆ. ಆದರೆ ಕೂಲಂಕಶವಾಗಿ ನೋಡಿದರೆ, ಆದರೆ ಇದು ಪರೋಕ್ಷವಾಗಿ ಬಿಜೆಪಿ ಹೈಕಮಾಂಡ್‌ಗೆ ನೀಡಿರುವ ಸಂದೇಶ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಇದನ್ನೂ ಓದಿ | ದೆಹಲಿಗೆ ಹೋದರೂ ಸಿಗದ ಅಮಿತ್ ಷಾ: ಫೋನ್‌ನಲ್ಲೆ ಮಾತಾಡಿ ಬಂದ CM
“ಪಕ್ಷದ ಎಲ್ಲ ಸಹ ಕಾರ್ಯಕರ್ತರಲ್ಲಿ ಮತ್ತು ಅಭಿಮಾನಿಗಳಲ್ಲಿ ನನ್ನ ಮನವಿ” ಎಂದು ಪತ್ರಕ್ಕೆ ಶೀರ್ಷಿಕೆ ನೀಡಲಾಗಿದೆ. “ಸಂಘದ ಶಿಸ್ತು, ಪಕ್ಷದ ಸಂಘಟನೆ, ಜನಪರ ಹೋರಾಟ ಹಾಗೂ ಸೇವೆಯನ್ನು ನಿಜ ಕಾಯಕವೆಂದು ತಿಳಿದು ಬದುಕಿನ ಹೆಜ್ಜೆಯಿಟ್ಟವರು ಪೂಜ್ಯ ತಂದೆ ಯಡಿಯೂರಪ್ಪನವರು. ಈ ಕಾರಣಕ್ಕಾಗಿಯೇ ರಾಜ್ಯದ ಮುಖ್ಯಮಂತ್ರಿಯಾಗಿ ನಾಲ್ಕು ಬಾರಿ ಪ್ರಮಾಣವಚನ ಸ್ವೀಕರಿಸುವ ಅವಕಾಶ ಕಲ್ಪಿಸಿದ್ದು ಜನರ ಆಶೀರ್ವಾದ ಹಾಗೂ ಭಾರತೀಯ ಜನತಾ ಪಕ್ಷ” ಎಂದು ಆರಂಭಿಸಿದ್ದಾರೆ.
2018ರಲ್ಲಿ ವಿಧಾನಸಭೆ ಟಿಕೆಟ್ ಕೈತಪ್ಪಿದ್ದನ್ನು “ಅನಿರೀಕ್ಷಿತ ತಿರುವು” ಎಂದು ವಿಜಯೇಂದ್ರ ಬಣ್ಣಿಸಿದ್ದಾರೆ. “ಅನಿರೀಕ್ಷಿತ ತಿರುವಿನಲ್ಲಿ ರಾಜಕೀಯ ಪ್ರವೇಶಿಸಿದ ನನಗೆ ರಾಜ್ಯ ಬಿಜೆಪಿಯ ಉಪಾಧ್ಯಕ್ಷನಾಗಿ ಮಹತ್ವದ ಜವಾಬ್ದಾರಿ ನೀಡಿ ನನ್ನ ಬೆನ್ನುತಟ್ಟಿ ಬೆಳೆಸುತ್ತಿರುವುದು ಪಕ್ಷ ಮತ್ತು ಪಕ್ಷದ ವರಿಷ್ಠರು. ರಾಜಕೀಯ ಅಧಿಕಾರಗಳು ನಿಂತ ನೀರಲ್ಲ, ಅದು ಹರಿಯುವ ನದಿಯ ಹಾಗೆ. ಇದನ್ನು ಕಾರ್ಯಕರ್ತರು, ಅಭಿಮಾನಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ವಿನಂತಿಸಿಕೊಳ್ಳುತ್ತೇನೆ ಎಂದಿದ್ದಾರೆ.
ತಮಗೆ ಟಿಕೆಟ್ ಕೈತಪ್ಪಿದ್ದರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷವನ್ನು ಟೀಕೆ ಮಾಡಿದರೆ ತಮ್ಮ ಭವಿಷ್ಯಕ್ಕೇ ತೋಂದರೆ ಆಗುತ್ತದೆ ಎಂದು ವಿಜಯೇಂದ್ರ ಸೂಚ್ಯವಾಗಿ ಹೇಳಿದ್ದಾರೆ. “ಅನಗತ್ಯ ಟೀಕೆ, ಟಿಪ್ಪಣಿಗಳು, ಉದ್ಭೋಷಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದರೆ ಆದರಿಂದ ನನ್ನ ವ್ಯಕ್ತಿತ್ವಕ್ಕೆ ಹಾಗೂ ಪೂಜ್ಯ ತಂದೆಯವರ ಭಾವನೆಗಳಿಗೆ ಮಸಿ ಬಳಿದಂತಾಗುವುದೇ ಹೊರತು ನಮ್ಮನ್ನು ಬೆಂಬಲಿಸಿದಂತೆ ಆಗುವುದಿಲ್ಲ ಎನ್ನುವುದನ್ನು ಹಿತೈಷಿ ಎಂದು ಹೇಳಿಕೊಳ್ಳುವ ಪ್ರತಿಯೊಬ್ಬರೂ ಅರಿಯಬೇಕೆಂದು ಈ ಸಂದರ್ಭದಲ್ಲಿ ಹೇಳಬಯಸುತ್ತೇನೆ” ಎಂದು ಮನವಿ ಮಾಡಿದ್ದಾರೆ.
ತಮಗೆ ಸಾಮರ್ಥ್ಯ ಇದೆ ಎನ್ನುವುದನ್ನು ಪರೋಕ್ಷವಾಗಿ ವಿಜಯೇಂದ್ರ ಪ್ರಸ್ತಾಪಿಸಿದ್ದಾರೆ. “ಪಕ್ಷದ ಶಿಸ್ತಿನ ಚೌಕಟ್ಟಿನಲ್ಲಿ ನಾವೆಲ್ಲರೂ ಸಾಮಾನ್ಯ ಕಾರ್ಯಕರ್ತರು. ಸಾಮರ್ಥ್ಯ ಇರುವವರನ್ನು ಪಕ್ಷ ಎಂದಿಗೂ ಕೈ ಬಿಟ್ಟಿಲ್ಲ. ಬಿಡುವುದೂ ಇಲ್ಲ. ಈ ನಿಟ್ಟಿನಲ್ಲಿ ಎಲ್ಲರೂ ಸಹನೆ, ಸೌಜನ್ಯದಿಂದ ವರ್ತಿಸಬೇಕೆಂದು ವಿನಮ್ರತೆಯಿಂದ ಮನವಿ ಮಾಡುವೆ. ನಿಮ್ಮೆಲ್ಲರ ಬೆಂಬಲ, ಆಶೀರ್ವಾದ, ಮಾರ್ಗದರ್ಶನ, ಸಹಕಾರಗಳು ಸದಾ ಇರಲಿ ಎಂದು ಕೋರುತ್ತೇನೆ” ಎಂದು ಪತ್ರವನ್ನು ಮುಗಿಸಿದ್ದಾರೆ. ತಮಗೆ ಸಾಮರ್ಥ್ಯ ಇದೆ, ಅದನ್ನು ಎಂದಿಗೂ ಕಡೆಗಣಿಸಬಾರದು ಎಂದು ಪಕ್ಷಕ್ಕೆ ಪರೋಕ್ಷ ಸಂದೇಶವನ್ನು ಈ ಮೂಲಕ ವಿಜಯೇಂದ್ರ ನೀಡಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ | ಯಡಿಯೂರಪ್ಪ ಸರ್ಜಿಕಲ್ ಸ್ಟ್ರೈಕ್ ಫೇಲ್: ಬಿಜೆಪಿಯಲ್ಲಿ ಸಂತೋಷ್ ಮೇಲುಗೈ