Site icon Vistara News

PFI Banned​ | ಯಾವ ಪಕ್ಷಕ್ಕೆ ಲಾಭ, ಯಾರಿಗೆ ನಷ್ಟ?

BJP CONGRESS FLAGS

ಮಾರುತಿ ಪಾವಗಡ, ಬೆಂಗಳೂರು
ದೇಶದ್ರೋಹ ಚಟುವಟಿಕೆಗಳ ಆಧಾರದ ಮೇಲೆ ಕೇಂದ್ರ ಸರ್ಕಾರ ಕೊನೆಗೂ ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಿದೆ. ಈಗ ಪ್ರಮುಖ ರಾಜಕೀಯ ಪಕ್ಷಗಳಿಗೆ ಇದರಿಂದ ಲಾಭ, ನಷ್ಟಗಳೇನು ಎಂಬ ಲೆಕ್ಕಾಚಾರ ಶುರುವಾಗಿದೆ.
ಸಿಮಿ ಸಂಘಟನೆಯನ್ನು ನಿಷೇಧಿಸಿದ ಬಳಿಕ 2005ರಲ್ಲಿ ಹುಟ್ಟಿದ ಈ ಪಿಎಫ್‌ಐ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ಆರೋಪ ಕೇಳಿ ಬರುತ್ತಲೇ ಇತ್ತು. ಆದರೆ ಕಳೆದ 17 ವರ್ಷಗಳಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಈ ಸಂಘಟನೆಯನ್ನು ಪರೋಕ್ಷವಾಗಿ ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದ್ದುದು ಗುಟ್ಟೇನೂ ಅಲ್ಲ.

1990ರ ದಶಕದಲ್ಲಿ ಸಿಮಿ ಸಂಘಟನೆ ಬ್ಯಾನ್​ ಆದ ಬಳಿಕ ಮುಸ್ಲಿಂ ಸಮುದಾಯದ ಪರ ಧ್ವನಿ ಎತ್ತುವ, ಅದರಲ್ಲೂ ಹೆಚ್ಚಾಗಿ ಮುಸ್ಲಿಂ ಮೂಲಭೂತವಾದವನ್ನು ಪ್ರತಿಪಾದಿಸುವ ಯಾವುದೇ ಪ್ರಬಲ ಸಂಘಟನೆ ಇರಲಿಲ್ಲ. ಈ ವೇಳೆ ಸಿಮಿ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಕಾರ್ಯಕರ್ತರು ಹೊಸ ಹೆಸರಿನಲ್ಲಿ ಸಂಘಟನೆ ಸ್ಥಾಪಿಸಿದರು. 2005ರಲ್ಲಿ ಹಲವು ಮುಸ್ಲಿಂ ಸಂಘಟನೆಗಳು ಒಟ್ಟಾಗಿ ಬೆಂಗಳೂರಿನಲ್ಲಿ ಪಿಎಫ್​ಐ ಸಂಘಟನೆಯನ್ನು ಹುಟ್ಟು ಹಾಕಿದವು. ಪಿಎಫ್​​ಐಗೆ ರಾಜಕೀಯ ಬೆನ್ನೆಲುಬಾಗಿರಲು ಎಸ್​ಡಿಪಿಐ ಪಕ್ಷವನ್ನು ಸ್ಥಾಪಿಸಲಾಯಿತು. ಈ ಎರಡೂ ಸಂಘಟನೆಗಳ ಬೆಳವಣಿಗೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನ ಪಾಲೂ ಸಾಕಷ್ಟಿದೆ. ಪಿಎಫ್​ಐ ಬೆಳೆದರೆ ಎಸ್​ಡಿಪಿಐ ಬಲವಾಗಿ ಕಾಂಗ್ರೆಸ್​ನ ಸಾಂಪ್ರದಾಯಿಕ ಮತಗಳು ಛಿದ್ರವಾಗಿ, ಮುಸ್ಲಿಂ ಬಾಹುಳ್ಯದ ಕ್ಷೇತ್ರಗಳಲ್ಲಿ ಬಿಜೆಪಿಗೆ ಲಾಭ ಆಗುತ್ತಿತ್ತು. ಈ ಕಾರಣಕ್ಕೆ ಮೇಲ್ನೋಟಕ್ಕೆ ಪಿಎಫ್​ಐಯನ್ನು ಬ್ಯಾನ್​ ಮಾಡಿ ಎಂದು ಹೇಳುತ್ತಿದ್ದ ಬಿಜೆಪಿ ಅಧಿಕಾರಕ್ಕೆ ಬಂದಾಗ ಕಾನೂನಿನ ತೊಡಕು ಹೇಳಿ ಜಾರಿಕೊಳ್ಳುತ್ತಿತ್ತು.

ಆದರೆ ಈ ಬಾರಿ ಪರಿಸ್ಥಿತಿ ಬಿಜೆಪಿಗೆ ತಿರುಗುಬಾಣವಾಯಿತು. ಕರಾವಳಿ ಭಾಗದ ಕಾಂಗ್ರೆಸ್​ ಶಾಸಕರು ಸಹ ಬಿಜೆಪಿ ನಾಯಕರಿಗೆ ರಾಜ್ಯದಲ್ಲೂ ನೀವೇ, ಕೇಂದ್ರದಲ್ಲೂ ನೀವೇ ಅಧಿಕಾರದಲ್ಲಿದ್ದೀರಿ ಈಗ ಪಿಎಫ್​ಐಯನ್ನ ಬ್ಯಾನ್ ಮಾಡಿ​ ಎಂದು ಒತ್ತಾಯ ಮಾಡತೊಡಗಿದರು. ಇದರ ಜತೆಗೆ ಬಿಜೆಪಿ ಕಾರ್ಯಕರ್ತರು ಮತ್ತು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರ ಕೊಲೆಗಳಿಗೆ ಪಿಎಫ್​ಐ ಕಾರಣ ಎಂಬುದು ತನಿಖೆಯಿಂದ ಬಹಿರಂಗವಾಗುತ್ತಿದ್ದಂತೆ ಈ ಸಂಘಟನೆಯನ್ನು ಬ್ಯಾನ್​ ಮಾಡಲೇಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಯಿತು. ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಕಾರ್ಯಕರ್ತ ಪ್ರವೀಣ್​ ನೆಟ್ಟಾರು ಹತ್ಯೆಯಾದ ನಂತರವಂತೂ ಬಿಜೆಪಿ ಕಾರ್ಯಕರ್ತರು ತಮ್ಮ ಪಕ್ಷದ ವಿರುದ್ಧವೇ ತಿರುಗಿ ಬಿದ್ದಿದ್ದರು. ಬಿಜೆಪಿ ರಾಜಾಧ್ಯಕ್ಷರ ಕಾರಿಗೆ ಮುತ್ತಿಗೆ ಹಾಕಿ ಅದನ್ನು ಮಗುಚಿ ಹಾಕಲು ಯತ್ನಿಸಿದ್ದರು. ಗೃಹ ಸಚಿವರ ಮನೆಗೂ ಎಬಿವಿಪಿ ಕಾರ್ಯಕರ್ತರು ನುಗ್ಗಿದ್ದು ಬಿಜೆಪಿಗೆ ಜೀರ್ಣಿಸಿಕೊಳ್ಳಲಾಗದಂತಹ ಆಘಾತ ನೀಡಿತ್ತು. ಯಾವಾಗ ತನ್ನ ಸುಭದ್ರ ವೋಟ್​ ಬ್ಯಾಂಕ್‌ಗೆ ಧಕ್ಕೆಯುಂಟಾಗುವ ಸಾಧ್ಯತೆ ಕಾಣಿಸಿತೋ ಆಗ ಬಿಜೆಪಿ ನಾಯಕರು ಎಚ್ಚೆತ್ತುಕೊಳ್ಳತೊಡಗಿದರು! ಹೀಗಾಗಿ, ಹಲವು ದಿನಗಳಿಂದ ಕಾಂಗ್ರೆಸ್​ ವಿರುದ್ಧ ಅಸ್ತ್ರವಾಗಿ ಬಳಸಿಕೊಂಡಿದ್ದ ಪಿಎಫ್​ಐ ಸಂಘಟನೆಯನ್ನು ಈ ಬಾರಿ ಮುಲಾಜಿಲ್ಲದೇ ಬ್ಯಾನ್​ ಮಾಡಲೇ ಬೇಕಾಯಿತು. ಇದಕ್ಕೆ ಪೂರಕವಾಗಿ ಕೇರಳ, ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳಿಂದಲೂ ನಿಷೇಧ ಒತ್ತಾಯ ಕೇಳಿಬಂದಿದ್ದು ಸಹ ಪಿಎಫ್​ಐ ಬ್ಯಾನ್‌ಗೆ ಬಲ ಸಿಕ್ಕಿದಂತಾಯಿತು.

ಪಿಎಫ್​​ಐ ಅಡ್ಡದಾರಿ ಹಿಡಿಯಲು ಕಾಂಗ್ರೆಸ್​ ಪಾಲು ಎಷ್ಟು?
ಪಿಎಫ್​​ಐ ಸಂಘಟನೆ ಬೆಳೆಯಲು ಕಾಂಗ್ರೆಸ್ ಪಾತ್ರವೂ ಸಾಕಷ್ಟಿದೆ. ಕಾಂಗ್ರೆಸ್​ ಅಧಿಕಾರದಲ್ಲಿದ್ದಾಗ ಈ ಸಂಘಟನೆಯ ಸಮಾಜಬಾಹಿರ ಚಟುವಟಿಕೆಗಳನ್ನು ಮಟ್ಟ ಹಾಕುವ ಬದಲು ಅದಕ್ಕೆ ಗೊಬ್ಬರ ಹಾಕಿ ಮರವಾಗಿ ಬೆಳೆಯುವಂತೆ ಕಾಂಗ್ರೆಸ್‌ ಮಾಡಿತು. ಸಿದ್ದರಾಮಯ್ಯ ಅವಧಿಯಲ್ಲಿ ಕರಾವಳಿಯಲ್ಲಿ ನಡೆದ ಹಿಂದೂ ಕಾರ್ಯಕರ್ತರ ಹತ್ಯೆಯ ಹಿಂದೆ ಈ ಸಂಘಟನೆ ಕೈವಾಡ ಇದ್ದರೂ, ಅವರನ್ನು ಬಚಾವ್​ ಮಾಡುವ ಕೆಲಸ ಅಂದು ನಡೆದಿತ್ತು ಎಂಬ ಆರೋಪ ಇಂದಿಗೂ ಜೀವಂತವಾಗಿದೆ. ಇನ್ನು ಈ ಸಂಘಟನೆಯನ್ನು ಬ್ಯಾನ್​ ಮಾಡುವುದಿರಲಿ, ಈ ಸಂಘಟನೆಗಳ ಕಾರ್ಯಕರ್ತರ ಮೇಲಿದ್ದ ಕ್ರಿಮಿನಲ್‌ ಕೇಸ್​ಗಳನ್ನು ಕಾಂಗ್ರೆಸ್‌ ಸರ್ಕಾರ ಹಿಂಪಡೆದಿತ್ತು! ಇದರ ಹಿಂದೆ ಇದ್ದಿದ್ದು ಮುಸ್ಲಿಂ ವೋಟ್​ ಬ್ಯಾಂಕ್​ ರಾಜಕಾರಣವಲ್ಲದೇ ಬೇರೇನೂ ಆಗಿರಲಿಲ್ಲ.

ಕಾಂಗ್ರೆಸ್‌-ಬಿಜೆಪಿಗೆ ಎಷ್ಟು ಲಾಭ? ಎಷ್ಟು ನಷ್ಟ?
ಸರ್ಕಾರದ ಸದ್ಯದ ನಿರ್ಧಾರ ಮುಂದಿನ ಚುನಾವಣೆ ಮೇಲೆ ಖಂಡಿತ ಪರಿಣಾಮ ಬೀರಲಿದೆ. ಪಿಎಫ್‌ಐ ಬ್ಯಾನ್​ ಮಾಡಿರುವುದು ಹಿಂದೂಪರ ಮತ್ತು ಬಿಜೆಪಿ ಕಾರ್ಯಕರ್ತರ ನೈತಿಕ ಸ್ಥೈರ್ಯ ಹೆಚ್ಚುವಂತೆ ಮಾಡಿದೆ. ಇದು ಮುಂದಿನ ವರ್ಷ ಮೇನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಹಿಂದೂ ಮತ ಬ್ಯಾಂಕ್‌ ಬಿಜೆಪಿಗೆ ಭದ್ರ ಆಗಲಿದೆ. ಆದರೆ ಪಿಎಫ್‌ಐ ನಿಷೇಧ ಹಿನ್ನೆಲೆಯಲ್ಲಿ ಎಸ್‌ಡಿಪಿಐ ದುರ್ಬಲಗೊಂಡರೆ ಅಥವಾ ಮುಂದೆ ಎಸ್‌ಡಿಪಿಐಯನ್ನೂ ಕೂಡ ಚುನಾವಣೆ ಆಯೋಗದ ಮೂಲಕ ಕೇಂದ್ರ ಸರ್ಕಾರ ನಿಷೇಧ ಮಾಡಿದರೆ ಮುಸ್ಲಿಂ ಮತಗಳು ಹಂಚಿ ಹೋಗುವುದು ತಪ್ಪುತ್ತದೆ. ಇದರಿಂದಾಗಿ ಮುಸ್ಲಿಂ ಮತಗಳು ಅನಿವಾರ್ಯವಾಗಿ ಕಾಂಗ್ರೆಸ್‌ ಬುಟ್ಟಿಗೇ ಬೀಳುವಂತಾಗುತ್ತದೆ. ಹೀಗಾದರೆ ಬಿಜೆಪಿಗೆ ಹಲವು ಕ್ಷೇತ್ರಗಳಲ್ಲಿ ಸೋಲಾಗಲಿದೆ.

ಪಿಎಫ್​ಐ ನಿಷೇಧಿಸಿದ್ದನ್ನು ಕಾಂಗ್ರೆಸ್‌ನ ಬಹುತೇಕ ನಾಯಕರು ಸ್ವಾಗತಿಸಿದ್ದಾರೆ. ಇದು ಮುಸ್ಲಿಂ ಸಮುದಾಯದ ತೀವ್ರವಾದಿಗಳ ಕೋಪಕ್ಕೂ ಕಾರಣವಾಗುವುದು ಸಹಜ. ಪಿಎಫ್‌ಐ ಮೇಲಿನ ಸಹಾನುಭೂತಿಯಿಂದ ಮುಂದಿನ ಚುನಾವಣೆಯಲ್ಲಿ ಮುಸ್ಲಿಂ ಮತದಾರರು ಎಸ್‌ಡಿಪಿಐ ಕಡೆ ವಾಲಿದರೆ ಕಾಂಗ್ರೆಸ್‌ಗೆ ಭಾರಿ ನಷ್ಟವಾಗಲಿದೆ. ಮತ ವಿಭಜನೆಯ ಲಾಭ ಬಿಜೆಪಿಗೆ ಸಿಗಲಿದೆ.

ಇದನ್ನೂ ಓದಿ | PFI banned | ಪಿಎಫ್‌ಐ ಆಯ್ತು, ಈಗ ಎಸ್‌ಡಿಪಿಐ ಮೇಲೆ ಚುನಾವಣಾ ಆಯೋಗ ಕಣ್ಣು?

Exit mobile version