ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಮಾರಕ ಕ್ಯಾನ್ಸರ್ ರೋಗದ ಮುಂದುವರಿದ ಹಂತದಲ್ಲಿರುವುದನ್ನು ಅಮೆರಿಕದ ʼನ್ಯೂಯಾರ್ಕ್ ಪೋಸ್ಟ್ʼ ಮಾಧ್ಯಮ ಖಚಿತಪಡಿಸಿದೆ.
ಇಷ್ಟರಲ್ಲೇ ಪುಟಿನ್ ಕ್ಯಾನ್ಸರ್ ಸರ್ಜರಿಗೆ ಒಳಗಾಗಲಿದ್ದಾರೆ. ಈ ಅವಧಿಯಲ್ಲಿ ದೇಶದ ಆಡಳಿತವನ್ನು ತಮ್ಮ ಆಪ್ತರಾದ ನಿಕೊಲಾಯ್ ಪತ್ರುಶೇವ್ ಅವರಿಗೆ ವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಪುಟಿನ್ ಅವರಿಗೆ ತೀವ್ರ ಅನಾರೋಗ್ಯ ಆವರಿಸಿದೆ ಎಂಬುದು ಅವರ ಇತ್ತೀಚಿನ ಸಾರ್ವಜನಿಕ ವರ್ತನೆಯಲ್ಲಿ ಕಂಡುಬಂದಿತ್ತು. ಇತ್ತೀಚೆಗೆ ರಾಯಭಾರಿಯೊಬ್ಬರ ಜೊತೆಗಿನ ಭೇಟಿಯಲ್ಲಿ ಅವರ ಕೈಕಾಲುಗಳು ನಡುಗುತ್ತಿರುವುದು, ಮುಖ ಅಸ್ವಭಾವಿಕವಾಗಿ ಊದಿಕೊಂಡಿರುವುದು ಹಾಗೂ ಮೇಜಿನ ಅಂಚನ್ನು ಅವರು ಬಿಗಿಯಾಗಿ ಹಿಡಿದುಕೊಂಡಿರುವುದು ಕಂಡುಬಂದಿತ್ತು. ಕ್ಯಾನ್ಸರ್ ಜೊತೆಗೆ ಪಾರ್ಕಿನ್‌ಸನ್ ಕಾಯಿಲೆ ಕೂಡ ಪುಟಿನ್ ಅವರನ್ನು ಬಾಧಿಸುತ್ತಿರಬಹುದು ಎಂದು ತಜ್ಞರು ಅಂದಾಜಿಸಿದ್ದರು.
ಕ್ಯಾನ್ಸರ್ ಸರ್ಜರಿ ಹಲವು ತಿಂಗಳ ಕಾಲ ತೆಗೆದುಕೊಳ್ಳಲಿರುವುದರಿಂದ, ಆಡಳಿತವನ್ನು ಅವರು ತಮ್ಮ ಆಪ್ತರಾದ ನಿಕೊಲಾಯ್ ಪತ್ರುಶೇವ್ ಅವರ ಕೈಗಳಲ್ಲಿ ಇಡಲಿದ್ದಾರೆ ಎಂದು ತಿಳಿದುಬಂದಿದೆ. ಪುಟಿನ್‌ಗೆ ನೀಡುತ್ತಿರುವ ಕ್ಯಾನ್ಸರ್ ಚಿಕಿತ್ಸೆ ಫಲಿಸದೇ ಹೋದರೆ, ಪತ್ರುಶೇವ್ ಅವರೇ ಮುಂದಿನ ಅಧ್ಯಕ್ಷರಾಗಲೂಬಹುದು.
ಯಾರು ಈ ಪತ್ರುಶೇವ್?
ಅಮೆರಿಕದ ಮಿಲಿಟರಿ ಅಧಿಕಾರಿಗಳು ತಿಳಿಸುವ ಪ್ರಕಾರ, ಈ ನಿಕೊಲಾಯ್ ಪತ್ರುಶೇವ್, ಪುಟಿನ್‌ಗಿಂತಲೂ ಕಠಿಣ ಹೃದಯದ ವ್ಯಕ್ತಿ. ಪುಟಿನ್ ಕಾಲದಲ್ಲಿ ಆರಂಭವಾದ ಉಕ್ರೇನ್ ಯುದ್ಧದ ಘೋರತೆ ಪತ್ರುಶೇವ್ ಮೂಲಕ ಮುಂದುವರಿಯಲಿದ್ದು, ಇನ್ನಷ್ಟು ಭೀಷಣವಾಗಿರಲೂಬಹುದು.
1951ರಲ್ಲಿ ಜನಿಸಿದ ಪತ್ರುಶೇವ್, ಮಿಲಿಟರಿ ಅಧಿಕಾರಿಯ ಮಗ. ತಂದೆ ಮತ್ತು ತಾಯಿ ಜರ್ಮನಿಯ ನಾಜಿ ಅಧಿಕಾರಿಗಳ ಭಿಭತ್ಸತೆಗೆ ಸಿಕ್ಕು, ಆಸ್ತಿಯನ್ನು ಕಳೆದುಕೊಂಡವರು. ಕುಟುಂಬ ಅಲ್ಲಿಂದ ಪಾರಾಗಿ ಸೇಂಟ್ ಪೀಟರ್ಸ್‌ಬರ್ಗ್‌ಗೆ ಬಂದು ನೆಲೆಸಿತ್ತು. ತಂದೆ ಸೋವಿಯತ್ ರಷ್ಯ ಸೈನ್ಯದ ಅಧಿಕಾರಿ. ಮಗ ಸೋವಿಯತ್ ಯುಗದ ಕಮ್ಯುನಿಸ್ಟ್ ಆಡಳಿತದ ಆರಾಧಕ.
ನಂತರ ಪತ್ರುಶೇವ್‌ರನ್ನು ರಷ್ಯನ್ ಗೂಢಚಾರಿಕೆ ದಳ ಕೆಜಿಬಿಯ ಅಧಿಕಾರಿಯಾಗಿ ನೇಮಿಸಲಾಯಿತು. ಸ್ಮಗ್ಲಿಂಗ್ ತಡೆಯುವ ದಳದ ಅಧಿಕಾರಿಯಾಗಿ ಆಡಳಿತ ವಹಿಸಿಕೊಂಡ ಪತ್ರುಶೇವ್ ಮುಂದೆ ಪುಟಿನ್ ಅವರ ಆಪ್ತರಾಗುವವರೆಗೂ ಬೆಳೆದು ನಿಂತರು. ಪುಟಿನ್ ಕೆಜಿಬಿಯ ಮುಖ್ಯಸ್ಥರಾಗಿದ್ದಾಗ ಅವರ ಸೆಕೆಂಡ್ ಮ್ಯಾನ್ ಆಗಿದ್ದರು. ನಂತರ ಅವರಿಂದ ತೆರವಾದ ಸ್ಥಾನವನ್ನು ತಾವು ವಹಿಸಿಕೊಂಡರು. ಈಗ ಸರಕಾರದ ಸೆಕ್ಯುರಿಟಿ ಕೌನ್ಸಿಲ್‌ನ ಕಾರ್ಯದರ್ಶಿ. ಸೈನ್ಯ ಕಾರ್ಯಾಚರಣೆಗಳಿಗೆ ಈ ಸಮಿತಿ ಉತ್ತರದಾಯಿ. ಮೂಲಗಳು ತಿಳಿಸುವ ಪ್ರಕಾರ ಪತ್ರುಶೇವ್ ಅವರು ಪುಟಿನ್‌ಗಿಂತಲೂ ಕ್ರೂರಿ, ವಂಚಕ ಸ್ವಭಾವದ ವ್ಯಕ್ತಿ.
ಜಿಂಕೆ ರಕ್ತದಲ್ಲಿ ಸ್ನಾನ?
ಕೆಲವು ಮೂಲಗಳು ತಿಳಿಸುವಂತೆ ಪುಟಿನ್ ಈಗಾಗಲೇ ಕ್ಯಾನ್ಸರ್ ಚಿಕಿತ್ಸೆಗೆ ಒಂದು ಬಾರಿ ಒಳಗಾಗಿದ್ದಾರೆ. ಕೆಲವು ಅಸಾಂಪ್ರದಾಯಿಕ, ನಾಟಿ ಚಿಕಿತ್ಸೆಗಳನ್ನೂ ಪುಟಿನ್ ಮಾಡಿಸಿಕೊಂಡಿದ್ದಾರೆ. ಕ್ಯಾನ್ಸರ್‌ನಿಂದ ಮುಕ್ತಿ ಪಡೆಯಲು ಇಲ್ಲಿನ ಒಂದು ಬಗೆಯ ಕೊಂಬಿನ ಜಿಂಕೆಗಳ ರಕ್ತವನ್ನು ತೆಗೆದು ಅದರಿಂದ ಸ್ನಾನ ಮಾಡುವ ವಿಚಿತ್ರ ಪದ್ಧತಿಯೊಂದು ರಷ್ಯಾದ ಅಲ್ತಾಯ್ ಪ್ರಾಂತ್ಯದಲ್ಲಿದ್ದು, ಪುಟಿನ್ ಅದನ್ನೂ ಮಾಡಿಸಿಕೊಳ್ಳುತ್ತಾರೆ ಎನ್ನಲಾಗಿದೆ.
ಇದನ್ನೂ ಓದಿ: Explainer: ಭಾರತದ ಮಿಲಿಟರಿ ವೆಚ್ಚ ರಷ್ಯಾಕ್ಕಿಂತಲೂ ಹೆಚ್ಚು!