ಹೊಸದಿಲ್ಲಿ: ದೇಶವೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ಮತ್ತೊಂದೆಡೆ, ದೇಶದ ಮೊದಲ ಮಾನವಸಹಿತ “ಗಗನಯಾನ” (Gaganyaan) ಮಿಷನ್‌ಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಜ್ಜಾಗಿದೆ. ಇದರ ಬೆನ್ನಲ್ಲೇ ಇಟಲಿ ಗಗನಯಾತ್ರಿ ಸಮಂಥಾ ಕ್ರಿಸ್ಟೋಫೊರೆಟ್ಟಿ (Samantha Cristoforetti) ಅವರು ಗಗನಯಾನ ಮಿಷನ್‌ಗೆ ಶುಭ ಕೋರಿದ್ದಾರೆ.
ಬಾಹ್ಯಾಕಾಶದಿಂದಲೇ ಕ್ರಿಸ್ಟೋಫೊರೆಟ್ಟಿ ಅವರು ವೀಡಿಯೊ ಸಂದೇಶ ರವಾನಿಸಿದ್ದು, ಇದನ್ನು ಅಮೆರಿಕದ ಭಾರತೀಯ ರಾಯಭಾರಿ ತರನ್‌ಜೀತ್ ಸಿಂಗ್ ಸಂಧು (Taranjit Singh Sandhu) ಅವರು ಟ್ವಿಟರ್‌ನಲ್ಲಿ ವೀಡಿಯೊ ಹಂಚಿಕೊಂಡಿದ್ದಾರೆ. ಹಾಗೆಯೇ, ವಿಜ್ಞಾನಿ ವಿಕ್ರಮ್ ಸಾರಾಭಾಯಿ ಅವರ ಜನ್ಮದಿನದಂದೇ ವಿಡಿಯೊ ಹಂಚಿಕೊಳ್ಳಲು ಸಂತಸವಾಗುತ್ತಿದೆ ಎಂದು ಹೇಳಿದ್ದಾರೆ.
“ಐಎಸ್‌ಎ, ನಾಸಾ ಹಾಗೂ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಗಳ ಪರವಾಗಿ ಇಸ್ರೋಗೆ ಶುಭಾಶಯ ತಿಳಿಸುತ್ತೇನೆ. ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಸಿದ್ಧವಾಗಿರುವ ಗಗನಯಾನ್ ಮಿಷನ್‌ಗೆ ಶುಭವಾಗಲಿ. ಇಸ್ರೋ ಯೋಜನೆಗೆ ಜಗತ್ತಿನ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳ ಸಹಕಾರವೂ ಇದೆ. ಎಲ್ಲರೂ ಒಗ್ಗೂಡಿ ಬಾಹ್ಯಾಕಾಶದ ಸಂಶೋಧನೆಯಲ್ಲಿ ಮುನ್ನಡೆ ಸಾಧಿಸೋಣ” ಎಂದಿದ್ದಾರೆ.
ಗಗನಯಾನ ಮಿಷನ್ ದೇಶದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಮೊದಲ ಮಾನವಸಹಿತ ಬಾಹ್ಯಾಕಾಶ ಯಾನವಾಗಿದೆ. 2023ರಲ್ಲಿ ದೇಶದ ವಿಜ್ಞಾನಿಗಳು ಬಾಹ್ಯಾಕಾಶಕ್ಕೆ ನೆಗೆಯಲಿದ್ದಾರೆ. “ಗಗನಯಾನ ಮಿಷನ್‌ನ ಸಿದ್ಧತೆ ಪೂರ್ಣಗೊಂಡಿದ್ದು, ಮುಂದಿನ ವರ್ಷ ದೇಶದ ಕನಸು ಸಾಕಾರಗೊಳ್ಳಲಿದೆ” ಎಂದು ಕಳೆದ ತಿಂಗಳಷ್ಟೇ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದರು. ಮಾನವಸಹಿತ ಗಗನಯಾನ ಯಶಸ್ಸು ಸಾಧಿಸಿದರೆ ಇಂತಹ ಮಹೋನ್ನತ ಸಾಧನೆ ಮಾಡಿದ ವಿಶ್ವದ ನಾಲ್ಕನೇ ದೇಶ ಎನಿಸಲಿದೆ. ಈಗಾಗಲೇ ಅಮೆರಿಕ, ಚೀನಾ ಹಾಗೂ ರಷ್ಯಾ ಈ ಸಾಧನೆ ಮಾಡಿವೆ.
ಇದನ್ನೂ ಓದಿ | MISSION SUCCESS: ಸಿಂಗಾಪುರದ ಮೂರು ಉಪಗ್ರಹಗಳನ್ನು ಕಕ್ಷೆ ಸೇರಿಸಿ ಬೀಗಿದ ISRO