ಸದ್ಗುರು ಜಗ್ಗಿ ವಾಸುದೇವ್, ಈಶ ಫೌಂಡೇಶನ್
(Sadguru Jaggi Vasudev, Isha Foundation)
ಇಂದಿನ ವಿದ್ಯಾಭ್ಯಾಸದ ಉದ್ದೇಶ (Education System), ಇಲ್ಲಿರುವುದೆಲ್ಲವನ್ನೂ ನಮಗೆ ಉಪಯೋಗವಾಗುವಂತೆ ಬಳಸಿಕೊಳ್ಳುವುದು ಹೇಗೆ ಎಂಬುದಾಗಿದೆ. ಒಂದು ಎಲೆಯನ್ನೂ ತಮ್ಮ ಲಾಭಕ್ಕಾಗಿ ಉಪಯೋಗಿಸುವ ಸ್ವಾರ್ಥದ ಮನೋಭಾವನೆ (Selfish mind) ಮನುಷ್ಯರಿಗೆ ಬಂದುಬಿಟ್ಟಿದೆ. ಮರ, ಗಾಳಿ, ಭೂಮಿಯ ತಳದಲ್ಲಿ ಹುದುಗಿಸುವ ಪ್ರಕೃತಿ ಸಂಪತ್ತು, ಕಡೆಗೆ ಕಣ್ಣಿಗೆ ಕಾಣದ ಸೂಕ್ಷ್ಮವಾದ ವೈರಸ್‌ನಲ್ಲೂ ತಮಗೆ ಏನು ಆದಾಯ ದೊರೆಯಬಹುದೆಂಬುದೇ ಅವರ ಯೋಚನೆ (Prerane Column).
ಭೂಮಿಯ ಮೇಲಿನ ಪ್ರತಿಯೊಂದು ಜೀವಿಗೂ ತನ್ನದೇ ಆದ ಒಂದು ಪ್ರಪಂಚವಿದೆ. ಪ್ರಕೃತಿಗೆ ಸಂಬಂಧಿಸಿದಂತೆ ಮನುಷ್ಯರೂ ಬೇರೆ ಜೀವಿಗಳಂತೆಯೇ ಒಂದು ಜೀವಿ, ಎಲ್ಲವನ್ನೂ ಒಳಗೂಡಿಸಿಕೊಳ್ಳುವುದೇ ನಿಜವಾದ ವಿದ್ಯೆ..
ಆದರೆ, ಮನುಷ್ಯರು ಮಾತ್ರ ತಮ್ಮ ಬಗೆಗೆ ಏನನ್ನು ಯೋಚಿಸುತ್ತಾರೆಂದು ನಿಮಗೆ ಗೊತ್ತೇ?
ಕಾಗೆ, ಜೇನ್ನೊಣ ಮತ್ತು ಮನುಷ್ಯ ಸ್ವರ್ಗಕ್ಕೆ ಹೋದಾಗ..
ಒಂದು ಕಾಗೆ, ಒಂದು ಜೇನ್ನೊಣ, ಒಬ್ಬ ಮನುಷ್ಯ ಒಂದೇ ಸಮಯದಲ್ಲಿ ಮರಣವನ್ನಪ್ಪಿದರು. ದೇವಲೋಕಕ್ಕೆ ಅವರನ್ನು ಕರೆದುಕೊಂಡು ಹೋಗಿ ವಿಚಾರಣೆಗೆ ನಿಲ್ಲಿಸಿದರು. ಅಲ್ಲಿ ಅವರಿಗೆ ಎಲ್ಲಿ ಜಾಗ ಬೇಕೆಂದು ದೇವರು ಕೇಳಿದರು.
1. ಜೇನ್ನೊಣವು, ಭೂಮಿಯ ಮೇಲಿದ್ದಾಗ ಹಲವು ಬಗೆಯ ಮಕರಂದವನ್ನು ಶೇಖರಿಸಿದೆ. ನನಗೆ ಸ್ವರ್ಗ ದೊರೆತರೆ ಸಂತೋಷವಾಗುತ್ತದೆ ಎಂದಿತು.
2.ಕಾಗೆ, ಹಲವಾರು ಬಗೆಯ ಬೀಜಗಳನ್ನು ನಾನು ಬೇರೆ ಬೇರೆ ಸ್ಥಳಗಳಲ್ಲಿ ಉಗುಳಿದ ಕಾರಣ ಅರಣ್ಯ ಅಭಿವೃದ್ಧಿಯಾಯಿತು. ಪ್ರಕೃತಿಗೆ ಸಹಾಯಮಾಡಿದ ನನಗೂ ಸ್ವರ್ಗದಲ್ಲಿ ಸ್ಥಳ ಬೇಕು ಎಂದಿತು.
3.ಆದರೆ ಮನುಷ್ಯ, “ಏ ಹಲೋ? ನೀನು ಕುಳಿತಿರುವುದು ನನ್ನ ಕುರ್ಚಿ, ಎದ್ದೇಳು” ಎಂದನು.
ದೇವರು ತನ್ನ ಆಕಾರದಂತೆಯೇ ಇರುವುದಾಗಿ ಮನುಷ್ಯರ ಕಲ್ಪನೆಯಿರುವುದರಿಂದ ನಮಗೆ ಮಿತಿಮೀರಿದ ಅಹಂಭಾವ. ಬೇರೆ ಜೀವರಾಶಿಗಳಿಗಿಂತ ಹೆಚ್ಚಿನ ಬುದ್ಧಿವಂತಿಕೆಯಿದೆ ಎಂದುಕೊಂಡಿರುವುದರಿಂದ ತಮ್ಮನ್ನು ದೇವರನ್ನಾಗಿಯೇ ಭಾವಿಸಿ, ತಮ್ಮ ಸುಖವನ್ನು ಮಾತ್ರ ಸದಾಕಾಲ ಯೋಚಿಸುತ್ತಾ ತಮಗೆ ಹೊಂದಿಕೆಯಾಗದ ಎಲ್ಲವನ್ನೂ ಈ ಪ್ರಪಂಚದಿಂದಲೇ ಅಳಿಸಿಹಾಕಲು ಮುಂದಾಗಿದ್ದಾರೆ ಜನರು.
ಈ ಮನೋಭಾವಕ್ಕೆ ಜತೆಗೂಡುವಂತೆ ರಚಿತವಾಗಿವುದೇ ಇಂದಿನ ವಿದ್ಯಾಭ್ಯಾಸದ ದೊಡ್ಡ ಕೊರತೆ. ಒಬ್ಬ ವಿಜ್ಞಾನಿ ತನ್ನ ಸಂಶೋಧನಾ ಲೇಖನಗಳನ್ನು ಜೋಡಿಸಿಕೊಳ್ಳಲು ಒಂದು ಜೆಮ್ ಕ್ಲಿಪ್ಪನ್ನು ಹುಡುಕಾಡಿದಾಗ ಒಂದು ಬಾಗಿದ ಕ್ಲಿಪ್ ದೊರಕಿತು. ಅದನ್ನು ಸರಿಪಡಿಸಲು ಒಂದು ಉಪಕರಣವನ್ನು ಹುಡುಕುತ್ತಿದ್ದಾಗ ಜೆಮ್ ಕ್ಲಿಪ್‌ಗಳ ಪೆಟ್ಟಿಗೆಯೇ ಸಿಕ್ಕಿತು. ವಿಜ್ಞಾನಿಯು, ಸರಿಯಾಗಿದ್ದ ಹೊಸ ಕ್ಲಿಪ್ಪಿನಿಂದ ಬಾಗಿದ್ದ ಕ್ಲಿಪ್ಪನ್ನು ಸರಿಮಾಡಲು ಪ್ರಾರಂಭಿಸಿದ. ಇದರಿಂದ ಆಶ್ಚರ್ಯಗೊಂಡ ಸಹಾಯಕನನ್ನು ನೋಡಿದ ವಿಜ್ಞಾನಿಗೆ ತನ್ನ ತಪ್ಪಿನ ಅರಿವಾಯಿತು.
ನಿಜವಾದ ವಿದ್ಯಾಭ್ಯಾಸ ಅಂದರೆ ಏನು?
ನಿಜವಾದ ವಿದ್ಯಾಭ್ಯಾಸವೆಂದರೆ ಗಂಡು, ಹೆಣ್ಣು ಎಂಬ ಭೇದ ಭಾವ ಕೂಡದು. ಇಬ್ಬರಿಗೂ ಶ್ರೇಯಸ್ಸು ಒದಗಿಸುವಂತೆ ಅದು ಸಾಮಾನ್ಯವಾಗಿರಬೇಕು. ಬೇರೆಯವರ ಕಣ್ಣಿಗೆ ಮಿಂಚುವಂತೆ ಕಾಣಬೇಕೆಂಬ ಕಾರಣಕ್ಕಾಗಿ ಅದು ರೂಪಿತವಾದರೆ ಕುಟುಂಬಗಳು ಮಾತ್ರವಲ್ಲ ಸಂಬಂಧಗಳು ಹಾಗೂ ಸಮುದಾಯಗಳಲ್ಲಿಯೂ ತೊಂದರೆಗಳು ಕಂಡುಬರುತ್ತವೆ.
ಹಿಂದೆ ನಮ್ಮ ದೇಶದಲ್ಲಿದ್ದ ಶಿಕ್ಷಣವು ಕೇವಲ ಒಬ್ಬ ವ್ಯಕ್ತಿಯನ್ನು ರೂಪಿಸುವಲ್ಲಿ ಮಾತ್ರ ನಿಲ್ಲದೆ, ಅವರೊಂದಿಗೆ ಸೇರಿದವರೆಲ್ಲರನ್ನೂ ಸೇರಿಸಿಕೊಂಡು ಮುನ್ನಡೆಯುವ ಸಲುವಾಗಿ ರೂಪುಗೊಂಡಿತ್ತು. ಇತರರನ್ನೂ ತನ್ನಂತೆಯೇ ಭಾವಿಸುವಂತೆ ಅದು ರೂಪುಗೊಂಡಿತ್ತು.
ಆದರೆ, ಇಂಗ್ಲಿಷ್ ಆಳ್ವಿಕೆಯಡಿಯಲ್ಲಿ ರೂಢಿಗೆ ಬಂದ ವಿದ್ಯಾಭ್ಯಾಸ, ನಾವು ಎಂದು ಹೇಳುವುದರ ಬದಲಾಗಿ ನಾನು ಎಂದು ಪರಿಗಣಿಸುವಂತೆ ಮಾಡಿತು. ನಾನು, ನನ್ನದು ಎಂಬುದನ್ನು ಮಾತ್ರ ಗಮನದಲ್ಲಿರಿಸಿಕೊಂಡಿರುವ ವಿದ್ಯಾಭ್ಯಾಸವು, ಸಮಾಜಕ್ಕೆ, ಕುಟುಂಬಕ್ಕೆ ಎಂದಿಗೂ ಉಪಯೋಗವಾಗುವಂತಹುದಲ್ಲ.
ನಾವು ಜೀವಿಸುವ ಮನೆಯನ್ನು ಇಲ್ಲವೆ ದೇಶವನ್ನು ಕಡೆಗಣಿಸಿ ನಮ್ಮದೇ ಆದ ದೇಶದಲ್ಲಿ ಅನ್ಯದೇಶದವರಂತೆ ಭಾವನೆಯನ್ನು ಉಂಟುಮಾಡುವ ವಿದ್ಯಾಭ್ಯಾಸ ಸರಿಯಾದುದಲ್ಲ. ಬದುಕಲು ಮರ‍್ಗವನ್ನು ಮಾತ್ರ ತೋರಿಸಿ ಅಲ್ಲಿಗೆ ನಿಂತುಬಿಡದೆ, ವಿದ್ಯಾವಂತರು ತಮ್ಮ ದೃಷ್ಟಿಯನ್ನು ಬೇರೆ ಕೋನಗಳಿಂದ ನೋಡಲು ಅವಕಾಶ ನೀಡುವಂತಹ ಸಮಗ್ರ ವಿದ್ಯಾಭ್ಯಾಸದ ಅಗತ್ಯವಿದೆ.
ನಮ್ಮ ಗ್ರಾಮಗಳಲ್ಲಿ ಲಕ್ಷಗಟ್ಟಲೆ ಜನರು ಹಲವು ತಲೆಮಾರುಗಳಿಂದ ಅದೇ ರೀತಿಯಲ್ಲಿ ದೀನರಾಗಿ ಜೀವನವನ್ನು ನಡೆಸುತ್ತಿದ್ದಾರೆ. ಒಂದು ಕಾಲದಲ್ಲಿ ಸಮೃದ್ಧಿಯಾಗಿ, ಸುರಕ್ಷತೆಯಿಂದ ಅತ್ಯಂತ ಶಕ್ತಿಶಾಲಿಗಳಾಗಿದ್ದ ಸಮಾಜದ ಪ್ರಜೆಗಳು ಇಂದು ಆಧಾರ ಕಳೆದುಕೊಂಡಂತೆ ಕಂಡುಬರುತ್ತಿದ್ದಾರೆ. ಸಾರ್ವತ್ರಿಕ ಅಭಿವೃದ್ಧಿಯಲ್ಲಾಗಲಿ, ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಯಲ್ಲಾಗಲಿ, ಭೂಮಿಯನ್ನು ಬಳಸಿಕೊಳ್ಳುವುದರಲ್ಲಾಗಲಿ ಅವರ ಜೀವನ-ವಿಧಾನ ಸ್ವಲ್ಪವೂ ಮುನ್ನಡೆ ಸಾಧಿಸುತ್ತಿಲ್ಲ. ಅವರ ಮುತ್ತಾತಂದಿರು, ತಾತಂದಿರು, ತಂದೆತಾಯಿಯರು ಸಿಕ್ಕಿಹಾಕಿಕೊಂಡಿದ್ದ ಕೆಸರಿನಿಂದ ಇಂದಿನ ಹೊಸ ತಲೆಮಾರು ಹೊರಗೆ ಬರಲು ಸಾಧ್ಯವಾಗಬೇಕಾದರೆ ಅದಕ್ಕೆ ಮುಖ್ಯ ಮೆಟ್ಟಲಾದ ವಿದ್ಯಾಕ್ಷೇತ್ರದ ಅಭಿವೃದ್ಧಿಯಾಗಬೇಕು. ಆದರೆ ಇಂದಿನ ವಿದ್ಯಾಭ್ಯಾಸ ಅದರಿಂದ ಬಿಡುಗಡೆ ಮಾಡುವುದಕ್ಕೆ ಬದಲಾಗಿ ಮತ್ತಷ್ಟು ಗೊಂದಲಕ್ಕೆ ಕೆಡವಿ ಅವರ ಜೀವನವನ್ನೊಂದು ಹೋರಾಟವನ್ನಾಗಿ ಮಾಡಿದೆ.
ಮೂರು ಶತಕಗಳ ಹಿಂದೆ ಇಲ್ಲಿನ ಪ್ರಜೆಗಳೆಲ್ಲರೂ ಓದಲು ಬರೆಯಲು ಕಲಿತವರಾಗಿದ್ದರು. ವಿದ್ಯಾಭ್ಯಾಸ ಮತ್ತು ಸಂಸ್ಕೃತಿಗಳು ಭಾರತದ ಎರಡು ಅಡಿಗಲ್ಲುಗಳಾಗಿ, ಶಕ್ತಿಯುತವಾಗಿ ಮುಂದುವರಿಯುತ್ತಿರುವವರೆಗೂ, ಅವರನ್ನು ಸ್ವಾಧೀನಪಡಿಸಿಕೊಳ್ಳಲು ಇರುವ ಅಡೆತಡೆಗಳನ್ನು, ಮೆಕಾಲೆಯು ಬ್ರಿಟಿಷ್ ಸರಕಾರಕ್ಕೆ ವಿವರಿಸಿದನು. ಈ ಮಹಾನ್ ಶಕ್ತಿಗಳನ್ನು ಬಗ್ಗುಬಡಿಯಲು ಬೇಕಾದ ಯೋಜನೆಗಳನ್ನು ಅವರು ರೂಪಿಸತೊಡಗಿದರು. ಅದರಲ್ಲಿ ಮುಖ್ಯವಾಗಿ ನಡೆದಿದ್ದು, ಇನ್ನೂರು ವರ್ಷಗಳ ಅವಧಿಯಲ್ಲಿ, ಭಾರತದ ಪ್ರಜೆಗಳಲ್ಲಿ ಸುಮಾರು ಶೇಕಡಾ ಎಪ್ಪತ್ತರಷ್ಟು ಜನರು ಅನಕ್ಷರಸ್ಥರಾಗಿದ್ದು!
ಯೋಜನೆಯನ್ನು ರೂಪಿಸಿಕೊಂಡು ಏನನ್ನಾದರೂ ನಾಶ ಮಾಡಲು ನಮಗೆ ಸಾಧ್ಯವಿರುವಾಗ ಹಾಗೆಯೇ ನಿರ್ಮಿಸಲು ಏಕೆ ಸಾಧ್ಯವಾಗುವುದಿಲ್ಲ? ಇದನ್ನು ಅರ್ಥ ಮಾಡಿಕೊಳ್ಳದೆ ಇಂದಿನ ಸನ್ನಿವೇಶವನ್ನು ದೂರುತ್ತಾ, ಬದುಕನ್ನು ನೂಕುತ್ತಾ ಇದ್ದರೆ ಏನನ್ನೂ ಬದಲಾಯಿಸಲಾಗುವುದಿಲ್ಲ.
ವ್ಯವಸ್ಥಿತವಾದ ವಿದ್ಯಾಭ್ಯಾಸ, ಒಗ್ಗಟ್ಟು, ಆರೋಗ್ಯ, ಒಂದು ಮುನ್ನೋಟ ಅಥವಾ ಉದ್ದೇಶ, ಇಂತಹ ಯಾವುದೂ ಇಲ್ಲದೆ ಕೋಟಿಗಟ್ಟಲೆ ಜನರು ಬಳಲಿ ಬೆಂಡಾಗುತ್ತಿದ್ದರೆ, ಅಂತಹ ಪರಿಸ್ಥಿತಿಯಲ್ಲಿ ಯಾವ ದೇಶವೂ ಮುನ್ನಡೆಯಲು ಸಾಧ್ಯವಾಗುವುದಿಲ್ಲ.
ಅದೇ ಕೋಟಿಗಟ್ಟಲೆ ಜನರು ಕಲಿತವರಾಗಿದ್ದು, ಒಳ್ಳೆಯ ನೀತಿವಂತರಾಗಿದ್ದು, ಉತ್ತಮ ಆರೋಗ್ಯಶಾಲಿಗಳಾಗಿದ್ದುಕೊಂಡು, ರ‍್ಪಣಾ ಮನೋಭಾವವನ್ನು ಹೊಂದಿದ್ದು, ಸಮರ್ಥವಾಗಿ ಕೆಲಸಗಳನ್ನು ನಿರ್ವಹಿಹಿಸಿದರೆ, ಎಂಥೆಂಥ ಅದ್ಭುತಗಳನ್ನು ಸಾಧಿಸಬಹುದೆಂಬುದನ್ನು ಯೋಚಿಸಿ.
ವಿದ್ಯೆ ಎಂಬುದು ಒಂದು ಶಕ್ತಿಯುತವಾದ ಆಯುಧ. ಬೇರೆ ಜೀವರಾಶಿಗಳೊಂದಿಗೆ ಅನ್ಯೋನ್ಯವಾಗಿರುವಂತಹವರಿಗೆ ಮಾತ್ರ ಅದನ್ನು ನೀಡಬೇಕು. ಉನ್ನತಮಟ್ಟದ ವಿದ್ಯಾಭ್ಯಾಸ ನೀಡುವುದರ ಮೂಲಕ ವಿಶ್ವದ ಯಾವುದೇ ಒಂದು ಸಣ್ಣ ಬಿಂದುವಿನಿಂದಲೂ ಅವರು ತಮ್ಮ ಜೀವನವನ್ನು ಬುದ್ಧಿವಂತಿಕೆಯಿಂದ ಅಳವಡಿಸಿಕೊಳ್ಳಲು ಅವರು ಸಿದ್ಧರಾಗಿರಬೇಕೆಂಬುದೇ ನನ್ನ ಅಭಿಲಾಷೆ.
ಈಜು ತರಬೇತಿಯಲ್ಲಿ ಸಾಲಿನ ಕೊನೆಗೆ ನಿಲ್ಲುತ್ತಿದ್ದ ಶಿಷ್ಯ
ಒಂದು ಗುರುಕುಲದಲ್ಲಿ ಬೆಳೆದ ಶಿಷ್ಯರು ಈಜುವ ತರಬೇತಿಗಾಗಿ ಹೊರಟರು. ಪ್ರತಿಯೊಬ್ಬರೂ ನದಿಯಲ್ಲಿ ಕುಪ್ಪಳಿಸುತ್ತಾ ಈಜಿಕೊಂಡು ಬಂದು ದಡವನ್ನು ಸೇರಬೇಕೆಂಬುದು ನಿಯಮ. ಅವರಲ್ಲಿ ಒಬ್ಬನು ಮಾತ್ರ ಯಾವಾಗಲೂ ಸಾಲಿನಲ್ಲಿ ಕೊನೆಗೆ ನಿಲ್ಲುತ್ತಿದ್ದುದನ್ನು ಅವರ ಗುರುಗಳು ಹಲವಾರು ಬಾರಿ ಗಮನಿಸಿದರು.
ಒಂದು ದಿನ ಅವನನ್ನು ಕರೆದು, ಈವತ್ತಿನಿಂದ ನೀನೇ ಮೊದಲನೆಯದಾಗಿ ಗೆದ್ದು ಬರಬೇಕು ಎಂದರು. ನಡುಗುತ್ತಾ ನಿಂತಿದ್ದ ಅವನನ್ನು ನೀರಿನೊಳಕ್ಕೆ ನೂಕಿದರು. ಏನಾಶ್ಚರ್ಯ! ಶಿಷ್ಯನು ಅನಾಯಾಸದಿಂದ ಈಜಿದನು. ಅವನಿಗೆ ಇದ್ದಕ್ಕಿದ್ದಂತೆ ಭಯವೆಲ್ಲವೂ ತೊಲಗಿಹೋಗಿ ಧೈರ್ಯ ತುಂಬಿಕೊಂಡಿತು.
ಗುರುಗಳು ಶಿಷ್ಯನಿಗೆ ಹೇಳಿದರು, ತುರ್ತಾಗಿ ಜವಾಬ್ದಾರಿ ವಹಿಸಿ, ಕೂಡಲೇ ಗಮನ ಹರಿಸಿ ಮಾಡಬೇಕಾದ ಕೆಲಸಗಳಿರುತ್ತವೆ. ಅಂತಹ ಸಂರ‍್ಭದಲ್ಲಿ ತಡಮಾಡಿದರೆ ಕೆಲಸ ಹಾಳಾಗುತ್ತದೆ. ಗಾಬರಿಯನ್ನು ದೂರವಿರಿಸಿ ಕೂಡಲೇ ಕರ‍್ಯಗತವಾಗಲು ಬೇಕಾದ ತರಬೇತಿ ಇಂದು ನಿನಗೆ ದೊರೆಯಿತು ಎಂದರು.
ನಮ್ಮಿಂದ ಆಗದ ಕೆಲಸ ಮಾಡದಿದ್ದರೆ ತಪ್ಪಾಗುವುದಿಲ್ಲ. ನಮ್ಮಿಂದ ಆಗುವ ಕೆಲಸವನ್ನು ಮಾಡದಿರುವುದು ಬಹು ದೊಡ್ಡ ಅಪರಾಧ. ನಾವು ತಡಮಾಡದೆ ನಿರ್ವಹಿಸಬೇಕಾದ ಕರ್ತವ್ಯ ಇದು.
ಗ್ರಾಮ ಪ್ರದೇಶಗಳಲ್ಲಿ ಪ್ರಾಥಮಿಕ ಪಾಠಶಾಲೆಗಳಾಗಿ ಈಶ ವಿದ್ಯಾ ನಡೆಸುತ್ತಿರುವ ಶಾಲೆಗಳ ವಾರ್ಷಿಕ ಸಮಾರಂಭಗಳು ನಡೆದಾಗ, ನಾವು ಕೆಲವು ಶಾಲೆಗಳನ್ನು ಪ್ರಾರಂಭಿಸಿರುವುದನ್ನು ತಿಳಿದ ಜನರು ಚಪ್ಪಾಳೆ ತಟ್ಟುತ್ತಾರೆ. ಒಂದು ಲಕ್ಷ ಮರಗಳನ್ನು ನೆಟ್ಟಿರುವುದನ್ನು, ಸಾವಿರಕ್ಕೆ ಮೇಲ್ಪಟ್ಟ ಹಳ್ಳಿಗಳಿಗೆ ವೈದ್ಯಕೀಯ ನೆರವನ್ನು ಕಲ್ಪಿಸಿದುದನ್ನು ತಿಳಿದು ಜನರು ಆಶ್ಚರ್ಯಪಡುತ್ತಾರೆ.
ಇಂತಹ ಸಣ್ಣ ಪುಟ್ಟ ಕಾರ್ಯಗಳಿಗಾಗಿ ಜನರು ತೃಪ್ತಿಗೊಂಡು ಚಪ್ಪಾಳೆ ಹಾಕಿದಾಗಲೆಲ್ಲಾ ನನಗೆ ಮನಸ್ಸಿನಲ್ಲಿ ನೋವುಂಟಾಗುತ್ತದೆ. ಕೆಲವು ಪಾಠಶಾಲೆಗಳು ನಮಗೆ ಏತೇತಕ್ಕೂ ಸಾಕಾಗುವುದಿಲ್ಲ. ಸಾವಿರಗಟ್ಟಲೆ ಶಾಲೆಗಳು ಪ್ರಾರಂಭವಾಗಬೇಕು, ಲಕ್ಷ ಮರಗಳೂ ಸಾಕಾಗುವುದಿಲ್ಲ; ಕೋಟಿಗಟ್ಟಲೆ ಮರಗಳನ್ನು ನೆಡಬೇಕು, ಬೆಳಸಬೇಕು. ತಮ್ಮ ದೇಹದ ಬಗೆಗೆ ಸ್ವಲ್ಪವೂ ತಿಳುವಳಿಕೆಯಿಲ್ಲದ, ಹಳ್ಳಿಯ ಜನರಿಗೆ ಆರೋಗ್ಯದ ಬಗೆಗೆ ತಿಳುವಳಿಕೆ ಬರುವಂತಾಗಬೇಕು. ಅವರಿಗೆ ಮೂಲಭೂತ ವೈದ್ಯಕೀಯ ಸೌಲಭ್ಯಗಳು ದೊರೆಯವಂತಾಗಬೇಕು.
ಜವಾಬ್ದಾರಿಯಿಲ್ಲದ ತಿಳುವಳಿಕೆಯೇ ಪ್ರಪಂಚದಲ್ಲಿ ಇಂದು ಅನೇಕ ವಿನಾಶಗಳಿಗೆ ಮೂಲ ಕಾರಣವಾಗಿದೆ. ನಮ್ಮ ಹೊಣೆಗಾರಿಕೆಯ ಬಗೆಗೆ ತೀವ್ರವಾದ ಆಸಕ್ತಿ, ಇತರರ ಬಗೆಗೆ ಅನುಕಂಪ, ಎಲ್ಲರ ಬಗೆಗೂ ಪ್ರೀತಿ ಇವುಗಳನ್ನು ನಮ್ಮಲ್ಲಿ ಬೆಳೆಸದ ಯಾವುದೇ ವಿದ್ಯಾಭ್ಯಾಸ ಅಪಾಯಕಾರಿ.
ಇದನ್ನೂ ಓದಿ: Prerane Column : ನೀವು ಆಹಾರವನ್ನು ಅನುಭವಿಸುತ್ತಾ ತಿಂತೀರಾ? ಇಲ್ಲ ಸುಮ್ನೆ ನುಂಗ್ತೀರಾ?
ಮಾನವ ಇತಿಹಾಸದಲ್ಲಿ ಇದಕ್ಕೆ ಮುಂಚೆ ಇಂತಹ ಸಾಧಕವಾದ, ಅನುಕೂಲಕರವಾದ ಪರಿಸ್ಥಿತಿ ಎಂದೂ ಒದಗಿ ಬಂದಿರಲಿಲ್ಲ. ಅಗತ್ಯವಿರುವ ಮೂಲ ವಸ್ತು, ಔದ್ಯೋಗಿಕ ಕೌಶಲ್ಯ, ಕಾರ್ಯ ನಿರ್ವಹಣಾ ಸಾಮರ್ಥ್ಯ ಇದಾವುದಕ್ಕೂ ಈಗ ಕೊರತೆಯಿಲ್ಲ. ಬೇಕಾಗಿರುವುದು ಮನೋನಿಶ್ಚಯ, ಮುನ್ನಡೆ ಇವುಗಳು ಮಾತ್ರ. ಸಮರ್ಪಣಾ ಮನೋಭಾವದಿಂದ ಮುನ್ನಡೆದರೆ ಮುಂದಿನ ಇಪ್ಪತ್ತು ವರ್ಷಗಳಲ್ಲಿ ನಾವು ಕನಸಿನಲ್ಲಿ ಕಾಣುವ ಅದ್ಭುತವಾದ ಸನ್ನಿವೇಶವನ್ನು ಇಲ್ಲಿ ಕಾಣಲು ಸಾಧ್ಯವಾಗುತ್ತದೆ.
ಸದ್ಗುರುಗಳು ಯೋಗಿ, ದಾರ್ಶನಿಕ ಹಾಗೂ ಆಧ್ಯಾತ್ಮಿಕ ನಾಯಕ. isha.sadhguru.org/in/kn
ಸದ್ಗುರುಗಳ ಇತರ ಪುಸ್ತಕ/ವಿವರಗಳಿಗೆ ಸಂಪರ್ಕಿಸಿ – kannadapublications@ishafoundation.org
ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ತಿಳಿಸಿ